ಜಗತ್ತಿನಾದ್ಯಂತ ಒಂದು ವೈರಸ್ ಹರಡುತ್ತಿದೆ. ಅಂತಿಂಥ ವೈರಸ್ ಅಲ್ಲ ಬದಲಾಗಿ ಹೆಮ್ಮಾರಿ ವೈರಸ್. ಅದು ಕೋವಿಡ್​ 19 ಅಂತಾ ಗೊತ್ತಾಗಿದ್ದು 2019 ರಲ್ಲಿ. ಆದ್ರೆ ಕೊರೊನಾ ವೈರಸ್ ಮೊದಲು ಪತ್ತೆ ಆಗಿದ್ದು ಎಲ್ಲಿ, ಅದು ಮೊದಲಿಗೆ ಎಲ್ಲಿಂದ ಹರಡಿತ್ತು ಅನ್ನೋದಕ್ಕೆ ಇಂದಿಗೂ ಕೂಡ ಸ್ಪಷ್ಟವಾದ ಚಿತ್ರಣ ಸಿಕ್ಕಿಲ್ಲ. ಚೀನಾದ ವುಹಾನ್​ನಿಂದಲೇ ವೈರಸ್​ ಹರಡಿತ್ತು ಅನ್ನೋ ಬಲವಾದ ನಂಬಿಕೆ ಇದೆ. ಆದ್ರೆ ಅದನ್ನ ಚೀನಾ ಮಾತ್ರ ಇಂದಿಗೂ ಸುತಾರಾಂ ಒಪ್ಪಿಕೊಳ್ಳಲು ಸಿದ್ದವಿಲ್ಲ.

ಅಂದು ಪತ್ತೆ ಆಗಿದ್ದ ಕೊರೊನಾ ವೈರಸ್​ ಇಂದಿಗೂ ರೂಪಾಂತರಗೊಂಡು ಜನರ ಬಲಿ ಪಡೆಯುತ್ತಲೇ ಇದೆ. ಅದು ಇನ್ನೂ ಮುಂದುವರೆಯುತ್ತೆ ಅಂತಾ ತಜ್ಙರು ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಇದೆಲ್ಲವೂ ಒಂದು ಕಡೆ ಆದ್ರೆ ಮತ್ತೊಂದು ಕಡೆ ವೈರಸ್ ಅನ್ನ ಮಟ್ಟ ಹಾಕಲು ಶತ ಪ್ರಯತ್ನಗಳು ಇಂದಿಗೂ ಮುಂದುವರೆದಿದೆ. ಆದ್ರೆ ಇಂದಿಗೂ ಕೂಡ ವೈರಸ್ ಯಾರ ದೇಹಕ್ಕೆ ಹೊಕ್ಕಿದೆ ಅನ್ನೋದನ್ನ ಪತ್ತೆ ಹಚ್ಚೋದೆ ದೊಡ್ಡ ತಲೆನೋವಾಗಿ ಬಿಟ್ಟಿದೆ.

ನಿಜಕ್ಕೂ ಹೆಮ್ಮೆಪಡಬೇಕಾಗಿರೋ ವಿಚಾರ ಏನ್ ಗೊತ್ತಾ? ಅದು ವಿಜ್ಞಾನಿಗಳ ಮೇಲಿದ್ದ ವಿಶ್ವಾಸ ದುಪ್ಪಟ್ಟಾಗಿದ್ದು. ಯಾಕಂದ್ರೆ ವೈರಸ್ ಪತ್ತೆ ಆಗೋದಕ್ಕಿಂತ ಮುನ್ನ ವಿಜ್ಞಾನಿಗಳು ಸಾಕಷ್ಟು ವಿಚಾರಗಳ ಕುರಿತು ಅಧ್ಯಯನ ನಡೆಸಿದ್ದರು. ಆದ್ರೆ ವೈರಸ್ ಬಂದ ಮೇಲೆ ಒಂದೊಂದು ದೇಶದ ಒಬ್ಬೊಬ್ಬ ವಿಜ್ಞಾನಿಗಳ ಸಾಮರ್ಥ್ಯವೆಷ್ಟು ಅನ್ನೋದನ್ನ ಇವತ್ತಿಗೂ ತೋರಿಸಿಕೊಡುತ್ತಿದ್ದಾರೆ. ಅದು ನಿತ್ಯ ನಿರಂತರ ಅನ್ನೋ ಹಾಗೆ ಅನ್ವೇಷಣೆಗಳು, ಅಧ್ಯಯನಗಳು ನಡೆಯುತ್ತಿದೆ.

ಕೊರೊನಾ ವೈರಸ್ ಪತ್ತೆ ಆದ ಮೇಲೆ ವೈಜ್ಞಾನಿಕ ಲೋಕವನ್ನ ಮಂಕಾಗಿಸಿದ್ದು ನಿಜವೇ. ಆದ್ರೆ ವಿಜ್ಞಾನಿಗಳು ಎಂದಿಗೂ ಧೃತಿಗೆಡದೆ ತಮ್ಮ ಕೆಲಸವನ್ನ ಮುಂದುವರೆಸಿದ್ದರು. ಅದರ ಮೊದಲ ಭಾಗವಾಗಿ ಕೊರೊನಾ ವೈರಸ್ ಯಾರ ದೇಹದಲ್ಲಿದೆ ಅನ್ನೋದನ್ನ ಪತ್ತೆ  ಹಚ್ಚೋ ಸಲುವಾಗಿ ಶ್ವಾನಗಳನ್ನ ಬಳಕೆ ಮಾಡಿಕೊಳ್ಳಲಾಗಿತ್ತು. ಸೋಂಕಿತರೊಬ್ಬರು ಧರಿಸಿದ್ದ ಬಟ್ಟೆಗಳ ಮೇಲಿನ ವಾಸನೆಯನ್ನ, ಬೆವರಿನ ವಾಸನೆ ಮೂಲಕ ಪತ್ತೆ ಹಚ್ಚೋದು ಹೇಗೆ ಅಂತಾ ಶ್ವಾನಗಳಿಗೆ ತರಬೇತಿಯನ್ನ ಕೊಡಲಾಗಿತ್ತು. ಅದು ಬಹುತೇಕ ಸಕ್ಸಸ್ ಕೂಡ ಕಂಡಿತ್ತು. ಈಗ ವಿಜ್ಞಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಕೀಟಗಳ ಮೂಲಕ ಕೊರೊನಾ ಪಾಸಿಟಿವ್ ಅಥವಾ ನೆಗೆಟಿವ್ ಅನ್ನೋದನ್ನ ಪತ್ತೆಹಚ್ಚೋಕೆ ಮುಂದಾಗಿದ್ದಾರೆ.

ಜೇನು ನೊಣಗಳು ಇನ್ಮುಂದೆ ಕೊರೊನಾ ಪತ್ತೆ ಮಾಡುತ್ತೆ
ಹೌದು.  ಇದೊಂದು ರೀತಿಯಲ್ಲಿ ಎಲ್ಲರೂ ಅಚ್ಚರಿ ಪಡುವಂತಹ ವಿಚಾರವೇ. ಜೇನು ನೊಣಗಳು ಕೂಡ ಕೊರೊನಾ ವೈರಸ್ ಪತ್ತೆ ಹಚ್ಚಬಲ್ಲವು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ ಡಚ್ ಸಂಶೋಧಕರು.​ ನೆದರ್​ಲ್ಯಾಂಡ್​​​ನ ವಾಜೆನಿಂಗನ್​ ವಿಶ್ವವಿದ್ಯಾಲಯದ ಸಂಶೋಧಕರು  ಕೊರೊನಾ ವೈರಸ್ ಪತ್ತೆಹಚ್ಚಲು ವಿಶಿಷ್ಟ ದಾರಿಯೊಂದನ್ನ ಹುಡುಕಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದು ಜೇನುನೊಣಗಳನ್ನ. ಇದೊಂದು ರೀತಿಯಲ್ಲಿ ವೈಜ್ಞಾನಿಕವಾಗಿ ನಡೆದ ಅಧ್ಯಯನ ಆದ್ರೂ ಪ್ರಕೃತಿ ಸಹಜ ಕ್ರಮವಾಗಿದೆ ಅಂತಾ ಹೇಳಲಾಗ್ತಾಯಿದೆ.

