– ಬ್ಲ್ಯಾಕ್ ಫಂಗಸ್‍ನ ಲಕ್ಷಣಗಳೇನು..?

ಬೆಂಗಳೂರು: ಮಹಾಮಾರಿ ಜೊತೆ ಮತ್ತೊಂದು ಹೆಮ್ಮಾರಿ ಕಾಡತೊಡಗಿದೆ. ಕೊರೊನಾ ಸಾಲದೂ ಅಂತ ಈಗ ಬ್ಲ್ಯಾಕ್ ಫಂಗಸ್ ಆತಂಕ ಮೂಡಿಸಿದೆ. ಕೊರೊನಾದಿಂದ ಚೇತರಿಕೆ ಕಂಡವರಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು ನಡುಕ ಶುರುವಾಗಿದೆ. ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಮಹಾರಾಷ್ಟ್ರದಲ್ಲಿ ಹೆಚ್ಚಿನ ಜನರು ಬ್ಲ್ಯಾಕ್ ಫಂಗಸ್‍ನಿಂದ ತೊಂದರೆಗೆ ಒಳಗಾಗ್ತಿದ್ದಾರೆ. ಮಹಾರಾಷ್ಟ್ರ ಮಾತ್ರವಲ್ಲದೇ ಕರ್ನಾಟಕಕ್ಕೂ ಈ ಬ್ಲ್ಯಾಕ್ ಭೂತ ಕಾಲಿಟ್ಟಿದೆ.

ಕೊರೊನಾ ಸೋಂಕಿಗೆ ತುತ್ತಾಗಿದ್ದ ಮಧುಮೇಹಿಗಳು, ಚಿಕಿತ್ಸೆ ವೇಳೆ ಸ್ಟಿರಾಯ್ಡ್ ತೆಗೆದುಕೊಂಡವರು, ಸುದೀರ್ಘ ಕಾಲದವರೆಗೂ ಆಕ್ಸಿಜನ್ ಪಡೆದವರಲ್ಲಿ ಈ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕೊರೊನಾ ಚಿಕಿತ್ಸೆ ವೇಳೆ ನೀಡುವ ಕೆಲ ಔಷಧಗಳಿಂದಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಒಮ್ಮೆಗೇ ಏರುತ್ತದೆ. ಇದು ಮಧುಮೇಹ ರೋಗಿಗಳಿಗೆ ಇನ್ನಷ್ಟು ಅಪಾಯ ಉಂಟು ಮಾಡುತ್ತದೆ. ಸಾಮಾನ್ಯ ಆರೋಗ್ಯವಂತರೂ ಡಯಾಬಿಟಿಸ್ ಬಲೆಗೆ ಬೀಳ್ತಿದ್ದಾರೆ. ಸೋಂಕಿನಿಂದ ಗುಣಮುಖರಾದವರು ಜಾಗ್ರತೆಯಿಂದ ಇರುವಂತೆ ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ವಾರಕ್ಕೆ 400 ಬ್ಲ್ಯಾಕ್ ಫಂಗಸ್ ಕೇಸ್ ಆತಂಕ..!
ವಾರಕ್ಕೆ ರಾಜ್ಯದಲ್ಲಿ 400 ಬ್ಲಾಕ್ ಫಂಗಸ್ ಬರಬಹುದು ಎಂದು ರಾಜ್ಯ ಸರ್ಕಾರ ಅಂದಾಜಿಸಿದ್ದು, ವಾರಕ್ಕೆ 20 ಸಾವಿರ ವಯಲ್ಸ್ ನೀಡುವಂತೆ ಕೇಂದ್ರಕ್ಕೆ ಬೇಡಿಕೆ ಇಡಲು ತೀರ್ಮಾನಿಸಿದೆ. ರಾಜ್ಯದಲ್ಲಿ ಎಷ್ಟು ಕೇಸ್ ದಾಖಲಾಗಿದೆ ಎಂಬುದನ್ನು ವರದಿ ನೀಡುವಂತೆ ಟೆಕ್ನಿಕಲ್ ಕಮಿಟಿಗೆ ಸರ್ಕಾರ ಸೂಚಿಸಿದೆ. ವರದಿ ಬಂದ ಬಳಿಕ ಬ್ಲ್ಯಾಕ್ ಫಂಗಸ್‍ಗೆ ಒಳಗಾದವರಿಗೆ ಉಚಿತ ಚಿಕಿತ್ಸೆ ನೀಡುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

