ಸಿಸಿಟಿವಿಯಲ್ಲಿ ದಾಖಲು: ಮನೆಯಲ್ಲಿ ಲಂಚಕ್ಕೆ ಕೈಯೊಡ್ಡಿದ್ದ ವೇಳೆ ಎಸಿಬಿ ದಾಳಿ, ಆನೇಕಲ್ ಪುರಸಭೆ ಅಧಿಕಾರಿ ಸೇರಿ ಮೂವರ ಸೆರೆ
ಆನೇಕಲ್: ಮನೆಯೊಂದರಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ ತಂಡ (ಎಸಿಬಿ) ದಾಳಿ ನಡೆಸಿದ್ದು, ಆನೇಕಲ್ ಪುರಸಭೆ ಕಂದಾಯ ನಿರೀಕ್ಷಕ (ಆರ್ಐ) ನಾಗರಾಜ್ ಸೇರಿ ಮೂವರನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ನ ಬಾರಂದೂರು ರಸ್ತೆಯ ಮನೆಯೊಂದರಲ್ಲಿ ಅರೆಸ್ಟ್ ಮಾಡಲಾಗಿದೆ. ಆರ್ಐ ನಾಗರಾಜ್ ಕಂದಾಯ ಸರಿಯಾಗಿ ಕಟ್ಟಿಲ್ಲವೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಖಚಿತ ಮಾಹಿತಿಯ ಮೇರೆಗೆ ನಿನ್ನೆ ಬುಧವಾರ ಸಂಜೆ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿತ್ತು. ಆನೇಕಲ್ ಪುರಸಭೆಯ ಆರ್.ಐ. ನಾಗರಾಜ್, ಸಹಾಯಕ ಪ್ಯಾರಜಾನ್ ಸೇರಿದಂತೆ ಒಟ್ಟು ಮೂರು ಮಂದಿ ಬಂಧನವಾಗಿದೆ.
ಕಂದಾಯ ಸರಿಯಾಗಿ ಕಟ್ಟಿಲ್ಲ. 25 ಲಕ್ಷ ರೂ ಬಾಕಿ ಇದೆ ಎಂದು ಸದರಿ ಪುರಸಭಾ ಸಿಬ್ಬಂದಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. 25 ಲಕ್ಷ ರೂಪಾಯಿ ಬದಲು 5 ಲಕ್ಷ ಲಂಚ ಕೊಡುವಂತೆ ಕೈಯೊಡ್ಡಿದ್ದರು. ಅದರಂತೆ ಇಂದು 1.20 ಲಕ್ಷ ರೂ ಲಂಚ ಪಡೆಯುವಾಗ ಎಸಿಬಿ ನೇರ ದಾಳಿ ನಡೆಸಿತ್ತು. ತಿಮ್ಮಣ್ಣನವರ ಹೆಸರಿನಲ್ಲಿದ್ದ ಆಸ್ತಿ ವಿಚಾರ ಇದಾಗಿದೆ. ಕಂದಾಯ ಕಡಿಮೆ ಕಟ್ಟಿದ್ದೀರಿ. 25 ಲಕ್ಷ ರೂಪಾಯಿ ಬ್ಯಾಲೆನ್ಸ್ ಇದೆ ಎಂದು ಅಧಿಕಾರಿಗಳು ಹೇಳಿದ್ದರು. ಇದರಿಂದ ತಿಮ್ಮಣ್ಣ ಅವರ ಮಗ ಗೋಪಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಅನ್ವಯ ಲಂಚ ಪಡೆಯುತ್ತಿದ್ದಾಗ ದಾಳಿ ನಡೆದಿದೆ. ಪುರಸಭಾ ಸಿಬ್ಬಂದಿ ಲಂಚ ಸ್ವಿಕರಿಸಲು ಮನೆ ಬಳಿ ಬಂದಿದ್ದ ಸಿಸಿಟಿವಿ ದೃಶ್ಯಾವಳಿಯೂ ಲಭ್ಯವಾಗಿದೆ.