ನವದೆಹಲಿ: ವಿಶ್ವದ ಬಡರಾಷ್ಟ್ರಗಳಲ್ಲಿ ಒಂದಾದ ಪಶ್ಚಿಮ ಆಫ್ರಿಕಾದ ಪುಟ್ಟ ದೇಶ ಸಿಯೆರಾ ಲಿಯೋನ್ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಅಪಘಾತಕ್ಕೀಡಾಗಿದ್ದ ತೈಲ ಟ್ಯಾಂಕರ್ನಿಂದ ಇಂಧನ ಸಂಗ್ರಹಿಸಲು ಜನ ಮುಗಿಬಿದ್ದ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟದಿಂದ ಹೊತ್ತಿಕೊಂಡ ಬೆಂಕಿಗೆ ನೂರಕ್ಕೂ ಅಧಿಕ ಮಂದಿ ಬಲಿಯಾಗಿದ್ರೆ, ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಸಿಯೆರಾ ಲಿಯೋನ್ ದೇಶದ ರಾಜಧಾನಿ ಫ್ರೀಟೌನ್ನ ವೆಲ್ಲಿಂಗ್ಟನ್ನಲ್ಲಿ ಸಂಭವಿಸಿದ ಭೀಕರ ಸ್ಫೋಟ 108ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಅಲ್ಲದೇ 90ಕ್ಕೂ ಹೆಚ್ಚು ಮಂದಿ ಸಾವು, ಬದುಕಿನ ನಡುವೆ ಹೋರಾಟ ಮಾಡ್ತಿದ್ದಾರೆ.
ಟ್ಯಾಂಕರ್ ಸ್ಫೋಟ ಹೇಗಾಯ್ತು?
ಸ್ಟೇಷನ್ನಲ್ಲಿ ಇಂಧನ ಇಳಿಸಲು ಹೊರಟಿದ್ದ ಟ್ಯಾಂಕರ್ಗೆ ಗ್ರಾನೈಟ್ ತುಂಬಿದ್ದ ಟ್ರಕ್ ಡಿಕ್ಕಿಯಾಗಿದೆ. ಟ್ರಕ್ಗೆ ಡಿಕ್ಕಿಯಾಗಿ ಟ್ಯಾಂಕರ್ನಿಂದ ಇಂಧನ ಲೀಕ್ ಆಗ್ತಿತ್ತು. ತಕ್ಷಣ ಎರಡೂ ವಾಹನದಿಂದ ಇಳಿದ ಚಾಲಕರು ಜನರಿಗೆ ಇಂಧನ ಸೋರಿಕೆ ಬಗ್ಗೆ ಎಚ್ಚರಿಕೆ ನೀಡಿದ್ರು. ಆದರೂ ಎಚ್ಚರಿಕೆ ಲೆಕ್ಕಿಸದೇ ಇಂಧನ ಸಂಗ್ರಹಿಸಲು ಜನರು ಮುಗಿಬಿದ್ದು ಸೇರಿದ್ರು. ತೈಲ ಸಂಗ್ರಹಿಸಲು ಜನ ಮುಗಿಬಿದ್ದ ವೇಳೆ ಟ್ಯಾಂಕರ್ ಸ್ಫೋಟಗೊಂಡಿದೆ. ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.
ಹೊತ್ತಿಕೊಂಡ ಬೆಂಕಿಗೆ ಸುಮಾರು 108ಕ್ಕೂ ಅಧಿಕ ಮಂದಿ ಆಹುತಿಯಾಗಿದ್ರೆ, ಘಟನೆಯಲ್ಲಿ ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಯೆರಾ ಲಿಯೋನ್‌ನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಮಾಹಿತಿಯ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆ ಹಾಗೂ ಮಿಲಿಟರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆಯಲ್ಲಿ ರಸ್ತೆಯಲ್ಲಿದ್ದ ನೂರಾರು ವಾಹನಗಳು ಕೂಡ ಸುಟ್ಟು ಕರಕಲಾಗಿದೆ.. ದುರಂತದ ದೃಶ್ಯಗಳು ಎದೆನಡುಗಿಸುವಂತಿದೆ.
ಅಪಘಾತಕ್ಕೀಡಾಗಿ ಸೋರಿಕೆಯಾದ ತೈಲ ಸಂಗ್ರಹಿಸಲು ಹೋದ ಪರಿಣಾಮ ಭೀಕರ ಸ್ಫೋಟ ಸಂಭವಿಸಿ ನೂರಾರು ಮಂದಿ ಅಗ್ನಿಗಾಹುತಿಯಾಗಿದ್ದಾರೆ. ಸಿಯೆರಾ ಲಿಯೋನ್ ಅಧ್ಯಕ್ಷರು ಮೃತರ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಿಸಿದ್ದಾರೆ. ಒಟ್ಟಿನಲ್ಲಿ ಕಡುಬಡತನದ ರಾಷ್ಟ್ರದ ಭೀಕರ ದುರಂತ ಬೆಚ್ಚಿ ಬೀಳಿಸಿದೆ.