ರಾಜ್ಯದಲ್ಲಿ ಈಗಾಗಲೇ 39 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 14 ಕೇಸ್, 2 ಸಾವಾಗಿದ್ರೆ, ಬೀದರ್‍ನಲ್ಲಿ 16 ಕೇಸ್ ಬಂದಿದೆ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೈಸೂರಿನಲ್ಲಿ 2, ಬೆಳಗಾವಿಯಲ್ಲಿ 1 ಪ್ರಕರಣ ದಾಖಲಾಗಿದ್ರೆ ಒಬ್ಬರು ಸಾವನ್ನಪ್ಪಿದ್ದಾರೆ.

ಲಕ್ಷಣಗಳೇನು..?
* ಬ್ಲ್ಯಾಕ್ ಫಂಗಸ್‍ನಿಂದ ಮುಖದಲ್ಲಿ ಬದಲಾವಣೆ
* ಕಣ್ಣು ನೋವು, ಊತ, ಮಸುಕಾಗುವುದು
* ಮೂಗಿನ ಸುತ್ತ ಕಪ್ಪಾಗುವುದು
* ಕೆನ್ನೆಯ ಮೂಳೆಯಲ್ಲಿ ನೋವು
* ಮರಗಟ್ಟುವಿಕೆಯ ಅನುಭವ


* ಹಲ್ಲುಗಳು ಸಡಿಲಗೊಳ್ಳುವುದು
* ಎದೆ ನೋವು, ಚರ್ಮ ಹಾನಿ
* ಶ್ವಾಸಕೋಶದಲ್ಲಿ ನೀರು ಸೇರಿಕೊಳ್ಳುವುದು
* ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುವುದು

ಬ್ಲ್ಯಾಕ್ ಫಂಗಸ್ ಒಂದು ಮಾರಕ ಕಪ್ಪು ಶಿಲೀಂದ್ರವಾಗಿದೆ. ಉಸಿರಾಟದ ವೇಳೆ ಗಾಳಿಯಿಂದ ಸೇರುತ್ತದೆ. ಬಳಿಕ ಶ್ವಾಸಕೋಶ, ಎದೆಯ ಕುಳಿಗಳಿಗೆ ಸೇರಿ ಸಮಸ್ಯೆ ತಂದೊಡ್ಡುತ್ತದೆ. ಸದ್ಯ ಕೊರೊನಾದಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಕಂಡು ಬರುತ್ತಿದೆ. ಚಿಕಿತ್ಸೆ ವೇಳೆ ಸ್ಟಿರಾಯ್ಡ್ ತೆಗೆದುಕೊಳ್ಳುವುದು, ಸುದೀರ್ಘ ಆಕ್ಸಿಜನ್ ತೆಗೆದುಕೊಳ್ಳುವುದು ಇದಕ್ಕೆ ಕಾರಣ ಅಂತ ಹೇಳಲಾಗ್ತಿದೆ. ಒಟ್ಟಿನಲ್ಲಿ ಬ್ಲ್ಯಾಕ್ ಫಂಗಸ್‍ನ ಯಾವುದೇ ಲಕ್ಷಣ ಇದ್ರೂ ಯಾಮಾರದೆ ಚಿಕಿತ್ಸೆ ಪಡೆದುಕೊಳ್ಳಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ.

The post ಸೋಂಕಿತ ಮಧುಮೇಹಿಗಳು, ಸ್ಟಿರಾಯ್ಡ್ ತೆಗೆದುಕೊಳ್ಳೋವ್ರೇ ಎಚ್ಚರ- ಶುರುವಾಗಿದೆ ಬ್ಲ್ಯಾಕ್ ಫಂಗಸ್ ಕಾಟ appeared first on Public TV.

Source: publictv.in

Source link