ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಾ ಮೋಸ; ನಕಲಿ ಸೇನಾ ಆಫೀಸರ್ ಅರೆಸ್ಟ್ – Karwar Cheated by taking money on the pretext of giving job in army Fake Army officer arrested Uttara Kannada news in kannada


ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡುತ್ತಿದ್ದ ನಕಲಿ ಸೇನಾಧಿಕಾರಿಯನ್ನು ಬಂಧಿಸಿ ಜೈಲು ಕಂಬಿಗಳ ಹಿಂದೆ ಕಳುಹಿಸಿದ ಉತ್ತರ ಕನ್ನಡ ಪೊಲೀಸರು.

ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಮಹಾ ಮೋಸ; ನಕಲಿ ಸೇನಾ ಆಫೀಸರ್ ಅರೆಸ್ಟ್

ನಕಲಿ ಸೇನಾ ಆಫೀಸರ್ ಅರೆಸ್ಟ್

ಕಾರವಾರ: ಸೇನೆ ಉನ್ನತ ಅಧಿಕಾರಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ನಕಲಿ ಸೇನಾಧಿಕಾರಿಯನ್ನು ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ರ್ಯಾಂಕಿಂಗ್ ಯೂನಿಫಾರ್ಮ್ ಧರಿಸಿಕೊಂಡು ಓಡಾಡುತ್ತಿದ್ದ ಕಾರವಾರ ಸಿದ್ಧರ ನಿವಾಸಿ ವಿನಾಯಕ ಮಹಾಲೆ ಬಂಧಿತ ಆರೋಪಿಯಾಗಿದ್ದಾನೆ. ಸೇನೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಅನೇಕರಿಂದ ಹಣ ಪಡೆದು ವಂಚನೆ ಮಾಡಿದ ಹಿನ್ನೆಲೆ ಪೊಲೀಸರು ಬಂಧಿಸಿದ್ದಾರೆ.

ಸೇನಾ ಉನ್ನತಾಧಿಕಾರಿ ಸಮವಸ್ತ್ರ ಧರಿಸಿಕೊಂಡು ಪ್ರತೀ ದಿನ ಬೈಕ್‌ನಲ್ಲೇ ಕಾರವಾರ, ಸೌತ್ ಗೋವಾ ಓಡಾಡುತ್ತಿದ್ದ ವಿನಾಯಕ, ಓರ್ವನಿಂದ 66,000ರೂ., ಇನ್ನೊಬ್ಬರಿಂದ 35,000 ರೂ.ನಂತೆ ಹಲವರಿಂದ ಹಣ ಪಡೆದು ವಂಚನೆ ಮಾಡಿದ್ದಾನೆ. ತಮ್ಮ ಪುತ್ರನಿಗೆ ನೇವಿಯಲ್ಲಿ ಪಿಯೋನ್ ಕೆಲಸ ಕೊಡಿಸುವುದಾಗಿ ಹೇಳಿ ಕಡವಾಡ ಮಾರುತಿ ನಗರದ ಹೇಮಲತಾ ಎಂಬವರಿಂದಲೂ ಹಣ ಪಡೆದು ಮೋಸ ಮಾಡಿದ್ದಾನೆ. ಈ ಬಗ್ಗೆ ಹೇಮಲತಾ ಅವರು ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯ ಕಳೆದ ಒಂದೆರಡು ವಾರಗಳಿಂದ ಈತನ ಮೇಲೆ ನಿಗಾಯಿರಿಸಿದ್ದ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರು ಗ್ರೌಂಡ್ ವರ್ಕ್ ಮಾಡಿದಾಗ ಈತನ ಅಸಲೀಯತ್ತು ಬಯಲಾಗಿದೆ. ಅದರಂತೆ ನೇವಿ ಇಂಟೆಲಿಜೆನ್ಸ್ ಹಾಗೂ ಕಾರವಾರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಮನೆಯನ್ನು ಹುಡುಕಾಡಿದಾಗ ಪತ್ತೆಯಾದ 66,000ರೂ. ನಗದು ವಶಕ್ಕೆ ಪಡೆದಿದ್ದಾರೆ. ಸದ್ಯ ಬಂಧನಕ್ಕೊಳಗಾದ ವಿನಾಯಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಹಿಂದೆ ಆರೋಪಿ ಬೆಳಗಾವಿ ಕಮಾಂಡೋ ಟ್ರೈನಿಂಗ್ ಸ್ಕೂಲ್‌ನಲ್ಲಿ ಚಿಕ್ಕಪುಟ್ಟ ಕೆಲಸಕ್ಕೆ ಸೇರಿಕೊಂಡಿದ್ದ. ಮರಾಠಾ ಲೈಟ್ ಇನ್‌ಫೆಂಟ್ರಿ ವಿಭಾಗದಡಿ ಹೆಲ್ಪಿಂಗ್ ಬಾಯ್ ಆಗಿ ಸ್ವೀಪಿಂಗ್ ಮುಂತಾದ ಕೆಲಸ ಮಾಡುತ್ತಿದ್ದ. ಅದರಂತೆ ಅಧಿಕಾರಿಗಳ ರ್ಯಾಂಕಿಂಗ್, ಅವರ ಯೂನಿಫಾರ್ಮ್‌ಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದನು. ಬಳಿಕ ಆ ಕೆಲಸವನ್ನು ಬಿಟ್ಟು 2015-16ರ ವೇಳೆ ಆರ್ಮಿ ಆಫಿಸರ್ ಯೂನಿಫಾರ್ಮ್ ಖರೀದಿಸಿ 2020ರಿಂದ ಅಧಿಕಾರಿಯ ಹೆಸರು ಹೇಳಿ ಓಡಾಡಿಕೊಂಡಿದ್ದ. ಕಾರವಾರ ಹಾಗೂ ಗೋವಾ ಭಾಗದಲ್ಲಿ ಹಲವರಿಗೆ ಈತ ಮೋಸ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.