ಚಿತ್ರ ಕೃಪೆ:
SIERRAEYESALONE
ಇಂಧನ ಟ್ಯಾಂಕರ್ವೊಂದು ಡಿಕ್ಕಿ ಹೊಡೆದ ನಂತರದಲ್ಲಿ ಸ್ಫೋಟಗೊಂಡು, ಕನಿಷ್ಠ 92 ಮಂದಿ ಸಾವನ್ನಪ್ಪಿದ್ದು, ಇತರ ಹತ್ತಾರು ಮಂದಿ ಗಾಯಗೊಂಡ ಘಟನೆ ಶುಕ್ರವಾರ ಸಿಯೆರಾ ಲಿಯೋನ್ನ ರಾಜಧಾನಿಯಲ್ಲಿ ಸಂಭವಿಸಿದೆ, ಎಂದು ಅಧಿಕಾರಿಗಳು ಹೇಳಿದ್ದಾರೆ. “92 ಮಂದಿ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಈ ಬೆಳಗ್ಗೆ ನಮಗೆ ವರದಿ ಬಂದಿದೆ,” ಎಂದು ಉಪಾಧ್ಯಕ್ಷ ಮೊಹ್ಮದ್ ಜುಲ್ದೇ ಜಲ್ಲೋಹ್ ಹೇಳಿದ್ದಾರೆ. ಈ ಸ್ಫೋಟದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಗಂಭೀರ ಸ್ವರೂಪದ ಸುಟ್ಟ ಗಾಯಗಳೊಂದಿಗೆ 88ಕ್ಕೂ ಹೆಚ್ಚು ಮಂದಿಯ ಚಿಕಿತ್ಸೆ ನಡೆಯುತ್ತಿದೆ ಎಂದು ಸೇರಿಸಲಾಗಿದೆ. ಶನಿವಾರ ಬೆಳಗ್ಗೆ ಹೊತ್ತಿಗೆ 92 ದೇಹಗಳನ್ನು ತಂದಿರುವುದಾಗಿ ಫ್ರೀಟೌನ್ನ ಕನೌಟ್ ಆಸ್ಪತ್ರೆಯಲ್ಲಿನ ಶವಾಗಾರದಿಂದ ವರದಿ ಬಂದಿದೆ. ತೀವ್ರವಾಗಿ ಸುಟ್ಟ ಗಾಯಗಳಾಗಿ ಐಸಿಯುದಲ್ಲಿ ಇರುವ ಮೂವತ್ತು ಮಂದಿ ಬದುಕುಳಿವ ಸಾಧ್ಯತೆ ಇಲ್ಲ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.
ಫ್ರೀಟೌನ್ನ ಪೂರ್ವಕ್ಕೆ ಇರುವ ಉಪನಗರವಾದ ವೆಲ್ಲಿಂಗ್ಟನ್ನಲ್ಲಿ ಟ್ರಕ್ವೊಂದು ಟ್ಯಾಂಕರ್ಗೆ ಡಿಕ್ಕಿ ಹೊಡೆದ ಮೇಲೆ ಈ ಸ್ಫೋಟ ಸಂಭವಿಸಿದೆ. ಅಪಘಾತವಾದ ಟ್ಯಾಂಕರ್ನಿಂದ ತೈಲ ಸಂಗ್ರಹಕ್ಕೆ ಮುಂದಾದ ಜನರು ಸಹ ಈ ಘಟನೆಯಲ್ಲಿ ಸಂತ್ರಸ್ತರಾಗಿದ್ದಾರೆ ಎಂದು ಫೇಸ್ಬುಕ್ ಪೋಸ್ಟ್ನಲ್ಲಿ ನಗರದ ಮೇಯರ್ ತಿಳಿಸಿದ್ದಾರೆ. ಬಹಳ ಗಂಭೀರವಾಗಿ ಸುಟ್ಟುಹೋಗಿರುವ ಸಂತ್ರಸ್ತರನ್ನು ಹತ್ತಿರದ ಮಳಿಗೆಗಳು ಮತ್ತು ಮನೆಗಳಲ್ಲಿ ಮಲಗಿಸಲಾಗಿದೆ ಎಂದು ಹೇಳಿದ್ದು, ಈ ಬಗ್ಗೆ ಯಾವುದೇ ಸುದ್ದಿ ಸಂಸ್ಥೆ ಖಚಿತಪಡಿಸಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಗಿರಕಿ ಹೊಡೆಯುತ್ತಿರುವ ಫೋಟೋಗಳು, ವಿಡಿಯೋಗಳು ಗಾಬರಿಪಡಿಸುವಂತಿವೆ.
ಈ ಅವಘಡದಲ್ಲಿ ಆಗಿರುವ ಆಸ್ತಿ ಹಾನಿ ಪ್ರಮಾಣವು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಸ್ಥಳೀಯ ಪತ್ರಕರ್ತರೊಬ್ಬರು ಮಾಧ್ಯಮವೊಂದರ ಜತೆಗೆ ಮಾತನಾಡಿ, 100ಕ್ಕೂ ಹೆಚ್ಚು ಜನರು ಈ ಘಟನೆಯಲ್ಲಿ ಗಾಯಗೊಂಡಿದ್ದು, ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಸ್ಫೋಟ ನಡೆದಾಗ ಹಲವರು ಭಾರೀ ಸಂಚಾರ ದಟ್ಟಣೆಯಲ್ಲಿ ಕೂತಿದ್ದರು ಎಂದು ತಿಳಿಸಲಾಗಿದೆ. ಪ್ರಾಣ ಕಳೆದುಕೊಂಡವರು ಮತ್ತು ಸುಟ್ಟು ಹೋದವರಲ್ಲಿ ವಾಹನದೊಳಗೆ ಇದ್ದವರೇ ಹೆಚ್ಚು ಎನ್ನಲಾಗಿದೆ.
ಜಗತ್ತಿನ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಸಿಯೆರಾ ಲಿಯೋನ್ನಲ್ಲಿ ಈ ಹಿಂದೆ ಕೂಡ ಪೆಟ್ರೋಲ್ ಟ್ಯಾಂಕರ್ಗಳನ್ನು ಒಳಗೊಂಡಂತೆ ಅಪಘಾತ ಸಂಭವಿಸಿದೆ. ಆಫ್ರಿಕಾದ ಇತರ ಭಾಗಗಳಲ್ಲೂ ಇದೇ ರೀತಿಯ ಘಟನೆ ಸಂಭವಿಸಿ, ಹಲವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ: ಗ್ಯಾಸ್ ಟ್ಯಾಂಕರ್ ಸ್ಫೋಟ; ಸುತ್ತಮುತ್ತ 300-400 ಮೀಟರ್ ವ್ಯಾಪಿಸಿರುವ ಬೆಂಕಿ