ಸೈಲೆಂಟಾಗಿ ಎಂಟ್ರಿ ಕೊಟ್ಟಿದೆ ‘ ಹ್ಯಾಪಿ ಹೈಪೋಕ್ಸಿಯ’- ಯುವಕರೇ ಇದರ ಟಾರ್ಗೆಟ್

ಸೈಲೆಂಟಾಗಿ ಎಂಟ್ರಿ ಕೊಟ್ಟಿದೆ ‘ ಹ್ಯಾಪಿ ಹೈಪೋಕ್ಸಿಯ’- ಯುವಕರೇ ಇದರ ಟಾರ್ಗೆಟ್

ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರು ಹೆಚ್ಚಾಗ್ತಾ ಇದಾರೆ. ಸಾವಿನ ಸಂಖ್ಯೆಯೂ ಹೆಚ್ಚಾಗ್ತಾ ಇದೆ. ಮೊದಲನೇ ಅಲೆ ಬಂದಾಗ ವಯಸ್ಸಾದವರಿಗೆ ಮಾತ್ರ ಕೊರೊನಾ ಅಪಾಯಕಾರಿ ಅಂತ ಹೇಳಲಾಗ್ತಾ ಇತ್ತು. ಆದ್ರೆ ಈಗ ಯುವಕರನ್ನು ಹೆಚ್ಚಾಗಿ ಬಲಿ ಪಡೀತಾ ಇದೆ ಕೊರೊನಾ. ಯಾಕೆ ಯುವಕರು ದೊಡ್ಡ ಸಂಖ್ಯೆಯಲ್ಲಿ ಸಾವನ್ನಪ್ತಾ ಇದಾರೆ ಅನ್ನೋದಕ್ಕೆ ಉತ್ತರ ಇಲ್ಲಿದೆ .

ಕೊರೊನಾಗೆ ಆ ದೇಶ ಈ ದೇಶ ಅಂತಿಲ್ಲ. ವಯಸ್ಸಿನ ಬೇಧ ಇಲ್ಲ. ಇವರು ಶ್ರೀಮಂತರು,ಇವರು ಬಡವರು ಅನ್ನೋದೂ ಇಲ್ಲ. ಶ್ರೀಮಂತರು ಹೇಗೋ ಚಿಕಿತ್ಸೆ ಪಡೆದುಕೊಂಡು ಪಾರಾಗಿ ಬಿಡ್ತಾರೆ ಅನ್ನೋದೆಲ್ಲ ಸುಳ್ಳಾಗಿ ಬಿಡ್ತಾ ಇದೆ. ಎಷ್ಟೇ ಹಣ ಖರ್ಚು ಮಾಡಿದ್ರೂ ರಾತ್ರಿ ಬೆಳಗಾಗೋದ್ರೊಳಗೆ ಪ್ರಾಣ ಕಳೆದುಕೊಳ್ತಿದಾರೆ ಜನ. ಈ ಎರಡನೇ ಅಲೆಯಲ್ಲಂತೂ ಲಕ್ಷಣವಿಲ್ಲದೆ ಮಾಯಾವಿಯಿಂತೆ ಬಂದು ಕುಳಿತು ಬಿಡ್ತಿದೆ ಕೊರೊನಾ.

ಹಲವರಿಗೆ ಕೊರೊನಾ ಬಂದಿರೋದೇ ಗೊತ್ತಾಗಲ್ಲ. ಅದರಲ್ಲೂ ಯುವಜನರಿಗೆ ಅನೇಕರಲ್ಲಿ ಕೊರೊನಾ ಲಕ್ಷಣವೇ ಇರಲ್ಲ. ಆದ್ರೆ ರೋಗ ಉಲ್ಭಣಿಸಿದಾಗ ಒಂದೊಂದೇ ಲಕ್ಷಣ ತೋರಿಸಲು ಆರಂಭಿಸುತ್ತದೆ. ಆದ್ರೆ ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿರುತ್ತದೆ. ಯಾವ ಚಿಕಿತ್ಸೆ ಕೊಡಿಸಿದರೂ ಎಷ್ಟೇ ಪ್ರಯತ್ನ ಪಟ್ಟರೂ ಪ್ರಾಣ ಕಳೆದುಕೊಂಡು ಬಿಡ್ತಾ ಇದಾರೆ ಯುವಕರು. ಹೀಗಾಗಿ ಯುವಕರು, ಮಕ್ಕಳು ಎಚ್ಚರಿಕೆಯಿಂದ ಇರಬೇಕು ಅಂತಾ ತಜ್ಞರು ಹೇಳ್ತಾ ಇರೋದು.