ಹೇಗೆ ನಡೆದಿತ್ತು ಇದರ ಅಧ್ಯಯನ?
ಮುಖ್ಯವಾಗಿ ಜೇನು ನೊಣಗಳು ಸೋಂಕನ್ನ ಪತ್ತೆ ಹಚ್ಚುತ್ತಾ ಇಲ್ಲವಾ ಅನ್ನೋ ಗೊಂದಲ ಸಂಶೋಧಕರಲ್ಲಿತ್ತು. ಹಾಗಾಗಿ ಶ್ವಾನಗಳಿಗೆ ತರಬೇತಿ ನೀಡಿದಂತೆ ಜೇನುನೊಣಗಳಿಗೂ ತರಬೇತಿಯನ್ನ ನೀಡಲಾಗಿತ್ತು. ಅದಕ್ಕಾಗಿ ಸುಮಾರು ನಾಲ್ಕೈದು ತಿಂಗಳ ಸಮಯವನ್ನ ಕೂಡ ತೆಗೆದುಕೊಳ್ಳಲಾಗಿತ್ತು. ಇನ್ನು ಈ ಸಂಶೋಧನೆಯಲ್ಲಿ ಭಾಗವಹಿಸಿದ ವೈರಾಲಜಿ ಪ್ರಾಧ್ಯಾಪಕ ವಿಮ್ ವ್ಯಾನ್ ಡೆರ್ ಪೊಯೆಲ್ ರವರು ಹೇಳೋ ಪ್ರಕಾರ ಮೊದಲಿಗೆ ಜೇನುನೊಣ ಸಾಕಾಣಿಕೆದಾರರ ಬಳಿ ತೆರಳಿ ಸುಮಾರು 150 ಜೇನುನೊಣಗಳನ್ನ ತರಲಾಗಿತ್ತು. ಅವನ್ನ ಸಿರಂಜಾಮುವಿನಲ್ಲಿ ಇಡಲಾಗಿತ್ತು.

ಸಾಮಾನ್ಯವಾಗಿ ಜೇನುನೊಣಗಳು ವಾಸನೆಯಿಂದಲೇ ದುಂಬಿಗಳ ಬಳಿ ತೆರಳಿ ಅಲ್ಲಿ ರಸವನ್ನ ತನ್ನ ನಾಲಿಗೆಯಿಂದ ಹೀರಿಕೊಂಡು ನಂತರ ಗೂಡನ್ನ ಕಟ್ಟಿ ಅಲ್ಲಿ ಸಂಗ್ರಹಿಸಿಡುತ್ತೆ. ಅದೇ ಮಾದರಿಯಲ್ಲಿ ಮೊದಲಿಗೆ ಸಿರಂಜಾಮಿನಲ್ಲಿ ಜೇನುನೊಣಗಳನ್ನ ಇರಿಸಿ ನಂತರ ಅದಕ್ಕೆ ಸ್ಟ್ರಾಗಳ ಮೂಲಕ ಸಕ್ಕರೆ ನೀರನ್ನ ನೀಡಲು ಶುರು ಮಾಡಿದ್ದರು. ಹೀಗೆ ಸುಮಾರು ದಿನಗಳ ಪ್ರಕ್ರಿಯೆ ಶುರು ಆಗಿತ್ತು. ಒಂದು ದಿನ ಅದು ಸಕ್ಕರೆ ನೀರನ್ನ ನಾಲಿಗೆಯಿಂದ ಚಾಚಿ ಕುಡಿಯೋದಕ್ಕೆ ಶುರು ಮಾಡಿತ್ತು. ಹೀಗೆ ಮೊದಲ ಪ್ರಕ್ರಿಯೆ ಪೂರ್ಣವಾಗಿ ಯಶಸ್ವಿಗೊಂಡಿತ್ತು.

ವೈರಸ್ ವಾಸನೆ ತೋರಿಸೋದು ಸುಲಭವಾಗಿರಲಿಲ್ಲ
ಹೌದು. ಜೇನು ನೊಣಗಳು ಯಾವಾಗ ತನ್ನ ನಾಲಿಗೆಯನ್ನ ಹೊರ ಚಾಚಿ ಸಕ್ಕರೆ ನೀರನ್ನ ಸವಿಯಲು ಶುರು ಮಾಡಿತ್ತೋ ಅದರ ಮುಂದಿನ ಹಂತಕ್ಕೆ ನಾವ್ ಹೋಗಬಹುದು ಅಂತಾ ಸಂಶೋಧಕರು ತೀರ್ಮಾನಿಸಿದ್ದರು. ಅದರ ಮುಂದಿನ ಭಾಗವೇ ಕೊರೊನಾ ವೈರಸ್​ನ ವಾಸನೆ ಅದು ಪತ್ತೆಹಚ್ಚುವಂತೆ ಮಾಡೋದು. ಅದಕ್ಕಾಗಿ ಸುಮಾರು ದಿನಗಳ ಕಾಲ ಜೇನು ನೊಣಗಳಿಗೆ ಕೊರೊನಾ ಪಾಸಿಟಿವ್ ಬಂದಿದ್ದ ಸ್ಯಾಂಪಲ್​​ನ ಸ್ಮೆಲ್ ಅನುಭವ ಆಗುವಂತೆ ಮಾಡಲಾಗಿತ್ತು. ಹೀಗೆ ಕೊರೊನಾ ಪಾಸಿಟಿವ್ ಬಂದಿದ್ದ ಮಾದರಿಯ ವಾಸನೆ ಹೆಚ್ಚು ಬಾರಿ ಅನುಭವಕ್ಕೆ ಬಂದಾಗ ಅದಕ್ಕೆ ಆ ವೈರಸ್​ ಅರಿವಿಗೆ ಬಂದಿತ್ತು. ಆದ್ರೆ ಅದನ್ನು ಸಂಶೋಧಕರು ತಿಳಿದುಕೊಳ್ಳೋದು ಹೇಗೆ ಎಂದು ನೋಡಿದಾಗ ಅದಕ್ಕಾಗಿ ಅವರು ಮುಂದಿನ ಹಂತದ ಪ್ರಯೋಗಕ್ಕೆ ಕಾಲಿಟ್ಟಿದ್ದರು.

