ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ಬಾರಿ ಬದಾಮಿಯಲ್ಲಿ ಸ್ಪರ್ಧೆ ಮಾಡಬಾರದು ನಾನು ಬದಾಮಿಯಿಂದ ಸ್ಪರ್ಧಿಸಿ ಎಂಎಲ್ಎ ಆಗ್ತಿನಿ ಎಂದು ಕಾಂಗ್ರೆಸ್ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಸಿದ್ದರಾಮಯ್ಯ ಎದುರೇ ಆಕ್ರೋಶ ಹೊರಹಾಕಿದ್ದಾರೆ.
ಬದಾಮಿ ಪಟ್ಟಣದಲ್ಲಿ ಪರಿಷತ್ ಚುನಾವಣಾ ಪ್ರಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಬಿ.ಚಿಮ್ಮನಕಟ್ಟಿ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಭಾಷಣಕ್ಕೆ ಆಗಮಿಸಿದ ಕ್ಷೇತ್ರದ ಕಾಂಗ್ರೆಸ್ನ ಮಾಜಿ ಶಾಸಕ ಚಿಮ್ಮನಕಟ್ಟಿ ಬಹಿರಂಗವಾಗಿಯೇ ‘ಮುಂದಿನ ಬಾರಿ ನನ್ನ ಕ್ಷೇತ್ರದಲ್ಲಿ ಭಾಗವಹಿಸದಂತೆ’ ಸಿದ್ದರಾಮಯ್ಯ ಎದುರು ಆಕ್ರೋಶ ಹೊರಹಾಕಿದ್ದಾರೆ.
ನನಗೆ ಎಂಎಲ್ಸಿ ಮಾಡ್ತೇನೇ ಅಂದಿದ್ದ ಸಿದ್ದರಾಮಯ್ಯ, ಇವಾಗ ನನ್ನನ್ನ ಎಂಎಲ್ಸಿ ಮಾಡಿದ್ರಾ? ಎಷ್ಟು ನೋವು ಅನುಭವಿಸಿದ್ದೇನೆ ಅದು ನನಗೆ ಗೊತ್ತು ಎಂದಿದ್ದಾರೆ. ನಾನು ಐದಾರು ಸಲ ಎಂಎಲ್ಎ ಆಗಿ ಮಂತ್ರಿ ಆಗಿದ್ದೆ ಆದ್ರೆ ಇವರು ನನ್ನ ಕ್ಷೇತ್ರದಲ್ಲಿ ಬಂದು ನಿಂತ್ರು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಮುಂದಿನ ಬಾರಿ ಬದಾಮಿಯಲ್ಲಿ ಸ್ಪರ್ಧೆ ಮಾಡಬಾರದು ನಾನು ಬದಾಮಿಯಿಂದ ಸ್ಪರ್ಧಿಸಿ ಎಂಎಲ್ಎ ಆಗ್ತಿನಿ. ಅವರು ವರುಣಾ ಕ್ಷೇತ್ರದಿಂದ ನಿಂತು ಗೆಲ್ಲಲಿ ಎಂದಿದ್ದಾರೆ. ಮಾಜಿ ಶಾಸಕರ ಮಾತಿನಿಂದ ಸಿದ್ದರಾಮಯ್ಯ ವೇದಿಕೆಯಲ್ಲಿದ್ದು ಸಾಕಷ್ಟು ಮುಜುಗರಕ್ಕೊಳಗಾದ ಪ್ರಸಂಗ ನಡೆದಿದೆ. ಇನ್ನು ಅವರ ಭಾಷಣ ನಿಲ್ಲಿಸಲು ಕಾರ್ಯಕರ್ತರು ಮುಂದಾಗಿದ್ದರು ಕೂಡ ಕ್ಯಾರೆ ಎನ್ನದೇ ಚಿಮ್ಮನಕಟ್ಟಿ ಮಾತುಗಳನ್ನು ಮುಂದುವರೆಸಿದ್ದಾರೆ.