ಸೇನಾ ಇತಿಹಾಸದಲ್ಲಿಯೇ ದೊಡ್ಡ ದುರಂತ- ಹೆಲಿಕಾಪ್ಟರ್‌ ಪತನಕ್ಕೂ ಮುನ್ನ ಏನ್ನೆಲ್ಲಾ ಆಯ್ತು..?


ಎಲ್ಲವೂ ಅಂದುಕೊಂಡಂತೆ ಆಗಿದ್ರೆ ದೇಶಸೇವೆಗೆ ಸಜ್ಜಾಗಿ ನಿಂತಿದ್ದ ಭವಿಷ್ಯದ ಸೈನಿಕರಿಗೆ ಅವರು ಉಪನ್ಯಾಸ ಹೋಗಿ ನೀಡಬೇಕಿತ್ತು. ಧೈರ್ಯ, ಛಲ, ಸಾಹಸಗಾಥೆಯ ಕತೆಗಳನ್ನ ಹೇಳಬೇಕಿತ್ತು. ಆದ್ರೆ, ಅದಾಗಲಿಲ್ಲ. ಭಾರತೀಯ ಸೇನೆಯ ಇತಿಹಾಸದಲ್ಲಿ ಹಿಂದೆಂದೂ ನಡೆಯದಂತಹ ಭೀಕರ ದುರಂತವೊಂದು ನಡೆದು ಹೋಗಿದೆ. ದೇಶದ ಸರ್ವ ಸೇನಾಧ್ಯಕ್ಷರೂ ಸೇರಿದಂತೆ, ಸೇನೆಯ ಹಿರಿಯ ಅಧಿಕಾರಿಗಳಿದ್ದ ಚಾಪರ್​ ಅಪಘಾತಕ್ಕೀಡಾಗಿದೆ.. ಸಿಡಿಎಸ್​ ಬಿಪಿನ್​ ರಾವತ್​ ಇಹಲೋಕ ತ್ಯಜಿಸಿದ್ದಾರೆ.

ದೈತ್ಯ ಮರಗಳನ್ನೇ ಮುರಿದು ಕೆಳ ಬಿದ್ದು ಧಗಧಗಸ್ತಿರೋ ಈ ಹೆಲಿಕಾಪ್ಟರ್​​​ನಿಂದ ಹೊತ್ತಿಕೊಂಡಿರೋ ಬೆಂಕಿ ನೋಡಿದ್ರೆ ಇಲ್ಲೇನೋ ದೊಡ್ದಾಗೇ ಆಗಿರ್ಬೇಕು ಅಂತಾ ಗೊತ್ತಾಗಿಬಿಡುತ್ತೆ. ನೀವೇನಾದ್ರೂ ಹಾಗ್​ ಅಂದುಕೊಂಡಿದ್ರೆ ನಿಮ್ಮ ಊಹೆ ಸರಿ ಇದೆ. ಅಂದಹಾಗೇ, ಇದು ಯಾವುದೋ ಸಣ್ಣ ಪುಟ್ಟ ಅಪಘಾತವಲ್ಲ.. ಭಾರತದ ಮೂರೂ ಸೇನೆಗಳ ಮುಖ್ಯಸ್ಥ ಚೀಫ್​​​ ಆಫ್​ ಡಿಫೆನ್ಸ್ ಸ್ಟಾಫ್​ ಜನರಲ್​ ಬಿಪಿನ್​ ರಾವತ್​ ಸೇರಿದಂತೆ ಹಿರಿಯ ಸೇನಾಧಿಕಾರಿಗಳಿದ್ದ ಹೆಲಿಕಾಫ್ಟರ್​ ಪತನದ ಮೈ ಜುಮ್ ಎನಿಸುವ ದೃಶ್ಯಗಳು.

