ಸಿಐಡಿ ಅಂಗಳದಲ್ಲಿ ಕೊಮ್ಮೆನಹಳ್ಳಿ ಬ್ಲಾಸ್ಟ್ ಕೇಸ್, ಮಾಲೂರು ಶಾಸಕ ನಂಜೇಗೌಡರಿಗೆ ಎದುರಾಗುತ್ತಾ ಸಂಕಷ್ಟ?


CID: ಕಲ್ಲುಕ್ವಾರಿ ಸ್ಟೋಟ ಪ್ರಕರಣ ರಾಜಕೀಯ ತಿರುವು ಪಡೆದಿದೆ. ಪ್ರಕರಣದಲ್ಲಿ ಮಾಲೂರು ಶಾಸಕ ನಂಜೇಗೌಡ ಕುಟುಂಬದ ಪಾತ್ರವಿದೆ ಅನ್ನೋದನ್ನು ಸಾಬೀತು ಪಡಿಸಲು, ಅವರು ಘಟನೆಯನ್ನು ದಾರಿತಪ್ಪಿಸಲು ಯತ್ನಿಸಿದ್ದಾರೆ ಅನ್ನೋದರ ಬಗ್ಗೆ ತನಿಖೆಯಾಗಬೇಕಿದೆ. ಸದ್ಯ ಪ್ರಕರಣ ಶಾಸಕ ನಂಜೇಗೌಡರಿಗೆ ನುಂಗಲಾರದ ಬಿಸಿತುಪ್ಪವಾಗಿರುವುದು ಸುಳ್ಳಲ್ಲ.

ಸಿಐಡಿ ಅಂಗಳದಲ್ಲಿ ಕೊಮ್ಮೆನಹಳ್ಳಿ ಬ್ಲಾಸ್ಟ್ ಕೇಸ್, ಮಾಲೂರು ಶಾಸಕ ನಂಜೇಗೌಡರಿಗೆ ಎದುರಾಗುತ್ತಾ ಸಂಕಷ್ಟ?

ಸಿಐಡಿ ಅಂಗಳದಲ್ಲಿ ಕೊಮ್ಮೆನಹಳ್ಳಿ ಬ್ಲಾಸ್ಟ್ ಕೇಸ್, ಮಾಲೂರು ಶಾಸಕ ನಂಜೇಗೌಡರಿಗೆ ಎದುರಾಗುತ್ತಾ ಸಂಕಷ್ಟ?

Kammanahalli quarry blast case: ಕೋಲಾರ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದ ಕಲ್ಲು ಗಣಿಗಾರಿಕೆ ವೇಳೆ ಜಿಲಿಟನ್​ ಸ್ಟೋಟಗೊಂಡು ಬಿಹಾರ ಮೂಲದ ಕಾರ್ಮಿಕನೊಬ್ಬ ಮೃತಪಟ್ಟು, ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದ ಪ್ರಕರಣ ಸದ್ಯ ಸಿಐಡಿಗೆ ವರ್ಗಾವಣೆಯಾಗಿದೆ. ಜಿಲಿಟನ್​ ಸ್ಟೋಟದ ನಂತರ ರಾಜಕೀಯವಾಗಿ ತಿರುವು ಪಡೆದುಕೊಂಡಿದ್ದ ಪ್ರಕರಣ ಈಗ ಸಿಐಡಿ (CID) ಪೊಲೀಸರ ಅಂಗಳಕ್ಕೆ ಶಿಫ್ಟ್​ ಆಗಿದೆ.

