ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಮಾತು ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದ್ದಂತೆಯೇ ಅವರು ತಮ್ಮ ತವರು ಜಿಲ್ಲೆಯ ಪ್ರವಾಸದ ಬಗ್ಗೆ ಚರ್ಚೆ ಆರಂಭಿಸಿದ್ದಾರೆ ಎನ್ನಲಾಗ್ತಿದೆ.

ಕಳೆದ ತಿಂಗಳು ಜೂನ್​ನಲ್ಲಿ ಇದೇ ಸಮಯದಲ್ಲಿ ತವರು ಜಿಲ್ಲೆಯಲ್ಲಿ ಮೂರು ದಿನದ ಪ್ರವಾಸ ಕೈಗೊಂಡಿದ್ದ ಸಿ.ಎಂ. ಯಡಿಯೂರಪ್ಪ ಅಂದು ಸಿಎಂ ಬದಲಾವಣೆ ಕುರಿತಂತೆ ಹೇಳಿಕೆ ನೀಡಿ ಸಿಎಂ ಬದಲಾವಣೆ ಮುಗಿದ ವಿಷಯ, ಹೈ ಕಮಾಂಡ್ ಇದನ್ನು ಸ್ಪಷ್ಟಪಡಿಸಿದೆ. ಹಾಗಾಗಿ ನಾನು ಇನ್ನು ಮುಂದೆ ಡಬಲ್ ಎಂಜಿನ್ ರೀತಿ ಕೆಲಸ ಮಾಡುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು.

ಇದಾದ ಒಂದು ತಿಂಗಳಲ್ಲಿ ಮತ್ತೇ ಬಿಜೆಪಿಯಲ್ಲಿ ಸಿಎಂ ಬದಲಾವಣೆ ವಿಚಾರ ಭುಗಿಲೆದ್ದಿದ್ದು ಯಡಿಯೂರಪ್ಪನವರ ಜಿಲ್ಲೆಯ ಪ್ರವಾಸದ ಪಟ್ಟಿ ಸಿದ್ಧವಾಗ್ತಿದೆ ಎಂದು ಹೇಳಲಾಗುತ್ತಿದೆ. ಜುಲೈ 26 ರಂದು ಶಾಸಕಾಂಗ ಪಕ್ಷದ ಸಭೆ ಕರೆದಿರುವ ಸಿಎಂ ಇದಕ್ಕೂ ಮೊದಲೇ ತವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಸುಳಿದಾಡ್ತಿದೆ.

ಇದನ್ನೂ ಓದಿ: ಸಿಎಂ ಬದಲಾವಣೆ ಬಹುತೇಕ ಖಚಿತ -ಜುಲೈ 26ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಬಿಎಸ್​​ವೈ

ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಲ್ಪಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಬಸವೇಶ್ವರರ ಪುತ್ಥಳಿ ಅನಾವರಣ, ತವರು ಕ್ಷೇತ್ರ ಶಿಕಾರಿಪುರದಲ್ಲಿ ವಿವಿಧ ಏತ ನೀರಾವರಿ ಯೋಜನೆಗೆ ಚಾಲನೆ, ಅಂಜನಾಪುರ ಜಲಾಶಯಕ್ಕೆ ಬಾಗೀನ ಅರ್ಪಣೆ ಸೇರಿದಂತೆ ಶಿವಮೊಗ್ಗ ಹಾಗೂ ಶಿಕಾರಿಪುರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಡಿಸಿಎಂ ಆದ ಸಂದರ್ಭದಲ್ಲಿ ತವರು ಜಿಲ್ಲೆಗೆ ಹೆಚ್ಚಾಗಿ ಆಗಮಿಸುತ್ತಿದ್ದ ಯಡಿಯೂರಪ್ಪ ಸಿಎಂ ಆದ ಬಳಿಕ ಬರುವುದು ಕಡಿಮೆ ಆಗಿತ್ತು. ಅದರಲ್ಲೂ ಕಳೆದ ವರ್ಷ ಕೊರೊನಾದ ಮೊದಲ ಅಲೆಯ ವೇಳೆ ಜಿಲ್ಲೆಯತ್ತ ಯಡಿಯೂರಪ್ಪ ಮುಖ ಕೂಡ ಹಾಕಿರಲಿಲ್ಲ ಎನ್ನುತ್ತಾರೆ ಕ್ಷೇತ್ರದ ಜನತೆ.

ಇದನ್ನೂ ಓದಿ: ಜುಲೈ 21ರಂದು RSS​, ಬಿಜೆಪಿ ಸಮನ್ವಯ ಬೈಠಕ್ -ನೂತನ ಸಿಎಂ ಆಯ್ಕೆ ನಿರ್ಧಾರ ಸಾಧ್ಯತೆ 

ಆದರೂ ಅವರ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಜಿಲ್ಲೆಯ ಆಗು ಹೋಗುಗಳನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಯಡಿಯೂರಪ್ಪ ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ ಎಂಬ ಚರ್ಚೆ ಜೋರಾಗಿರುವ ನಡುವೆಯೇ ಸಿಎಂ ಆಗಿ ಅವರ ಪ್ರವಾಸವೂ ಕೊನೆಯದಾಗಬಹುದೇನೂ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರವಾಗಿದೆ.

The post ಸಿ.ಎಂ ಬದಲಾವಣೆ ವಿಚಾರ ಬೆನ್ನಲ್ಲೇ ಯಡಿಯೂರಪ್ಪ ಶಿವಮೊಗ್ಗ ಪ್ರವಾಸ appeared first on News First Kannada.

Source: newsfirstlive.com

Source link