ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ತನ್ನೂರಿಗೆ ಬಸ್​ ಸಂಪರ್ಕ ಪಡೆದ 8ನೇ ಕ್ಲಾಸ್ ಬಾಲಕಿ | Telangana 8th Standard School Girl writes to CJI NV Ramana gets bus service restored in her village TSRTC


ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದು ತನ್ನೂರಿಗೆ ಬಸ್​ ಸಂಪರ್ಕ ಪಡೆದ 8ನೇ ಕ್ಲಾಸ್ ಬಾಲಕಿ

ಟಿಎಸ್​ಆರ್​ಟಿಸಿ ಬಸ್

ಹೈದರಾಬಾದ್: ಕೊವಿಡ್​ ಸಾಂಕ್ರಾಮಿಕದ ನಂತರ ತೆಲಂಗಾಣದ ಬಹುತೇಕ ಹಳ್ಳಿಗಳಿಗೆ ಬಸ್​ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ, ತೆಲಂಗಾಣದಲ್ಲಿ 8ನೇ ತರಗತಿ ವಿದ್ಯಾರ್ಥಿನಿಯಾಗಿರುವ ಪಿ. ವೈಷ್ಣವಿ ಎಂಬಾಕೆ ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಸ್ಥಗಿತಗೊಂಡಿರುವ ತನ್ನ ಗ್ರಾಮಕ್ಕೆ ಬಸ್ ಸೇವೆಯನ್ನು ಮತ್ತೆ ಆರಂಭಿಸಬೇಕೆಂದು ಸಹಾಯ ಕೋರಿ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿಗೆ ಪತ್ರ ಬರೆದಿದ್ದಾರೆ. ಬಸ್​ ವ್ಯವಸ್ಥೆಯಿಲ್ಲದ ಕಾರಣ ಶಾಲೆ ಮತ್ತು ಕಾಲೇಜಿಗೆ ಹೋಗಲು ತೊಂದರೆಯಾಗಿದೆ ಎಂದು ಆಕೆ ಪತ್ರ ಬರೆದಿದ್ದರು.

ಕೊರೊನಾದಿಂದ ನನ್ನ ತಂದೆ ಸಾವನ್ನಪ್ಪಿದ್ದಾರೆ. ಅಂದಿನಿಂದಲೂ ನನ್ನ ತಾಯಿಯೇ ನಮ್ಮನ್ನು ನೋಡಿಕೊಳ್ಳುತ್ತಿದ್ದಾಳೆ. ನಾವು ಶಾಲೆ, ಕಾಲೇಜಿಗೆ ಹೋಗಬೇಕೆಂದರೆ ಈಗ ದಿನಕ್ಕೆ ಆಟೋಗೆ 150 ರೂ. ಖರ್ಚು ಮಾಡಬೇಕಾಗಿದೆ. ಕಾಲೇಜಿಗೆ ನಮ್ಮ ಊರಿನಿಂದ 18 ಕಿ.ಮೀ. ಆಗುತ್ತದೆ. ನಮ್ಮೂರಿನ ಬಹುತೇಕ ಮಕ್ಕಳು ಇದೇ ಕಾರಣಕ್ಕೆ ಶಾಲೆ- ಕಾಲೇಜಿಗೆ ಹೋಗದೆ ಮನೆಯಲ್ಲೇ ಉಳಿದಿದ್ದಾರೆ ಎಂದು ಆಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಳು.

ಈ ವಿಷಯದ ಕುರಿತು ಸಿಜೆಐ ಎನ್​.ವಿ ರಮಣ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ಪತ್ರ ಕಳುಹಿಸಿದರು. ಬಳಿಕ ರಂಗಾ ರೆಡ್ಡಿ ಜಿಲ್ಲೆಯ ಗ್ರಾಮಕ್ಕೆ ಬಸ್ ಸೇವೆಯನ್ನು ಪುನಃ ಸ್ಥಾಪಿಸಲಾಗಿದೆ ಎಂದು ಟಿಎಸ್‌ಆರ್‌ಟಿಸಿ ಪತ್ರಿಕಾ ಪ್ರಕಟಣೆ ತಿಳಿಸಿದೆ. ರಂಗಾರೆಡ್ಡಿ ಜಿಲ್ಲೆಯ ಮಂಚಾಲ್ ಮಂಡಲದ ಚಿಡೇಡು ಗ್ರಾಮದಲ್ಲಿ ವಾಸವಾಗಿರುವ ವೈಷ್ಣವಿ, ತಮ್ಮ ಸ್ನೇಹಿತರು ಮತ್ತು ಇತರ ಗ್ರಾಮಸ್ಥರು ಸಹ ಬಸ್ ಸೇವೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬಾಲಕಿ ಪತ್ರದಲ್ಲಿ ವಿವರಿಸಿದ್ದಾಳೆ.

ಆಕೆಯ ಪತ್ರಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಮಕ್ಕಳ ಶಿಕ್ಷಣದ ಹಕ್ಕನ್ನು ಗೌರವಿಸುವ ಸಂಕೇತವಾಗಿ ಶಾಲಾ ಸಮಯಕ್ಕೆ ವಿದ್ಯಾರ್ಥಿಗಳನ್ನು ಕಳುಹಿಸಲು ಬಸ್ ಸೇವೆಯನ್ನು ಮರುಸ್ಥಾಪಿಸುವಂತೆ ಟಿಎಸ್‌ಆರ್‌ಟಿಸಿಯ ಎಂಡಿ ವಿ.ಸಿ ಸಜ್ಜನರ್ ಅವರಿಗೆ ಸೂಚಿಸಿದ್ದಾರೆ ಎಂದು ಟಿಎಸ್‌ಆರ್‌ಟಿಸಿ ತಿಳಿಸಿದೆ. ಇಡೀ ತೆಲಂಗಾಣ ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಂಪರ್ಕವನ್ನು ಒದಗಿಸುವುದಾಗಿ TSRTC ಭರವಸೆ ನೀಡಿದೆ. ನಿಗಮದ ಅಧಿಕಾರಿಗಳು ತಮ್ಮ ಸ್ವಂತ ಮಾಹಿತಿಯಂತೆ ಮತ್ತು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಮನವಿಯಂತೆ ಕಳೆದ ಒಂದು ತಿಂಗಳ ಅವಧಿಯಲ್ಲಿ 30 ಬಸ್​ಗಳ  ಸೇವೆಗಳನ್ನು ಈಗಾಗಲೇ ಮರು ಸ್ಥಾಪಿಸಿದ್ದಾರೆ ಎಂದು ಎಂಡಿ ಹೇಳಿದ್ದಾರೆ.

ಇದನ್ನೂ ಓದಿ: ‘ತೆಲಂಗಾಣ ಸಿಎಂ ಕೆಸಿಆರ್​ ರಾಜ್ಯದ ಗರ್ಭಿಣಿಯರಿಗೆ ಪತಿಯಿದ್ದಂತೆ..’-​ ಹೊಗಳುವ ಭರದಲ್ಲಿ ವಿವಾದ ಸೃಷ್ಟಿಸಿದ ಟಿಆರ್​ಎಸ್​ ಶಾಸಕ

TV9 Kannada


Leave a Reply

Your email address will not be published. Required fields are marked *