ಚಾಮುಂಡಿ ಬೆಟ್ಟ
ಮೈಸೂರು: ಇನ್ಮುಂದೆ ಸುಖಾ ಸುಮ್ಮನೇ ಚಾಮುಂಡಿ ಬೆಟ್ಟಕ್ಕೆ (Chamundi Hill) ಹೋಗುವ ಮುನ್ನ ಹತ್ತು ಬಾರಿ ಯೋಚಿಸೋದು ಒಳ್ಳೆದು. ಯಾಕಂದ್ರೆ ಚಾಮುಂಡಿಬೆಟ್ಟದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗೆ ಬ್ರೇಕ್ ಹಾಕಲು ಮೈಸೂರು ಪೊಲೀಸರು ಮುಂದಾಗಿದ್ದಾರೆ. ಚಾಮುಂಡಿ ಬೆಟ್ಟ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಾನ. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರ. ಪ್ರತಿದಿನ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕೇವಲ ನಮ್ಮ ರಾಜ್ಯ ಮಾತ್ರವಲ್ಲ ಹೊರ ರಾಜ್ಯ ಹೊರ ದೇಶದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಾರೆ. ಆದರೆ ಇತ್ತೀಚೆಗೆ ಚಾಮುಂಡಿಬೆಟ್ಟದಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದೆ. ಸರಗಳ್ಳತನ, ಬೈಕ್ ವೀಲಿಂಗ್ ಸುಖಾ ಸುಮ್ಮನೆ ಓಡೋಡುದು ಹೆಚ್ಚಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲು ಮೈಸೂರು ಪೊಲೀಸರು ಮುಂದಾಗಿದ್ದಾರೆ. ಆಪರೇಷನ್ ಚಾಮುಂಡಿಗೆ ಚಾಲನೆ ನೀಡಿದ್ದಾರೆ.
ಚಾಮುಂಡಿ ಬೆಟ್ಟಕ್ಕಾಗಿಯೇ ಎರಡು ವಿಶೇಷ ಗಸ್ತು ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ದಿನದ 24 ಗಂಟೆಯೂ ಈ ವಾಹನಗಳು ಪಾಳಿಯಲ್ಲಿ ಕೆಲಸ ಮಾಡಲಿವೆ. ಇದರಲ್ಲಿರುವ ಸಿಬ್ಬಂದಿ ಚಾಮುಂಡಿಬೆಟ್ಟಕ್ಕೆ ಬರುವವರ ಬಗ್ಗೆ ಮಾಹಿತಿ ಕಲೆ ಹಾಕುವುದು ಸೇರಿದಂತೆ ಬೆಟ್ಟಕ್ಕೆ ಬರುವವರು ಹೋಗುವವರ ಮೇಲೆ ನಿಗಾ ಇಡಲಿದ್ದಾರೆ. ಜೊತೆಗೆ ಮೈಸೂರಿನ ಸಂಚಾರ ಪೊಲೀಸರು ಅಲರ್ಟ್ ಆಗಿದ್ದು ಚಾಮುಂಡಿಬೆಟ್ಟಕ್ಕೆ ಬರುವ ವಾಹನಗಳ ತಪಾಸಣೆ ನಡೆಸಲಿದ್ದಾರೆ. ಇದನ್ನು ಮೈಸೂರಿಗರು ಸ್ವಾಗತಿಸಿದ್ದಾರೆ.
ಇತ್ತೀಚೆಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಅನಧಿಕೃತ ವ್ಯಕ್ತಿಗಳು ಓಡಾಟ ಹೆಚ್ಚಾಗಿದೆ ಅನ್ನೋ ಆರೋಪ ಕೇಳಿ ಬಂದಿತ್ತು. ಅದಕ್ಕೆ ಕಡಿವಾಣ ಹಾಕಲು ಮೈಸೂರು ಪೊಲೀಸರು ಮುಂದಾಗಿರುವುದು ನಿಜಕ್ಕೂ ಖುಷಿಯ ವಿಚಾರ. ಇದನ್ನು ಹೀಗೆ ಮುಂದುವರಿಸಬೇಕು ಮೈಸೂರಿನ ಚಾಮುಂಡಿಬೆಟ್ಟ ಧಾರ್ಮಿಕ ಕೇಂದ್ರವಾಗಿ ಉಳಿಯಬೇಕು ಅನ್ನೋದು ಎಲ್ಲರ ಆಶಯವಾಗಿದೆ.
ವರದಿ: ರಾಮ್ ಟಿವಿ 9 ಮೈಸೂರು