ಸಿಹಿಸುದ್ದಿ: ಮೊಬೈಲ್​​ ಬಳಸಲು ಮೂರನೇ ಕಣ್ಣು ಕಂಡು ಹಿಡಿದ ಕೊರಿಯಾದ ಯುವಕ

ಸಿಹಿಸುದ್ದಿ: ಮೊಬೈಲ್​​ ಬಳಸಲು ಮೂರನೇ ಕಣ್ಣು ಕಂಡು ಹಿಡಿದ ಕೊರಿಯಾದ ಯುವಕ

ಶಿವನಿಗೆ ಮೂರನೇ ಕಣ್ಣು ಇತ್ತು. ಅದನ್ನು ಬಿಟ್ಟಾಗ ಕಾಮದೇವ ಭಸ್ಮವಾದ ಅನ್ನೋ ಕಥೆಯನ್ನು ಕೇಳಿದ್ದೀರಿ. ಆದ್ರೆ, ಇನ್ಮೇಲೆ ಮೊಬೈಲ್‌ ಗೀಳು ಹತ್ತಿಸಿಕೊಂಡವರಿಗಾಗಿ ಮೂರನೇ ಕಣ್ಣು ಬರುತ್ತಿದೆ. ನೀವು ಅದನ್ನು ಧರಿಸಿಕೊಂಡ್ರೆ ಸಂಭವನೀಯ ಅಪಘಾತ ತಪ್ಪಿಸಬಹುದು.
ಕಳೆದ ವರ್ಷ ಕೊಡಗಿನಲ್ಲಿ ಒಂದು ಘಟನೆ ನಡೆದಿತ್ತು. ಅದೇನಂದ್ರೆ ಒಬ್ಬ ವ್ಯಕ್ತಿ ಚಾಟಿಂಗ್‌ ಮಾಡ್ತಾ ರಸ್ತೆಯಲ್ಲಿ ನಡೆದುಕೊಂಡು ಹೋಗ್ತಾ ಇರ್ತಾನೆ. ಸಂಪೂರ್ಣವಾಗಿ ಚಾಟಿಂಗ್‌ನಲ್ಲಿ ಮುಳುಗಿದ ಪರಿಣಾಮ ತಲೆ ಎತ್ತಿ ನೋಡುವುದಿಲ್ಲ. ಹಾಗೇ ತಲೆ ತಗ್ಗಿಸಿ ನಡೆಯುತ್ತಾ ನಡೆಯುತ್ತಾ ರಸ್ತೆಯಲ್ಲಿಯೇ ನಿಂತ ಪ್ರಾಣಿಯೊಂದಕ್ಕೆ ಡಿಕ್ಕಿ ಹೊಡೆಯುತ್ತಾನೆ. ಏನಕ್ಕೆ ಡಿಕ್ಕಿ ಹೊಡೆದೆ ಅಂತ ಆತ ತಲೆ ಎತ್ತಿ ನೋಡೊದರೊಳಗೆ ರಸ್ತೆ ಪಕ್ಕ ಬಿದ್ದಿರುತ್ತಾನೆ. ಅಲ್ಲಿರೋ ಪ್ರಾಣಿ ಆನೆಯಾಗಿತ್ತು. ಡಿಕ್ಕಿ ಹೊಡೆದವನನ್ನು ಸೊಂಡಿಲಿನಲ್ಲಿ ಎತ್ತಿ ರಸ್ತೆ ಪಕ್ಕ ಬಿಸಾಕಿತ್ತು. ಅದೃಷ್ಟವಶಾತ್‌ ಚಿಕ್ಕಪುಟ್ಟ ಗಾಯದಲ್ಲಿಯೇ ಆತ ಪಾರಾಗಿದ್ದಾನೆ. ಆದ್ರೆ, ಇದೆಲ್ಲ ಆಗಿದ್ದು, ಆತನ ಚಾಟಿಂಗ್‌ ಗೀಳಿಂದ. ಇದನ್ನೆಲ್ಲಾ ಯಾಕೆ ನೆನಪಿಸಬೇಕಾಯ್ತು ಅಂದ್ರೆ ಈಗ ಮೊಬೈಲ್‌ ಗೀಳು ಹತ್ತಿಸಿಕೊಂಡು ತಲೆ ತಗ್ಗಿಸಿ ನಡೆಯೋರಿಗೆ ಇನ್ಮೇಲೆ ಟೆನ್ಶನ್‌ ಬೇಡ.

