ಸಿಬಿಐ, ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರ 5 ವರ್ಷಗಳಿಗೆ ವಿಸ್ತರಣೆ | Govt of India decides to extent tenures of cbi enforcement directorate chiefs tenures upto 5 years


ಸಿಬಿಐ, ಜಾರಿ ನಿರ್ದೇಶನಾಲಯ ಮುಖ್ಯಸ್ಥರ ಅಧಿಕಾರ 5 ವರ್ಷಗಳಿಗೆ ವಿಸ್ತರಣೆ

ಜಾರಿ ನಿರ್ದೇಶನಾಲಯ ಮತ್ತು ಸಿಬಿಐ

ದೆಹಲಿ: ಕೇಂದ್ರೀಯ ತನಿಖಾ ದಳ (Central Bureau of Investigation – CBI) ಮತ್ತು ಜಾರಿ ನಿರ್ದೇಶನಾಲಯ (Enforcement Directorate – ED) ನಿರ್ದೇಶಕರ ಮುಖ್ಯಸ್ಥರ ಅಧಿಕಾರ ಅವಧಿಯನ್ನು ಎರಡು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಜಾರಿ ಮಾಡಿದೆ. ಎರಡೂ ಸುಗ್ರೀವಾಜ್ಞೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ. ಎರಡೂ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರ ಅವಧಿಯನ್ನು ಅವರು ಮುಖ್ಯಸ್ಥರಾಗಿ ನೇಮಕಗೊಂಡ ಎರಡು ವರ್ಷಗಳ ನಂತರ ಗರಿಷ್ಠ ಮೂರು ವರ್ಷಗಳ ಕಾಲ ಪ್ರತಿವರ್ಷ ವಿಸ್ತರಿಸಬಹುದಾಗಿದೆ. ಸಂಸತ್ತಿನ ಅಧಿವೇಷನ ನಡೆಯದ ಕಾಲದಲ್ಲಿ ಅವಧಿ ವಿಸ್ತರಿಸಲು ರಾಷ್ಟ್ರಪತಿಗಳು ಅನುಮತಿಸಬಹುದಾಗಿದೆ ಎಂದು ಸುಗ್ರೀವಾಜ್ಞೆ ತಿಳಿಸಿದೆ.

ಮೊದಲು ನೇಮಕಾತಿ ಆದೇಶ ಜಾರಿಗೆ ಬಂದ ಐದು ವರ್ಷಗಳ ನಂತರ ಇಂಥ ಯಾವುದೇ ವಿಸ್ತರಣೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸುಗ್ರೀವಾಜ್ಞೆಯಲ್ಲಿ ಸ್ಪಷ್ಟಪಡಿಸಲಾಗಿದೆ. ನ್ಯಾಯಮೂರ್ತಿ ಎಲ್​.ಎನ್.ರಾವ್ ನೇತೃತ್ವದ ಸುಪ್ರೀಂಕೋರ್ಟ್​ ನ್ಯಾಯಪೀಠವು ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಎಸ್​.ಕೆ.ಮಿಶ್ರಾ ಅವರ ಅಧಿಕಾರ ವಿಸ್ತರಣೆಯ ಕುರಿತ ವಿಚಾರಣೆಯ ಸಂದರ್ಭದಲ್ಲಿ ‘ಇಂಥ ವಿಸ್ತರಣೆಯನ್ನು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಪರಿಗಣಿಸಬೇಕು’ ಎಂದು ಅಭಿಪ್ರಾಯಪಟ್ಟಿತ್ತು. ಮಿಶ್ರಾ ಅವರು 2018ರಲ್ಲಿ ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು.

ನವೆಂಬರ್ 17ಕ್ಕೆ ಎಸ್.ಕೆ.ಮಿಶ್ರಾ ಅವರ ಅಧಿಕಾರ ಅವಧಿ ಪೂರ್ಣಗೊಳ್ಳಲಿದೆ. ಈ ಗಡುವಿನ ಕೇವಲ ಮೂರು ದಿನಗಳಿಗೆ ಮೊದಲು ಕೇಂದ್ರ ಸರ್ಕಾರವು ಈ ಮಹತ್ವದ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಕಳೆದ ವರ್ಷ ಅವರ ಅಧಿಕಾರ ಅವಧಿಯನ್ನು ಒಂದು ವರ್ಷದ ಕಾಲಕ್ಕೆ ವಿಸ್ತರಿಸಲಾಗಿತ್ತು. ಕೇಂದ್ರ ಸರ್ಕಾರದ ಈ ನಡೆಯನ್ನು ಕೆಟ್ಟ ಮೇಲ್ಪಂಕ್ತಿ ಎಂದು ಹಲವರು ಟೀಕಿಸಿದ್ದರು. ಕೇಂದ್ರ ಕಂದಾಯ ಮತ್ತು ಹಣಕಾಸು ಇಲಾಖೆಯ ಅಧೀನದಲ್ಲಿರುವ ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ನಡೆಸುವ ವಿಶೇಷ ಸಂಸ್ಥೆಯಾಗಿದೆ. ಜಾರಿ ನಿರ್ದೇಶನಾಲಯವನ್ನು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ನಾಯಕರು ಮತ್ತು ಮಾಜಿ ಸಚಿವರ ವಿರುದ್ಧ ಬಳಸುತ್ತಿದೆ ಎಂಬ ಆರೋಪಗಳು ಈ ಹಿಂದೆ ಪ್ರಬಲವಾಗಿ ಕೇಳಿ ಬಂದಿತ್ತು.

ಇದನ್ನೂ ಓದಿ: Rafale deal ರಫೇಲ್ ಒಪ್ಪಂದ: ಕಿಕ್‌ಬ್ಯಾಕ್‌ ಆರೋಪದ ತನಿಖೆ ನಡೆಸಲು ಸಿಬಿಐ ವಿಫಲ ಎಂಬುದಕ್ಕೆ ಪುರಾವೆ ಲಭ್ಯ
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಇಡಿಗೆ ಕರ್ನಾಟಕ ಸರ್ಕಾರ ಬರೆದಿದ್ದ ಪತ್ರ ಬಹಿರಂಗ

TV9 Kannada


Leave a Reply

Your email address will not be published.