ಸೇನೆಯ ಟಾಪ್ ಆಫೀಸರ್ಸ್​ ಇದ್ದ ಚಾಪರ್​ ಪತನ!
ಸಿಡಿಎಸ್​ ಬಿಪಿನ್ ರಾವತ್​​ ಸೇರಿ 13 ಮಂದಿ ದುರ್ಮರಣ!
ಹೌದು.. ಇವತ್ತು, ಕರ್ನಾಟಕದ ನೆರೆಯ ರಾಜ್ಯ, ತಮಿಳುನಾಡಿನ ಊಟಿಯ ಕೂನೂರು ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳನ್ನು ಹೊತ್ತೊಯ್ಯುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಕ್ಕೀಡಾಗಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿಯಿರೋ ಅರಣ್ಯ ಪ್ರದೇಶದ ಬಳಿ ಹೆಲಿಕಾಪ್ಟಾರ್ ಅಪಘಾತಕ್ಕೀಡಾಗಿತ್ತ, ದೇಶದ ಜನರನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ. ಇನ್ನು, ದುರಂತಕ್ಕೀಡಾಗಿರೋದು ಭಾರತೀಯ ಸೇನೆಗೆ ಸೇರಿದ Mi-17ವಿ5 ಹೆಲಿಕಾಪ್ಟರ್​ ಅಂತಾ ಗುರುತಿಸಲಾಗಿದ್ದು, ಅದರೊಳಗಿದ್ದ 14 ಮಂದಿಯಲ್ಲಿ 13 ಜನರು ಭೀಕರ ಮರಣವನ್ನಪ್ಪಿದ್ದಾರೆ. ಅದರಲ್ಲಿ ಸರ್ವ ಸೇನಾಧ್ಯಕ್ಷ ಬಿಪಿನ್ ರಾವತ್​ ಕೂಡ ಸೇರಿದ್ದಾರೆ.

ಪತನಗೊಂಡ ಹೆಲಿಕಾಪ್ಟರ್​​ನಲ್ಲಿ ಚೀಫ್​ ಆಫ್​ ಡಿಫೆನ್ಸ್​ ಸ್ಟಾಫ್​ ಜೊತೆಗೆ ಅವರ ಪತ್ನಿ ಮಧುಲಿಕಾ ರಾವತ್​ ಕೂಡ ಇದ್ದರು. ಇನ್ನು, ಲೆಫ್ಟಿನೆಂಟ್ ಕರ್ನಲ್ ಆಗಿದ್ದ ಹರ್ಜಿಂದರ್​​ ಸಿಂಗ್​, ಬ್ರಿಗೇಡಿಯರ್ ಎಲ್​.ಎಸ್​ ಲಿಡ್ಡರ್, ನಾಯಕ್​ ಆಗಿ ಸೇವೆ ಸಲ್ಲಿಸುತ್ತಿದ್ದ ಗುರುಸೇವಕ್ ಸಿಂಗ್ ಹಾಗೂ ಜಿತೇಂದ್ರ ಕುಮಾರ್, ಲಾನ್ಸ್​​ ನಾಯಕ್ ವಿವೇಕ್ ಕುಮಾರ್, ಹವಾಲ್ದಾರ್​ ಸತ್​ಪಾಲ್​ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಅಷ್ಟಕ್ಕೂ ದುರಂತಕ್ಕೀಡಾಗಿರೋ ಹೆಲಿಕಾಪ್ಟರ್​ ಎಲ್ಲಿಂದ ಎಲ್ಲಿಗೆ ಹೊರಟಿತ್ತು? ಅನಾಹುತ ಹೇಗಾಯ್ತು ಅನ್ನೋದನ್ನ ನೋಡೋದಾದ್ರೆ..

