ಬೆಂಗಳೂರು: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ಕಠಿಣ ಲಾಕ್​​ಡೌನ್ ಜಾರಿ ಮಾಡಿದ್ದ ಸರ್ಕಾರ, ಲಾಕ್​​ಡೌನ್ ಯಶಸ್ವಿಗೊಳಿಸಲು ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನಿನ ಅನ್ವಯ ಕ್ರಮಕೈಗೊಳ್ಳಲು ಪೊಲೀಸ್​ ಇಲಾಖೆ ಸೂಚನೆ ನೀಡಿತ್ತು. ಇದರಂತೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ನಿಯಮ ಮೀರಿ ರಸ್ತೆಗೆ ಇಳಿದ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಸದ್ಯ ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ವಾಹನಗಳನ್ನು ವಾಪಸ್​ ಪಡೆಯಲು ಮಾಲೀಕರಿಗೆ ಅವಕಾಶ ನೀಡಲಾಗಿದೆ. ಆದರೆ ವಾಹನಗಳನ್ನು ಹಿಂಪಡೆಯಲು ವಾಹನಗಳ ಮಾಲೀಕರು ಹಿಂದೇಟು ಹಾಕುತ್ತಿರುವುದು ಪೊಲೀಸರಿಗೆ ಹೊಸ ತಲೆನೋವು ತಂದಿಟ್ಟಿದೆ.

ವಾಹನ ರಿಲೀಸ್​​ಗೆ ಹೈಕೋರ್ಟ್ ಅವಕಾಶ ಹಿನ್ನೆಲೆ ಈಗಾಗಲೇ ಪೊಲೀಸರು ಕ್ರಮಕೈಗೊಂಡಿದ್ದು, ಅಗತ್ಯ ದಾಖಲೆ ನೀಡಿ ವಾಹನ ಬಿಡಿಸಿಕೊಳ್ಳಲು ಅವಕಾಶ ನೀಡಿದ್ದಾರೆ. ಆದರೆ ಹಲವು ವಾಹನಗಳಿಗೆ ಸರಿಯಾದ ದಾಖಲೆ ಇಲ್ಲದೇ ಇರುವುದು ಹಾಗೂ ವಾಹನಗಳ ಮೇಲೆ ಭಾರೀ ಮೊತ್ತದ ದಂಡ ಇರುವ ಕಾರಣ ಹಲವರು ವಾಹನ ಬಿಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

ವಾಹನಗಳನ್ನು ಬಿಡಿಸಿಕೊಳ್ಳುವ ಸಂದರ್ಭದಲ್ಲಿ ಹಳೆ ಕೇಸ್ ಗಳನ್ನ ಕ್ಲೀಯರ್ ಮಾಡಬೇಕಾಗಿರುವುದು ಕಡ್ಡಾಯವಾಗಿದ್ದು, ಕೆಲವು ಗಾಡಿಗಳ ರೇಟ್ ಗಿಂತ ದಂಡದ ಮೊತ್ತವೇ ಜಾಸ್ತಿಯಿದೆ. ಆದ್ದರಿಂದ ವಾಹನ ಹೋದರೂ ಪರವಾಗಿಲ್ಲ ಎಂದು ಹಲವರು ವಾಹನ ಹಿಂಪಡೆಯುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ವಾಹನ ಬಿಡುಗಡೆ ಮಾಡಿಕೊಳ್ಳದ ವಾಹನಗಳ ಬಗ್ಗೆ ಪಟ್ಟಿ ಮಾಡಲು ಪೊಲೀಸರು ತೀರ್ಮಾನ ಮಾಡಿದ್ದಾರೆ.

ಅಂತಹ ವಾಹನಗಳ ಮಾಲೀಕರ ವಿಳಾಸ ಪಡೆದು ನೋಟಿಸ್ ನೀಡಲು ಮುಂದಾಗಿದ್ದಾರೆ. ನೋಟಿಸ್​ಗೆ ಉತ್ತರಿಸದಿದ್ದರೆ ಪೊಲೀಸರೆ ಮನೆಯ ಬಳಿ ತೆರಳಿ ಹಳೆ ದಂಡವನ್ನು ಕ್ಲೀಯರ್ ಮಾಡಲು ಮುಂದಾಗಿದ್ದಾರೆ. ಸದ್ಯ ಸೀಜ್ ಆಗಿರುವ ಹಲವು ವಾಹನಗಳು ನಿಂತಲ್ಲೇ ನಿಂತಿವೆ. ಇನ್ನೂ ಕಳೆದ 54 ದಿನಗಳಲ್ಲಿ ಬೆಂಗಳೂರು ಪೊಲೀಸರು ಸುಮಾರು 42 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಿದ್ದರು ಎಂಬ ಮಾಹಿತಿ ಲಭಿಸಿದೆ.

The post ಸೀಜ್ ಆದ ವಾಹನಗಳ ಬಿಡುಗಡೆಗೆ ಅವಕಾಶ; ಪೊಲೀಸರಿಗೆ ಹೊಸ ತಲೆನೋವು appeared first on News First Kannada.

Source: newsfirstlive.com

Source link