ಸಿಲಿಕಾನ್ ಸಿಟಿ ಭೂಗತ ಜಗತ್ತಿಗೆ ಕಂಟ್ರಿ ಮೇಡ್ ಪಿಸ್ತೂಲ್ ಎಂಟ್ರಿ

– ರೌಡಿ ಮಾರ್ಕೆಟ್ ಸತೀಶನೇ ಗನ್ ಸಪ್ಲೈ ಕಿಂಗ್ ಪಿನ್

ಬೆಂಗಳೂರು: ಹಿಂದೆಲ್ಲ ರೌಡಿಗಳು ಮಚ್ಚು, ಲಾಂಗ್ ಗಳನ್ನು ಹಿಡಿದು ಹೊಡೆದಾಡುತ್ತಿದ್ದರು. ಇದೀಗ ಬೆಂಗಳೂರು ಪುಡಿ ರೌಡಿಗಳ ಕೈಗೆ ಪಿಸ್ತೂಲ್ ಸೇರುತ್ತಿದೆ. ಶಾರ್ಪ್ ಶೂಟರ್ ಗಳ ಮೂಲಕ ಎದುರಾಳಿಗಳನ್ನು ಉಡೀಸ್ ಮಾಡೋಕೆ ಸ್ಕೆಚ್ ಹಕುತ್ತಾರೆ. ಮಂಗಳೂರು ಶಾರ್ಪ್ ಶೂಟರ್, ಕಲಬುರಗಿ ಕಂಟ್ರಿ ಮೇಡ್ ಪಿಸ್ತೂಲ್ ನ ಬೆನ್ನು ಹತ್ತಿ ಹೋದ ಪೊಲೀಸರಿಗೆ ದೊಡ್ಡ ಮಿಕಗಳು ಸಿಕ್ಕಿ ಬಿದ್ದಿವೆ.

ಪಿಸ್ತೂಲ್ ನ ಸರಬರಾಜಿನ ಹಿಂದೆ ಕಲಬುರಗಿ ಮೂಲದ ಸತೀಶ್ ಅಲಿಯಾಸ್ ಮಾರ್ಕೆಟ್ ಸತೀಶನೇ ಈ ದಂಧೆಯ ಅಧಿಪತಿ ಎನ್ನಲಾಗುತ್ತಿದೆ. ಬೆಂಗಳೂರಿನ ಪ್ರಮುಖ ರೌಡಿಗಳಿಗೆ ಸತೀಶನೇ ಪಿಸ್ತೂಲ್ ನೀಡಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಕಾಡುಬೀಸನಹಳ್ಳಿ ಸೋಮನ ಮುಗಿಸೋಕೆ ಮಾರತ್‍ಹಳ್ಳಿ ರೋಹಿತನಿಗೆ ಈತನೇ ಪಿಸ್ತೂಲ್ ನೀಡಿದ್ದ ಎನ್ನಲಾಗಿದೆ. ಮಾತ್ರವಲ್ಲ ರೌಡಿ ಜೀತು ಗಣೇಶ್ ಕೊಲೆಗೆ ಗೊಟ್ಟಿಗೆರೆ ಪರಮೇಶ್ ನ ಕೈಗೆ ಗನ್ ಕೊಟ್ಟವನೂ ಇದೇ ಸತೀಶನಂತೆ.

ಗೊಟ್ಟಿಗೆರೆ ಪರಮೇಶ್ ಹಾಗೂ ಮಾರತ್‍ಹಳ್ಳಿ ರೋಹಿತ್ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಾಗಲೂ ಸತೀಶ್ ಪಿಸ್ತೂಲ್ ಮಾರಾಟ ಮಾಡುವುದನ್ನು ನಿಲ್ಲಿಸಿರಲಿಲ್ಲ. ರೌಡಿ ಗಣೇಶ್, ಜೀತುಗೆ ಎರಡು ಪಿಸ್ತೂಲ್ ಗಳನ್ನು ಇತ್ತೀಚೆಗಷ್ಟೇ ಮಾರಾಟ ಮಾಡಿದ್ದ ಬಗ್ಗೆ ಸಿಸಿಬಿ ಅಧಿಕಾರಿಗಳಿಗೆ ಸಾಕ್ಷ್ಯ ಸಮೇತ ಮಾಹಿತಿ ಸಿಕ್ಕಿದೆ. ಶಂಕರ್ ಎಂಬಾತನ ಇಸ್ರೋ ಲೇಔಟ್ ಮನೆಯಲ್ಲೂ ಸತೀಶ್ ಮಾರಾಟ ಮಾಡಿರುವ ಪಿಸ್ತೂಲ್ ಸಿಕ್ಕಿದೆ. ಶಂಕರ್ ಶಿವಮೊಗ್ಗದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೃಷ್ಣ ಅವರ ಮಗ ಎನ್ನಲಾಗಿದೆ. ಈತನೂ ತನ್ನ ಎದುರಾಳಿಗಳನ್ನು ಮುಗಿಸಲು ಸ್ಕೆಚ್ ಹಾಕಿದ್ದನಂತೆ.

ಒಟ್ಟಿನಲ್ಲಿ ಇದೀಗ ಮಾರ್ಕೆಟ್ ಸತೀಶ್, ಶಂಕರ್, ಜೀತು ಗಣೇಶ್ ಸಿಸಿಬಿಯ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಾರ್ಕೆಟ್ ಸತೀಶನ ಮೇಲೆ ಕಲಬುರಗಿಯಲ್ಲಿ 4 ಕೊಲೆ ಕೇಸ್ ಸೇರಿದಂತೆ 35 ಕೇಸ್ ದಾಖಲಾಗಿವೆ.

ಕಲಬುರಗಿ ರೌಡಿಗಳಿಗೆ ಐದಕ್ಕೂ ಹೆಚ್ಚು ಪಿಸ್ತೂಲ್ ಗಳನ್ನು ನೀಡಿರುವುದಾಗಿ ಸತೀಶ್ ವಿಚಾರಣೆ ವೇಳೆ ಹೇಳಿದ್ದಾನೆ. ಈ ಹಿಂದೆ ಐಜಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಕಲಬುರಗಿಯಲ್ಲಿ ಸತೀಶ್ ಸಹಚರ ಕರಿ ಚಿರತೆಯನ್ನು ಎನ್‍ಕೌಂಟರ್ ಮಾಡಿದ್ದರು. ಒಟ್ಟಾರೆ 80 ಪಿಸ್ತೂಲ್ ಗಳನ್ನು ಸತೀಶ್ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಮಧ್ಯ ಪ್ರದೇಶದಿಂದ ಹತ್ತಿಪ್ಪತ್ತು ಸಾವಿರಕ್ಕೆ ಪಿಸ್ತೂಲ್ ತಂದು ಡಾನ್ ಗಳಿಗೆ 1 ಲಕ್ಷ ರೂ. ಬೆಲೆಗೆ ಮಾರಾಟ ಮಾಡುತ್ತಿದ್ದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

The post ಸಿಲಿಕಾನ್ ಸಿಟಿ ಭೂಗತ ಜಗತ್ತಿಗೆ ಕಂಟ್ರಿ ಮೇಡ್ ಪಿಸ್ತೂಲ್ ಎಂಟ್ರಿ appeared first on Public TV.

Source: publictv.in

Source link