ವಯಸ್ಸಾದವರಿಗೆ ರೋಗನಿರೋಧಕ ಶಕ್ತಿ ಕಡಿಮೆ ಇರೋದ್ರಿಂದ ಕೊರೊನಾ ಬಂದ ತಕ್ಷಣ ಯಾವುದಾದರೂ ಲಕ್ಷಣ ಗೋಚರಿಸುತ್ತದೆ. ಆದ್ರೆ ಗಟ್ಟಿ ಮುಟ್ಟಾದ ಯುವಕರಿಗೆ ಲಕ್ಷಣವೇ ಇರಲ್ಲ. ಕೊರೊನಾ ಬಂದು ಏನೋ ಸಣ್ಣದಾಗಿ ಜ್ವರ, ಕೆಮ್ಮು ಬಂದ್ರು ತಲೆ ಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸ್ತಿರೋದು ಯುವಕರು ಪ್ರಾಣ ಕಳೆದುಕೊಳ್ತಾ ಇರೋದಕ್ಕೆ ಮತ್ತೊಂದು ಕಾರಣ. ಆದರೆ, ಯುವಜನರಲ್ಲಿ ಆತಂಕ ಮೂಡಿಸುತ್ತಿರುವುದು ಇನ್ನೊಂದು ಕಂಡೀಷನ್. ಅದೇ ಹ್ಯಾಪಿ ಹೈಪೋಕ್ಸಿಯಾ. ಇದನ್ನು ಸೈಲೆಂಟ್ ಕಿಲ್ಲರ್ ಎಂದೆ ಹೇಳಲಾಗ್ತಿದೆ.

ಸಾಲು ಸಾಲಾಗಿ ಯುವಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಇದೆ ಹೈಪೋಕ್ಸಿಯಾದಿಂದ. ಲಕ್ಷಣಗಳನ್ನು ತೋರದ ಕೊರೊನಾ ವೈರಸ್ ಶ್ವಾಸಕೋಶದಲ್ಲಿ ಡ್ಯಾಮೇಜ್ ಮಾಡತೊಡಗಿದಾಗ ಇಂತಹ ಪರಿಸ್ಥಿತಿ ಎದುರಾಗುತ್ತದೆ. ರೋಗ ಉಲ್ಭಣವಾಗ್ತಾ ಇದ್ದಂತೆ ಉಸಿರಾಟದ ತೊಂದರೆ ತೀವ್ರವಾಗಿ ಕೊನೆಗೆ ಪ್ರಾಣಕ್ಕೆ ಆಪತ್ತು ತರ್ತಿದೆ.

