ಸ್ಯಾಂಡಲ್‌ವುಡ್‌ನ‌ ಮೋಹಕ ತಾರೆ ರಮ್ಯಾ ಮತ್ತೆ ಚಿತ್ರರಂಗಕ್ಕೆ ಬರುತ್ತಾರಾ ಎಂಬ ಪ್ರಶ್ನೆಯನ್ನು ಅವರ ಅಭಿಮಾನಿಗಳು ಕಳೆದ ಐದಾರು ವರ್ಷಗಳಿಂದ ಕೇಳುತ್ತಲೇ ಬರುತ್ತಿದ್ದಾರೆ. ಆದರೆ ಈ ಪ್ರಶ್ನೆಗೆ ಇಷ್ಟು ವರ್ಷಗಳಲ್ಲಿ ರಮ್ಯಾ ಎಲ್ಲೂ ಸ್ಪಷ್ಟವಾಗಿ ಉತ್ತರಿಸದಿದ್ದರಿಂದ, ತಮ್ಮ ನೆಚ್ಚಿನ ಹೀರೋಯಿನ್‌ ಮತ್ತೆ ಸ್ಕ್ರೀನ್‌ಮೇಲೆ ಬರಬಹುದು ಎಂಬ ನಿರೀಕ್ಷೆಯನ್ನ ರಮ್ಯಾ ಅಭಿಮಾನಿಗಳು ಕೂಡ ಇಟ್ಟುಕೊಂಡಿದ್ದರು. ಆದರೆ ಅಭಿಮಾನಿಗಳ ಈ ನಿರೀಕ್ಷೆ ಸದ್ಯಕ್ಕೆ ಈಡೇರುವಂತೆ ಕಾಣುತ್ತಿಲ್ಲ. ಅದಕ ಕಾರಣ ರಮ್ಯಾ ಸ್ವತಃ ತಾವೇ ಈ ಬಗ್ಗೆ ನೀಡಿರುವ ಉತ್ತರ.

ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿರುವ ರಮ್ಯಾ, “ಸಿನಿಮಾ ಎನ್ನುವುದು ಮುಗಿದು ಹೋದ ಅಧ್ಯಾಯ’ ಎಂದು ಹೇಳುವ ಮೂಲಕ ಸದ್ಯಕ್ಕೆ ಸಿನಿಮಾಕ್ಕೆ ಬರುವ ಯೋಚನೆ ಇಲ್ಲ ಎನ್ನುವುದನ್ನ ಸ್ಪಷ್ಟಪಡಿಸಿದ್ದಾರೆ.

ಹೌದು, ಸದ್ಯ ಕೊರೋನಾ ವೀಕೆಂಡ್‌ ಲಾಕ್‌ಡೌನ್‌ ಇದ್ದು, ಇದೇ ವೇಳೆ ತಮ್ಮ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳ ಜೊತೆ ಮಾತುಕಥೆ ನಡೆಸಿದ ರಮ್ಯಾ, ಅಭಿಮಾನಿಗಳ ಒಂದಷ್ಟು ಪ್ರಶ್ನೆಗಳಿಗೆ ಉತ್ತರಿಸಿದರು.

“ಮತ್ತೆ ಯಾವಾಗ ಸಿನಿಮಾಗೆ ವಾಪಸ್‌ ಆಗ್ತೀರಾ’ ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ರಮ್ಯಾ, “ಸಿನಿಮಾ ಜರ್ನಿ ಯಾವತ್ತೋ ಮುಗಿದು ಹೋಗಿದೆ’ ಎಂದು ಹೇಳುವ ಮೂಲಕ ಮತ್ತೆ ಸಿನಿಮಾಕ್ಕೆ ಬರುವ ಯೋಚನೆಯಿಲ್ಲ ಎಂದಿದ್ದಾರೆ.

ಸಿನಿಮಾದ ನಂತರ ರಮ್ಯಾ ರಾಜಕೀಯ ರಂಗದಲ್ಲಿ ಸಕ್ರಿಯರಾಗಿದ್ದರು, ಕಳೆದ ಕೆಲ ವರ್ಷಗಳಿಂದ ರಮ್ಯಾ ರಾಜಕೀಯದಲ್ಲೂ ಸಕ್ರಿಯವಾಗಿಲ್ಲ. ಈ ಬಗ್ಗೆಯೂ “ನೀವು ಸಕ್ರಿಯ ರಾಜಕಾರಣಕ್ಕೆ ವಾಪಸ್‌ ಬರಲ್ವಾ’ ಎಂದು ಪ್ರಶ್ನಿಸಿರುವ ಅಭಿಮಾನಿಯೊಬ್ಬರಿಗೆ, “ಇಲ್ಲ, ನನ್ನ ಸಮಯ ಮುಗಿದಿದೆ’ ಎಂದು ಉತ್ತರಿಸಿದ್ದಾರೆ ರಮ್ಯಾ.

