ಮಂಗಳೂರು: ಕೊರೊನಾ ಲಾಕ್ ಡೌನ್ ಕಾರಣಕ್ಕಾಗಿ ಮನೆಯಲ್ಲೇ ಉಳಿದುಕೊಂಡಿರುವ ಜನ ಲಾಕ್ ಡೌನ್ ವೇಳೆಯನ್ನು ಹಲವು ರೀತಿಯ ಕೆಲಸಗಳಲ್ಲಿ ತೊಡಗಿಕೊಳ್ಳುವ ಮೂಲಕ ಕಳೆಯುತ್ತಿದ್ದಾರೆ. ಹೌದು ಇದೇ ರೀತಿ ಲಾಕ್​ಡೌನ್ ಕಾರಣಕ್ಕಾಗಿ ಊರಿಗೆ ಬಂದಿರುವ ಸುಪ್ರೀಂಕೋರ್ಟ್​ನ ಹೆಚ್ಚುವರಿ ಸಾಲಿಟರ್ ಜನರಲ್ ತಮ್ಮ ಗದ್ದೆಯಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ದೇಶದ ಉನ್ನತ ಹಾಗೂ ಜವಾಬ್ದಾರಿಯುತ ಹುದ್ದೆಯಾಗಿರುವ ಸುಪ್ರೀಂಕೋರ್ಟ್​ನ ಹೆಚ್ಚುವರಿ ಸಾಲಿಟರ್ ಜನರಲ್ ಕೆ.ಎಂ.ನಟರಾಜ್ ಇದೀಗ ಮನೆಯಿಂದಲೇ ಕಛೇರಿ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ತನ್ನನ್ನು ಬೆಳೆಸಿದ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದವರ‍ಾದ ಕೆ.ಎಂ. ನಟರಾಜ್ ಕೃಷಿ ಕುಟುಂಬದಿಂದ ಬಂದವರು. ಇವರ ಇಡೀ ಕುಟುಂಬ ಕೃಷಿಯನ್ನೇ ನೆಚ್ಚಿಕೊಂಡು ಬಂದಿದ್ದು, ಈ ಕೃಷಿ ಪ್ರೇಮ ನಟರಾಜ್ ಅವರನ್ನು ಇಂದಿಗೂ ಬಿಟ್ಟಿಲ್ಲ. ದೆಹಲಿಯಲ್ಲಿ ಸುಪ್ರೀಂಕೋರ್ಟ್ ನ ಕಲಾಪಗಳಲ್ಲಿ ವರ್ಷಪೂರ್ತಿ ಬ್ಯುಸಿಯಾಗಿರುವ ನಟರಾಜ್ ಕೆಲವು ದಿನಗಳ ಮಟ್ಟಿಗೆ ಊರಿಗೆ ಬಂದರೂ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತಿರಲಿಲ್ಲ. ಆದರೆ ಈ ಬಾರಿ ಕೊರೊನಾ ಲಾಕ್ ಡೌನ್ ದೇಶದೆಲ್ಲೆಡೆ ಹೇರಿಕೆಯಾದ ಕಾರಣ, ನಟರಾಜ್ ದೆಹಲಿಯಿಂದ ನೇರವಾಗಿ ಊರಿಗೆ ಬಂದು ತಾವು ಕೃಷಿಯಲ್ಲಿ ಭಾಗಿಯಾಗಿದ್ದಾರೆ.

ಮನೆಯಿಂದಲೇ ತನ್ನ ಕೆಲಸವನ್ನು ನಿರ್ವಹಿಸುತ್ತಿರುವ ಇವರು ತನ್ನ ಬಿಡುವಿನ ವೇಳೆಯನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಿರಿಯರ ಕಾಲದಿಂದಲೂ ನಟರಾಜ್ ಮನೆಯಲ್ಲಿ ಭತ್ತದ ಬೇಸಾಯವನ್ನು ಮಾಡುತ್ತಿದ್ದು, ಈ ಬಾರಿ ನಟರಾಜ್ ಅವರಿಗೆ ಬೇಸಾಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರೆತಿದೆ. ಸಿಕ್ಕ ಅವಕಾಶವನ್ನು ಭರಪೂರವಾಗಿ ಬಳಸಿಕೊಂಡಿರುವ ಇವರು ತಮ್ಮ ಗದ್ದೆಯನ್ನು ಟ್ಯಾಕ್ಟರ್ ಹಾಗೂ ಟಿಲ್ಲರ್ ಮೂಲಕ ಸಂಪೂರ್ಣ ಹದ ಮಾಡಿದ್ದಾರೆ. ದಿನಪೂರ್ತಿ ಹವಾನಿಯಂತ್ರಿತ ಕೊಠಡಿಯೊಳಗೇ ಇದ್ದ ಇವರು ತಮ್ಮ ಮನೆಯಲ್ಲಿ ಪಕ್ಕಾ ಕೃಷಿಕನಾಗಿ ಕಂಡು ಬಂದಿದ್ದಾರೆ. ಕೃಷಿ ಚಟುವಟಿಕೆಗೆ ಬಳಸುವ ಹಳೆಯ ಶರ್ಟು, ಲುಂಗಿ ತೊಟ್ಟು ಟ್ಯಾಕ್ಟರ್ ಹಾಗೂ ಟಿಲ್ಲರ್ ಚಲಾಯಿಸುತ್ತಿರುವ ದೃಶ್ಯಗಳನ್ನು ಮನೆ ಮಂದಿ ಸೆರೆ ಹಿಡಿದಿದ್ದು, ಇವರ ಕೃಷಿ ಪ್ರೇಮ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

The post ಸುಪ್ರೀಂಕೋರ್ಟ್​ನಲ್ಲಿ ವಾದಕ್ಕೂ ಸೈ.. ಗದ್ದೆ ಕೆಲಸಕ್ಕೂ ಜೈ: ಲುಂಗಿ ತೊಟ್ಟು ಕೆಸರಿಗಿಳಿದ ಇವರ್ಯಾರು ಗೊತ್ತಾ..? appeared first on News First Kannada.

Source: newsfirstlive.com

Source link