ವಿಜಯಪುರ: ಸಿನಿಮಾ ಶೈಲಿಯಲ್ಲಿ ಖತರ್ನಾಕ್ ಪ್ಲಾನ್ ರೂಪಿಸಿ ಎಟಿಎಂ ದರೋಡೆ ಮಾಡಿ ಸದ್ಯ ಪೊಲೀಸರ ಅತಿಥಿಗಳಾಗಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಮಿಸ್ಮಿತಾ ಶರಾಭಿ, ಆಕೆಯ ಪ್ರಿಯಕರ ಮಂಜುನಾಥ ಭಿನ್ನಾಳಮಠ ಹಾಗೂ ಗ್ಯಾಂಗ್ನ ಸದಸ್ಯರನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ..?
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹೂಡ್ಕೋ ಕಾಲೋನಿಯ ಯುನಿಯನ್ ಬ್ಯಾಂಕ್ ಎಟಿಎಂಗೆ ಕಳೆದ ನವೆಂಬರ್ 18ರಂದು ಕನ್ನ ಹಾಕಿದ್ದ ದುಷ್ಕರ್ಮಿಗಳು ಬರೋಬ್ಬರಿ 16 ಲಕ್ಷ ರೂಪಾಯಿ ಲೂಟಿ ಮಾಡಿ ಎಸ್ಕೇಪ್ ಆಗಿದ್ದರು. ಈ ಪ್ರಕರಣ ಮುದ್ದೇಬಿಹಾಳ ಪೊಲೀಸರಿಗೆ ಬಹುದೊಡ್ಡ ಸವಾಲನ್ನು ನೀಡಿತ್ತು. ಏಕೆಂದರೆ ದರೋಡೆ ಮಾಡಿದ್ದ ದುಷ್ಕರ್ಮಿಗಳು ಎಟಿಎಂ ಕೀ ಹಾಗೂ ಪಾಸ್ವರ್ಡ್ ಬಳಸಿ ಮಿಷನ್ನನ್ನು ಹೊಡೆಯದೇ ಹಣ ದೋಷಿ ಪರಾರಿಯಾಗಿದ್ದರು. ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳ ಸುಳಿವಿನ ಅನ್ವಯ ಪ್ರಕರಣದ ವಿಚಾರಣೆ ಆರಂಭಿಸಿದ ಪೊಲೀಸರು ಸದ್ಯ ಒಟ್ಟು ಏಳು ಆರೋಪಿಗಳನ್ನು ಬಂಧನ ಮಾಡಲು ಯಶಸ್ವಿಯಾಗಿದ್ದಾರೆ.
ಖತರ್ನಾಕ್ ಪ್ಲಾನ್ಗೆ ಪೊಲೀಸರೇ ಶಾಕ್
ಎಟಿಎಂ ಲೂಟಿ ಪ್ರಕರಣ ಬೆನ್ನು ಬಿದ್ದ ಪೊಲೀಸರಿಗೆ ಕೃತ್ಯ ನಡೆಸಿದ್ದ ಅಸಾಮಿಗಳು ಮಾಡಿದ್ದ ಪ್ಲಾನ್ ನಿಂದ ಪೊಲೀಸರಿಗೆ ಶಾಕ್ ನೀಡಿತ್ತು. ಏಕೆಂದರೆ ಸದ್ಯ ಪೊಲೀಸರ ಅತಿಥಿಯಾಗಿರೋ ಆರೋಪಿ ಮಿಸ್ಮಿತಾ ಶರಾಭಿ, ಯುನಿಯನ್ ಬ್ಯಾಂಕ್ ನ ಮಾಜಿ ಕ್ಯಾಶಿಯರ್ ಆಗಿದ್ದು, ಈಕೆ ನೀಡಿದ್ದ ಪಾಸ್ವಾರ್ಡ್ ಬಳಸಿಯೇ ಆಕೆಯ ಪ್ರಿಯಕರ ಮಂಜುನಾಥ ಹಾಗೂ ಸಹಚರರು ಎಟಿಎಂ ದೋಚಿದ್ದರು. ಇದಕ್ಕೆ ಸಿಪಾಯಿ ವಿಠ್ಠಲ್ ಮಂಗಳೂರು ಕೂಡ ನೆರವು ನೀಡಿದ್ದ ಎಂಬ ಅಂಶ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣದಲ್ಲಿ ಪ್ರೇಮಿಗಳಾದ ಮಿಸ್ಮಿತಾ, ಆಕೆಯ ಪ್ರಿಯಕರ ಮಂಜುನಾಥ ಹಾಗೂ ಎಟಿಎಂ ಕೀ ನೀಡಿದ್ದ ಸಿಪಾಯಿ ವಿಠ್ಠಲ್ ಸೇರಿ ಏಳು ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 13 ಲಕ್ಷ ರೂಪಾಯಿ ನಗದು, 5 ಸ್ಮಾರ್ಟ್ ಫೋನ್ ಸೇರಿ 18 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ ಪಡೆಯಲಾಗಿದೆ. ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲದಂತೆ ಪ್ಲಾನ್ ಮಾಡಿ ಎಟಿಎಂ ದೋಚಿದ ಪ್ರೇಮಿಗಳು ಮತ್ತು ಗ್ಯಾಂಗ್ ಸದ್ಯ ಜೈಲು ಸೇರಿದೆ. ಸದ್ಯ ಬಂಧಿತ ಆರೋಪಿಗಳು ಬೇರೆ ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದರಾ ಎಂಬ ಬಗ್ಗೆ ಹೆಚ್ಚಿನ ತನಿಖೆ ಮಾಡುತ್ತೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.