ಸಿನಿಮೀಯ ಶೈಲಿಯಲ್ಲಿ ಭೀಕರ ರಸ್ತೆ ಅಪಘಾತ; ಖ್ಯಾತ​ ನಟ ಬಚಾವ್​, ವೈರಲ್​ ಆಯ್ತು ಫೋಟೋ | Arnold Schwarzenegger Met with Accident Photo goes viral


ಸಿನಿಮೀಯ ಶೈಲಿಯಲ್ಲಿ ಭೀಕರ ರಸ್ತೆ ಅಪಘಾತ; ಖ್ಯಾತ​ ನಟ ಬಚಾವ್​, ವೈರಲ್​ ಆಯ್ತು ಫೋಟೋ

ಅರ್ನಾಲ್ಡ್​

ಹಾಲಿವುಡ್​ ನಟ (Hollywood Actor) ಮತ್ತು ಕ್ಯಾಲಿಫೋರ್ನಿಯಾ ಮಾಜಿ ಗವರ್ನರ್ ಅರ್ನಾಲ್ಡ್ ಸ್ವಾರ್ಚುನೆಗರ್ (Arnold Schwarzenegger) ಅವರು ಚಲಿಸುತ್ತಿದ್ದ ಕಾರು ಶುಕ್ರವಾರ (ಜನವರಿ 21) ಅಪಘಾತಕ್ಕೆ ತುತ್ತಾಗಿದೆ. ಸರಣಿ ಅಪಘಾತ ಇದಾಗಿದ್ದು, ಅರ್ನಾಲ್ಡ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಬ್ರೆಂಟ್‌ವುಡ್ ಭಾಗದಲ್ಲಿ ಸಂಜೆ 4.35ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ಕೈದು ಕಾರುಗಳಿಗೆ ಹಾನಿ ಆಗಿದೆ. ಅಪಘಾತದ ರಭಸಕ್ಕೆ ಒಂದು ಕಾರಿನ ಮೇಲೆ ಮತ್ತೊಂದು ಕಾರು ಬಿದ್ದಿತ್ತು. ಈ ವೇಳೆ ಓರ್ವ ಮಹಿಳೆಗೆ ಗಾಯಗಳಾಗಿವೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಲಾಸ್​ ಏಂಜಲಿಸ್​​​ನ ಪೊಲೀಸರು (Los Angeles Police) ತನಿಖೆ ನಡೆಸುತ್ತಿದ್ದಾರೆ.

ಅರ್ನಾಲ್ಡ್ ಸ್ವಾರ್ಚುನೆಗರ್ ಅವರು ಯುಕಾನ್​ ಕಂಪೆನಿಯ ಕಾರಿನಲ್ಲಿ ಚಲಿಸುತ್ತಿದ್ದರು. ಸಿಗ್ನಲ್​ನಲ್ಲಿ ನಿಂತಿದ್ದ ಟೊಯಾಟೋ ಕಾರಿನ ಮೇಲೆ ಈ ಕಾರು ಹತ್ತಿದೆ. ಈ ವೇಳೆ ಎರಡುಮೂರು ಕಾರುಗಳಿಗೆ ಹಾನಿ ಆಗಿದೆ. ಅರ್ನಾಲ್ಡ್ ಅವರ ಎಸ್​​ಯುವಿ ಕೂಡ ಅಪಘಾತದಲ್ಲಿ ಸಾಕಷ್ಟು ಹಾನಿ ಅನುಭವಿಸಿದೆ.

Arnold

ಸದ್ಯ, ಸೋಶಿಯಲ್​ ಮೀಡಿಯಾದಲ್ಲಿ ಈ ಅಪಘಾತದ ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗಿವೆ. ಅಪಘಾತವಾದ ಎಸ್​ಯುವಿ ಕಾರಿನ ಪಕ್ಕ ಅರ್ನಾಲ್ಡ್ ಸ್ವಾರ್ಚುನೆಗರ್ ನಿಂತಿರುವ ಫೋಟೋಗಳು ಹರಿದಾಡುತ್ತಿವೆ. ಅವರಿಗೆ ಯಾವುದೇ ಪ್ರಾಣಾಪಾಯ ಆಗದೆ ಇರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಕೆಂಪು ಟೊಯೋಟೋ ಕಾರಿನಲ್ಲಿದ್ದ ಮಹಿಳೆಗೆ ಸಾಕಷ್ಟು ಗಾಯವಾಗಿದೆ. ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸಾಕಷ್ಟು ರಕ್ತ ಹೋಗಿದೆ. ಅಪಘಾತದ ದೃಶ್ಯವನ್ನು ಕಣ್ಣಾರೆ ನೋಡಿದವರು ಅಚ್ಚರಿ ಹೊರ ಹಾಕಿದ್ದಾರೆ. ಇದೊಂದು ಸಿನಿಮೀಯ ರೀತಿಯ ಅಪಘಾತ ಎಂದು ಬಣ್ಣಿಸಿದ್ದಾರೆ. ಅಪಘಾತದಲ್ಲಿ ಅರ್ನಾಲ್ಡ್​ ಅವರದ್ದೇ ತಪ್ಪು ಎಂದು ಕೆಲ ಪ್ರತ್ಯಕ್ಷದರ್ಶಿಗಳು ದೂರಿದ್ದಾರೆ.

ಹಾಲಿವುಡ್​ನ ಯಶಸ್ವಿ ನಟರ ಪೈಕಿ ಅರ್ನಾಲ್ಡ್ ಸ್ವಾರ್ಚುನೆಗರ್ ಕೂಡ ಒಬ್ಬರು. ಅವರು ಬಾಡಿ ಬಿಲ್ಡರ್​ ಆಗಿಯೂ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದರು. ಅನೇಕ ಬಾಡಿ ಬಿಲ್ಡರ್​ಗಳಿಗೆ ಇವರೇ ಸ್ಫೂರ್ತಿ. 2003ರಿಂದ 2011ರವರೆಗೆ ಅವರು ಕ್ಯಾಲಿಫೋರ್ನಿಯಾ ಗವರ್ನರ್​ ಆಗಿ ಸೇವೆ ಸಲ್ಲಿಸಿದ್ದರು. 2019ರಲ್ಲಿ ತೆರೆಗೆ ಬಂದ ‘ಟರ್ಮಿನೇಟರ್​: ಡಾರ್ಕ್​ ಫೇಟ್​’ ಅವರ ಕೊನೆಯ ಚಿತ್ರ. ‘ಕುಂಗ್​ ಫ್ಯೂರಿ 2’ನಲ್ಲಿ ಅವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾ ಶೀಘ್ರವೇ ತೆರೆಗೆ ಬರುತ್ತಿದೆ.

TV9 Kannada


Leave a Reply

Your email address will not be published. Required fields are marked *