ತಿರುಪತಿಯ ಆಸ್ಪೆತ್ರೆಯೊಂದರ ಆವರಣದಲ್ಲಿ ಕಳೆದ ವಾರ ಹೊಸ ಸೂಟ್‌ಕೇಸ್‌ವೊಂದು ಪತ್ತೆಯಾಗುತ್ತೆ. ಆ ಸೂಟ್‌ಕೇಸ್‌ ತೆರೆದಾಗ ಅದರಲ್ಲಿ ಇದ್ದಿದ್ದು ಶೇ.90 ರಷ್ಟು ಸುಟ್ಟು ಕರಕಲಾಗಿರುವ ಮೃತದೇಹ. ಆ ಕೇಸ್‌ ಬೆನ್ನು ಹತ್ತಿದ ಪೊಲೀಸರಿಗೆ ಮಹಾನ್‌ ಅಚ್ಚರಿ ಕಾದಿತ್ತು.

ಆಸ್ಪತ್ರೆ ಆವರಣದಲ್ಲೇ ಇತ್ತು ಸೂಟ್‌ಕೇಸ್‌
ತಿರುಪತಿಯಲ್ಲಿರುವ ಎಸ್‌ವಿಆರ್‌ಆರ್‌ ಜನರಲ್‌ ಸರ್ಕಾರಿ ಆಸ್ಪತ್ರೆ. ದೊಡ್ಡದಾದ ಆಸ್ಪತ್ರೆ, ಯಾವಾಗ ನೋಡಿದ್ರೂ ಜನ ಓಡಾಡ್ತಾ ಇರ್ತಾರೆ. ಆದ್ರೆ, ಈ ಆವರಣದಲ್ಲಿಯೇ ಜೂ.23 ರಂದು ದೊಡ್ಡ ಸೂಟ್‌ಕೇಸ್‌ವೊಂದು ಪತ್ತೆಯಾಗುತ್ತೆ. ಅದರ ಹತ್ತಿರ ಹೋದವರಿಗೆ ದುರ್ವಾಸನೆ ಬೀರುತ್ತೆ. ಅನುಮಾನ ಬಂದ ಜನ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ತಕ್ಷಣವೇ ಸ್ಥಳಕ್ಕೆ ಬಂದ ತಿರುಪತಿ ಪೊಲೀಸರು ಮೊದಲಿಗೆ ಸೂಟ್‌ಕೇಸ್‌ನಲ್ಲಿ ಯಾವುದೇ ಸ್ಫೋಟಕ ವಸ್ತು ಇಲ್ಲ ಅನ್ನೋದನ್ನ ಖಚಿತ ಪಡಿಸಿಕೊಳ್ಳುತ್ತಾರೆ. ಆ ನಂತರವೇ ಅದನ್ನ ತೆರೆಯುತ್ತಾರೆ.

ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಶವ
ಅನುಮಾನದಲ್ಲಿಯೇ ಸೂಟ್‌ಕೇಸ್‌ ಓಪನ್‌ ಮಾಡಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಸುಟ್ಟು ಕರಕಲಾಗಿರುವ ಶವ ಪತ್ತೆಯಾಗುತ್ತೆ. ಹತ್ತಿರ ನಿಂತುಕೊಳ್ಳಲಾಗದಷ್ಟು ಗಬ್ಬು ವಾಸನೆ ಬರುತ್ತೆ. ಶವವನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ದೇಹ ಅಷ್ಟೊಂದು ಸುಟ್ಟುಹಾಕಲಾಗಿತ್ತು. ಯಾರೋ ಕೊಲೆ ಮಾಡಿ ಸುಟ್ಟು ಆಮೇಲೆ ಸೂಟ್‌ಕೇಸ್‌ ತುಂಬಿ ಇಲ್ಲಿ ಬಿಸಾಡಿದ್ದಾರೆ ಅನ್ನೋದು ಪೊಲೀಸರಿಗೆ ಖಚಿತವಾಗುತ್ತೆ. ದೂರು ದಾಖಲಿಸಿಕೊಂಡು ಶವವನ್ನು ಆಸ್ಪತ್ರೆಗೆ ಸಾಗಿಸ್ತಾರೆ.

