ಸುಳಿವೇ ಸಿಗದಂತೆ ರೀಪೇಂಟ್ ಆಗಿತ್ತು ಬಸ್.. ಈ ‘ಹಿಟ್​ ಅಂಡ್ ರನ್​’ ಕೇಸ್ ಪತ್ತೆ ಹಚ್ಚಿದ್ದೇ ರೋಚಕ​..!


ರಾಯಚೂರು: ಅದೊಂದು ಮಿಸ್ಟ್ರೀ ಕೇಸ್​​.. ಹಿಟ್ ಅಂಡ್ ರನ್​ನಲ್ಲಿ ಇಬ್ಬರು ಯುವಕರು ಸ್ಪಾಟ್​ ಡೆತ್ ಆಗಿದ್ರು. ಯುವಕರ ಬೈಕ್​ಗೆ ಡಿಕ್ಕಿ ಹೊಡೆದ ವಾಹನದ ಚಾಲಕ, ಯಾರಿಗೂ ಸುಳಿವು ಸಿಗಬಾರ್ದು ಅಂತ ವಾಹನಕ್ಕೆ ರೀಪೇಂಟ್‌ ಮಾಡ್ಸಿದ್ದ. ಸದ್ಯ ಹತ್ತು ದಿನಗಳ ಬಳಿಕ ಹಿಟ್ & ರನ್ ಕೇಸ್​ಗೆ ಈಗ ತಿರುವು ಸಿಕ್ಕಿದ್ದು, ಅಪಘಾತ ಮಾಡಿ ಎಸ್ಕೇಪ್ ಆಗಿದ್ದವರು ಅಂದರ್ ಆಗಿದ್ದಾರೆ.

ಪೊಲೀಸರಿಗೆ ಇತ್ತು ದೊಡ್ಡ ಸವಾಲ್ 
ಸ್ವಲ್ಪ ಕೆಲಸ‌ ಇದೆ ಇಲ್ಲೇ ಹೋಗಿ ಬರ್ತೇವೆ ಎಂದು ಬೈಕ್ ಏರಿದ್ದ ನಾಗೇಶ್ ಹಾಗೂ ಸ್ನೇಹಿತ ದೇವರಾಜ್​ ಮನೆಗೆ ವಾಪಾಸಾಗಿರಲಿಲ್ಲ.. ಇಬ್ಬರು ಹಟ್ಟಿ ಚಿನ್ನದ ಗಣಿಯಲ್ಲಿ ಸ್ನೇಹಿತನ ಬರ್ತಡೇಗೆ ಹೋಗುವಾಗ ಕಲಬುರಗಿ-ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಹೀಗೆ ಹೆಣವಾಗಿ ಹೋಗಿದ್ದರು. ಎದುರಿನಿಂದ ಬಂದ ಸರ್ಕಾರಿ ಬಸ್ ಬೈಕ್​ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿತ್ತು.. ಪರಿಣಾಮ ನಾಗೇಶ್ ಹಾಗೂ ದೇವರಾಜ್ ಸ್ಥಳದಲ್ಲೇ ಮೃತಪಟ್ಟಿದ್ರು. ಕೂಡಲೇ ಹಿಟ್ & ರನ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೋಚಕ ತನಿಖೆಗಿಳಿದಿದ್ರು.
ಅಪಘಾತ ಮಾಡಿದ ವಾಹನ ಪತ್ತೆ ಮಾಡೋದೇ ಬಹುದೊಡ್ಡ ಸವಾಲಾಗಿತ್ತು. ಅದಕ್ಕಂತಾನೇ ಪೊಲೀಸರು ಸರಿ ಸುಮಾರು 100ಕ್ಕೂ ಹೆಚ್ಚು ಬಸ್ಸು, ಲಾರಿಗಳ ತಪಾಸಣೆ ನಡೆಸಿದ್ರು. ಆದರೂ ಅಪಘಾತ ಮಾಡಿದ ವಾಹನದ ಪತ್ತೆ ನಿಗೂಢವಾಗಿತ್ತು.. ಅದ್ರೆ ಅಪರಾಧ ಎಸಗುವಾಗ ಬಿಟ್ಟು ಹೋದ ಸುಳಿವಿನ ಬೆನ್ನಟ್ಟಿದ ಪೊಲೀಸರಿಗೆ ಅಪಘಾತದ ಸ್ಥಳದಲ್ಲಿ‌ KSRTC ಬಸ್​ನ ಕೆಲ ಅವಶೇಷಗಳು ಸಿಕ್ಕಿದ್ವು.