ವೈರಸ್​​ ವಾಸನೆ ಅನುಭವಕ್ಕೆ ಬರುವಂತೆ ಮಾಡೋದು
ಅದರ ಬೆನ್ನಲ್ಲೆ ಸಕ್ಕರೆ ನೀರನ್ನ ಸವಿಯಲು ನೀಡುವುದು

ಈ ಸಂಶೋಧನೆ ಅಷ್ಟೊಂದು ಸುಲಭದ ವಿಚಾರವಾಗಿರಲಿಲ್ಲ. ಅದಕ್ಕಾಗಿ ಜೇನು ನೊಣಗಳನ್ನ ನಿಗದಿತ ಸ್ಥಳಗಳಲ್ಲಿ ಇಟ್ಟು ಪ್ರಯೋಗ ನಡೆಸಲಾಗಿತ್ತು. ಯಾವಾಗ ಒಂದೇ ವೈರಸ್​ನ ಸ್ಮೆಲ್ ತೆಗೆದುಕೊಂಡಿದ್ದ ಅನುಭವ ಜೇನುನೊಣಗಳಿಗೆ ಬಂದಿತ್ತೋ ಅದರ ಬೆನ್ನಲ್ಲೆ ಸಕ್ಕರೆ ನೀರನ್ನ ಸವಿಯಲು ಇಡುತ್ತಿದ್ದರು. ಆಗ ತಕ್ಷಣ ಜೇನುನೊಣಗಳು ತಮ್ಮ ನಾಲಿಗೆಯನ್ನ ಹೊರ ಚಾಚಿ ಸಕ್ಕರೆ ನೀರನ್ನ ಸವಿಯೋದಕ್ಕೆ ಶುರು ಮಾಡಿತ್ತು. ಅದಾದ ಬಳಿಕ ಕೊರೊನಾ ಇಲ್ಲದ ವಾಸನೆಯನ್ನ ಕಂಡಾಗ ಅದು ಸಕ್ಕರೆ ನೀರನ್ನ ಸವಿಯುತ್ತಿರಲಿಲ್ಲ. ಹೀಗೆ ಜೇನುನೊಣಗಳು ಕೊರೊನಾ ಸೋಂಕು ಇದ್ದ ವಾಸನೆಯನ್ನ ಅನುಭವಿಸಿ ನಂತರ ಸಕ್ಕರೆ ನೀರನ್ನ ಸವಿಯುತ್ತಿತ್ತು. ಕೊರೊನಾ ಸೋಂಕು ಇಲ್ಲದ ವಾಸನೆಯನ್ನ ಅನುಭವಿಸಿ ನಂತರ ಸಕ್ಕರೆ ನೀರನ್ನ ಸವಿಯುತ್ತಿರಲಿಲ್ಲ. ಅಲ್ಲದೇ ನಾಲಿಗೆಯನ್ನ ಹೊರಚಾಚುತ್ತಿರಲಿಲ್ಲ. ಇಲ್ಲಿಗೆ ಜೇನು ನೊಣಗಳು ಕೂಡ ಕೊರೊನಾ ವೈರಸ್ ಪತ್ತೆ ಹಚ್ಚುತ್ತೆ ಅನ್ನೋದು ಖಚಿತವಾಗಿತ್ತು.

