ಲಕ್ನೋ: ವ್ಯಕ್ತಿಯೊಬ್ಬ ತನ್ನ ಮದುವೆಗೆ ಕೆವಲ 5 ದಿನ ಇರುವಾಗಲೇ ಭಾವಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಉತ್ತರಪ್ರದೇಶದ ಮೊರದಾಬಾದ್ ನಲ್ಲಿ ನಡೆದಿದೆ.

ಆರೋಪಿಯನ್ನು ಜಿತಿನ್ ಎಂದು ಗುರುತಿಸಲಾಗಿದ್ದು, ಈತ ಭಾವಿ ಪತ್ನಿ ಟೀನಾಳನ್ನು ಕೊಲೆ ಮಾಡಿದ್ದಾನೆ. ಸೋಮವಾರ ಟೀನಾಳಿಗೆ ಕರೆ ಮಾಡಿದ ಜಿತಿನ್, ಮದುವೆಗೆ ಕೆಲವೊಂದಷ್ಟು ಸೀರೆಗಳನ್ನು ಖರೀದಿಸಲು ಇದೆ. ಹೀಗಾಗಿ ನೀನು ಬರಬೇಕು ಎಂದು ಹೇಳಿದ್ದಾನೆ. ಭಾವಿ ಪತಿಯ ಮಾತು ಕೇಳಿದ ಟೀನಾ ಹೊರಟಿದ್ದಾಳೆ. ಅಂತೆಯೇ ಟೀನಾಳನ್ನು ಆಕೆಯ ತಾಯಿ ಬೆಳಗ್ಗೆ 11 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಬಳಿ ಬಿಟ್ಟು ಬಂದಿದ್ದಾರೆ ಎಂದು ಸಂಬಂಧಿ ವಿಪಿನ್ ಹೇಳಿದ್ದಾರೆ.

ಇತ್ತ ಅದೇ ದಿನ ಮಧ್ಯಾಹ್ನ 2.30 ರ ಸುಮಾರಿಗೆ ರಸ್ತೆ ಬದಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಮೃತಳ ಗುರುತು ಪತ್ತೆ ಹಚ್ಚಿದ ಪೊಲೀಸರು ಆಕೆಯ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾರೆ. ಈ ವೇಳೆ ಟೀನಾ ಕುಟುಂಬಸ್ಥರು, ಕೆಲ ಗಂಟೆಗಳ ಹಿಂದೆಯಷ್ಟೇ ಆಕೆ ತನ್ನ ಭಾವಿ ಪತಿಯನ್ನು ಭೇಟಿಯಾಗಲು ತೆರಳಿದ್ದಾಳೆ ಎಂದು ಹೇಳಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇತ್ತ ಟೀನಾ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

ಜಿತಿನ್ ಹಾಗೂ ಟೀನಾ ಲವ್ ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಕೂಡ ನಡೆಯುತ್ತಿತ್ತು. ಆದರೆ ಜಿತಿನ್ ಮಾತ್ರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದನು. ಅಲ್ಲದೆ ಈ ಮದುವೆ ನಿಲ್ಲಿಸುವಂತೆ ಟೀನಾಳನ್ನು ಒತ್ತಾಯಿಸುತ್ತಿದ್ದನು.

ಸೋಮವಾರ ಜಿತಿನ್ ಮನೆಗೆ ಮರಳಿದಾಗ, ಟೀನಾ ಎಲ್ಲಿಯೂ ಇರಲಿಲ್ಲ. ಈ ವೇಳೆ ಅವಳ ಕುಟುಂಬವು ಎಲ್ಲಾ ಕಡೆ ಹುಡುಕಾಟ ನಡೆಸಿದೆ. ಆದರೆ ಟೀನಾಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಆಕೆಯ ಶವ ಗ್ರಾಮದ ಹೊರಗೆ, ರಸ್ತೆಬದಿಯಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಶವವನ್ನು ಗುರುತಿಸಿ, ಜಿತಿನ್ ಸೀರೆ ಖರೀದಿಸಲು ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿದ್ದಾರೆ ಎಂದು ಆರೋಪಿಸಿದರು. ಜಿತಿನ್ ಈ ಕೃತ್ಯ ಎಸಗಲು ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

The post ಸೀರೆ ಖರೀದಿಸಲೆಂದು ಕರೆದು ಮದುವೆಗೆ 5 ದಿನ ಇರುವಾಗ್ಲೇ ಭಾವಿಪತ್ನಿಯನ್ನ ಕೊಂದ..! appeared first on Public TV.

Source: publictv.in

Source link