ಮುಂಬೈ : ದೇಶದಲ್ಲಿ ತೀವ್ರಗತಿಯಲ್ಲಿ ಹರಡುತ್ತಿರುವ ಕೋವಿಡ್ ಎರಡನೇ ಅಲೆಗೆ ಬಾಲಿವುಡ್ ತಾರೆಯರು ನಲುಗುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟ-ನಟಿಯರು ಕೋವಿಡ್ ಮಹಾಮಾರಿ ಸೋಂಕಿನಿಂದ ಬಳಲುತ್ತಿದ್ದು, ಇದೀಗ ನಟ ಸೋನು ಸೂದ್, ಸುಮೀತ್ ವ್ಯಾಸ್ ಹಾಗೂ ಫ‍್ಯಾಶನ್ ಡಿಸೈನರ್ ಮನಿಶ್ ಮಲ್ಹೊತ್ರಾ ಅವರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದೆ.

ಕಳೆದ ವರ್ಷದ ಲಾಕ್ ಡೌನ್ ವೇಳೆ ಸಂಕಷ್ಟದಲ್ಲಿದ್ದ ಸಾವಿರಾರು ಜನರಿಗೆ ಸಹಾಯ ಹಸ್ತ ಚಾಚಿದ್ದ ಸೋನು ಸೂದ್ ಅವರಿಗೆ ಇಂದು ಕೋವಿಡ್ ಸೋಂಕು ಪತ್ತೆಯಾಗಿದೆ. ಈ ವಿಚಾರವನ್ನು ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿದ್ದಾರೆ.

‘ಇಂದು ಮುಂಜಾನೆ ನನಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿರುವುದು ದೃಢ ಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೋಮ್ ಕ್ವಾರೆಂಟೈನ್‍ಗೆ ಒಳಗಾಗಿದ್ದೇನೆ’ ಎಂದು ಸೋನು ಟ್ವೀಟ್‍ ಮಾಡಿ ತಿಳಿಸಿದ್ದಾರೆ. ಹಾಗೂ ಕೋವಿಡ್ ಪಾಸಿಟಿವ್ ಬಂದಿದ್ದರೂ ಕೂಡ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ನಿಮ್ಮ ಜತೆ ಇರುತ್ತೇನೆ ಎಂದು ಬೆಂಬಲಿಗರಿಗೆ ಅಭಯ ಹಸ್ತ ನೀಡಿದ್ದಾರೆ.

ಇನ್ನು ಇತ್ತೀಚಿಗಷ್ಟೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸಂಪೂರ್ಣ ಗುಣಮುಖರಾಗಿ ಮನೆಗೆ ವಾಪಾಸ್ ಆಗಿದ್ದಾರೆ. ಬಾಲಿವುಡ್ ನಟಿ ಕತ್ರಿನಾ ಕೈಫ್, ಹಿರಿಯ ನಟ ಗೋವಿಂದ್, ವಿಕ್ಕಿ ಕೌಶಾಲ್, ಭೂಮಿ ಪೆಡ್ನೆಕರ್, ಆಲಿಯಾ ಭಟ್, ಫಾತಿಮಾ ಸನಾ ಶೇಖ್ ಸೇರಿದಂತೆ ಸಾಕಷ್ಟು ತಾರೆಯರಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿತ್ತು.

ಸಿನೆಮಾ – Udayavani – ಉದಯವಾಣಿ
Read More