ಅವತ್ತು ಅಕ್ಟೋಬರ್ 13 ರಾತ್ರಿ ಕೋಲಾರ ಜಿಲ್ಲೆ ಮಾಲೂರಿನ ಕೊಮ್ಮೆನಹಳ್ಳಿಯಲ್ಲಿನ ಕಲ್ಲು ಕ್ವಾರಿಯೊಂದರಲ್ಲಿ ಈ ಸ್ಪೋಟ ಸಂಭವಿಸಿ ಘಟನೆಯಲ್ಲಿ ಬಿಹಾರ ಮೂಲದ ಕಾರ್ಮಿಕ ರಾಕೇಶ್ ಸಾಣಿ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಮತ್ತೊರ್ವ ಕಾರ್ಮಿಕ ಶಾಶ್ವತವಾಗಿ ತನ್ನ ಕೈಬೆರಳುಗಳನ್ನು ಕಳೆದುಕೊಂಡು ಅಂಗವಿಕಲನಾಗಿದ್ದ ಘಟನೆ ನಡೆದಿತ್ತು. ಆದರೆ ಆ ಘಟನೆಯನ್ನು ಮುಚ್ಚಿಹಾಕಲು ಅಪಘಾತ ಎನ್ನುವಂತೆ ಠಾಣೆಗೆ ದೂರು ನೀಡಲಾಗಿತ್ತು, ಜೊತೆಗೆ ರಾತ್ರೋರಾತ್ರಿ ಶವದ ಪೋಸ್ಟ್​ ಮಾರ್ಟಂ ಮಾಡಿ ಶವವನ್ನು ಬಿಹಾರಕ್ಕೆ ಕಳಿಸಲು ಪ್ರಯತ್ನ ನಡೆದಿತ್ತು. ಆದ್ರೆ ಅವತ್ತು ನಡೆದ ಬೆಳವಣಿಗೆಗಳ ಕುರಿತು ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಅದು ಅಪಘಾತವಲ್ಲ ಅದು ಕಲ್ಲು ಕ್ವಾರಿಯಲ್ಲಿ ಜಿಲಿಟನ್​ ಸ್ಟೋಟದಿಂದ ಕಾರ್ಮಿಕ ಸತ್ತಿರುವುದು ಬೆಳಕಿಗೆ ಬಂದಿತ್ತು.

ಪೊಲೀಸ್ ಅಧಿಕಾರಿಗಳು ಹಾಗೂ ಎಫ್.ಎಸ್.ಎಲ್ ತಂಡದಿಂದ ಪರಿಶೀಲನೆ!

ಇನ್ನು ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ದೇವರಾಜ್​, ಕೇಂದ್ರ ವಲಯ ಐಜಿಪಿ ಚಂದ್ರಶೇಖರ್​ ಸೇರಿದಂತೆ ಎಫ್​ಎಸ್​ಎಲ್​ ಟೀಂ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ನಂತರ ಘಟನೆಯಲ್ಲಿ ಮಾಸ್ತಿ ಪೊಲೀಸ್​ ಠಾಣೆಯ ಇನ್ಸ್ಪೆಕ್ಟರ್ ವಸಂತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿತ್ತು. ನಂತರ ಮೃತ ಬಿಹಾರ ಮೂಲದ ರಾಕೇಶ್​ ಸಾಣೆ ಮರು ಮರಣೋತ್ತರ ಪರೀಕ್ಷೆಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾಡಿಸಿ ನಂತರ, ಘಟನೆ ಸಂಬಂಧ ಕಲ್ಲು ಕ್ವಾರೆಯ ಮಾಲಿಕ ಮಂಜುನಾಥ್ ಸೇರಿದಂತೆ ಒಟ್ಟು ಎಂಟು ಜನರನ್ನು ಬಂಧಿಸಲಾಗಿತ್ತು

ಸಿಐಡಿ ತನಿಖೆಗೆ ಸಿಎಂ ಬಳಿ‌ ಮನವಿ!

ಇನ್ನು ಘಟನೆ ನಂತರ ಸಚಿವ ಮುನಿರತ್ನ ನೇತೃತ್ವದಲ್ಲಿ ಸಿಎಂ ಅವರನ್ನು ಭೇಟಿ ಮಾಡಿದ್ದ ಮಾಜಿ ಶಾಸಕ ಮಂಜುನಾಥ ಗೌಡ ಹಾಗೂ ಕೆಲವು ಮುಖಂಡರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸುವಂತೆ ಆಗ್ರಹ ಮಾಡಿದ್ದರು. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ, ಜೊತೆಗೆ ಪ್ರಕರಣವನ್ನು ದಿಕ್ಕು ತಪ್ಪಿಸುವಲ್ಲಿ ಸ್ಥಳೀಯ ಶಾಸಕ ನಂಜೇಗೌಡ ಹಾಗೂ ಅವರ ಕುಟುಂಬ ಪಾತ್ರವಿದೆ. ಎಲ್ಲದಕ್ಕೂ ಮುಖ್ಯವಾಗಿ ಇಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ನಿಲ್ಲಬೇಕು ಎಂದು ಮಾಜಿ ಶಾಸಕ ಮಂಜುನಾಥ ಗೌಡ‌ ಮನವಿ ಮಾಡಿದ್ದರು.

ಪ್ರತಿಭಟನೆ ಕೂಡಾ ನಡೆದಿತ್ತು!

