ಬೆಂಗಳೂರು: ಮಾಜಿ ಸಚಿವರ ವಿರುದ್ಧದ ಸಿ.ಡಿ ಬಹಿರಂಗ ಪ್ರಕರಣದಲ್ಲಿ, ಪದ್ಮಶ್ರೀ ಪುರಸ್ಕೃತ ಲಾಯರ್ ಇಂದಿರಾ ಜೈಸಿಂಗ್ ಎಂಟ್ರಿ ಕೊಟ್ಟಿದ್ದಾರೆ.

ಲಿಂಗ ಅಸಮಾನತೆ ಹಾಗೂ ಮಾನವ ಹಕ್ಕುಗಳಿಗಾಗಿ ಹೋರಾಟ ಮಾಡುವಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಇಂದಿರಾ ಜೈಸಿಂಗ್ ಸಂತ್ರಸ್ತ ಯುವತಿ ಪರ ವಕಾಲತ್ತು ವಹಿಸಲಿದ್ದಾರೆ. ಇಂದಿರಾ ಅವರು ಸಿ.ಡಿ ಕೇಸ್​​ನಲ್ಲಿ ಎಂಟ್ರಿ ಕೊಟ್ಟಿರುವ ವಿಚಾರ ಪೊಲೀಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎಸ್ಐಟಿ ತನಿಖೆ ನಿರ್ಣಾಯಕ ಹಂತ ತಲುಪಿರುವ ಬೆನ್ನಲ್ಲೇ, ಜೂನ್ 23 ರಂದು ಪ್ರಕರಣ ಯಾವ ಸ್ವರೂಪ ಪಡೆಯಲಿದೆ ಎಂಬ ಕುತೂಹಲ ಮೂಡಿದೆ.

ಎಸ್ಐಟಿ ಅಧಿಕಾರಿಗಳ ತನಿಖೆ ಬಗ್ಗೆ ನನಗೆ ನಂಬಿಕೆ ಇಲ್ಲ. ಸಿಬಿಐ ತನಿಖೆಗೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ನನ್ನ ವಾದವನ್ನು ಆಲಿಸಿ ಎಂದು ಕೋರಿ ಸಂತ್ರಸ್ತ ಯುವತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ಯುವತಿ ಪರ ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ವಾದ ಮಾಡಲಿದ್ದಾರೆ.

ಅಂದ್ಹಾಗೆ ಇಂದಿರಾ ಅವರ ಸೇವೆಯನ್ನು ಗುರುತಿಸಿ 2005ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಗಿದೆ. 2018ರಲ್ಲಿ ಫಾರ್ಚ್ಯೂನ್ ಮ್ಯಾಗಝೀನ್ ಪ್ರಕಟಿಸಿದ ವಿಶ್ವದ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಇಂದಿರಾ ಜೈಸಿಂಗ್ ಕೂಡ ಒಬ್ಬರಾಗಿದ್ದರು. ಮಾನವ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಅವರು ಮಾಡಿರುವ ಕಾನೂನು ಸಮರ ಮಹತ್ವದ್ದು. ಅಲ್ಲದೆ ಅಡಿಷನಲ್ ಸಾಲಿಸಟರ್ ಜನರಲ್ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳಾ ವಕೀಲರು ಎಂಬ ಕೀರ್ತಿ ಜೈಸಿಂಗ್ ಅವರಿಗೆ ಇದೆ.

ಎಸ್ಐಟಿ ಅಧಿಕಾರಿಗಳ ತನಿಖೆ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿ ಸಂತ್ರಸ್ತ ಯುವತಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಸಿಬಿಐ ತನಿಖೆ ಕೋರಿ ಸಲ್ಲಿಸಿರುವ ಅರ್ಜಿ ಕೂಡ ವಿಚಾರಣೆ ಹಂತದಲ್ಲಿದೆ.
ಸಿಬಿಐ ತನಿಖೆ ಬೇಡ ಎಂದು ರಮೇಶ್ ಜಾರಕಿಹೊಳಿ ಪರ ವಕೀಲರು ಕೂಡ ವಾದ ಮಂಡಿಸಿದ್ದಾರೆ.
ಇಂತಹ ಸಂದರ್ಭದಲ್ಲಿ ಖ್ಯಾತ ವಕೀಲೆ ಇಂದಿರಾ ಜೈಸಿಂಗ್ ಎಂಟ್ರಿ ಕೊಟ್ಟಿದ್ದಾರೆ.

ಸಂತ್ರಸ್ತ ಯುವತಿಯೇ ಇಂದಿರಾ ಜೈಸಿಂಗ್ ಅವರನ್ನು ನಿಯೋಜಿಸಿಕೊಂಡಳೇ..? ಇಲ್ಲ ಪ್ರಕರಣದ ಬೆಳವಣಿಗೆ ನೋಡಿ ಇಂದಿರಾ ಅವರೇ ಸ್ವಯಂ ಪ್ರೇರಿತವಾಗಿ ನ್ಯಾಯ ಕೊಡಿಸಲು ಎಂಟ್ರಿಕೊಟ್ಟರೇ? ಇಲ್ಲವೇ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ರಾಜಕಾರಣಿಗಳೇ ಈ ಪ್ರಕರಣವನ್ನ ಪ್ರತಿಷ್ಠೆಯನ್ನಾಗಿ ಪಡೆದುಕೊಂಡಿದ್ದಾರಾ..? ಹೀಗಾಗಿ ಇಂದಿರಾ ಜೈಸಿಂಗ್ ಆಗಮಿಸಿದ್ದಾರಾ? ಎಂಬ ಪ್ರಶ್ನೆ ಎದ್ದಿದೆ.

ದೇಶದ ಮಟ್ಟಿಗೆ ಮಾವನ ಹಕ್ಕು ರಕ್ಷಣೆ ವಿಚಾರದಲ್ಲಿ ಖ್ಯಾತಿ ಪಡೆದಿರುವ ಇಂದಿರಾ ಜೈಸಿಂಗ್, ರಾಜಕೀಯ ಕೆಸೆರೆರಚಾಟಕ್ಕೆ ನಾಂದಿ ಹಾಡಿದ್ದ ಪ್ರಕರಣದಲ್ಲಿ ಬಂದಿರುವುದು ವಿಶೇಷ. ಈ ಮೂಲಕ ಪ್ರಕರಣದ ತನಿಖೆಗೆ ಇನ್ನೊಂದು ಆಯಾಮ ಸಿಗಬಹುದೇ ಎಂಬ ಚರ್ಚೆ ಇಲಾಖೆಯಲ್ಲಿ ಆರಂಭವಾಗಿದೆ.

The post ಸಿ.ಡಿ ಕೇಸ್​​ನಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಇಂದಿರಾ ಜೈಸಿಂಗ್ ಎಂಟ್ರಿ, ಯುವತಿ ಪರ ವಕಾಲತ್ತು appeared first on News First Kannada.

Source: newsfirstlive.com

Source link