ಅದೆಷ್ಟೋ ಜನ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ
ಅದೆಷ್ಟೋ ಜನ ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ

ಹೌದು, ಮೊಬೈಲ್‌ ನೋಡೋದು ಮತ್ತು ಚಾಟಿಂಗ್‌ನಲ್ಲಿ ಮುಳುಗಿರೋರು ಹೇಗಿರ್ತಾರೆ ಅಂದ್ರೆ, ಅವರಿಗೆ ಈ ಲೋಕದ ಜ್ಞಾನವೇ ಇರುವುದಿಲ್ಲ. ತಾವಾಯಿತು ತಮ್ಮ ಮೊಬೈಲ್‌ ಆಯ್ತು ಅಂತ ಹೋಗ್ತಾನೆ ಇರ್ತಾರೆ. ಹಾಗೇ ಮೊಬೈಲ್‌ನಲ್ಲಿ ಚಾಟಿಂಗ್‌ ಮಾಡ್ತಾ ಮಾಡ್ತಾ ಅದೆಷ್ಟೋ ಜನ ವಿದ್ಯುತ್‌ ಕಂಬಕ್ಕೆ ಡಿಕ್ಕಿಹೊಡೆದಿದ್ದಾರೆ, ಗೋಡೆಗೆ ಡಿಕ್ಕಿ ಹೊಡೆದಿದ್ದಾರೆ, ಎದುರಿಗೆ ನಿಂತ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಎದುರಿಗೆ ಬರೋ ವ್ಯಕ್ತಿಗೆ ಡಿಕ್ಕಿ ಹೊಡಿದಿದ್ದಾರೆ, ಹೊಂಡಕ್ಕೆ ಬಿದ್ದಿದ್ದಾರೆ, ಚರಂಡಿಗೆ ಬಿದ್ದಿದ್ದಾರೆ. ಇಂತಹ ತಮಾಷೆಯ ಘಟನೆಗಳನ್ನು ದಿನ ನಿತ್ಯ ನಾವು ಈಗಲೂ ನೋಡ್ತಾನೆ ಇರುತ್ತೇವೆ. ಈ ರೀತಿ ಮೊಬೈಲ್‌ ಗೀಳು ಹತ್ತಿಸಿಕೊಂಡು ಲೋಕವನ್ನೇ ಮರೆಯುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುವಂತಹ ಏನಾದ್ರೂ ಸಾಧನಬೇಕಿತ್ತು. ಎದುರಿಗೆ ಬರೋ ವ್ಯಕ್ತಿಗೆ ಡಿಕ್ಕಿ ಹೊಡೆಯುವುದನ್ನು, ಗೋಡೆಗೆ ಡಿಕ್ಕಿ ಹೊಡೆಯುವುದನ್ನು, ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಬೇಕಿತ್ತು. ಆ ಬಗ್ಗೆ ನೀವು ನೋವು ಯೋಚಿಸಿಲ್ಲ. ಆದ್ರೆ, ದಕ್ಷಿಣ ಕೋರಿಯಾದ ಯುವಕನೊಬ್ಬ ಆ ಬಗ್ಗೆ ಯೋಚಿಸಿದ್ದಾನೆ. ಅದರ ಫಲವೇ ಮೂರನೇ ಕಣ್ಣಿನ ಉಗಮವಾಗಿದೆ.