ಏನಿದು ಹ್ಯಾಪಿ ಹೈಪೋಕ್ಸಿಯಾ? ಸೈಲೆಂಟ್ ಕಿಲ್ಲರ್ ಆಗಿ ಬಿಡುತ್ತಾ?
ಹ್ಯಾಪಿ ಹೈಪೋಕ್ಸಿಯಾ ಎಂದರೆ ರೋಗಿಯ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆ ಆಗಿರುವ ಪರಿಸ್ಥಿತಿ. ಶ್ವಾಸಕೋಶದಲ್ಲಿ ವೈರಸ್ ಹರಡುವಿಕೆ ಹೆಚ್ಚಾಗಿದ್ದರೆ ಆಕ್ಸಿಜನ್ ಒಳಹರಿವು ಹಾಗೂ ಕಾರ್ಬನ್ ಡೈ ಆಕ್ಸೈಡ್ ಹೊರ ಹರಿಯುವಿಕೆ ಕಡಿಮೆ ಆಗಿರುತ್ತದೆ. ಇದರಿಂದ ರಕ್ತದಲ್ಲಿ ಆಕ್ಸಿಜನ್ ಚಲನೆ ಕಡಿಮೆ ಆಗಿರುತ್ತದೆ. ನಿಧಾನವಾಗಿ ಇಡೀ ದೇಹ ವಿಷಮಯವಾಗಿ ಪರಿವರ್ತನೆಗೊಂಡು ಪ್ರಾಣ ಹೋಗುವ ಪರಿಸ್ಥಿತಿ ತಲುಪಿರುತ್ತದೆ. ರೋಗ ಉಲ್ಭಣಿಸಿ ಕೊನೆ ಹಂತ ತಲುಪುವವರೆಗೂ ಇದರ ಅರಿವೂ ಇಲ್ಲದೆ ರೋಗಿಗಳು ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಸೈಲೆಂಟಾಗಿ ಅಷ್ಟೇ ನಿಧಾನವಾಗಿ ಶುರುವಾಗಿ ಕೊನೆಗೆ ಜೀವಕ್ಕೆ ಕುತ್ತು ತಂದು ಬಿಡುತ್ತೆ. ಇನ್ನು ಕೋವಿಡ್ ನೆಗೆಟೀವ್ ಬಂದರೂ ಶ್ವಾಸಕೋಶದಲ್ಲಿ ಇದು ಮಾಯಾವಿಯಂತೆ ಅಡಗಿ ಕುಳಿತಿದ್ದರೂ ಕೆಲವೊಮ್ಮೆ ಗೊತ್ತಾಗುವುದಿಲ್ಲ.

ಯುವ ಸಮುದಾಯಕ್ಕೆ ಸೈಲೆಂಟ್ ಕಿಲ್ಲರ್ ಅತ್ಯಂತ ಮಾರಕ
ರೋಗ ನಿರೋಧಕ ಶಕ್ತಿ ಇದೆ ಎಂದು ಕಡೆಗಣಿಸುವಂತಿಲ್ಲ

ಕೋವಿಡ್ ಎರಡನೆ ಅಲೆಯಲ್ಲಿ ಹ್ಯಾಪಿ ಹೈಪೋಕ್ಸಿಯಾ ಹೆಚ್ಚಾಗಿ ಕಾಣಿಸುತ್ತಿರುವುದು ಯುವ ಜನರಲ್ಲಿ. ಈ ಕಂಡೀಷನ್ ಯುವಕರಿಗೆ ಮಾರಕ ಎಂದು ಎಲ್ಲಡೆ ಹೇಳಲಾಗ್ತಿದೆ. ಈ ಸಂಕಷ್ಟದ ಸಮಯದಲ್ಲಿ ಯುವಕರು ತಮಗೆ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ನಿರ್ಲಕ್ಷಿಸಿದರೆ ಅದರ ಪರಿಣಾಮಾ ಇನ್ನು ತೀವ್ರವಾಗುತ್ತದೆ. ಇದು ಕೋವಿಡ್ ಸೋಂಕಿತರಲ್ಲಿ ಸಣ್ಣ ಪ್ರಮಾಣದ ಉಸಿರಾಟ ತೊಂದರೆಯಿಂದ ಗಂಭೀರವಾದ ರೆಸ್ಪಿರೇಟರಿ ಸಿಂಡ್ರೋಮ್ ಉಂಟು ಮಾಡುತ್ತದೆ. ಇದರ ಬೆಳವಣಿಗೆಯ ಲಕ್ಷಣಗಳು ಮೆಲ್ನೋಟಕ್ಕೆ ಕಾಣದಿರುವುದರಿಂದ ಇದನ್ನು ವೈದ್ಯಕೀಯ ಭಾಷೆಯಲ್ಲಿ ಸೈಲೆಂಟ್ ಹೈಪೋಕ್ಸಿಯ ಎಂದೆ ಕರೆಯುತ್ತಾರೆ.

