ದಾವಣಗೆರೆ: ಆಕ್ಸಿಜನ್ ಕಿತ್ತು ಮತ್ತೊಬ್ಬ ರೋಗಿಗೆ ನೀಡಿದ ಬೆನ್ನಲ್ಲೇ ಆಕ್ಸಿಜನ್ ಸಂಪರ್ಕದಿಂದ ವಿಮುಖನಾದ ಸೋಂಕಿತ ಸಾವನಪ್ಪಿದ್ದಾನೆ ಎಂಬ ಆರೋಪವೊಂದು ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯ ಎಂಐಸಿಯು ಘಟಕದಲ್ಲಿ ಕೇಳಿಬಂದಿದೆ.

ಮಾಲತೇಶ್ ಬಡಿಗೇರ್ (42) ಮೃತಪಟ್ಟ ಸೋಂಕಿತ. ಮಾಲತೇಶ್ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಬಾಸೂರು ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಕೊರೊನಾ ಸೋಂಕಿನ ಹಿನ್ನೆಲೆ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಾಲತೇಶ್, ಜಿಲ್ಲಾಸ್ಪತ್ರೆಯ ಎಂಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆಕ್ಸಿಜನ್ ಅನಿವಾರ್ಯವಾಗಿದ್ದ ಪರಿಸ್ಥಿತಿಯಲ್ಲಿದ್ದರು. ಇವರ ಪಕ್ಕದ ಬೆಡ್‍ಗೆ, ಆಕ್ಸಿಜನ್ ಅವಶ್ಯಕತೆ ಇರುವ ಮತ್ತೊಬ್ಬ ಸೋಂಕಿತ ದಾಖಲಾಗಿದ್ದರು. ಈ ವೇಳೆ ವೈದ್ಯ, ಮಾಲತೇಶ್ ಅವರ ಆಕ್ಸಿಜನ್ ಸಂಪರ್ಕವನ್ನು ಹೊಸ ರೋಗಿಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತ ಈ ಬೆನ್ನಲ್ಲೇ ಮಾಲತೇಶ್ ಆಕ್ಸಿಜನ್ ಕೊರತೆ ಹಿನ್ನೆಲೆ ಒದ್ದಾಡಿ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಕಿಡಿಕಾರಿದ್ದಾರೆ. ಅಲ್ಲದೆ ಮೃತನ ಸಹೋದರ ಪ್ರವೀಣ್ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾನೆ.

The post ಸೋಂಕಿತ ಸಾವು – ಆಕ್ಸಿಜನ್ ಸಂಪರ್ಕ ಕಿತ್ತು ಮತ್ತೊಬ್ಬ ರೋಗಿಗೆ ನೀಡಿರುವ ಆರೋಪ appeared first on Public TV.

Source: publictv.in

Source link