ಜನರಲ್​ ಬಿಪಿನ್ ರಾವತ್​ರವರು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸೂಳೂರಿನಿಂದ, ವೆಲ್ಲಿಂಗ್ಟನ್​​ನಲ್ಲಿರುವ ಡೆಫೆನ್ಸ್​ ಸರ್ವಿಸಸ್​​ ಕಾಲೇಜಿಗೆ ಉಪನ್ಯಾಸ ನೀಡಲು ತೆರಳಬೇಕಿತ್ತು. ಆದ್ರೆ, ಯಾವಾಗ ನೀಲ್​ಗಿರೀಸ್​ ಜಿಲ್ಲೆಯ ನಂಜಪ್ಪಚತಿರಮ್ ಬಳಿ ಇರುವಂತಹ ಅರಣ್ಯ ಪ್ರದೇಶದ ಮಾರ್ಗ ಮಧ್ಯೆ ಹಾದು ಹೋಗುತ್ತೋ ಈ ವೇಳೆ ಬಿಪಿನ್​ ರಾವತ್​ರಿದ್ದ ಹೆಲಿಕಾಪ್ಟರ್​ ಪತನಗೊಂಡಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ವೆಲ್ಲಿಂಗ್ಟನ್​ನತ್ತ ನುಗ್ಗುತ್ತಿದ್ದ ಹೆಲಿಕಾಪ್ಟರ್​ ಮೊದಲು ಮರಕ್ಕೆ ಡಿಕ್ಕಿ ಹೊಡೆ ಹೊಡೆದಿದೆಯಂತೆ. ಡಿಕ್ಕಿ ಹೊಡೆಯುತ್ತಿದ್ದಂತೆ ಕೆಳಕ್ಕೆ ಬಿದ್ದು ಅದಕ್ಕೆ ದೊಡ್ಡ ಮಟ್ಟದಲ್ಲಿ ಬೆಂಕಿ ಹೊತ್ತು ಉರಿದಿದೆ. ಮಧ್ಯಾಹ್ನ 12.20ರ ವೇಳೆ ಯಾರೂ ಊಹಿಸಲಾರದಂತಹ ಅನಾಹುತ ನಡೆದು ಹೋಗಿದೆ.

ಅಪಘಾತವಾದ ಜಾಗದಲ್ಲಿ ಹೆಲಿಕಾಪ್ಟರ್ ಹಾರಾಟ ಕಷ್ಟ
ದಟ್ಟ ಮಂಜು, ನೀಲಗಿರಿ ಅರಣ್ಯ ಪ್ರದೇಶದಲ್ಲಿ ದುರಂತ
ಇನ್ನು, ಅಪಘಾತವಾದ ಈ ಜಾಗದಲ್ಲಿ ಹೆಲಿಕಾಪ್ಟರ್​ ಹಾರಾಟ ಹಾರಾಟ ಕಷ್ಟ ಅಂತಲೇ ಹೇಳಲಾಗಿದೆ. ಯಾಕಂದ್ರೆ, ಕೂನೂರು ಪ್ರದೇಶದ ದಟ್ಟ ಮಂಜು ಹಾಗೂ ನೀಲಗಿರಿ ಅರಣ್ಯ ಪ್ರದೇಶಕ್ಕೆ ಹೆಸರುವಾಸಿಯಾಗಿದ್ದು, ಅಂತಹ ಜಾಗದಲ್ಲಿ ಯಾವುದೇ ವೈಮಾನಿಕ ಪ್ರಯಾಣ ತರವಲ್ಲ ಅಂತಾ ಹೇಳಲಾಗ್ತಿದೆ. ಇನ್ನು, ದುರಂತಕ್ಕೂ ಮುನ್ನ ಏನೇನಾಯ್ತು ಅಂತಾ ನೋಡೋದಾದ್ರೆ..

ದುರಂತಕ್ಕೂ ಮುನ್ನ

  • ಬೆಳಗ್ಗೆ 9.00 ದೆಹಲಿಯಿಂದ ಹೊರಟಿದ್ದ ಸಿಡಿಎಸ್ ಬಿಪಿನ್ ರಾವತ್
  • ಬೆಳಗ್ಗೆ 11.35 ಸುಳೂರಲ್ಲಿ ಸಿಡಿಎಸ್ ಬಿಪಿನ್ ರಾವತ್ ಲ್ಯಾಂಡಿಂಗ್​​
  • ಬೆಳಗ್ಗೆ 11.45 ಸುಳೂರಿನಿಂದ ವೆಲ್ಲಿಂಗ್​ಟನ್​ಗೆ ಸಿಡಿಎಸ್ ಪ್ರಯಾಣ
  • ಮಧ್ಯಾಹ್ನ 12.20 Mi-17V5 ಹೆಲಿಕಾಪ್ಟರ್ ಪತನ