ಹ್ಯಾಪಿ ಹೈಪೋಕ್ಸಿಯದಿಂದ ದೇಹದಲ್ಲಿ ಆಕ್ಸಿಜನ್ ಕೊರತೆ
ಆಕ್ಸಿಜನ್ ಪ್ರಮಾಣ 80 ತೋರಿಸಿದರು ಲಕ್ಷಣಗಳು ತೋರುವುದಿಲ್ಲ

ಸಾಮಾನ್ಯವಾಗಿ ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ 90ಕ್ಕಿಂತ ಕೆಳಗೆ ಕುಸಿಯದಂತೆ ನೋಡಿಕೊಳ್ಳಬೇಕು. ಪಲ್ಸ್ ಆಕ್ಸಿಮೀಟರ್ನಲ್ಲಿ ಪದೇ ಪದೇ ರಕ್ತದಲ್ಲಿನ ಆಕ್ಸಿಜನ್ ಪ್ರಮಾಣವನ್ನು ಗಮನಿಸುತ್ತಿರಬೇಕು. 90ಕ್ಕಿಂತ ಕಡಿಮೆ ಕಾಣಿಸಿಕೊಂಡರೆ ಎದೆ ಭಾಗದಲ್ಲಿ, ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಆದರೆ ಕೆಲವೊಮ್ಮೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ 80ಕ್ಕಿಂತ ಕೆಳಗೆ ಕುಸಿತ ಕಂಡರು, ಯುವಕರಲ್ಲಿ ಉಸಿರಾಟದ ತೊಂದರೆಯಾಗಲಿ ಅಥವಾ ಆಮ್ಲಜನಕ ಕಡಿಮೆ ಆದ ಅನುಭವಗಳು ಕಾಣಿಸಿಕೊಳ್ಳುವುದಿಲ್ಲ. ರೋಗ ಉಲ್ಭಣವಾಗಿ ಶ್ವಾಸಕೋಶಕ್ಕೆ ತೊಂದರೆ ಆದಾಗ ಮಾತ್ರ ಅದರ ಅನುಭವವಾಗುತ್ತದೆ. ಈ ಕಂಡೀಷನ್ ಯಾವುದೇ ಲಕ್ಷಣಗಳನ್ನು ತೋರದಿರುವುದು ನಿಜಕ್ಕೂ ಅಪಾಯಕಾರಿ.

ಪದೇ ಪದೇ ಆಕ್ಸಿಮೀಟರ್ನಲ್ಲಿ ಆಕ್ಸಿಜನ್ ಪ್ರಮಾಣವನ್ನು ಪರೀಕ್ಷಿಸಿ
ಆಕ್ಸಿಜನ್ ಪ್ರಮಾಣ ಕುಸಿದರೆ ನಿಲ್ಲದೆ ಕೃತಕ ಸಪೋರ್ಟ್ ಪಡೆಯಿರಿ

ಎಷ್ಟೊ ಯುವಕರು ಈ ಕಂಡೀಷನ್ ಅರಿವಾಗಿ ಆಸ್ಪತ್ರೆಗೆ ದಾಖವಾಗುವಷ್ಟರಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ಸೋಂಕು ಇರುವುದು ನಿಜವಾದರೂ ಅದರ ವಿರುದ್ಧ ಹೋರಾಡಲು ಸಿದ್ಧವಿರುವ ಯುವಕರಿಗೆ, ತಮಗೆ ಅರಿವಿಲ್ಲದೆ ಈ ಸೈಲೆಂಟ್ ಕಿಲ್ಲರ್ ತನ್ನ ಪ್ರಭಾವ ಬೀರಲು ಶುರು ಮಾಡಿರುತ್ತದೆ. ಇದಕ್ಕಾಗಿ ಪದೇ ಪದೇ ಆಕ್ಸಿಜನ್ ಪ್ರಮಾಣವನ್ನು ಗಮನಿಸುತ್ತಿರುವುದರಿಂದ ಶ್ವಾಸಕೋಶದಲ್ಲಿ ಆಗಿರುವ ಪರಿಣಾಮದ ಬಗ್ಗೆ ತಿಳಿಸುತ್ತದೆ. ಒಂದು ವೇಳೆ ಆಕ್ಸಿಜನ್ ಪ್ರಮಾಣ 90ಕ್ಕಿಂತ ಕೆಳಗೆ ಕುಸಿದಿದ್ದರು ಯಾವುದೇ ಲಕ್ಷಣಗಳು ಕಾಣಿಸದೆ ಇದ್ದರು ಆಸ್ಪತ್ರೆಗೆ ದಾಖಲಾಗಿ ಕೃತಕ ಉಸಿರಾಟದ ಸಪೋರ್ಟ್ ಪಡೆಯಬೇಕಾಗಿರುವುದು ಅನಿವಾರ್ಯ. ಅಲ್ಲದೆ ಯುವಜನರು ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎನ್ನುತ್ತಾರೆ ವೈದ್ಯರು.

