ಸಿನಿಮಾ ಸಂಕ್ರಾಂತಿ; ಸಿನಿ ಸುಗ್ಗಿಯಲ್ಲಿ ಸದ್ದು ಮಾಡಿದೋರು ಯಾಱರು..? ಇಲ್ಲಿದೆ ಮಾಹಿತಿ


ವರ್ಷದ ಮೊದಲ ಹಬ್ಬ ಸಂಕ್ರಾಂತಿ ಪ್ರಯುಕ್ತ ಇಂದು ಸ್ಯಾಂಡಲ್​ವುಡ್​ನಲ್ಲಿ ಅನೇಕ ಹೊಸ ಸಿನಿಮಾಗಳ ಪೋಸ್ಟರ್​ಗಳು ರಿಲೀಸ್​ ಆಗಿವೆ. ಪ್ರತಿ ಬಾರಿ ಸಂಕ್ರಾಂತಿ ಹಬ್ಬಕ್ಕೆ ಹೊಸ ಸಿನಿಮಾಗಳ ಟೀಸರ್, ಟ್ರೇಲರ್, ಸಾಂಗ್, ಪೋಸ್ಟರ್​ ಹೀಗೆ ಏನಾದರು ಒಂದು ರಿಲೀಸ್​ ಆಗುತ್ತೆ. ಆದರೆ ಈ ಬಾರಿ ಕೊರೊನಾ ಹೆಚ್ಚಳವಾಗಿರೋ ಕಾರಣ ಯಾವುದೇ ಬಿಗ್ ಬಜೆಟ್​ ಸಿನಿಮಾಗಳ ಅಪ್​ಡೇಟ್ ಚಿತ್ರಪ್ರೇಮಿಗಳಿಗೆ ಸಿಕ್ಕಿಲ್ಲ .

ಆದರೆ ಕೆಲವು ಚಿತ್ರತಂಡಗಳು ತಮ್ಮ ಸಿನಿಮಾದ ಪೋಸ್ಟರ್​ಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿ ಸಿನಿಪ್ರೇಮಿಗಳಿಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಹಾಗಾದರೆ, ಯಾವೆಲ್ಲ ಸಿನಿಮಾಗಳ ಪೋಸ್ಟರ್‌ ರಿಲೀಸ್ ಆಗಿವೆ? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ

ಸಂಕ್ರಾಂತಿ ಹಬ್ಬದ ಪ್ರಯುಕ್ತ ಡಾಲಿ 25ನೇ ಸಿನಿಮಾ ಅನೌನ್ಸ್​ ಆಗಿದ್ದು, ಈ ಚಿತ್ರಕ್ಕೆ ‘ಹೊಯ್ಸಳ’ ಎಂಬ ಟೈಟಲ್​​ ಫಿಕ್ಸ್ ಮಾಡಲಾಗಿದೆ. ‘ರತ್ನನ್ ಪ್ರಪಂಚ’ ಸಿನಿಮಾ ಮಾಡಿ ಗೆದಿದ್ದ ಕೆ.ಆರ್​.ಜಿ. ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಹೊಂಬಾಳೆ ನಿರ್ಮಾಣ ಸಂಸ್ಥೆಯ ವಿಜಯ್ ಕಿರಗಂದೂರು ಅವರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ನಿರ್ದೇಶಕ ವಿಜಯ್ ಎನ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

ಆಪರೇಷನ್​ ಅಲಮೇಲಮ್ಮ ಖ್ಯಾತಿಯಾ ನಟ ರಿಷಿ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಅಲ್ಲೇ ಡ್ರಾ ಅಲ್ಲೇ ಬಹುಮಾನ’ ಸಿನಿಮಾದ ಪೋಸ್ಟರ್​ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಬಿಶಾಕ್​ ಆ್ಯಕ್ಷನ್​ ಕಟ್​ ಹೇಳಿದ್ದು , ಪ್ರಶಾಂತ್​ ಬಿ.ಜೆ ಬಂಡವಾಳ ಹೂಡಿದ್ದಾರೆ.

ನಟ ಧನ್ವೀರ್ ನಟನೆಯ ಮೂರನೇ ಸಿನಿಮಾದ ಟೈಟಲ್​ ಘೋಷಣೆಯಾಗಿದ್ದು, ಚಿತ್ರದ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್​ ಆಗಿದೆ. ಚಿತ್ರಕ್ಕೆ ‘ವಾಮನ’ಎಂಬ ಶೀರ್ಷಿಕೆ ನೀಡಲಾಗಿದೆ. ನಿರ್ದೇಶಕ ಶಂಕರ್​ ರಾಮನ್​ ಎಂಬುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ನಟ ನಿರ್ದೇಶಕ ರಿಷಭ್​ ಶೆಟ್ಟಿ ನಟನೆಯ ಮುಂಬರುವ ಸಿನಿಮಾ ‘ಹರಿಕಥೆ ಅಲ್ಲ ಗಿರಿ ಕಥೆ’ ಚಿತ್ರದ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಚಿತ್ರತಂಡ ನಾಡಿನ ಸಮಸ್ತ ಜನರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ನಟಿ ಅದಿತಿ ಪ್ರಭುದೇವ ಹಾಗೂ ನಟ ಶ್ರೀನಿ ಅಭಿನಯದ ‘ಓಲ್ಡ್​​ ಮಾಂಕ್’ ​ಚಿತ್ರದ ಹೊಸ ಪೋಸ್ಟರ್​ ಬಿಡುಗಡೆಯಾಗಿದೆ. ಈ ಮೊದಲು ಚಿತ್ರತಂಡ ಮುಂದಿನ ತಿಂಗಳು ಫೆಬ್ರವರಿ 11 ರಂದು ಸಿನಿಮಾ ರಿಲೀಸ್​ ಆಗಲಿದೆ ಎಂದು ಘೋಷಣೆ ಮಾಡಿದ್ದರು. ಆದರೆ ರಿಲೀಸ್​ ಆಗಿರುವ ಹೊಸ ಪೋಸ್ಟರ್​ನಲ್ಲಿ ಸಿನಿಮಾ ರಿಲೀಸ್​ ದಿನಾಂಕ ದೇವರಿಗೆ ಗೊತ್ತು ಎಂದು ಬರೆಯಲಾಗಿದೆ.

ಸ್ಯಾಂಡಲ್​ವುಡ್​ ಗೋಲ್ಡನ್​ ಸ್ಟಾರ್​ ಗಣೇಶ್​, ದಿಗಂತ್​ ಹಾಗೂ ನಿರ್ದೇಶಕ ಪವನ್​ ಕುಮಾರ್​ ಅಭಿನಯದ ‘ಗಾಳಿಪಟ -2’ ಚಿತ್ರದ ಹೊಸ ಪೋಸ್ಟರ್​ ಆಗಿದೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ನಿರ್ಮಾಪಕ ರಮೇಶ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಯೋಗ್​ರಾಜ್​ ಭಟ್​ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.

News First Live Kannada


Leave a Reply

Your email address will not be published. Required fields are marked *