200 ಕಿಮೀ ತಿರುಗಿದ್ದ ಡ್ರೈವರ್
ಕಲಬುರಗಿ ಜಿಲ್ಲೆಯ ಕಾಳಗಿ ಡಿಪೋದ ಈ ಬಸ್​​, ಲಿಂಗಸ್ಗೂರಿನ ಬಸ್ ನಿಲ್ದಾಣದಲ್ಲಿ ಎಂಟ್ರಿ ಮಾಡಿ ತೆರಳಿತ್ತು. ಹಾಗೆ ತೆರಳುವಾಗ ನಿಲ್ದಾಣದಲ್ಲಿ ಬಸ್​​ನ್ನ ಚಾಲಕ ಹಿಮ್ಮುಖವಾಗಿ ನಿಲ್ಲಿಸಿದ್ದ. ಕಾರಣ ಅಪಘಾತದಲ್ಲಿ ಬಸ್ಸಿನ ಮುಂಭಾಗ ಜಖಂಗೊಂಡಿತ್ತು. ಮೊದಲು ಇದನ್ನ ನಿಲ್ದಾಣದಲ್ಲಿರೋ‌ ಸಿ.ಸಿ. ಕ್ಯಾಮರಾಗಳ ಮೂಲಕ ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಳಿಕ ಸಿಂಧನೂರು, ಸಿರಗುಪ್ಪ, ಹೀಗೆ ಬೆಂಗಳೂರು ಮಾರ್ಗದಲ್ಲಿ ಬರುವ ನಿಲ್ದಾಣಗಳಲ್ಲಿ ಎಲ್ಲೂ ಆತ ಎಂಟ್ರಿ ಮಾಡಿಸಿರಲಿಲ್ಲ. ಅದಲ್ಲದೇ ಆತನ ಬಸ್ ಜಖಂಗೊಂಡಿರೋ ವಿಡಿಯೋಗಳು ಚಳ್ಳಕೆರೆ ಚೆಕ್ ಪೋಸ್ಟ್ ಬಳಿ ಸಿ.ಸಿ. ಕ್ಯಾಮರಾದಲ್ಲಿ ಸೆರೆ ಸಿಕ್ಕಿವೆ. ಆದರೂ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಅದರ ಚಾಲಕ ಬಸ್ಸನ್ನ ಬೆಂಗಳೂರು ತಲುಪಿಸಿದ್ದ. ಅಲ್ಲದೇ ಬೆಂಗಳೂರಿನ ಕೆಂಗೇರಿಯಲ್ಲಿರೋ ಖಾಸಗೀ ಗ್ಯಾರೇಜೊಂದರಲ್ಲಿ ಡ್ಯಾಮೇಜ್‌ ಆದ ಬಸ್ ರಿಪೇರಿ ಮಾಡಿಸಿದ್ದ. ರೀ ಪೇಂಟ್ ನಂತರ ಡಿಪೋಗೆ ತಂದು ಬಸ್ ನಿಲ್ಲಿಸಿರೋದು ತನಿಖೆಯಿಂದ ತಿಳಿದುಬಂದಿದೆ ಅಂತಾ ಸರ್ಕಲ್​​​ ಇನ್ಸ್​ಪೆಕ್ಟರ್ ಮಹಾಂತೇಶ್ ಸಜ್ಜನ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಕುತೂಹಲ ಹುಟ್ಟು ಹಾಕಿದ್ದ ಹಿಟ್ ರನ್ ಕೇಸ್​ಗೆ ಮುಕ್ತಿ ಸಿಕ್ಕಿದೆ. ಲಿಂಗಸುಗೂರು ಪೊಲೀಸರ ಸತತ 15 ದಿ‌ನಗಳ ಕಾಲ 2000 ಕಿ.ಮೀ ಸುತ್ತಾಡಿ ಬಸ್ ಚಾಲಕ ಆರೋಪಿ ಶ್ರೀಕಾಂತ್​ನನ್ನು ವಶಕ್ಕೆ ಪಡೆಸಿದ್ದಾರೆ. ಆದ್ರೆ ಅಪಘಾತವಾಗಿ ಸಾವನ್ನಪ್ಪಿದ ಇಬ್ಬರು ಯುವಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸರ್ಕಾರದಿಂದ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.

The post ಸುಳಿವೇ ಸಿಗದಂತೆ ರೀಪೇಂಟ್ ಆಗಿತ್ತು ಬಸ್.. ಈ ‘ಹಿಟ್​ ಅಂಡ್ ರನ್​’ ಕೇಸ್ ಪತ್ತೆ ಹಚ್ಚಿದ್ದೇ ರೋಚಕ​..! appeared first on News First Kannada.

News First Live Kannada


Leave a Reply

Your email address will not be published. Required fields are marked *