ಕಣ್ಣಿಗೆ ಕಾಡಿಗೆ ಅಥವಾ ಕಣ್ಣ ಕಪ್ಪು ಅಥವಾ ಕಾಜಲ್‌ ಕಣ್ಣಿನ ಸೌಂದರ್ಯದ ಜೊತೆಗೆ ಮುಖಕ್ಕೆ ವಿಶೇಷ ಮೆರುಗು ನೀಡುವುದು. ಯಾವುದೇ ರಾಸಾಯನಿಕಗಳಿಲ್ಲದ ಔಷಧೀಯ ಗುಣಗಳಿಂದ ಕೂಡಿದ ಕಣ್ಣಿನ ಅಂದ, ಆರೋಗ್ಯ ವರ್ಧಿಸುವ ಕಾಡಿಗೆಯನ್ನು ಮನೆಯಲ್ಲೇ ತಯಾರಿಸಿದರೆ ಹಿತಕರ.

ಕಾಡಿಗೆ ತಯಾರಿಸಲು ಬೇಕಾಗುವ ಸಾಮಗ್ರಿಗಳು
ತಾಮ್ರದ ತಟ್ಟಿ , ಹಿತ್ತಾಳೆಯ ದೀಪ, ಶುದ್ಧ ಹರಳೆಣ್ಣೆ, ಶುದ್ಧ ತುಪ್ಪ , ಹತ್ತಿಯ ದಪ್ಪ ಬತ್ತಿ, ಸಣ್ಣ ಬೆಳ್ಳಿ ಕರಡಿಗೆ, ಶುದ್ಧ ಕರ್ಪೂರ ಒಂದು ಚಮಚ, 2 ಲೋಟ.

ವಿಧಾನ: ಹಿತ್ತಾಳೆಯ ದೀಪದಲ್ಲಿ 100 ಎಂ.ಎಲ್‌.ನಷ್ಟು ಹರಳೆಣ್ಣೆಯನ್ನು ಹಾಕಬೇಕು. ಹರಳೆಣ್ಣೆಯಲ್ಲಿ ಅದ್ದಿದ ಹತ್ತಿಯ ಬತ್ತಿಯನ್ನು ಹಾಕಿಡಬೇಕು. ದೀಪದ ಎರಡು ಬದಿಗಳಲ್ಲಿ 2 ಲೋಟಗಳನ್ನು ಇಡಬೇಕು. ದೀಪವನ್ನು ಹಚ್ಚಿ , ದೀಪದ ಉರಿ ಸೋಕುವ ಹಾಗೆ ತಾಮ್ರದ ತಟ್ಟೆಯನ್ನು ಲೋಟಗಳ ಮೇಲೆ ಇರಿಸಬೇಕು. ದೀಪ ಉರಿದಂತೆ, ತಾಮ್ರದ ತಟ್ಟೆಯ ಸುತ್ತ ಕಪ್ಪು ಬಣ್ಣದ ಮಸಿ ಸಂಗ್ರಹವಾಗುತ್ತದೆ. ಕೊನೆಯಲ್ಲಿ ಚಮಚದಿಂದ ಕಪ್ಪು ಮಸಿಯನ್ನು ತೆಗೆದು, ಅದಕ್ಕೆ ಸ್ವಲ್ಪ ಶುದ್ಧ ತುಪ್ಪ ಹಾಗೂ ಕರ್ಪೂರವನ್ನು ಬೆರೆಸಬೇಕು. ಹೀಗೆ ತಯಾರಾದ ಕಾಡಿಗೆಯನ್ನು ಬೆಳ್ಳಿಯ ಕರಡಿಗೆಯಲ್ಲಿ ಸಂಗ್ರಹಿಸಬೇಕು. ದಿನನಿತ್ಯ ಕಣ್ಣಿಗೆ ಈ ಕಾಡಿಗೆ ಲೇಪಿಸಿದರೆ ಕಂಗಳಿಗೂ ತಂಪು. ದೃಷ್ಟಿಗೂ ಹಿತಕರ ಹಾಗೂ ಕಣ್ಣಿನ ಸೌಂದರ್ಯವರ್ಧಕವಾಗಿದೆ. ಹತ್ತಿಯ ಬಟ್ಟೆಯನ್ನು ತಯಾರಿಸುವಾಗ ನಂದಿಬಟ್ಟಲಿನ ಹೂವಿನ ರಸದಲ್ಲಿ ನಿತ್ಯ ಅದ್ದಿ ಒಣಗಿಸಿ, 8-10 ದಿನ ಹೀಗೆ ಹೂವಿನ ರಸದಲ್ಲಿ ಅದ್ದಿ ಒಣಗಿಸಿ, ತದನಂತರ ಈ ಹತ್ತಿಯ ಬತ್ತಿಯನ್ನು ಉಪಯೋಗಿಸಿದರೆ ಕಣ್ಣಿನ ರೆಪ್ಪೆಯ ಬೆಳವಣಿಗೆಗೂ ಹಿತಕರ.

