ಸೆಂಟ್ರಲ್ ವಿಸ್ಟಾ ಯೋಜನೆಗೆ ಇಲ್ಲಿಯವರೆಗೆ ₹1,200 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ: ಸರ್ಕಾರ | Over Rs 1289 crore have been spent for the multi phase Central Vista Redevelopment project so far Govt informed Parliament


ಸೆಂಟ್ರಲ್ ವಿಸ್ಟಾ ಯೋಜನೆಗೆ ಇಲ್ಲಿಯವರೆಗೆ ₹1,200 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಲಾಗಿದೆ: ಸರ್ಕಾರ

ಸೆಂಟ್ರಲ್ ವಿಸ್ಟಾ ಕಾಮಗಾರಿ

ದೆಹಲಿ: ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಗಾಗಿ ( Central Vista Redevelopment project) ಇಲ್ಲಿಯವರೆಗೆ 1,289 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಕೇಂದ್ರ ವಸತಿ ಸಚಿವಾಲಯ ಗುರುವಾರ ಸಂಸತ್​​ಗೆ ತಿಳಿಸಿದೆ. ಹೊಸ ಕಟ್ಟಡದ ಪ್ರಗತಿಯು ಶೇ 35 ರಷ್ಟಿದೆ. ಅಕ್ಟೋಬರ್ 2022 ರೊಳಗೆ ಅದನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ನಿಗದಿಪಡಿಸಿದ 971 ಕೋಟಿ ರೂ.ಗಳಲ್ಲಿ 340 ಕೋಟಿ ರೂ. ಖರ್ಚಾಗಿದೆ ಎಂದು ಸರ್ಕಾರ ಹೇಳಿದೆ. ಸೆಂಟ್ರಲ್ ವಿಸ್ಟಾ ಅವೆನ್ಯೂ (Central Vista Avenue) ಪುನರಾಭಿವೃದ್ಧಿಯನ್ನು ಈ ತಿಂಗಳು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಮತ್ತು ಅದರ ಪ್ರಸ್ತುತ ಪ್ರಗತಿಯು ಶೇ 60 ಆಗಿದೆ. 608 ಕೋಟಿ ರೂ.ಗಳ ಒಟ್ಟು ಬಜೆಟ್‌ನಲ್ಲಿ 190.76 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಕೌಶಲ್ ಕಿಶೋರ್ (Kaushal Kishore ) ಲೋಕಸಭೆಯಲ್ಲಿ ಗುರುವಾರ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ  (Manish Tiwari) ಅವರ ಪ್ರಶ್ನೆಗೆ ಉತ್ತರಿಸಿದರು. “ಸಂಸತ್ ಭವನದಂತಹ ಕಟ್ಟಡಕ್ಕೆ ಮುಖ್ಯವಾದ ಆಲೋಚನೆಗಳು ಮತ್ತು ನಾವೀನ್ಯತೆಗಳನ್ನು ಅನ್ವೇಷಿಸುವ ಅವಕಾಶಗಳನ್ನು ಮಿತಿಗೊಳಿಸುತ್ತದೆ ಎಂಬ ವಾಸ್ತವದ ಹೊರತಾಗಿಯೂ ಬಿಡ್ಡಿಂಗ್‌ನ ಗುಣಮಟ್ಟ ಮತ್ತು ವೆಚ್ಚ ಆಧಾರಿತ ಆಯ್ಕೆ ವ್ಯವಸ್ಥೆಯನ್ನು ಬಳಸಲಾಗಿದೆ” ಎಂಬುದು ಸತ್ಯವೇ ಎಂದು ತಿವಾರಿ ತಿಳಿದುಕೊಳ್ಳಲು ಪ್ರಯತ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಿಶೋರ್ “ಹೊಸ ಸಂಸತ್ತಿನ ಕಟ್ಟಡ ಅಥವಾ ಸೆಂಟ್ರಲ್ ವಿಸ್ಟಾದಲ್ಲಿನ ಇತರ ಕಟ್ಟಡಗಳ ನಿರ್ಮಾಣಕ್ಕಾಗಿ ಗುಣಮಟ್ಟ ಮತ್ತು ವೆಚ್ಚ ಆಧಾರಿತ ಬಿಡ್ಡಿಂಗ್ ವಿಧಾನವನ್ನು ಅಳವಡಿಸಿಕೊಂಡಿಲ್ಲ. ಸೆಂಟ್ರಲ್ ವಿಸ್ಟಾದ ಅಭಿವೃದ್ಧಿ/ಪುನರಾಭಿವೃದ್ಧಿಗಾಗಿ ಸಮಗ್ರ ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಯೋಜನೆಗಾಗಿ ಸಲಹೆಗಾರರನ್ನು ತೊಡಗಿಸಿಕೊಳ್ಳಲು ಮಾತ್ರ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಒಟ್ಟು ರೂ 20,000 ಕೋಟಿ ವೆಚ್ಚ ಅಂದಾಜಿಸಲಾಗಿದೆ, ಪ್ರಸ್ತುತ ಕೇವಲ ನಾಲ್ಕು ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಹೊಸ ಸಂಸತ್ ಕಟ್ಟಡ, ಸೆಂಟ್ರಲ್ ವಿಸ್ಟಾ ಅವೆನ್ಯೂದ ಪುನರಾಭಿವೃದ್ಧಿ, ಮೂರು ಸಾಮಾನ್ಯ ಕೇಂದ್ರ ಸಚಿವಾಲಯದ ಕಟ್ಟಡಗಳ ನಿರ್ಮಾಣ ಮತ್ತು ಉಪಾಧ್ಯಕ್ಷರ ನಿವಾಸದ ನಿರ್ಮಾಣ.ಸಾಂಕ್ರಾಮಿಕ ರೋಗದ ನಡುವೆಯೂ ಸೆಂಟ್ರಲ್ ವಿಸ್ಟಾ ರಿಡೆವಲಪ್‌ಮೆಂಟ್ ಮಾಸ್ಟರ್ ಪ್ಲಾನ್‌ನ ಅಡಿಯಲ್ಲಿ ಕೆಲಸವನ್ನು ಪುನರಾರಂಭಿಸಲಾಗಿದೆಯೇ?. MPLADS ಯೋಜನೆಯನ್ನು ವಿಶೇಷವಾಗಿ ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ನಾಗರಿಕರ ಸುಧಾರಣೆಗೆ ಬಳಸಬಹುದಾದ ಹಣವನ್ನು ಅಮಾನತುಗೊಳಿಸಲಾಗಿದೆ ಮತ್ತು ಹಾಗಿದ್ದಲ್ಲಿ, ಅದರ ವಿವರಗಳು ಮತ್ತು ಅದಕ್ಕೆ ಸರ್ಕಾರದ ಪ್ರತಿಕ್ರಿಯೆ ಏನು? ಎಂದು ಎಂದು ತಿವಾರಿ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಸೆಂಟ್ರಲ್ ವಿಸ್ಟಾದಲ್ಲಿ ನಡೆಯುತ್ತಿರುವ ಕಾಮಗಾರಿಗಳು 10,000 ಕ್ಕೂ ಹೆಚ್ಚು ನುರಿತ, ಅರೆ ಕೌಶಲ್ಯ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ನೇರ ಜೀವನೋಪಾಯದ ಅವಕಾಶಗಳನ್ನು ಒದಗಿಸಿವೆ. 24.12 ಲಕ್ಷಕ್ಕೂ ಹೆಚ್ಚು ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಿವೆ. ಇದರ ಜೊತೆಗೆ, ಸಿಮೆಂಟ್, ಉಕ್ಕು ಮತ್ತು ಇತರ ಕಟ್ಟಡ ಸಾಮಗ್ರಿಗಳ ಉತ್ಪಾದನೆ ಮತ್ತು ಸಾಗಣೆಯಲ್ಲಿ ಗಣನೀಯ ಉದ್ಯೋಗವನ್ನು ಒದಗಿಸಲಾಗಿದೆ.