ದ. ಕೊರಿಯಾ ಯುವಕನಿಂದ 3ನೇ ಕಣ್ಣು ಸಂಶೋಧನೆ
ಅಪಾಯಕ್ಕೆ ಸಿಲುಕಿದವರೇ ಈ ಯುವಕನ ಸ್ಫೂರ್ತಿ

ಚಾಟಿಂಗ್‌ ಗೀಳು ಹಚ್ಚಿಕೊಂಡವರ ರಕ್ಷಣೆಗಾಗಿಯೇ ಸಂಶೋಧನೆಯಾಗಿದೆ ಈ ಕಣ್ಣು. ಇದನ್ನು ಸಂಶೋಧಿಸಿದವನು ದಕ್ಷಿಣ ಕೋರಿಯಾದ ಡಿಸೈನರ್‌ ಪೆಂಗ್‌ ಮಿನ್‌ವೂಕ್‌ ಎಂಬ ಯುವಕನಾಗಿದ್ದಾನೆ. ಈತ ಮೊಬೈಲ್‌ ನೋಡುತ್ತಾ, ಇಲ್ಲವೇ ಮೊಬೈಲ್‌ನಲ್ಲಿ ಚಾಟಿಂಗ್‌ ಮಾಡುತ್ತಾ ಅಪಾಯಕ್ಕೆ ತುತ್ತಾದವರನ್ನು ನೋಡಿದ್ದಾನೆ. ಪ್ರಾಣ ಕಳೆದುಕೊಂಡವರನ್ನು ನೋಡಿದ್ದಾನೆ. ಇಂಥವರಿಗಾಗಿ ಏನಾದ್ರೂ ಮಾಡಬೇಕು ಅಂತ ಈತ ಪಣತೊಟ್ಟಿದ್ದ. ನಾನಾ ಯೋಚನೆಗಳು ಆತನ ತಲೆಯಲ್ಲಿ ಗಿರಕಿಹೊಡೆದಿದ್ದವು. ಏನಾದ್ರೂ ಮಾಡಲೇಬೇಕು ಅಂತ ಸಂಶೋಧನೆಯಲ್ಲಿ ತೊಡಗಿಕೊಳ್ಳುತ್ತಾನೆ. ಅಂತಿಮವಾಗಿ ಮೂರನೇ ಕಣ್ಣು ಸಂಶೋಧನೆಯಾಗುತ್ತದೆ.

ಜೀವ ಉಳಿಸೋ ಮೂರನೇ ಕಣ್ಣು ಹೇಗಿದೆ ಗೊತ್ತಾ?
ಇದನ್ನು ಧರಿಸಿದ್ರೆ ಅಪಾಯದಿಂದ ಪಾರು ಪಕ್ಕಾ!

ಶಿವನಿಗೆ ಮೂರನೇ ಕಣ್ಣು ಇರೋದು ಹಣೆಯ ಮೇಲೆ ಅನ್ನೋದು ಎಲ್ಲರಿಗೂ ಗೊತ್ತು. ಹಾಗೇ ದಕ್ಷಿಣ ಕೊರಿಯಾ ಯುವಕ ಸಂಶೋಧಿಸಿರೋ ಮೂರನೇ ಕಣ್ಣು ಕೂಡ ಹಣೆಯ ಮೇಲೆಯೇ ಅಳವಡಿಸಿಕೊಳ್ಳಬೇಕಾಗುತ್ತೆ. ಹಳ್ಳಿಯ ಕಡೆ ಪ್ರಾಣಿಗಳ ಬೇಟೆಗೆ ಹೋಗುವವರು ಹಣೆಗೊಂದು ಟಾರ್ಚ್‌ ಕಟ್ಟಿಕೊಂಡು ಇರುತ್ತಾರೆ. ಆ ಟಾರ್ಚ್‌ ಬೆಳಕಿಗೆ ಪ್ರಾಣಿ ಕಣ್ಣು ಕೊಡುತ್ತೆ. ಅದು, ಕಣ್ಣುಕೊಟ್ಟು ನಿಂತುಕೊಂಡ ಸಮಯದಲ್ಲಿಯೇ ಬೇಟೆಗಾರ ಗುರಿ ಇಟ್ಟು ಬಂದೂಕಿನಿಂದ ಗುಂಡು ಹಾರಿಸುತ್ತಾನೆ. ಬೇಟೆಗಾರ ಹೇಗೆ ತನ್ನ ಹಣೆಗೆ ಟಾರ್ಚ್‌ ಕಟ್ಟಿಕೊಂಡು ಬೇಟೆಯಾಡುತ್ತಾನೋ ಅದೇ ರೀತಿ ಮೊಬೈಲ್‌ ಗೀಳು ಹತ್ತಿಸಿಕೊಂಡು ತಲೆ ತಗ್ಗಿಸಿ ನಡೆಯುವವರು ಕೂಡ ಮೂರನೆ ಕಣ್ಣನ್ನು ಹಣೆಯಲ್ಲಿಯೇ ಕಟ್ಟಿಕೊಳ್ಳಬೇಕು.