 

ಪ್ರಕರಣ ಭೇದಿಸುವುದೇ ಪೊಲೀಸರಿಗೆ ತಲೆನೋವಾಗುತ್ತೆ
ಈ ಪ್ರಕರಣ ಭೇದಿಸುವುದು ಅಷ್ಟು ಸುಲಭವಾಗಿರಲಿಲ್ಲ. ಯಾಕೆಂದ್ರೆ, ದೇಹವನ್ನು ಶೇಕಡಾ 90 ರಷ್ಟು ಸುಟ್ಟಿರುವುದರಿಂದ ಮುಖ ಪರಿಚಯವೇ ಗೊತ್ತು ಮಾಡಲು ಸಾಧ್ಯ ಇರಲಿಲ್ಲ. ಆದ್ರೆ, ಪೊಲೀಸರು ಬಿಡಬೇಕಲ್ಲ, ಕೇಸ್‌ನ ಹಿಂದೆ ಬೀಳುತ್ತಾರೆ. ಮೊದಲು ಎರಡ್ಮೂರು ದಿನ ಪ್ರಾಥಮಿಕ ತನಿಖೆ ನಡೆಯುತ್ತೆ. ಸೂಟ್‌ಕೇಸ್‌ ಪತ್ತೆಯಾದ ಸ್ಥಳದ ಎಲ್ಲಾ ಸಿಸಿಟಿವಿ ಪರಿಶೀಲಿಸುತ್ತಾರೆ. ಹಾಗೇ ಸೂಟ್‌ಕೇಸ್‌ ಯಾವ ಸ್ಟಾಲ್‌ನಿಂದ ಖರೀದಿಯಾಗಿದೆ ಅನ್ನೋದನ್ನು ಪರಿಶೀಲಿಸುತ್ತಾರೆ. ಅದು, ತಿರುಪತಿಯ ರಿಲಯನ್ಸ್‌ ಮಾರ್ಟ್‌ನಿಂದ ಖರೀದಿಸಲಾಗಿದೆ ಅನ್ನೋದು ತಿಳಿಯುತ್ತೆ. ಯಾರು ಖರೀದಿಸಿದ್ದು ಅನ್ನೋದು ಪತ್ತೆಯಾಗುತ್ತೆ.

ಕೊಲೆಗಾರ ಶ್ರೀಕಾಂತ ರೆಡ್ಡಿ ಮನೆಗೆ ಪೊಲೀಸರ ದಾಳಿ
ಸಿಸಿಟಿವಿ ಜಾಲಾಡಿದಾಗ ಪ್ರಕರಣಕ್ಕೆ ಸಿಕ್ತು ತಿರುವು

ಸೂಟ್‌ಕೇಸ್‌ ಖರೀದಿಯ ಸುಳಿವು ಹಿಡಿದು ಪೊಲೀಸರು ಎಂಜಿನಿಯರ್‌ ಶ್ರೀಕಾಂತ್‌ ರೆಡ್ಡಿ ಅನ್ನುವವನ ಮನೆಗೆ ಬರುತ್ತಾರೆ. ಪೊಲೀಸರು ವಿಚಾರಣೆ ನಡೆಸಿದಾಗ ತನ್ನ ಪತ್ನಿ ಕೋವಿಡ್‌ನಿಂದ ತಿರುಕೊಂಡಿದ್ದಾಳೆ ಅಂತ ಕಥೆ ಹೊಡೆಯುತ್ತಾನೆ. ಆದ್ರೆ, ಪೊಲೀಸರು ಅಂತಹ ಅದೆಷ್ಟು ಕಥೆ ಹೊಡೆಯುವವರನ್ನು ನೋಡಿಲ್ಲ ಹೇಳಿ. ಮನೆ ಮುಂದೆ ಅಳವಡಿಸಿರುವ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸುತ್ತಾರೆ. ಆಗಲೇ ಗೊತ್ತಾಗಿದ್ದು ಅದೇ ಸೂಟ್‌ಕೇಸ್‌ ಈತನೇ ಮನೆಗೆ ತಂದಿದ್ದಾನೆ ಅನ್ನೋದು.