ಸಿನಿಮಾ ಮತ್ತು ರಾಜಕೀಯದ ಪ್ರಶ್ನೆ ಜೊತೆಗೆ ರಮ್ಯಾ ಮದುವೆ ಬಗ್ಗೆಯೂ ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ಮದುವೆ ಆಗಿದ್ದೀರಾ..?, ಡೇಟಿಂಗ್‌ ಮಾಡ್ತಿದ್ದೀರಾ..? ನಿಮಗೆ ಬಾಯ್‌ಫ್ರೆಂಡ್‌ ಇದ್ದಾರಾ..? ಎಂಬ ಅಭಿಮಾನಿಗಳ ಪ್ರಶ್ನೆಗಳಿಗೂ ಕೂಲ್‌ ಆಗಿಯೇ ಉತ್ತರಿಸಿರುವ ರಮ್ಯಾ, ಇದಕ್ಕೆಲ್ಲಾ “ಇಲ್ಲ’ ಎಂದಿದ್ದಾರೆ.

ನಿಮ್ಮಲ್ಲಿ ನೀವು ದ್ವೇಷಿಸುವ ಅಂಶವೇನು? ಎಂಬ ಪ್ರಶ್ನೆಗೆ ರಮ್ಯಾ, “ನನ್ನ ಭಾವನೆಗಳನ್ನು ನಿಯಂತ್ರಿಸುವಲ್ಲಿಅಸಮರ್ಥತೆ’ ಎಂದು ಉತ್ತರಿಸಿದ್ದಾರೆ.

ಇದೇ ವೇಳೆ ಅಭಿಮಾನಿಯೊಬ್ಬ ರಮ್ಯಾಗೆ, “ನೀವು ರಕ್ಷಿತ್‌ ಶೆಟ್ಟಿನಾ ಮದುವೆ ಆಗಿ’ ಎಂದಿದ್ದಾನೆ. ಅದಕ್ಕೂ ಬಹಳ ಕೂಲ್‌ ಆಗಿ ಉತ್ತರಿಸಿದ ರಮ್ಯಾ, ರಕ್ಷಿತ್‌ ಶೆಟ್ಟಿ ಅವರ ಇನ್ಸ್ಟಾ ಖಾತೆಯನ್ನು ಟ್ವೀಟ್‌ ಮಾಡಿ ನಗುವ ಎಮೋಜಿ ಹಾಕಿದ್ದಾರೆ. ಇನ್ನು ಮದುವೆ ಬಗ್ಗೆ ಅಭಿಮಾನಿಗಳಿಂದ ಒಂದರ ಹಿಂದೊಂದು ಪ್ರಶ್ನೆಗಳು ಎದುರಾದಂತೆ, ಸುಸ್ತಾದ ರಮ್ಯಾ, “ಮದುವೆ… ಮದುವೆ… ಮಾಡುವುದಕ್ಕೆ ಇದೊಂದೇ ಕೆಲಸ ಇರುವುದು ಅನ್ನೋ ಹಾಗೆ. ಮದುವೆ ಆದಮೇಲೆ ಖುಷಿಯಿಂದ ಇರುವುದಕ್ಕೆ ಆಗಲ್ಲ ಗೊತ್ತಾ?’ ಎಂದು ಪ್ರತಿಕ್ರಿಯಿಸುವ ಮೂಲಕ ಮದುವೆ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ಫ‌ುಲ್‌ಸ್ಟಾಪ್‌ ಹಾಕಿದ್ದಾರೆ.

ಒಟ್ಟಾರೆ ಹಲವು ಸಮಯದಿಂದ ರಮ್ಯಾ ಸಿನಿಮಾಕ್ಕೆ ಬರುತ್ತಾರಾ? ರಾಜಕೀಯಕ್ಕೆ ಬರುತ್ತಾರಾ? ಮದುವೆ ಆಗುತ್ತಾರಾ? ಎಂಬ ಎಲ್ಲ ಪ್ರಶ್ನೆಗಳಿಗೂ ಒಂದೇ ವೇಳೆ ಉತ್ತರಿಸಿರುವ ರಮ್ಯಾ, ತಮ್ಮ ಬಗ್ಗೆ ಹರಿದಾಡುತ್ತಿದ್ದ ಎಲ್ಲ ಅಂತೆ- ಕಂತೆಗಳಿಗೂ ತೆರೆ ಎಳೆದಿದ್ದಾರೆ.

ಸಿನೆಮಾ – Udayavani – ಉದಯವಾಣಿ
Read More