ಕೊರೊನಾ ವೈರಸ್ ಅನ್ನ ಸೆಕೆಂಡ್​ನಲ್ಲಿ ಪತ್ತೆ ಹಚ್ಚುತ್ತೆ
ಇವತ್ತು ನಾವು ಆರ್​ಟಿಪಿಸಿಆರ್​ ಟೆಸ್ಟ್​ ಕೊಟ್ಟು ಬಂದ ಮೇಲೆ ಅದರ ರಿಪೋರ್ಟ್​ ಬರೋದು ಒಂದು ದಿನ ಆದ ಮೇಲೆ. ಅದು ಬಂದ್ರೂ ಬರಬಹುದು, ಬಾರದೇ ಇನ್ನೆರಡು ದಿನಗಳ ಕಾಲ ಮುಂದೆಹೋಗಬಹುದು. ಆದ್ರೆ ಜೇನು ನೊಣಗಳ ಮುಂದೆ ಮನುಷ್ಯನ ಸ್ವಾಬ್ ವಾಸನೆ ಪಡೆಯುವಂತೆ ಮಾಡಿ ಸಕ್ಕರೆ ನೀರನ್ನ ಅದರ ಮುಂದಿಟ್ಟರೆ, ಅದು ಸೆಕೆಂಡ್​ನಲ್ಲಿ ನಾಲಿಗೆ ಹೊರ ಚಾಚಿ ಸೇವಿಸಿಬಿಡುತ್ತೆ. ಆಗ ಅಲ್ಲಿ ಸೋಂಕು ಇರೋದು ಕನ್ಫರ್ಮ್ ಆಗಿಬಿಡುತ್ತೆ. ನೋಡಿ ಹೀಗೆ ಜೇಣುನೊಣಗಳು ಸೆಕೆಂಡ್​​ನಲ್ಲಿ ವೈರಸ್ ಪತ್ತೆ ಹಚ್ಚಿಬಿಡುತ್ತೆ.

ಇದು ಒಂದು ರೀತಿಯಲ್ಲಿ ಆಯುರ್ವೇದಕ್ಕೆ ಹತ್ತಿರ ಅಂತಾ ಹೇಳಲಾಗ್ತಾಯಿದೆ. ಆಯುರ್ವೇದದಲ್ಲಿ ಇಂಬಳಗಳು ಅಂದ್ರೆ ರಕ್ತ ಹೀರುವ ಸಣ್ಣ ಹುಳುಗಳನ್ನ ಬಳಕೆ ಮಾಡಲಾಗುತ್ತದೆ. ಈ ಹುಳುಗಳನ್ನ ಯಾಕೆ ಬಳಕೆ ಮಾಡಿಕೊಳ್ಳುತ್ತಾರೆ ಅನ್ನೋದು ಎಲ್ಲರಿಗೂ ತಿಳಿದಿದೆ. ಆದ್ರೂ ಹೇಳಿಬಿಡ್ರೀವಿ ನೋಡಿ. ಮನುಷ್ಯನ ಶರೀರದಲ್ಲಿ ಕೆಟ್ಟ ರಕ್ತ ಕಂಡು ಬಂದ್ರೆ ಅಲ್ಲಿಗೆ ಆ ಇಂಬಳಗಳನ್ನ ಬಿಟ್ಟು ರಕ್ತವನ್ನ ಹೀರಿಸಲಾಗುತ್ತೆ. ಅದೇ ಮಾದರಿಯಲ್ಲಿ ಇಲ್ಲಿ ಜೇನು ನೊಣಗಳನ್ನ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇಂದು ಈ ಮಾದರಿಯನ್ನ ನೆದರ್​​ಲ್ಯಾಂಡ್ ಸಂಶೋಧಕರು ಪತ್ತೆ ಹಚ್ಚಿದ್ದು ಮುಂದಿನ ದಿನಗಳಲ್ಲಿ ಎಲ್ಲೆಲ್ಲಿ ಇದರ ಉಪಯುಕ್ತತೆಗೆ ಬರುತ್ತೋ ಕಾದು ನೋಡಬೇಕು. ಶ್ವಾನ ಆಯ್ತು. ಈಗ ಜೇನು ನೊಣ. ಅದು ಸೆಕೆಂಡ್​ನಲ್ಲಿ ಸೋಂಕನ್ನ ಪತ್ತೆ ಹಚ್ಚಿಬಿಡುತ್ತೆ. ಇದು ಎಲ್ಲ ಕಡೆ ಮುನ್ನೆಲೆಗೆ ಬಂದಿದ್ದೇ ಆದ್ರೆ ಸಾಕಷ್ಟು ಉಪಯುಕ್ತ ಮತ್ತು ಸೋಂಕು ಹೆಚ್ಚೆಚ್ಚು ಹರೋಡದನ್ನ ತಪ್ಪಿಸಬಹುದು.

The post ಸೆಕೆಂಡ್​ನಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚುತ್ತೆ ಜೇನುಹುಳ.. ಇಲ್ಲಿದೆ ಇಂಟ್ರಸ್ಟಿಂಗ್ ಡೀಟೇಲ್ಸ್ appeared first on News First Kannada.

Source: newsfirstlive.com

Source link