ಒಂದು ಕೈಯಲ್ಲಿ ಮಗು, ಮತ್ತೊಂದು ಕೈಯಲ್ಲಿ ಸೂಟ್‌ಕೇಸ್‌
ಸೂಟ್‌ಕೇಸ್‌ ಎಳೆಯಲು ಹರಸಾಹಸ ಪಟ್ಟ ಶ್ರೀಕಾಂತ ರೆಡ್ಡಿ

ಮೊದಲಿಗೆ ಕಾರೊಂದು ಅಪಾರ್ಟ್‌ಮೆಂಟ್‌ನ ಮುಂದೆ ಬಂದು ನಿಲ್ಲುತ್ತದೆ. ಕಾರು ಚಾಲಕ ಹಿಂಬದಿ ಡಿಕ್ಕಿಯಲ್ಲಿರುವ ಸೂಟ್‌ಕೇಸ್‌ ಅನ್ನು ಕೆಳಗೆ ಇಳಿಸುತ್ತಾನೆ. ಶ್ರೀಕಾಂತ ರೆಡ್ಡಿ ಮಗುವನ್ನು ಒಂದು ಕೈಯಲ್ಲಿ ಎತ್ತಿಕೊಂಡು ಕಾರಿಂದ ಇಳಿಯುತ್ತಾನೆ. ಆನಂತರ ಸೂಟ್‌ಕೇಸ್‌ ಹಿಡಿದುಕೊಂಡು ಕಾರ್‌ ಚಾಲಕನಿಗೆ ಬಾಡಿಗೆ ಹಣ ಕೊಡುತ್ತಾನೆ. ಹಾಗೇ ಕಾರು ವಾಪಸಾಗುತ್ತೆ. ಈತ ಒಂದು ಕೈಯಲ್ಲಿ ಮಗು ಮತ್ತೊಂದು ಕೈಯಲ್ಲಿ ಸೂಟ್‌ಕೇಸ್‌ ಹಿಡಿದು ಲಿಫ್ಟ್‌ ಹತ್ತಿರ ಬರುತ್ತಾನೆ. ಹಾಗೇ ಲಿಫ್ಟ್‌ನಲ್ಲಿ ಸಾಗುತ್ತಾನೆ. ಮತ್ತೊಂದು ವಿಡಿಯೋದಲ್ಲಿ ಒಂದು ಕೈಯಲ್ಲಿ ಮಗು ಮತ್ತೊಂದು ಕೈಯಲ್ಲಿ ಸೂಟ್‌ಕೇಸ್‌ ಹಿಡಿದು ಲಿಫ್ಟ್‌ನಿಂದ ಹೊರಬರುತ್ತಾನೆ. ಭಾರವಾದ ಸೂಟ್‌ಕೇಸ್‌ ಎಳೆದಾಡಲು ಕಷ್ಟಪಡುತ್ತಾನೆ. ಹಾಗೇ ಎಳೆದುಕೊಳ್ಳುತ್ತಾ ಅಪಾರ್ಟ್‌ಮೆಂಟ್‌ನ ಗೇಟ್‌ ದಾಟುತ್ತಾನೆ. ಇದಿಷ್ಟು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿಚಾರಣೆ ವೇಳೆ ಬಾಯಿ ಬಿಟ್ಟ ಶ್ರೀಕಾಂತ ರೆಡ್ಡಿ
ಕೊಲೆಯಾದವಳು 27 ವರ್ಷದ ಟೆಕ್ಕಿ ಭುವನೇಶ್ವರಿ