ತೇದಿದ ಶ್ರೀಗಂಧದಲ್ಲಿ ಅದ್ದಿ ಒಣಗಿಸಿದ ಹತ್ತಿ ಬತ್ತಿಯನ್ನು ಉಪಯೋಗಿಸಿದರೆ ಕಂಗಳಿಗೆ ಉರಿ, ತುರಿಕೆ ಬರುವುದು ಶಮನವಾಗುತ್ತದೆ. ಅದೇ ರೀತಿ ಹೊನಗೊನ್ನೆ ಸೊಪ್ಪಿನ  ರಸದಲ್ಲಿ ಅದ್ದಿ ತಯಾರಿಸಿದ ಹತ್ತಿಯ ಬತ್ತಿಯನ್ನು ಉಪಯೋಗಿಸುವುದರಿಂದ ಕಣ್ಣಿನ ಆರೋಗ್ಯ ಹಾಗೂ ಸೌಂದರ್ಯ ವರ್ಧಿಸುತ್ತದೆ.

ಕಣ್ಣಿನ ಕಾಡಿಗೆ ಹೇಗೆ ಉಪಯುಕ್ತ ತಿಳಿಯೋಣ
ಹರಳೆಣ್ಣೆಯಲ್ಲಿ ಅಧಿಕ ವಿಟಮಿನ್‌ “ಈ’ ಅಂಶವಿದ್ದು ಕಣ್ಣಿನ ರೆಪ್ಪೆಯು ಬೆಳೆಯುವುದಕ್ಕೆ ಹಾಗೂ ಕಪ್ಪಾಗಲು ಸಹಕಾರಿ. ಕಣ್ಣಿನ ಒತ್ತಡ ನಿವಾರಕವೂ ಹೌದು. ಕಾಡಿಗೆ ತಯಾರಿಸುವಾಗ ತಾಮ್ರದ ತಟ್ಟೆ ಬಿಸಿಯಾಗುತ್ತದೆ. ತಾಮ್ರದ ಅಂಶವು ಕಣ್ಣಿನ ಮಸೂರ ಹಾಗೂ ಮಾಂಸಖಂಡಗಳಿಗೆ ಶಕ್ತಿದಾಯಕ ಹಾಗೂ ಕಣ್ಣಿಗೆ ಉಂಟಾಗುವ ಸೋಂಕುಗಳನ್ನು ತಡೆಗಟ್ಟುತ್ತದೆ. ಹಿತ್ತಾಳೆಯ ದೀಪ ಹಾಗೂ ಬೆಳ್ಳಿಯ ಕರಡಿಗೆಯನ್ನು ಉಪಯೋಗಿಸುವುದರಿಂದ ಕಣ್ಣಿನ ಅಲರ್ಜಿ, ಸೋಂಕು, ಉರಿ ಇತ್ಯಾದಿ ನಿವಾರಣೆಯಾಗುತ್ತದೆ. ಕಣ್ಣಿನಲ್ಲಿ ರಕ್ತ ಸಂಚಾರ ವೃದ್ಧಿಯಾಗುತ್ತದೆ. ಕರ್ಪೂರವು ಶೀತಲಗುಣ ಹೊಂದಿದೆ. ದೃಷ್ಟಿಯನ್ನು ಸು#ಟವಾಗಿಸುತ್ತದೆ, ಒತ್ತಡ ನಿವಾರಕ. ತುಪ್ಪವು ಕಣ್ಣಿನ ಸುತ್ತಲೂ ಉಂಟಾಗುವ ಕಪ್ಪು ವೃತ್ತ ನಿವಾರಣೆ ಮಾಡಿ ಕಂಗಳ ಹೊಳಪು ವರ್ಧಿಸುತ್ತದೆ.

