ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಆರೈಕೆಗೆ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ ಗವಿಮಠದ ಶ್ರೀಗಳು, ಇದೀಗ ಸೋಂಕಿತರ ಊಟಕ್ಕಾಗಿ ದಾಸೋಹ ಭವನದಲ್ಲಿ ತಾವೇ ಚಪಾತಿ ಮಾಡುವ ಮೂಲಕ ಇತರರಿಗೂ ಸ್ಫೂರ್ತಿ ತುಂಬಿ ಗಮನ ಸೆಳೆದಿದ್ದಾರೆ.

ಗವಿಸಿದ್ದೇಶ್ವರ ಸ್ವಾಮೀಜಿ ಸರಳತೆಗೆ ಸಾಕ್ಷಿಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಠದ ಯಾವ ಕೆಲಸವನ್ನೂ ಇತರೆ ಜನರಿಗೆ ಹೇಳದೇ ತಾವೇ ಮುಂದೆ ನಿಂತು ಮಾಡಿದ್ದಾರೆ. ಇದನ್ನು ನೋಡುವ ಭಕ್ತಗಣವು ಶ್ರೀಗಳೇ ಕೆಲಸಕ್ಕೆ ಸಜ್ಜಾಗಿದ್ದಾರೆ, ನಾವೇಕೆ ಸುಮ್ಮನೆ ನಿಲ್ಲಬೇಕೆಂದು ಕಾಯಕದಲ್ಲಿ ತೊಡಗುತ್ತಿದ್ದಾರೆ. ಹೀಗೆ ಕಾಯಕಕ್ಕೆ ಇತರರಿಗೆ ಪ್ರೇರಣೆಯಾಗುವ ಶ್ರೀಗಳು ಇದೀಗ ತಾವೇ ಚಪಾತಿ ಮಾಡಿದ್ದಾರೆ.

ಇತ್ತೀಚೆಗೆ ಗವಿಮಠದ ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಿಗೆ ಮಠದಿಂದಲೇ ಅಡುಗೆಯನ್ನು ಸಿದ್ಧಪಡಿಸಿ ಪ್ಯಾಕೆಟ್ ರೂಪದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಈ ವೇಳೆ ದಾಸೋಹ ಭವನದ ಮಹಿಳೆಯರಿಗೆ ಸ್ಫೂರ್ತಿ ತುಂಬಲು ತಾವೇ ದಾಸೋಹದ ಅಡುಗೆ ಕೋಣೆಗೆ ತೆರಳಿ ಅವರೊಟ್ಟಿಗೆ ಕುಳಿತು ಚಪಾತಿ ಮಾಡಿದ್ದಾರೆ.

ಅಭಿನವ ಶ್ರೀಗಳು ಈ ಹಿಂದೆಯೂ ಜಾತ್ರೆಯ ಸಂದರ್ಭದಲ್ಲಿ ಮಠದ ಆವರಣದಲ್ಲಿ ಕಸ ಗೂಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು ಸೇರಿದಂತೆ ಇತರೆ ಕಾರ್ಯದಲ್ಲಿ ತೊಡಗಿ ಸ್ಪೂರ್ತಿಯಾಗಿದ್ದರು. ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಮಿಕರೊಂದಿಗೆ ಸರಳತೆಯಿಂದ ಬೆರೆತು ಕಸ ಗೂಡಿಸಿದ್ದರು. ಇದೀಗ ಸೋಂಕಿತರ ಊಟಕ್ಕಾಗಿ ದಾಸೋಹ ಭವನದಲ್ಲಿ ಚಪಾತಿ ಮಾಡುವ ಮೂಲಕ ಬಾಣಸಿಗರಿಗೆ ಕೋವಿಡ್ ವೇಳೆ ಸ್ಫೂರ್ತಿ ತುಂಬಿದ್ದಾರೆ.

The post ಸೋಂಕಿತರ ಊಟಕ್ಕಾಗಿ ಚಪಾತಿ ಮಾಡಿದ ಗವಿ ಶ್ರೀ appeared first on Public TV.

Source: publictv.in

Source link