ಸಿದ್ದರಾಮಯ್ಯಗೆ ‘ಸಂಕಟ ಮೋರ್ಚಾ’ ಸಲಹೆ; ಯಾರೆಲ್ಲಾ ಭಾಗಿಯಾಗಿದ್ದರು ಸಭೆಯಲ್ಲಿ?


ಕಾಂಗ್ರೆಸ್​ ಪಕ್ಷಕ್ಕೆ ಸಿ.ಎಂ. ಇಬ್ರಾಹಿಂ ಗುಡ್​ ಬೈ ಹೇಳಿದ್ದಾರೆ. ಭವಿಷ್ಯದಲ್ಲಿ ಮತಕ್ಕೆ ಕೊಕ್ಕೆ ಬೀಳುವ ಆತಂಕ ಕಾಂಗ್ರೆಸ್​ಗೆ ಕಾಡ್ತಿದೆ.. ಈ ಹಿನ್ನೆಲೆ, ಉಭಯ ಸಂಕಟದಲ್ಲಿರುವ ಸಿದ್ದರಾಮಯ್ಯ, ತಮ್ಮ ಆಪ್ತ ಬಳಗಕ್ಕೆ ಬುಲಾವ್​​​ ನೀಡಿ, ಲಾಭ-ನಷ್ಟದ ಲೆಕ್ಕ ಹಾಕಿದ್ದಾರೆ.. ಮುಸ್ಲಿಂ ನಾಯಕರು ಕೂಡಾ ಅಹಿಂದರಾಮಯ್ಯನಿಗೆ ಅಭಯ ನೀಡಿದ್ದಾರೆ..

ಅಹಿಂದ ಕೂಟದ ಪ್ರಶ್ನಾತೀತ ನಾಯಕನಿಗೆ ಆತಂಕ ಶುರುವಾಗಿದೆ.. ಆತ್ಮೀಯ ಗೆಳೆಯ ಇಬ್ರಾಹಿಂ ತಿರುಗಿಬಿದ್ದಿರೋದು ಅಹಿಂದರಾಮಯ್ಯನಿಗೆ ಸಂಕಟ ಉಲ್ಬಣಿಸುವಂತೆ ಮಾಡಿದೆ.. ಭವಿಷ್ಯದಲ್ಲಿ ಎದುರಾಗುವ ಸವಾಲಿಗೆ ಮೈಯೊಡ್ಡಬೇಕಾದ ಸಿದ್ದು, ಸಂಕಟ ಮೋರ್ಚಾ ಮೊರೆ ಹೋಗಿದ್ದಾರೆ.

‘ಇಬ್ರಾಹಿಂ ವಿಚಾರ ಬಿಡಿ, ಪಕ್ಷ ಸಂಘಟನೆ ಮಾಡಿ’
ಮಾಜಿ ಸಿಎಂ ಸಿದ್ದರಾಮಯ್ಯಗೆ ಉಭಯ ಸಂಕಟ ಶುರುವಾಗಿದೆ. ಈ ಸಂಕಟಕ್ಕೆ ಇರೋದು ಎರಡೇ ಮದ್ದು ಅನ್ನೋದು ಸಿದ್ದು ಬಲ್ಲ ಸಿದ್ಧೌಷಧ. ಸದ್ಯ ಮುಳ್ಳನ್ನ ಮುಳ್ಳಿಂದಲೇ ತೆಗೆಯೋದಕ್ಕೆ ಆದ್ಯತೆ ನೀಡಿರುವ ಸಿದ್ದರಾಮಯ್ಯ, ಇನ್ನೊಂದುಕಡೆ, ತಮ್ಮ ಲಕ್ಷ್ಮಣಗೆರೆ ದಾಟಿದ ಪಕ್ಷದೊಳಗಿನ ವಿರೋಧಿ ಪಡೆಯನ್ನ ಬೌಂಡರಿಗೆರೆ ದಾಟಿಸಿದ್ದಾರೆ.