ಬಾದಾಮಿ ಬಳಸಿ ಕಾಡಿಗೆ ತಯಾರಿ
ತಾಮ್ರದ ತಟ್ಟೆಯಲ್ಲಿ ಒಂದೊಂದೇ ಬಾದಾಮಿ ಬೀಜವನ್ನು ಇಡಬೇಕು. ಬಿಸಿಯಾಗಿ ಉರಿದ ಬಳಿಕ ಅದರಿಂದ ಉಂಟಾದ ಮಸಿಯನ್ನು ,ಚಮಚದಲ್ಲಿ ಸಂಗ್ರಹಿಸಿ ಬಾದಾಮಿ ತೈಲ ಬೆರೆಸಿ ಕಾಡಿಗೆ ತಯಾರಿಸಬೇಕು. ಇದನ್ನು ಬೆಳ್ಳಿಯ ಕರಡಿಗೆಯಲ್ಲಿ ಸಂಗ್ರಹಿಸಿ ನಿತ್ಯ ಕಂಗಳಿಗೆ ಲೇಪಿಸಿದರೆ ಕಣ್ಣಿನ ರೆಪ್ಪೆ ಕಪ್ಪಾಗಿ, ದಟ್ಟವಾಗಿ ಬೆಳೆದು ಕಣ್ಣಿನ ಅಂದ ವರ್ಧಿಸುತ್ತದೆ.

ಲೋಳೆಸರ ಬಳಸಿ ಕಾಡಿಗೆ ತಯಾರಿ
ತಾಮ್ರದ ತಟ್ಟೆಗೆ ಲೋಳೆಸರದ ತಿರುಳನ್ನು ಲೇಪಿಸಬೇಕು. ತದನಂತರ ಮೊದಲು ತಿಳಿಸಿದ ವಿಧಾನದಲ್ಲಿ ಕಾಡಿಗೆ ತಯಾರಿಸಬೇಕು. ಈ ಕಾಡಿಗೆಯಲ್ಲಿ ಇತರ ಔಷಧೀಯ ಅಂಶಗಳೊಂದಿಗೆ ಲೋಳೆಸರದ ಸೌಂದರ್ಯವರ್ಧಕ ಆರೋಗ್ಯ ರಕ್ಷಕ ಗುಣಗಳೂ ಮೇಳೈಸುವುದರಿಂದ ನಿತ್ಯ ಲೇಪಿಸಲು ಈ ಕಾಡಿಗೆ ಬಹೂಪಯುಕ್ತ.

ಸುಂದರ ಕಂಗಳಿಗೆ…
.ನಿತ್ಯ ರಾತ್ರಿ ಮಲಗುವ ಮುನ್ನ ಕಣ್ಣಿನ ರೆಪ್ಪೆಗಳಿಗೆ ಶುದ್ಧ ಹರಳೆಣ್ಣೆ ಲೇಪಿಸಿದರೆ ಕಣ್ಣಿನ ರೆಪ್ಪೆಯೂ ಆಕರ್ಷಕವಾಗುತ್ತದೆ ಹಾಗೂ ಕಣ್ಣಿನ ಸುತ್ತಲಿನ ಕಪ್ಪು ವೃತ್ತಗಳು ನಿವಾರಣೆಯಾಗುತ್ತದೆ. ಹರಳೆಣ್ಣೆಯ ಹಾಗೆ ಶುದ್ಧ ಆಲಿವ್‌ ತೈಲಿ ಲೇಪಿಸಿದರೂ ಪರಿಣಾಮಕಾರಿ. .ಲೋಳೆಸರದ ತಿರುಳಿಗೆ ಕೊಬ್ಬರಿ ಎಣ್ಣೆ ಮಿಶ್ರಮಾಡಿ ಲೇಪಿಸಿದರೆ ಕಣ್ಣ ರೆಪ್ಪೆ ಕಪ್ಪಾಗಿ ಸೊಂಪಾಗಿ ಬೆಳೆಯುತ್ತದೆ.