ಸೋಂಕಿತರು ಗಮನಿಸಬೇಕಾದ ಲಕ್ಷಣಗಳು ಏನು?
ಕೋವಿಡ್ ಜೊತೆಗೆ ಬಂದಿರುವ ಕಂಡೀಷನ್ ಇದಲ್ಲ. ಇದಕ್ಕೆ ಮುಂಚೆ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಂಡಿಷನ್, ಕೋವಿಡ್ ನ ಈ ಸಂಕಷ್ಟ ಕಾಲದಲ್ಲಿ ಸೋಂಕಿನ ಜೊತೆಗೆ ಕಾಣಿಸುತ್ತಿರುವುದು ಕಳವಳ ಉಂಟು ಮಾಡಿದೆ. ಸೋಂಕಿತನಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳದೆಯೇ ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ ಕುಸಿತ ಕಾಣುವುದು ಇದರ ಲಕ್ಷಣ. ಇನ್ನು ಈ ಕಂಡಿಷನ್ ಅನ್ನು ಪದೇ ಪದೇ ಆಕ್ಸಿಜನ್ ಲೆವಲ್ ಪರೀಕ್ಷಿಸಿಕೊಂಡು ತಿಳಿದುಕೊಳ್ಳಬೇಕು. ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುವ ಹೊತ್ತಿಗಾಗಲೆ ಹೈಪೋಕ್ಸಿಯಾ ಸಮಸ್ಯೆ ಗಂಭೀರವಾಗಿರುತ್ತದೆ. ಅವರನ್ನು ರಕ್ಷಿಸುವುದಕ್ಕೆ ಬಹಳ ಕಷ್ಟ ಪಡಬೇಕಾಗುತ್ತದೆ.

ಮನೆಯಲ್ಲೆ ಇದ್ದು ಕಂಡೀಷನ್ ಪರೀಕ್ಷಿಸಿಕೊಳ್ಳಿ
ಸೈಲೆಂಟ್ ಕಿಲ್ಲರ್ ಗುರುತಿಸಲು ಆಕ್ಸಿಮೀಟರ್ ಅಸ್ತ್ರ