ತಮ್ಮದೇ ನೆರಳಿನಂತಿದ್ದ ಗೆಳೆಯ ವಿರೋಧಿ ದಳಕೂಟಕ್ಕೆ ಸ್ನೇಹ ಹಸ್ತ ಚಾಚಿರೋದು ಸಿದ್ದುಗೆ ಸಂಕಟ ಇಮ್ಮಡಿಸಿದೆ. ಹೀಗೆ ಸಿಡಿದೆದ್ದ ಇಬ್ರಾಹಿಂ ವಿರುದ್ಧ ಸಿದ್ದು ಅಲ್ಪಾಸ್ತ್ರ ಹೂಡಿದ್ದು, ಫಲವೂ ನೀಡುತ್ತಿದೆ. ಭವಿಷ್ಯದಲ್ಲಿ ಆಗಬಹುದಾದ ಹಿನ್ನಡೆಗಳಿಗೆ ಕೊಡೆ ಹಿಡಿಯುವ ಕಾಯಕದಲ್ಲಿ ನಿರತರಾಗಿರುವ ಸಿದ್ದರಾಮಯ್ಯ, ತಮ್ಮ ಆಪ್ತ ಮುಸ್ಲಿಂ ನಾಯಕರನ್ನ ಕರೆದು ಚರ್ಚೆ ನಡೆಸಿದ್ದಾರೆ..

ಶಾಸಕ ಜಮೀರ್, ಖಾದರ್, ರಿಜ್ವಾನ್ ಅರ್ಷದ್​ರನ್ನ ಕರೆದು ಮಾತುಕತೆ ನಡೆಸಿದ್ದಾರೆ.. ಈ ವೇಳೆ, ಇಬ್ರಾಹಿಂ ಪಕ್ಷ ತ್ಯಜಿಸಿರುವ ಸಾಧಕ-ಭಾದಕಗಳ ಬಗ್ಗೆ ಚರ್ಚೆ ನಡೆದಿದೆ. ಕೆಲ ಸಲಹೆಗಳನ್ನ ಪಡೆದ ಸಿದ್ದರಾಮಯ್ಯಗೆ ನಿಮ್ಮ ಜೊತೆ ನಾವಿದ್ದೇವೆಂದು ಅಭಯವೂ ಸಿಕ್ಕಿದೆ.

ನಮ್ಮ ನಿಷ್ಠೆ ನಿಮಗೆ!

ಅಭಯ 1 : ಸಿ.ಎಂ. ಇಬ್ರಾಹಿಂ ತಮ್ಮ ವೈಯಕ್ತಿಕ ಲಾಭಕ್ಕಾಗಿ ಪಕ್ಷ ಬಿಡುತ್ತಿದ್ದಾರೆ
ಅಭಯ 2 : ಕಾಂಗ್ರೆಸ್​ನಲ್ಲಿ ಮುಸ್ಲಿಂ ನಾಯಕರಿಗೆ ಪ್ರಾತಿನಿಧ್ಯ ನೀಡಲಾಗುತ್ತಿದೆ
ಅಭಯ 3 : ತಮ್ಮ ಗರಡಿಯಲ್ಲಿ ಇತರೆ ಸಮುದಾಯ ನಾಯಕರು ಬೆಳೆದಿದ್ದಾರೆ
ಅಭಯ 4 : ಇಬ್ರಾಹಿಂ ಏನೇ ಮಾಡಿದ್ರೂ ಇಲ್ಲಿದ್ದಷ್ಟು ಖುಷಿಯಾಗಿರಲು ಆಗಲ್ಲ
ಅಭಯ 5 : ಇಬ್ರಾಹಿಂಗೆ ದಳ ಅನಿವಾರ್ಯ, ದಳಕ್ಕೂ ಇಬ್ರಾಹಿಂ ಅನಿವಾರ್ಯ
ಅಭಯ 6 : ಇಬ್ರಾಹಿಂ ತ್ಯಜಿಸಿದ ಮಾತ್ರಕ್ಕೆ ಮುಸ್ಲಿಂ ಮತಗಳು ದೂರ ಹೋಗಲ್ಲ
ಅಭಯ 7 : ಇಬ್ರಾಹಿಂ ಪಕ್ಷ ಬಿಟ್ಟರೆ, ಅವ್ರ ಜೊತೆ ಯಾವ ನಾಯಕರೂ ಹೋಗಲ್ಲ
ಅಭಯ 8 : ಸದ್ಯಕ್ಕೆ ಸಿ.ಎಂ. ಇಬ್ರಾಹಿಂ ವಿಚಾರ ಬಿಡಿ, ನಿಮ್ಮ ಜೊತೆ ನಾವಿದ್ದೇವೆ