ಸಿಸಿಟಿವಿ ಪರಿಶೀಲನೆ ಮಾಡಿದಾಗ ಶ್ರೀಕಾಂತ ರೆಡ್ಡಿನೇ ಕೊಲೆಗಾರ ಅನ್ನೋದು ಪೊಲೀಸರಿಗೆ ಪಕ್ಕಾ ಆಗಿ ಬಿಡುತ್ತೆ. ಮೊದಲು ತಾನಲ್ಲ ಅಂತ ಹೇಳುತ್ತಿದ್ದವನು ಆಮೇಲೆ ಒಪ್ಪಿಕೊಳ್ಳುತ್ತಾನೆ. ಕೊಲೆಯಾದವಳು ಈತನ ಪತ್ನಿಯಾಗಿರುತ್ತಾಳೆ. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ಟೆಕ್ಕಿ ಭುವನೇಶ್ವರಿ ಕೊಲೆಯಾದವಳಾಗಿದ್ದಾಳೆ. ಅಷ್ಟಕ್ಕೂ ಈ ಶ್ರೀಕಾಂತ ರೆಡ್ಡಿ ಯಾರು, ಭುವನೇಶ್ವರಿ ಯಾರು, ಕೊಲೆ ನಡೆದಿದ್ದು ಯಾತಕ್ಕೆ ಅಂತ ಕೇಳಿದ್ರೆ ಅಚ್ಚರಿಗೊಳ್ಳುತ್ತೀರಿ.

ಶ್ರೀಕಾಂತ್‌ ರೆಡ್ಡಿ, ಭುವನೇಶ್ವರಿ ಯಾರು?
ಚಿತ್ತೂರು ಜಿಲ್ಲೆ ರಾಮಸಮುದ್ರಂ ಮೂಲದ ಭುವನೇಶ್ವರಿ ಮತ್ತು ಕಡಪ ಜಿಲ್ಲೆಯ ಬದ್ವೆಲ್ ನಿವಾಸಿ ಶ್ರೀಕಾಂತ ರೆಡ್ಡಿ 2019ರಲ್ಲಿ ವಿವಾಹವಾಗಿರುತ್ತಾರೆ. ಇಬ್ಬರಿಗೂ 18 ತಿಂಗಳ ಮಗು ಇರುತ್ತೆ. ಭುವನೇಶ್ವರಿ ಎಂಎನ್‌ಸಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡ್ತಾ ಇರ್ತಾರೆ. ಕೊರೊನಾ ಹಿನ್ನೆಲೆಯಲ್ಲಿ ಇತ್ತೀಚೆಗೆ ಮನೆಯಲ್ಲಿಯೇ ವರ್ಕ್‌ ಫ್ರಂ ಹೋಂ ಮಾಡ್ತಾ ಇರ್ತಾಳೆ. ಎಂಜಿನಿಯರಿಂಗ್‌ ಮಾಡಿರುವ ಶ್ರೀಂಕಾತ ರೆಡ್ಡಿ ಭ್ರಷ್ಟಾಚಾರ ವಿರುದ್ಧ ಹೋರಾಡುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಾ ಇರ್ತಾನೆ. ಆದ್ರೆ, ಕೊರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು ನಿರುದ್ಯೋಗಿ ಆಗಿ ಮನೆಯಲ್ಲಿಯೇ ಇರ್ತಾನೆ. ಇತ್ತೀಚೆಗೆ ಈ ಜೋಡಿ ತಿರುಪತಿಗೆ ಬಂದು ನೆಲೆಸಿರುತ್ತಾರೆ.