ಮೂರನೇ ಕಣ್ಣಿನ ರಚನೆ ಹೇಗಿದೆ?
ತಲ್ಲೆ ತಗ್ಗಿಸಿದರೆ ತೆರೆಯುತ್ತೆ ಮೂರನೇ ಕಣ್ಣು

ಮೂರನೇ ಕಣ್ಣಿನ ರಚನೆ ಸಿಸಿಟಿವಿ ರೀತಿಯಲ್ಲಿಯೇ ಇದೆ. ಅದರಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗಿದೆ. ಅದನ್ನು ಹಣೆಗೆ ಕಟ್ಟಿಕೊಂಡು ನಡೆಯುತ್ತಾ ಹೋದರೆ ತನ್ನಪಾಡಿಗೆ ತಾನು ಹಾಗೇ ಇರುತ್ತೆ. ಆದ್ರೆ, ಮೊಬೈಲ್‌ ನೋಡಲು, ಚಾಟಿಂಗ್‌ ಮಾಡಲು ತಲೆ ಬಗ್ಗಿಸಿದರೆ ಅಟೋಮೆಟಿಕ್‌ ಆಗಿ ಅದು ಅಲರ್ಟ್‌ ಆಗಿ ಬಿಡುತ್ತೆ. ಹಾಗೇ ನೀವು ತಲೆ ತಗ್ಗಿಸಿ ನಡೆಯುತ್ತಿರುವಾಗ ಎದುರಿಗೆ ಯಾವುದಾದ್ರೂ ವಿದ್ಯುತ್‌ ಕಂಬ ಎದುರಾದರೆ, ನಿಂತಿರುವ ವಾಹನ ಎದುರಾದರೆ, ಗೋಡೆ ಎದುರಾದರೆ ತಕ್ಷಣವೇ ಮೂರನೇ ಕಣ್ಣಿನಲ್ಲಿರೋ ಸೆನ್ಸಾರ್‌ ನಿಮ್ಮನ್ನು ಅಲರ್ಟ್‌ ಮಾಡುತ್ತೆ.

ಸೌಂಡ್‌ ಬರ್ತಾ ಇದ್ದಂತೆ ಅಲರ್ಟ್‌ ಆಗ್ಬೇಕು
ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳಲು ಸಹಾಯಕ

ಹೌದು, ಮುಂದೆ ಆಗುವಂತಹ ಅಪಾಯವನ್ನು ಸ್ವಲ್ಪ ಅಂತರದಲ್ಲಿ ಇರುವಾಗಲೇ ಸೆನ್ಸಾರ್‌ ಸೌಂಡ್‌ ಮಾಡುತ್ತೆ. ತಕ್ಷಣವೇ ನಿಂತ ಜಾಗದಲ್ಲಿಯೇ ನಿಲ್ಲಬೇಕು. ತಲೆ ಎತ್ತಿ ನೋಡಬೇಕು. ಆಗ ಎದುರಿಗಿದ್ದ ಅಪಾಯ ಏನು ಅನ್ನೋದು ನಿಮಗೆ ತಿಳಿದು ಬಿಡುತ್ತೆ. ಆ ಕ್ಷಣವೇ ನೀವು ಡೈರೆಕ್ಷನ್‌ ಚೇಂಚ್‌ ಮಾಡಿಕೊಂಡು ಸೇಫ್‌ ಆಗಲು ಅನುಕೂಲವಾಗುತ್ತೆ. ಇದರಿಂದಾಗಿ ಮುಂದೆ ಆಗುವಂತಹ ಸಂಭನೀಯ ಅಪಘಾತವನ್ನು ಸುಲಭದಲ್ಲಿ ತಪ್ಪಿಸಿಕೊಳ್ಳಬಹುದು. ನಗೆಪಾಟಿಲಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಬಹುದು.

