ಸಿದ್ದರಾಮಯ್ಯ-ಡಿಕೆಎಸ್​ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವೇನು..?


ಬೆಂಗಳೂರು: ಕಾಂಗ್ರೆಸ್​​ಗೆ ಕೈ ಕೊಟ್ಟು ಕಮಲ ಮುಡಿದು ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಲಸಿಗರಲ್ಲಿ ಕೆಲವರ ಮುಂದಿನ ನಡೆಯ ಬಗ್ಗೆ ಸಾಕಷ್ಟೂ ಚರ್ಚೆ ನಡೀತಿದೆ. ಕೆಲವರು ಮರಳಿ ಕೈ ಹಿಡಿತಾರೆ ಅನ್ನೋ ಸುದ್ದಿಯೂ ಹರಿದಾಡ್ತಿದೆ. ಆದ್ರೆ ಅವರನ್ನ ಮರಳಿ ಸೇರಿಸಿಕೊಳ್ಳೋ ವಿಚಾರದಲ್ಲಿ ಹಸ್ತ ಪಡೆಯಲ್ಲಿ ಪರ-ವಿರೋಧದ ಧ್ವನಿ ಎದ್ದಿದೆ. ಸಿದ್ದು, ಡಿಕೆ ಬಣದ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ವಲಸಿಗರ ಸೇರಿಸಿಕೊಳ್ಳೋ ವಿಚಾರದಲ್ಲಿ ಸಿದ್ದು, ಡಿಕೆ ಮಧ್ಯೆ ಭಿನ್ನಮತ
ಸಿದ್ದು ಟೀಮ್​​​ನಿಂದ ‘ವಿರೋಧ’.. ಡಿಕೆಎಸ್​ ಬಣದಲ್ಲಿ ‘ಸಾಫ್ಟ್​ ಕಾರ್ನರ್’.!

ಹೊರಗೆ ಚೆನ್ನಾಗಿದ್ರೂ ಎಲ್ಲದರಲ್ಲೂ ಭಿನ್ನ ಭಿನ್ನ ಅಭಿಪ್ರಾಯಗಳನ್ನೇ ಹೊಂದಿರುವ ಸಿದ್ದು-ಡಿಕೆಎಸ್​ ನಡುವೆ ವಲಸಿಗರನ್ನ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳೋ ವಿಚಾರದಲ್ಲೂ ಭಿನ್ನಾಭಿಪ್ರಾಯ ಎದ್ದಿದೆ. ತಿಕ್ಕಾಟ, ಮುಸುಕಿನ ಗುದ್ದಾಟಕ್ಕೂ ಇದು ಸಾಕ್ಷಿಯಾಗ್ತಿದೆ. ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ದರಾಮಯ್ಯ ಟೀಮ್​ ವಿರೋಧ ವ್ಯಕ್ತಪಡಿಸ್ತಿದ್ರೆ, ಅತ್ತ ಡಿಕೆಎಸ್​ ಬಣ ವಲಸಿಗ ಸಚಿವರ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದೆ. ಅಷ್ಟಕ್ಕೂ ವಲಸಿಗರನ್ನ ಸೇರಿಸಿಕೊಳ್ಳೋ ವಿಚಾರದಲ್ಲಿ ಸಿದ್ದು ಬಣದ ನಿಲುವೇನು ಮತ್ತು ಅದಕ್ಕೆ ಕಾರಣಗಳೇನು ಅಂತ ನೋಡೋದಾದ್ರೆ..?

