ಸಿದ್ದರಾಮಯ್ಯ ಸುಖಾಸುಮ್ಮನೆ ಸರ್ಕಾರವನ್ನು ದೂರುವ ಬದಲು ನ್ಯೂನತೆಗಳಿದ್ದರೆ ಹೇಳಲಿ, ಸರಿಪಡಿಸುತ್ತೇವೆ: ಕೋಟ ಶ್ರೀನಿವಾಸ ಪೂಜಾರಿ | Instead of making false allegations against government let Siddaramaiah point out flaws: Kota Srinivas Pujari ARB


ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯವರು (Siddaramaiah) ಸದನದಲ್ಲಾಗಲೀ ಅಥವಾ ಅದರ ಹೊರಗಡೆಯಾಗಲೀ ಯಾವುದೇ ವಿಷಯ ಪ್ರಸ್ತಾಪಿಸಿದರೂ ಅಂಕಿ-ಅಂಶಗಳ (facts and figures) ನೆರವಿನಿಂದ ಅದನ್ನು ಮಾಡುತ್ತಾರೆ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Pujari) ಅವರು ಸಿದ್ದರಾಮಯ್ಯ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಕಾರ್ಯಕ್ರಮಗಳಿಗೆ ಮೀಸಲಾಗಿರುವ ಅನುದಾನದಲ್ಲಿ ಮನಬಂದಂತೆ ಖರ್ಚು ಮಾಡಲಾಗಿದೆ ಅಂತ ಹೇಳಿರುವುದಕ್ಕೆ ಉತ್ತರ ನೀಡುವಾಗ ಅಂಕಿ-ಅಂಶಗಳನ್ನು ಬಳಸಿ ಸಮರ್ಪಕ ಉತ್ತರ ನೀಡಿದರು. ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಸಚಿವರು, ಸದರಿ ಯೋಜನೆಗೆ ಬಿಡುಗಡೆಯಾಗುವ ಅನುದಾನದಲ್ಲಿ ಶೇಕಡಾ 24ರಷ್ಟನ್ನು ವಿನಿಯೋಗಿಸಬಹುದೆಂದು ಕಾಯ್ದೆಯ 7 ಡಿ ಸ್ಪಷ್ಟವಾಗಿ ಹೇಳುತ್ತದೆ. 2013 ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು 2014 ರಿಂದ 2018 ರವರೆಗೆ 4 ವರ್ಷಗಳ ಅವಧಿಯಲ್ಲಿ ಒಟ್ಟು ರೂ. 5256 ಕೋಟಿ ಖರ್ಚು ಮಾಡಲಾಗಿದೆ ಎಂದರು.

2018-19ರ ಸಾಲಿನಲ್ಲಿ ಸಿದ್ದರಾಮಯ್ಯನವರ ಮಾರ್ಗದರ್ಶನ ಮತ್ತು ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ರೂ. 1865 ಕೋಟಿ ವ್ಯಯಿಸಲಾಗಿದೆ ಅಂತ ಹೇಳಿದ ಪೂಜಾರಿ ಅವರು ಅನುದಾನದ ಶೇ. 7 ರಷ್ಷನ್ನು ಎರಡು ಅವಧಿಗಳಲ್ಲಿ ವಿನಿಯೋಗಿಸಲಾಗಿದೆ ಎಂದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂದರೆ ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ 7 ಡಿ ಅಡಿಯಲ್ಲಿ ಒಟ್ಟು ರೂ. 6020 ಕೋಟಿ ಖರ್ಚು ಮಾಡಲಾಗಿದೆ. ಅಂದರೆ ಇವರ ಅವಧಿಯಲ್ಲೂ ಶೇ 7ರಷ್ಟು ಅನುದಾನವನ್ನು ವಿನಿಯೋಗಿಸಲಾಗಿದೆ. ಪರಿಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯನವರು ಸರ್ಕಾರವನ್ನು ದೂರವುದು ಎಷ್ಟು ಸರಿ, ಎಂದು ಸಚಿವ ಪೂಜಾರಿ ಕೇಳಿದರು.

ಸಿದ್ದರಾಮಯ್ಯನವರು ಅಪಾರ ಅನುಭವವುಳ್ಳ ನಾಯಕರಾಗಿದ್ದಾರೆ. ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಏನಾದರೂ ನ್ಯೂನತೆಳಿದ್ದರೆ ಹೇಳಲಿ. ನಾವು ಅದನ್ನು ಸ್ವಾಗತಿಸುತ್ತೇವೆ ಮತ್ತು ತಪ್ಪು ಸರಿಪಡಿಸಿಕೊಳ್ಳುತ್ತೇವೆ. ಅದರ ಬದಲು ವಿನಾಕಾರಣ ಸರ್ಕಾರವನ್ನು ದೂರುವುದು ಸರಿಯಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

TV9 Kannada


Leave a Reply

Your email address will not be published.