ಬೆಂಗಳೂರು: ಲಾಕ್​ಡೌನ್​ ಸಂದರ್ಭದಲ್ಲಿ ರಾಜ್ಯದ ಪೊಲೀಸರು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಹಳೇ ವಿಡಿಯೋ ಹಾಕಿ ಸುಳ್ಳು ಸುದ್ದಿ ಹರಿಬಿಟ್ಟ ಪ್ರಕರಣ ಸಂಬಂಧ ಮಹಿಳೆಯೊಬ್ಬರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಡಿಯೋಗೆ ಕನ್ನಡದಲ್ಲಿ ಹಿನ್ನೆಲೆ ಧ್ವನಿ ನೀಡಿ ಪೊಲೀಸರ ಮೇಲೆ ಆರೋಪ ಹೊರಿಸಿದ್ದ ಪದ್ಮಾ ಹರೀಶ್​ ಎಂಬವರನ್ನ ದಕ್ಷಿಣ ಸಿಇಎನ್​ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಏನಿದು ಪ್ರಕರಣ?
ಪೊಲೀಸರು ವ್ಯಕ್ತಿಯೊಬ್ಬರನ್ನ ಸುತ್ತುವರಿದು ಹೊಡೆಯುತ್ತಿರುವ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್​ ಪಂತ್​ ಸ್ಪಷ್ಟನೆ ನೀಡಿದ್ದು, ಈ ವಿಡಿಯೋ ಕರ್ನಾಟಕದ್ದಲ್ಲ. ಘಟನೆ ನಡೆದಿರೋದು ಕಳೆದ ವರ್ಷ, ಅದೂ ಮುಂಬೈನಲ್ಲಿ ಅಂತ ತಿಳಿಸಿದ್ದಾರೆ. ಕರ್ನಾಟಕ ಪೊಲೀಸ್​ ವೆಬ್​ಸೈಟ್​ನಲ್ಲಿ ಈ ಕುರಿತು ಫ್ಯಾಕ್ಟ್​ ಚೆಕ್​ ವರದಿ ಪ್ರಕಟಿಸಲಾಗಿದೆ.

ಈ ವಿಡಿಯೋ ಕಳೆದ ವರ್ಷ ಮಹಾರಾಷ್ಟ್ರದ ಮುಂಬೈ ಸಮೀಪದ ಮುಂಬ್ರಾದಲ್ಲಿ ನಡೆದ ಘಟನೆಯದ್ದು ಅಂತ ತಿಳಿದುಬಂದಿದೆ. ಇದು ಕರ್ನಾಟಕ ಪೊಲೀಸರಿಗಾಗಲೀ ಅಥವಾ ಕರ್ನಾಟಕದ ಪ್ರಸ್ತುತ ಲಾಕ್‌ಡೌನ್‌ಗಾಗಲೀ ಸಂಬಂಧಿಸಿಲ್ಲ. ಏಪ್ರಿಲ್ 3, 2020ರ ಈ ವಿಡಿಯೋ ಮಹಾರಾಷ್ಟ್ರದ ಮುಂಬೈನ ವಾಸೈನದ್ದು. ಈ ವಿಡಿಯೋಗೆ ಹಿನ್ನೆಲೆ ಧ್ವನಿ ನೀಡಿದ್ದ ಪದ್ಮ, ಪೋಲಿಸರನ್ನ ಅವಾಚ್ಯ ಪದಗಳಲ್ಲಿ ದೂಷಿಸಿದ್ದಾರೆ. ಹಾಗೇ ಪೊಲೀಸರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಹಲ್ಲೆಗೆ ಪ್ರೇರೇಪಿಸಿದ್ದಾರೆ ಎಂದು ಪೊಲೀಸ್​ ವೆಬ್​ಸೈಟ್​ ವರದಿಯಲ್ಲಿ ಹೇಳಲಾಗಿದೆ.

ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್​ ಕಮಲ್ ಪಂತ್ ಹೇಳಿದ್ದರು. ಈ ಹಿನ್ನೆಲೆ ದಕ್ಷಿಣ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಅದರ ಬೆನ್ನಲ್ಲೇ ಪದ್ಮ ಹರೀಶ್​ರನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಒದನ್ನೂ ಓದಿ: ಈ ವಿಡಿಯೋ ಕರ್ನಾಟಕದ್ದಲ್ಲ.. ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ದ ಕ್ರಮ ಕೈಗೊಳ್ತೀವಿ -ಕಮಲ್ ಪಂತ್​ 

The post ಸುಳ್ಳು ಸುದ್ದಿ ಹಬ್ಬಿಸಿದ ಕೇಸ್​: ಮಹಿಳೆಯನ್ನ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ appeared first on News First Kannada.

Source: newsfirstlive.com

Source link