ಇನ್ನು ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಮಾಡಬೇಕೆಂದು ಆಗ್ರಹಿಸಿ ಘಟನೆ ನಡೆದ ದಿನದಂದೇ ಸಚಿವ ಮುನಿರತ್ನ ಅವರ ಕಾರಿಗೆ ಅಡ್ಡಹಾಕಿ ಕೆಲವು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದರು. ಕಾರಣ ಸ್ಥಳೀಯವಾಗಿ ಶಾಸಕ ನಂಜೇಗೌಡರು ತಮ್ಮ ಪ್ರಭಾವ ಬಳಿಸಿ ಪ್ರಕರಣವನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಈಗಾಗಲೇ ಸ್ಪೋಟ ನಡೆದ ದಿನದಂದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು. ಮೃತಪಟ್ಟವನ ಸೋದರನಿಂದಲೇ ಪೊಲೀಸ್​ ಠಾಣೆಗೆ ಅಪಘಾತ ಎಂದು ಸುಳ್ಳು ದೂರು‌ ನೀಡಲಾಗಿತ್ತು.

ಜೊತೆಗೆ ರಾತ್ರೋ ರಾತ್ರಿ ತರಾತುರಿಯಲ್ಲಿ ಪೋಸ್ಟ್​ ಮಾರ್ಟಮ್​ ಮಾಡಿ ಶವವನ್ನು ಬಿಹಾರಕ್ಕೆ ಕಳಿಸಲು ಪ್ಲಾನ್​ ಮಾಡಲಾಗಿತ್ತು, ಜೊತೆಗೆ ಸ್ಟೋಟಗೊಂಡ ಸ್ಥಳದಲ್ಲಿ ಯಾವುದೇ ಸಾಕ್ಷ್ಯ ಸಿಗದಂತೆ ಎಲ್ಲವನ್ನೂ ನಾಶ ಮಾಡಲಾಗಿತ್ತು. ಹೀಗೆ ಸ್ಥಳೀಯವಾಗಿ ಹತ್ತು ಹಲವು ಪ್ರಕರಣವನ್ನು ದಾರಿತಪ್ಪಿಸುವ ಪ್ರಯತ್ನ ನಡೆದಿದ್ದ ಹಿನ್ನೆಲೆಯಲ್ಲಿ, ಪ್ರಕರಣವನ್ನು ನಿಶ್ಪಕ್ಷಪಾತ ಹಾಗೂ ವಿಸೃತವಾದ ತನಿಖೆ ನಡೆಯಬೇಕು ಎಂದಾದರೆ ಅದು ಸಿಐಡಿ ಪೊಲೀಸರಿಗೆ ನೀಡುವುದು ಸೂಕ್ತ ಎಂದು ಗೃಹ ಇಲಾಖೆಗೆ ಜಿಲ್ಲಾ ಪೊಲೀಸ್​ ಅಧಿಕಾರಿಗಳು ತಮ್ಮ ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಕಲ್ಲುಕ್ವಾರಿ ಸ್ಟೋಟ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಕೋಲಾರ ಎಸ್ಪಿ ದೇವರಾಜ್​ ಖಚಿತ ಪಡಿಸಿದ್ದಾರೆ.

ಶಾಸಕ ನಂಜೇಗೌಡರಿಗೆ ನುಂಗಲಾರದ ಬಿಸಿತುಪ್ಪವಾಗಿರುವುದು ಸುಳ್ಳಲ್ಲ:

ಒಟ್ಟಾರೆ ಕಲ್ಲುಕ್ವಾರಿಯಲ್ಲಿ ನಡೆದ ಸ್ಟೋಟ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಎಲ್ಲದಕ್ಕೂ ಮುಖ್ಯವಾಗಿ ಈ ಪ್ರಕರಣದಲ್ಲಿ ಮಾಲೂರು ಶಾಸಕ ಕೆ ವೈ ನಂಜೇಗೌಡ (malur mla ky nanjegowda) ಅವರ ಕುಟುಂಬದ ಪಾತ್ರವಿದೆ ಅನ್ನೋದನ್ನು ಸಾಬೀತು ಪಡಿಸಲು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವರು ಘಟನೆಯನ್ನು ದಾರಿತಪ್ಪಿಸಲು ಯತ್ನಿಸಿದ್ದಾರೆ ಅನ್ನೋದರ ಬಗ್ಗೆ ಸದ್ಯ ತನಿಖೆಯಾಗಬೇಕಿದೆ. ಸದ್ಯ ಪ್ರಕರಣ ಶಾಸಕ ನಂಜೇಗೌಡರಿಗೆ ನುಂಗಲಾರದ ಬಿಸಿತುಪ್ಪವಾಗಿರುವುದು ಸುಳ್ಳಲ್ಲ.

ತಾಜಾ ಸುದ್ದಿ

TV9 Kannada


Leave a Reply

Your email address will not be published.