ಸಿದ್ದು ಬಣದ ನಿಲುವೇನು?
ಮರುಸೇರ್ಪಡೆಗೆ ಸಿದ್ದರಾಮಯ್ಯ ಬಣದ ಹಲ ನಾಯಕರ ವಿರೋಧ

ವಲಸಿಗರ ಮರುಸೇರ್ಪಡೆಗೆ ಸಿದ್ದರಾಮಯ್ಯ ಬಣದ ಹಲ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅದ್ರಲ್ಲೂ ರಮೇಶ್ ಕುಮಾರ್, ಕೃಷ್ಣ ಭೈರೇಗೌಡರ ವಿರೋಧ ವ್ಯಕ್ತಪಡಿಸಿ ಅಭಿಪ್ರಾಯ ತಿಳಿಸಿದ್ದಾರೆ. ವಲಸಿಗರು ಕಾಂಗ್ರೆಸ್‌ಗೆ ಅವಮಾನವಾಗುವಂತೆ ನಡೆದುಕೊಂಡಿದ್ದಾರೆ. ಅಧಿಕಾರದ ಆಸೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಚಿವರಾಗಿದ್ದಾರೆ. ಸದನದಲ್ಲೂ ಅವ್ರನ್ನು ಸೇರಿಸಿಕೊಳ್ಳುವುದಿಲ್ಲ ಅಂತ ನಾವು ಹೇಳಿದ್ದೇವೆ. ನಮ್ಮ ಬಗ್ಗೆ ಹೋದಲ್ಲಿ ಬಂದಲ್ಲಿ ಲಘು ಮಾತುಗಳಲ್ಲಿ ಟೀಕೆ ಮಾಡಿದ್ದಾರೆ. ಹೀಗಾಗಿ ಪಕ್ಷಕ್ಕೆ ದ್ರೋಹ ಬಗೆದವರನ್ನ ಮತ್ತೆ ಸೇರಿಸಿಕೊಳ್ಳುವುದು ಬೇಡ ಅಂತ ಸಿದ್ದು ಬಣದ ನಾಯಕರು ಹೇಳ್ತಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ ಕೂಡ ಈ ಹಿಂದೆಯೇ ಕಡ್ಡಿಮುರಿದಂತೆ ನುಡಿದುಬಿಟ್ಟಿದ್ದಾರೆ. ಆದ್ರೆ ಈ ವಿಚಾರದಲ್ಲಿನ ಡಿಕೆಶಿ ಮೌನವೇ ವಲಸಿಗರ ಮೇಲಿನ ಸಾಫ್ಟ್​​ ಕಾರ್ನರ್ ಎನ್ನಲಾಗ್ತಿದೆ.

ಡಿಕೆಶಿ ಬಣದ ನಿಲುವೇನು?
ವಲಸಿಗರ ಸೇರ್ಪಡೆ ಬಗ್ಗೆ ಏನನ್ನೂ ಹೇಳದ ಡಿ. ಕೆ. ಶಿವಕುಮಾರ್

ವಲಸಿಗರ ಸೇರ್ಪಡೆ ಬಗ್ಗೆ ಏನನ್ನೂ ಹೇಳದ ಡಿ. ಕೆ. ಶಿವಕುಮಾರ್, ಈ ಬಗ್ಗೆ ಇದುವರೆಗೂ ತಮ್ಮ ನಿಲುವು ತಿಳಿಸಿಲ್ಲ. ಪಕ್ಷದ ನಾಯಕರ ಮುಂದೆ ಕೂಡ ಈ ಬಗ್ಗೆ ಏನನ್ನೂ ಹೇಳದಿರುವ ಕೆಪಿಸಿಸಿ ಸಾರಥಿ, ಮೌನವಹಿಸುವ ಮೂಲಕ ಸೇರ್ಪಡೆಗೆ ಒಲವು ತೋರಿದ್ದಾರೆ ಎಂಬ ಚರ್ಚೆ ನಡೀತಿದೆ. ಇನ್ನು ಮಾಧ್ಯಮಗಳ ಮುಂದೆ ಮಾತ್ರ ಸೇರ್ಪಡೆ ಬಗ್ಗೆ ಪರೋಕ್ಷ ಸುಳಿವು ನೀಡಿರುವ ಡಿಕೆ ಹಲವರು ಸಂಪರ್ಕದಲ್ಲಿದ್ದಾರೆಂದು ಹೇಳುವ ಮೂಲಕ ಸುಳಿವು ನೀಡಿದ್ದಾರೆ.

ಒಟ್ನಲ್ಲಿ ಸಿದ್ದು-ಡಿಕೆಎಸ್​ ಬಣ ರಾಜಕಾರಣ ವಲಸಿಗರ ಮರು ಸೇರ್ಪಡೆ ವಿಚಾರದಲ್ಲೂ ಬಯಲಾಗಿದೆ. ಆ ಮೂಲಕ ಎರಡೂ ಬಣಗಳ ನಡುವೆ ಭಿನ್ನಮತದ ಮುಸುಕಿನ ಗುದ್ದಾಟ ಶುರುವಾಗಿರೋದಂತೂ ಸುಳ್ಳಲ್ಲ.

ವಿಶೇಷ ಬರಹ; ಹರೀಶ್, ಪೊಲಿಟಿಕಲ್ ಬ್ಯೂರೋ, ನ್ಯೂಸ್​​ಫಸ್ಟ್​

News First Live Kannada


Leave a Reply

Your email address will not be published. Required fields are marked *