ಕಣ್ಣಿನ ಮಸಾಜ್‌. ತುದಿ ಬೆರಳುಗಳಿಂದ ಮೃದುವಾಗಿ ಕಣ್ಣುಗಳನ್ನು ವರ್ತುಲಾಕಾರವಾಗಿ ಮಾಲೀಶು ಮಾಡುವುದರಿಂದ ರಕ್ತಸಂಚಾರ ವರ್ಧಿಸಿ ಕಂಗಳ ಆರೋಗ್ಯ ಸೌಂದರ್ಯ ವರ್ಧಿಸುತ್ತದೆ.
.ಕಣ್ಣಿಗೆ ಶುದ್ಧ ಗುಲಾಬಿ ಜಲವನ್ನು ದಿನಕ್ಕೆ 2 ಬಾರಿ 3 ಹನಿಗಳಂತೆ ಹಾಕಿದರೆ ಕಣ್ಣಿನ ಹೊಳಪು ಹೆಚ್ಚುತ್ತದೆ.
.ತಣ್ಣಗಿನ ಟೀ ಬ್ಯಾಗ್‌ಗಳನ್ನು, ತಣ್ಣೀರಿನಲ್ಲಿ ಅದ್ದಿ ಮುಚ್ಚಿದ ಕಂಗಳ ಸುತ್ತ ಮಾಲೀಶು ಮಾಡಿದರೆ ಕಣ್ಣಿನ ಆರೋಗ್ಯ ಸೌಂದರ್ಯವರ್ಧಕ ಗೃಹೋಪಯೋಗವಾಗಿದೆ.
.ಹತ್ತಿಯ ಉಂಡೆಗಳನ್ನು ತಣ್ಣಗಿನ ಸೌತೆಕಾಯಿ ರಸದಲ್ಲಿ ಅದ್ದಿ ಕಂಗಳಿಗೆ ಲೇಪಿಸಿದರೂ ಕಾಂತಿವರ್ಧಕ.
.ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ನಿವಾರಣೆಗೆ ಟೊಮ್ಯಾಟೊ ರಸ 2 ಚಮಚಕ್ಕೆ, 2 ಹನಿ ನಿಂಬೆರಸ, 2 ಚಿಟಿಕೆ ಅರಸಿನ ಹುಡಿ ಬೆರೆಸಿ ಲೇಪಿಸಿದರೆ ಹಿತಕರ.
.ಕಣ್ಣಿನ ಸುತ್ತಲೂ ರೆಪ್ಪೆ ಊದಿಂತಾಗಿ ಕಂಡು ಬಂದಾಗ ಸೌತೆಕಾಯಿ ರಸಕ್ಕೆ ಎರಡು ಹನಿ ತುಳಸೀರಸ ಬೆರೆಸಿ ಲೇಪಿಸಿದರೆ ಊತ ನಿವಾರಣೆಯಾಗಿ, ನೆರಿಗೆಗಳೂ ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.
.ಕಣ್ಣಿಗೆ ಬಳಸುವ ಐಕಪ್ಸ್‌ನಿಂದ ತ್ರಿಫ‌ಲಾ ಕಷಾಯ ಬಳಸಿ ಕಣ್ಣುಗಳನ್ನು ತೊಳೆದರೆ ಕಂಗಳ ಆರೋಗ್ಯಕ್ಕೂ ಸೌಂದರ್ಯಕ್ಕೂ ಹಿತಕರ. ಕಣ್ಣಿನ ವ್ಯಾಯಾಮ ಹಾಗೂ ತ್ರಾಟಕ ಕ್ರಿಯೆ ಕಣ್ಣಿಗೆ ಹಿತಕರ.

ಫ್ಯಾಶನ್ – Udayavani – ಉದಯವಾಣಿ
Read More