ದುರ್ಘಟನೆಯ ತನಿಖೆಗೆ ಆದೇಶಿಸಿದ ವಾಯುಸೇನೆ!
ಯಾವಾಗ ಮೂರೂ ಸೇನೆಗಳ ಮುಖ್ಯಸ್ಥರಿದ್ದ ಹೆಲಿಕಾಪ್ಟರ್​​ ಭೀಕರ ದುರಂತಕ್ಕೆ ತುತ್ತಾದ ಸುದ್ದಿ ಇಡೀ ದೇಶವನ್ನೇ ಆವರಿಸಿತೋ, ಕೇಂದ್ರ ಸರ್ಕಾರದ ಹೆಡ್​ಕ್ವಾರ್ಟರ್​ ನವದೆಹಲಿ ಅಕ್ಷರಶಃ ಶೇಕ್​ ಆಗಿ ಹೋಯ್ತು. ರಕ್ಷಣಾ ಸಚಿವ ರಾಜನಾಥ್​​​ಸಿಂಗ್​ರಿಂದ ಖುದ್ದು ಪ್ರಧಾನಿ ಮೋದಿಯೇ ಮಾಹಿತಿ ಪಡೆದರು. ಬಳಿಕ ತುರ್ತು ಸಂಪುಟ ಸಭೆಯನ್ನೂ ಕೂಡ ನಡೆಸಿ ಪ್ರಕರಣದ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಚರ್ಚೆ ನಡೆಸಲಾಯ್ತು.

ಗುರುತೇ ಸಿಗದಷ್ಟು ಸುಟ್ಟು ಹೋಗಿದ್ದವು ಮೃತದೇಹಗಳು
ಡಿಎನ್​ಎ ಪರೀಕ್ಷೆ ಬಳಿಕ ಮೃತರು ಯಾರೆಂಬುದು ಕನ್ಫರ್ಮ್
ಇನ್ನು, ಈ ದುರ್ಘಟನೆಯಲ್ಲಿ ಸಿಡಿಎಸ್​ ಬಿಪಿನ್ ರಾವತ್​ ಜೊತೆಗೆ ಅವರ ಪತ್ನಿ ಮಧುಲಿಕಾ ರಾವತ್ ಕೂಡ ಮೃತಪಟ್ಟಿದ್ದಾರೆ. ಸಂಜೆ ಸುಮಾರು 6:10ರವರೆಗೂ ಬಿಪಿನ್​ ರಾಔತ್​ ಚೇತರಿಸಿಕೊಂಡು ವಾಪಸ್​ ಬರ್ತಾರೆ ಅಂತಾ ಪ್ರಾರ್ಥಿಸಲಾಗಿತ್ತು. ಸೇನಾಸ್ಪತ್ರೆಯಲ್ಲಿ ಅವರನ್ನ ಉಳಿಸಲು ಎಲ್ಲಾ ರೀತಿಯ ಪರಿಶ್ರಮ ಹಾಕಲಾಗ್ತಿತ್ತು. ಆದ್ರೆ, ದುರಾದೃಷ್ಟವಶಾತ್​ ಚಿಕಿತ್ಸೆ ಫಲಿಸದೇ ಬಿಪಿನ್​ ರಾವತ್​ ಸಾವಿಗೀಡಾಗಿದ್ದಾರೆ. ಇನ್ನು, ಅಪಘಾತದ ತೀವ್ರತೆ ಎಷ್ಟರ ಮಟ್ಟಿಗಿತ್ತು ಅಂದ್ರೆ, ಮೃತದೇಹಗಳನ್ನು ಪತ್ತೆ ಹಚ್ಚಲು ಡಿಎನ್​ಎ ಪರೀಕ್ಷೆ ನಡೆಸಲೇಬೇಕಂತೆ. ಅಷ್ಟರ ಮಟ್ಟಿಗೆ ಸೇನಾಕಾಪ್ಟರ್ ಅಪಘಾತಕ್ಕೀಡಾಗಿ ದೇಶದ ಜನರಿಗೆ, ಭಾರತೀಯ ಸೈನ್ಯಕ್ಕೆ ಶಾಕ್​ ಕೊಟ್ಟಿದೆ. ಒಟ್ಟಾರೆ, ಈ ದುರ್ಘಟನೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದ್ರೆ, ಒಬ್ಬ ಸೇನಾ ಮುಖ್ಯಸ್ಥನಿಗೆ ಈ ಗತಿಯಾದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು ಅನ್ನೋದೇ ಯಕ್ಷಪ್ರಶ್ನೆ..

News First Live Kannada


Leave a Reply

Your email address will not be published. Required fields are marked *