ಇಬ್ರಾಹಿಂ ಸ್ವಾಗತಿಸಿದ್ದ ತನ್ವೀರ್​​​ ಶಿಷ್ಯ ಶಾಹಿದ್​ಗೆ ಶಾಕ್​​

ಮುಸ್ಲಿಂ ನಾಯಕರ ಭರವಸೆ ಬಳಿಕ ನಿರಾಳರಾದ ಸಿದ್ದರಾಮಯ್ಯ. ತಮ್ಮ ವಿರುದ್ಧ ಮೈಸೂರು ಸಮರ ಸಾರಿದ್ದ ಶಾಸಕ ತನ್ವೀರ್​ ಸೇಠ್​​ಗೆ ಶಾಕ್​​ ನೀಡಿದ್ದಾರೆ. ಮೈಸೂರಿನಲ್ಲಿ ಇಬ್ರಾಹಿಂ ಸ್ವಾಗತ ಕೋರಿದ್ದ ತನ್ವೀರ್‌ ಆಪ್ತ ಅಬ್ದುಲ್‌ ಶಾಹಿದ್​ಗೆ ಕಾಂಗ್ರೆಸ್‌ ಉಚ್ಚಾಟನೆ ಶಿಕ್ಷೆ ನೀಡಿದೆ. ಈ ಹಿಂದೆ ಅಮಾನತ್ತಾಗಿದ್ದ ಶಾಹಿದ್​​ಗೆ ಈಗ ಆರು ವರ್ಷಗಳವರೆಗೆ ಪಕ್ಷದಿಂದ ಹೊರ ಬೀಳುವಂತಾಗಿದೆ.

ಒಟ್ಟಾರೆ, ತಮ್ಮ ವಿರುದ್ಧ ಬಲಿಯುತ್ತಿರುವ ಈ ಹಕ್ಕಿಗಳ ರೆಕ್ಕೆಪುಕ್ಕ ಕಟ್​ ಮಾಡಿದ್ದಾರೆ.. ಈ ಮೂಲಕ ಮೊಳಕೆಯಲ್ಲೇ ಶಿಕ್ಷೆಯ ಸಂದೇಶ ಅಲ್ಪಸಂಖ್ಯಾತ ಸ್ಥಳೀಯ ನಾಯಕರಿಗೆ ರವಾನೆ ಆಗಿದೆ.

ವಿಶೇಷ ವರದಿ: ಶಿವಪ್ರಸಾದ್​​, ಪೊಲಿಟಿಕಲ್​​​ ಬ್ಯೂರೋ

The post ಸಿದ್ದರಾಮಯ್ಯಗೆ ‘ಸಂಕಟ ಮೋರ್ಚಾ’ ಸಲಹೆ; ಯಾರೆಲ್ಲಾ ಭಾಗಿಯಾಗಿದ್ದರು ಸಭೆಯಲ್ಲಿ? appeared first on News First Kannada.

News First Live Kannada


Leave a Reply

Your email address will not be published.