ಕೊರಿಯಾ ಯುವಕನಿಗೆ ಇನ್ನಷ್ಟು ಸರಳೀಕರಣಗೊಳಿಸೋ ಗುರಿ

ಈಗಾಗಲೇ ಅಭಿವೃದ್ಧಿ ಪಡಿಸಿರೋ ಮೂರನೇ ಕಣ್ಣಿನ ಬಗ್ಗೆ ದಕ್ಷಿಣ ಕೋರಿಯಾ ಯುವಕನಿಗೆ ತೃಪ್ತಿ ಇದೆ. ಆದ್ರೆ, ಇದನ್ನು ಇನ್ನಷ್ಟು ಸರಳೀಕರಣಗೊಳಿಸಬೇಕು. ಗಾತ್ರದಲ್ಲಿ ಚಿಕ್ಕದಾಗಿ ಮಾಡಬೇಕು. ಜೊತೆಗೆ ಡಿಕ್ಕಿಯಾಗುವ ವಸ್ತು ಇನ್ನಷ್ಟು ದೂರದಲ್ಲಿ ಇರುವಾಗಲೇ ಅಲರ್ಟ್‌ ಮಾಡುವಂತೆ ಮಾಡಬೇಕು ಅನ್ನೋದು ಯುವಕನ ಗುರಿಯಾಗಿದೆ. ಇದೇ ಕಾರಣಕ್ಕೆ ಆತ ಅದನ್ನು ಇನ್ನಷ್ಟು ಅಭಿವೃದ್ಧಿ ಪಡಿಸೋ ಕೆಲಸದಲ್ಲಿ ನಿರತನಾಗಿದ್ದಾನೆ.

ಇನ್ನು, ಇಂದಿನ ದಿನಮಾನದಲ್ಲಿ ಯಾವ ವಸ್ತು ಕ್ರೇಜ್‌ ಆಗಿ ಹುಟ್ಟಿಕೊಳ್ಳುತ್ತೋ ಹೇಳಲು ಸಾಧ್ಯವೇ ಇಲ್ಲ. ಇಂದು ನಮಗೆ ಅಸವ್ಯವಾಗಿ ಕಾಣಿಸಿದ್ದು ಮುಂದೊಂದು ದಿನ ಆ ವಸ್ತು ಮಾರುಕಟ್ಟೆಯನ್ನೇ ಆವರಿಸಿಕೊಳ್ಳಬಹುದು. ಅಂತಹ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಇವೆ. ಇದೀಗ ನಾವು ಹೆಡ್‌ ಫೋನ್‌ಗಳನ್ನು ಕೊರಳಿಗೆ ಹಾಕಿಕೊಂಡು, ಕಿವಿಗೆ ಸಿಕ್ಕಿಸಿಕೊಂಡು ಉಪಯೋಗಿಸುತ್ತೇವೆ. ಅದೇ ರೀತಿ ಮುಂದೊಂದು ದಿನ ಮೂರನೇ ಕಣ್ಣಿನ ಕ್ರೇಜ್‌ ಕೂಡ ಹುಟ್ಟಿದರೂ ಅಚ್ಚರಿಯಿಲ್ಲ. ಒಂದು ರೀತಿಯ ಫ್ಯಾಷನ್‌ ಆಗಿ ಬಳಸಿದ್ರೂ ಅಚ್ಚರಿ ಪಡೇಬೇಕಾಗಿಲ್ಲ.

ಕಣ್ಣಾರೆ ಕಂಡ ಅಪಘಾತದಿಂದ ಪ್ರೇರಿತನಾಗಿ ದಕ್ಷಿಣ ಕೊರಿಯಾದ ಯುವಕ ಮೂರನೇ ಕಣ್ಣು ಸಂಶೋಧಿಸಿದ್ದಾನೆ. ಇನ್ಮೇಲೆ ಮೊಬೈಲ್‌ ನೋಡುತ್ತಾ, ಚಾಟಿಂಗ್‌ ಮಾಡುತ್ತಾ ತಲೆ ತಗ್ಗಿಸಿ ನಡೆಯುವಂತಹವರು ಇದನ್ನು ಧರಿಸಿಕೊಂಡು ಹೋಗಬಹುದು. ಸಂಭವನೀಯ ಅಪಘಾತದಿಂದ ತಪ್ಪಿಸಿಕೊಳ್ಳೋ ಜೊತೆಗೆ ನಗೆಪಾಟಿಲಿಗೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಬಹುದು.

The post ಸಿಹಿಸುದ್ದಿ: ಮೊಬೈಲ್​​ ಬಳಸಲು ಮೂರನೇ ಕಣ್ಣು ಕಂಡು ಹಿಡಿದ ಕೊರಿಯಾದ ಯುವಕ appeared first on News First Kannada.

Source: newsfirstlive.com

Source link