ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅವರ ನೆನಪಿನಲ್ಲಿ ಹಮ್ಮಿಕೊಂಡಿರುವ ಸೈಕಲ್ ಜಾಥಾಗೆ ನಟ ಶಿವರಾಜ್ಕುಮಾರ್ ಚಾಲನೆ ಕೊಟ್ಟಿದ್ದಾರೆ.
ಕೆಎಸ್ಆರ್ಪಿ ಹಾಗೂ ಬೆಂಗಳೂರು ಸಂಚಾರಿ ಪೊಲೀಸರು ಅಪ್ಪು ನೆನಪಿನಲ್ಲಿ ಸೈಕಲ್ ಜಾಥಾ ಆಯೋಜನೆ ಮಾಡಿದ್ದು, ಕಂಠೀರವ ಸ್ಟೇಡಿಯಂ ನಿಂದ 50 ಕಿಲೋ ಮೀಟರ್ ದೂರ ಸೈಕಲ್ ಜಾಥಾ ಸಾಗಲಿದೆ. ಸೈಕಲ್ ಜಾಥಾದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗೂ ಕೆಎಸ್ಆರ್ಪಿ ಮತ್ತು ಬೆಂಗಳೂರು ಸಂಚಾರಿ ಪೊಲೀಸರು ಭಾಗಿಯಾಗಿದ್ದಾರೆ.
ಜಾಥಾಗೆ ಚಾಲನೆ ಕೊಟ್ಟು ಮಾತನಾಡಿದ ಶಿವರಾಜ್ಕುಮಾರ್ ಅವರು, ಸೈಕಲ್ ರೈಡ್ ಅಂದ್ರೆ ಅಪ್ಪುಗೆ ತುಂಬಾ ಇಷ್ಟ. ಅವ್ನಿದ್ರೆ ನಿಮ್ಮ ಜೊತೆನೂ ಸೈಕಲ್ ಜಾಥಾಗೆ ಬರ್ತಿದ್ದ. ನನ್ನ ಹುಟ್ಟು ಹಬ್ಬಕ್ಕೆ ಅಪ್ಪು ಸೈಕಲ್ ಗಿಫ್ಟ್ ಮಾಡಿದ್ದ. ಈ 50 ಕಿಮೀ ಜಾಥಾದಲ್ಲಿ ಅಪ್ಪು ಇದ್ದಿದ್ರೇ ಖಂಡಿತ ಭಾಗವಹಿಸ್ತಿದ್ದ. ಆದರೆ ನನ್ನ ತಮ್ಮ ಈಗಿಲ್ಲ. ಆದ್ರೆ ಅವ್ನು ಎಲ್ಲೂ ಹೋಗಿಲ್ಲ. ಅಪ್ಪು ಎಲ್ಲೂ ಹೋಗಿಲ್ಲ. ಇಲ್ಲೇ ಇದ್ದಾನೆ ಇರ್ತಾನೆ. ಎಲ್ಲರ ಹೃದಯದಲ್ಲೂ ಅಪ್ಪು ಶಾಶ್ವತ. ನಾನು ಅಪ್ಪುಗೆ ಅಣ್ಣನಲ್ಲ, ಅವ್ನೇ ನನಗೆ ಅಣ್ಣನಾಗಿ ಹೋಗಿದ್ದಾನೆ ಎಂದರು.
ಪುನೀತ್ ರಾಜ್ಕುಮಾರ್ ನೆನಪು ಹಾಗೂ ಕನ್ನಡಕ್ಕಾಗಿ ನಾವು, ಮಾತಾಡ್ ಮಾತಾಡ್ ಕನ್ನಡ ಎಂಬ ಘೋಷವಾಕ್ಯದಡಿ ಕನ್ನಡ ರಾಜ್ಯೋತ್ಸವ ಭಾಗವಾಗಿ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಕಂಠೀರವ ಸ್ಟೇಡಿಯಂನಿಂದ ಚಾಲುಕ್ಯ ಸರ್ಕಲ್, ಮೇಖ್ರಿ ಸರ್ಕಲ್, ಹೆಬ್ಬಾಳ, ಬಿಇಎಲ್ ಸರ್ಕಲ್, ಗೋರಗುಂಟೆಪಾಳ್ಯ, ರಾಜ್ ಕುಮಾರ್ ಸಮಾಧಿ ಕಡೆಗೆ ಸಾಗಿ. ಪುನೀತ್ ಸಮಾಧಿ ಬಳಿ ಹೋಗಿ ಅಪ್ಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ನಾಗರಭಾವಿ, ದೇವೆಗೌಡ ಪೆಟ್ರೋಲ್ ಬಂಕ್, ಸಾರಕ್ಕಿ ಸರ್ಕಲ್, ಬಿಟಿಎಂ ಜಕ್ಷನ್, ಸಿಲ್ಕ್ ಬೋರ್ಡ್, ಆಡುಗೋಡಿ, ರಿಚ್ಮಂಡ್ ಸರ್ಕಲ್, ಮೇಯೋ ಹಾಲ್ ಕಡೆಯಿಂದ ಸಾಗಿ ಪೊಲೀಸ್ ಹಾಕಿ ಗ್ರೌಂಡ್ಗೆ ಆಗಮಿಸಿ ಸೈಕಲ್ ಜಾಥಾ ಅಂತ್ಯವಾಗಲಿದೆ.