ಪತ್ನಿಯ ದುಡಿಮೆಯ ಮೇಲೆ ಬೀಳುತ್ತೆ ಕಣ್ಣು
ಪತ್ನಿ ಹಣ ಕೊಡದಾಗ ನಡೆಯುತ್ತೆ ಕೊಲೆ

ನಿರುದ್ಯೋಗಿ ಆಗಿರುವ ಶ್ರೀಕಾಂತ್‌ ರೆಡ್ಡಿಗೆ ಕೈಯಲ್ಲಿ ಕಾಸಿರಲ್ಲ. ತನ್ನ ಖರ್ಚಿಗೂ ಹೆಂಡತಿಯನ್ನೇ ಅವಲಂಬಿಸಿರುತ್ತಾನೆ. ಆದ್ರೆ, ಆಗಾಗ ಪತ್ನಿ ಮತ್ತು ಈತನ ನಡುವೆ ಜಗಳ ನಡೆಯುತ್ತೆ. ಜೂ.22 ರಂದು ಕೊಡ ಇಬ್ಬರ ನಡುವೆ ಹಣಕಾಸು ವಿಚಾರಕ್ಕೆ ಜಗಳ ನಡೆದಿದೆ. ಪತ್ನಿ ಹಣ ನೀಡಿಲ್ಲ ಅಂತ ಪತ್ನಿಯನ್ನೇ ಸಾಯಿಸಿ ಬಿಟ್ಟಿದ್ದಾನೆ. ಆನಂತರ ಮೃತದೇಹ ಸುಟ್ಟು ಸೂಟ್‌ಕೇಸ್‌ನಲ್ಲಿ ತುಂಬಿ ಆಸ್ಪತ್ರೆಯ ಸಮೀಪ ಎಸೆದು ಬಿಟ್ಟಿದ್ದ.

‘ಡೆಲ್ಟಾ ಪ್ಲಸ್‌ಗೆ ಪತ್ನಿ ಭುವನೇಶ್ವರಿ ಬಲಿಯಾದ್ಲು’
ಪತ್ನಿಯನ್ನ ಸಾಯಿಸಿ ಕತೆ ಕಟ್ಟಿದ ಖತರ್ನಾಕ್‌ ಗಂಡ

ಸಂಬಂಧಿಕರು ಭುವನೇಶ್ವರಿ ಬಗ್ಗೆ ವಿಚಾರಿಸುವ ಮುನ್ನವೇ ಈತ ಒಂದು ಸುದ್ದಿ ಹಬ್ಬಿಸಿ ಬಿಡ್ತಾನೆ. ಅದೇನಂದ್ರೆ ಭುವನೇಶ್ವರಿಗೆ ಕೊರೊನಾ ರೂಪಾಂತರಿ ಡೆಲ್ಟಾ ಪ್ಲಸ್‌ ವೈರಸ್‌ ಕಾಣಿಸಿಕೊಂಡಿತ್ತು. ಹೀಗಾಗಿ ರುಯಿಯಾ ಆಸ್ಪತ್ರೆ ಸೇರಿಸಿದ್ದೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಮೃತದೇಹವನ್ನು ಆಸ್ಪತ್ರೆಯವರೆ ಅಂತ್ಯಕ್ರಿಯೆ ಮಾಡಿದ್ದಾರೆ ಅಂತ ಹೇಳಿಬಿಡ್ತಾನೆ. ಎಲ್ಲರಿಗೂ ಹೇಳಿದ್ದು ಇದೇ ಕಥೆ. ಸಂಬಂಧಿಕರು ರುಯಿಯಾ ಆಸ್ಪತ್ರೆ ಸಂಪರ್ಕಿಸಿದ್ರೂ ಭುವನೇಶ್ವರಿ ಆಸ್ಪತ್ರೆಗೆ ದಾಖಾಲಾದ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಏನು ಮಾಡೋದು ಅಂತ ಯೋಚಿಸುತ್ತಿರುವ ಸಂದರ್ಭದಲ್ಲೇ ಪೊಲೀಸರು ಪ್ರಕರಣ ಭೇದಿಸಿಬಿಟ್ಟಿದ್ದಾರೆ.

The post ಸೂಟ್​ಕೇಸ್​ನಲ್ಲಿ ಮಹಿಳೆ ಶವ ಕೇಸ್​ನ ರಹಸ್ಯ ಬಯಲು; ತನಿಖೆ ವೇಳೆ ಪೊಲೀಸ್ರಿಗೆ ಸಿಕ್ತು ಟ್ವಿಸ್ಟ್​ ಮೇಲೆ ಟ್ವಿಸ್ಟ್​ appeared first on News First Kannada.

Source: newsfirstlive.com

Source link