ಕೋವಿಡ್ ಸೋಂಕು ತಗುಲಿದವರು ಪ್ರತಿ ಆರು ಗಂಟೆಗೆ ಒಮ್ಮೆ ಆಕ್ಸಿಮೀಟರ್ ಮೂಲಕ ರಕ್ತದಲ್ಲಿನ ಆಕ್ಸಿಜನ್ ಪ್ರಮಾಣವನ್ನು ಪರಿಶೀಲಿಸುತ್ತಿರಬೇಕು. ಆಕ್ಸಿಜನ್ ಪ್ರಮಾಣ 94ಕ್ಕಿಂತ ಕೆಳಕ್ಕೆ ಕುಸಿಯದಂತೆ ಗಮನಿಸುತ್ತಿರಬೇಕು. ಮೊದಲು ತನ್ನ ದೇಹದಲ್ಲಿನ ಆಕ್ಸಿಜನ್ ಪ್ರಮಾಣವನ್ನು ನೋಟ್ ಮಾಡಿಕೊಳ್ಳಬೇಕು. ನಂತರ ಆರು ನಿಮಿಷಗಳ ಕಾಲ ಬ್ರಿಸ್ಕ್ ವಾಕ್ ಮಾಡಿ ರೋಗಿ ತನ್ನ ಆಕ್ಸಿಜನ್ ಲೆವಲ್ ಗಮನಿಸಿದಾಗ ಅದು 94ಕ್ಕಿಂತ ಕಡಿಮೆ ಕಾಣಿಸಿದರೆ ರೋಗಿ ಅಪಾಯದಲ್ಲಿದ್ದಾರೆ ಎನ್ನುವುದು ತಿಳಿಯಿರಿ. ಹೀಗೆ ಹ್ಯಾಪಿ ಹೈಪೋಕ್ಸಿಯಾ ಸೈಲೆಂಟ್ ಕಿಲ್ಲರ್ ಬಗ್ಗೆ ತಿಳಿಯಲು ಆಕ್ಸಿಮೀಟರ್ ಒಂದೆ ಅಸ್ತ್ರವಾಗಿದೆ.

ಸೈಲೆಂಟ್ ಕಿಲ್ಲರ್ ಸೋಂಕಿತರಲ್ಲಿ ಇರುವುದು ತಿಳಿದು ಬಂದರೆ ಗಾಬರಿ ಆಗುವುದು ಸಹಜ. ಕೆಲವೊಮ್ಮೆ ಆಕ್ಸಿಜನ್ 94ರ ಮಟ್ಟಕ್ಕಿಂತ ಕೆಳಗೆ ಕುಸಿದರೆ ಕೇವಲ ಪ್ರಾಣಯಾಮ ಹಾಗೂ ಇನ್ನುಳಿದ ಉಸಿರಾಟದ ವ್ಯಾಯಾಮದ ಮೂಲಕ ಇದನ್ನು ಗೆಲ್ಲಬಹುದು. ಇನ್ನು ಆಕ್ಸಿಜನ್ ಪ್ರಮಾಣದಲ್ಲಿ ಏರಿಕೆ ಕಾಣಿಸದೆ ಇದ್ದರೆ ವೈದ್ಯರ ಸಲಹೆ ಅನಿವಾರ್ಯವಾಗುತ್ತದೆ. ಅವರ ಸಲಹೆಯಂತೆ ಎಕ್ಸ್-ರೇ, ಸಿಟಿ ಸ್ಕ್ಯಾನ್ ಗಳ ಮೂಲಕ ಸೋಂಕಿನ ತೀವ್ರತೆಯನ್ನು ಅಳೆದು, ಅಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವುದೆ ಸೂಕ್ತ.

ರೋಗದ ವಿರುದ್ಧ ಯುವಕರು ಹೋರಾಡಬಹುದು ಎನ್ನುವ ಮಾತು ಈಗ ಅಕ್ಷರಶಃ ಸುಳ್ಳಾಗಿದೆ. ರೋಗ ನಿರೋಧಕ ಶಕ್ತಿ ಇದ್ದರು ಇಂತಹ ಸೈಲೆಂಟ್ ಕಿಲ್ಲರ್ಗಳು ಪ್ರಾಣವನ್ನೆ ಬಲಿ ಪಡೆಯುತ್ತಲಿದೆ. ಯುವಕರು ಸಾವಿನ ಕೂಪಕ್ಕೆ ಇಳಿಯುವ ಮುನ್ನ ಎಚ್ಚರಿಕೆ ವಹಿಸಿ, ಈ ಸಂಕಷ್ಟದಿಂದ ಪಾರಾಗಿ.

The post ಸೈಲೆಂಟಾಗಿ ಎಂಟ್ರಿ ಕೊಟ್ಟಿದೆ ‘ ಹ್ಯಾಪಿ ಹೈಪೋಕ್ಸಿಯ’- ಯುವಕರೇ ಇದರ ಟಾರ್ಗೆಟ್ appeared first on News First Kannada.

Source: newsfirstlive.com

Source link