ಸೆಂಟ್ರಲ್ ವಿಸ್ಟಾದ ಅಭಿವೃದ್ಧಿ/ಮರು-ಅಭಿವೃದ್ಧಿಯ ಈ ಕಾರ್ಯಗಳು ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತವೆ ಮತ್ತು ಆತ್ಮನಿರ್ಭರ ಭಾರತಕ್ಕಾಗಿ ನಮ್ಮ ಸಂಕಲ್ಪವನ್ನು ಸಾಕಾರಗೊಳಿಸಲು ಸಹಾಯ ಮಾಡುತ್ತದೆ. ಸೆಂಟ್ರಲ್ ವಿಸ್ಟಾ ಅಭಿವೃದ್ಧಿ/ಮರು-ಅಭಿವೃದ್ಧಿ ಮತ್ತು ಎಂಪಿಎಲ್ಎಡಿ ಯೋಜನೆಯ ಕಾಮಗಾರಿಗಳ ನಡುವೆ ಯಾವುದೇ ಸಂಬಂಧವಿಲ್ಲ. ಪ್ರತ್ಯೇಕವಾಗಿ, ಕೇಂದ್ರ ಸಚಿವ ಸಂಪುಟವು ನವೆಂಬರ್ 10, 2021 ರಂದು ನಡೆದ ತನ್ನ ಸಭೆಯಲ್ಲಿ, 2021-22 ರ ಹಣಕಾಸು ವರ್ಷದ ಉಳಿದ ಭಾಗಕ್ಕೆ ಎಂಪಿಎಲ್ಎಡಿ ಯೋಜನೆಯನ್ನು (MPLADS) ಮರುಸ್ಥಾಪಿಸಿದೆ ಮತ್ತು ಅದರ ಮುಂದುವರಿಕೆ 2022-23 ಆರ್ಥಿಕ ವರ್ಷದಿಂದ 2025- 26 ವೆಚ್ಚದೊಂದಿಗೆ 17,417 ಕೋಟಿ ಆಗಿದೆ ಎಂದಿದ್ದಾರೆ.

ಉತ್ತರದ ಪ್ರಕಾರ, ಮೂರು ಸಾಮಾನ್ಯ ಸೆಕ್ರೆಟರಿಯೇಟ್ ಕಟ್ಟಡಗಳ ನಿರ್ಮಾಣ ಗುರಿಯು ನವೆಂಬರ್ 2023 ಆಗಿದೆ ಮತ್ತು ಸಂಪನ್ಮೂಲಗಳ ಕ್ರೋಢೀಕರಣ ಮತ್ತು ಸೈಟ್ ತಯಾರಿಕೆಯು ಪ್ರಸ್ತುತ ಪ್ರಗತಿಯಲ್ಲಿದೆ.ಸರ್ಕಾರವು ಕಳೆದ ತಿಂಗಳು ತನ್ನ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಯ ವೇಗವನ್ನು ಮೇಲ್ವಿಚಾರಣೆ ಮಾಡಲು ಮತ್ತು ವೇಗಗೊಳಿಸಲು ಉನ್ನತ ಮಟ್ಟದ ‘ಸೆಂಟ್ರಲ್ ವಿಸ್ಟಾ ಮೇಲ್ವಿಚಾರಣಾ ಸಮಿತಿ’ಯನ್ನು ರಚಿಸಿತು.

ಸೆಂಟ್ರಲ್ ವಿಸ್ಟಾದ ವಿವಿಧ ಯೋಜನೆಗಳ ಕಾರ್ಯಗತಗೊಳಿಸುವ ವೇಗವನ್ನು ಸಮಿತಿಯು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ, ಅವುಗಳ ಸಕಾಲಿಕ ಪೂರ್ಣಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿತ ಮೈಲಿಗಲ್ಲುಗಳಿಗೆ ಸಂಬಂಧಿಸಿದಂತೆ, ಆದೇಶವನ್ನು ಗಮನಿಸಲಾಗಿದೆ. ಇದು ನಿಯಮಿತವಾಗಿ ಭೇಟಿಯಾಗುತ್ತದೆ ಮತ್ತು ಸ್ವತಂತ್ರ ಪರಿಶೀಲನೆಗಾಗಿ ಸೈಟ್ ಪರಿಶೀಲನೆಗಳನ್ನು ಕೈಗೊಳ್ಳುತ್ತದೆ. ತನ್ನ ವರದಿಗಳು ಮತ್ತು ಶಿಫಾರಸುಗಳನ್ನು ನಿಯಮಿತವಾಗಿ ಸಚಿವಾಲಯಕ್ಕೆ ಸಲ್ಲಿಸುವಂತೆಯೂ ಅದಕ್ಕೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *