ಸೋಷಿಯಲ್ ಮೀಡಿಯಾಗಳ ಸಂಪಾದನೆಗೆ ಭಾರತ ಬೇಕು.. ಇಲ್ಲಿನ ನಿಯಮಗಳೇಕೆ ಬೇಡ..?

ಸೋಷಿಯಲ್ ಮೀಡಿಯಾಗಳ ಸಂಪಾದನೆಗೆ ಭಾರತ ಬೇಕು.. ಇಲ್ಲಿನ ನಿಯಮಗಳೇಕೆ ಬೇಡ..?

ನವದೆಹಲಿ: ಸದ್ಯ ದೇಶದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವಿಚಾರ ಕೇಂದ್ರ ಸರ್ಕಾರ ಹಾಗೂ ಸೋಷಿಯಲ್ ಮೀಡಿಯಾಗಳ ನಡುವೆ ನಡೆಯುತ್ತಿರುವ ಸಮರ. ಇದರಲ್ಲಿ ಒಂದಷ್ಟು ಸೋಷಿಯಲ್ ಮೀಡಿಯಾ ಪ್ಲಾಟ್​​ಫಾರ್ಮ್​ಗಳು ಕೇಂದ್ರ ಸರ್ಕಾರದ ಸೂಚನೆಯಂತೆ ಐಟಿ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿವೆ. ಆದ್ರೆ ಫೇಸ್​ಬುಕ್, ವಾಟ್ಸ್​ಆ್ಯಪ್ ಮತ್ತು ಟ್ವಿಟರ್​ ಈ ನಿಯಮಗಳನ್ನು ಒಪ್ಪಿಕೊಳ್ಳಲು ಮೀನಾಮೇಷ ಎಣಿಸುತ್ತಿವೆ.

ಕೇಂದ್ರ ಸರ್ಕಾರ ಹೇಳುತ್ತಿರುವುದೇನು..?
ದೇಶದಲ್ಲಿ ಸೋಷಿಯಲ್ ಮೀಡಿಯಾಗಳು ಜವಾಬ್ದಾರಿಯುತ ಮಾಧ್ಯಮಗಳಾಗಿದ್ದು ಅವುಗಳ ಮೂಲಕ ಹಿಂಸೆ, ಸುಳ್ಳುಸುದ್ದಿಗಳು ಹರಡದಂತೆ ಎಚ್ಚರಿಕೆ ವಹಿಸಲು ತಾವು ರೂಪಿಸಿರುವ ನೂತನ ಐಟಿ ನಿಯಮಗಳನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಐಟಿ ನಿಯಮಗಳಲ್ಲಿ ಸ್ವದೇಶಿ ಅಧಿಕಾರಿಗಳನ್ನು ಹಾಗೂ ಕೇಂದ್ರದ ಸಚಿವಾಲಯದ ಕೆಲವು ಅಧಿಕಾರಿಗಳನ್ನು ಸಂಸ್ಥೆಗೆ ಸೇರಿಸಿಕೊಂಡು ಅವರಿಂದ ಮೇಲ್ವೀಚಾರಣೆಗೆ ಒಳಗಾಗಬೇಕು ಎಂದು ಹೇಳಿದೆ. ಇನ್ನು ವಾಟ್ಸ್​ಆ್ಯಪ್​ನಲ್ಲಿ ಸುಳ್ಳುಸುದ್ದಿಗಳು ಹರಡುವುದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸುಳ್ಳು ಸುದ್ದಿಯ ಮೂಲ ಕರ್ತೃವಿನ ಮಾಹಿತಿ ನೀಡಬೇಕೆಂದು ಹೇಳಿದೆ. ಆದರೆ ಫೇಸ್​ಬುಕ್ ವಾಟ್ಸ್​ಆ್ಯಪ್​ನಂಥ ಸೋಷಿಯಲ್ ಮೀಡಿಯಾ ಸಂಸ್ಥೆಗಳು ಹೀಗೆ ಮಾಡಿದಲ್ಲಿ ತಮ್ಮ ಪ್ರೈವಸಿ ನಿಯಮಗಳಿಗೆ ಧಕ್ಕೆಯಾಗುತ್ತದೆ.. ಬಳಕೆದಾರರ ಮಾಹಿತಿ ನೀಡಲು ಸಾಧ್ಯವಿಲ್ಲ ಎನ್ನುತ್ತಿವೆ.

ಸೋಷಿಯಲ್ ಮೀಡಿಯಾಗಳ ವಾದವೇನು..?
ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಟ್ವಿಟರ್ ನಾವು ನಮ್ಮ ಬಳಕೆದಾರರ ವಾಕ್​ಸ್ವಾತಂತ್ರ್ಯಕ್ಕೆ ಎಂದಿಗೂ ಧಕ್ಕೆ ತರುವುದಿಲ್ಲ. ಕಾನೂನಿನ ಪ್ರಕಾರ ನಮ್ಮ ಬಳಕೆದಾರರ ಪ್ರೈವಸಿಯನ್ನು ಬಿಟ್ಟುಕೊಡಲು ನಾವು ತಯಾರಿಲ್ಲ. ಜನರ ವಾಕ್​ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿರುವ ಕುರಿತು ನಮಗೆ ಕಾಳಜಿ ಇದೆ. ನಾವು ಭಾರತ ಸರ್ಕಾರದ ಜೊತೆಗೆ ನಿರಂತರ ಮಾತುಕತೆಯಲ್ಲಿ ಇದ್ದೇ ಇರುತ್ತೇವೆ. ಜನರ ಆಸಕ್ತಿಗೆ ತಕ್ಕಂತೆ ನಡೆದುಕೊಳ್ಳುವುದು ಚುನಾಯಿತ ಅಧಿಕಾರಿಗಳ ಜವಾಬ್ದಾರಿಯೂ ಹೌದು ಎಂದು ಹೇಳಿದೆ.

ಸರ್ಕಾರ ಸೋಷಿಯಲ್ ಮೀಡಿಯಾಗಳಿಗೆ ಕಡಿವಾಣ ಹಾಕಲು ಮುಂದಾಗಿರುವುದೇಕೆ..?
ಯಾವುದೇ ಸೋಷಿಯಲ್ ಮೀಡಿಯಾ ಒಂದು ದೇಶದಲ್ಲಿ ತನ್ನ ಆ್ಯಪ್​ ಮೂಲಕ ಜನರನ್ನು ಸಂಪರ್ಕಿಸುತ್ತದೆ ಎಂದಾದಲ್ಲಿ ಆ ಸೋಷಿಯಲ್ ಮೀಡಿಯಾ ಆ ದೇಶದ ಸಂಸ್ಕೃತಿ, ಕಾನೂನು ಕಟ್ಟಳೆಗಳಿಗೆ ಗೌರವ ಕೊಡಬೇಕಾಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಹಲವು ಬಾರಿ ದೇಶದ ಭದ್ರತೆ, ಕೋಮುವಾದ, ಗಲಭೆಯಂಥ ಸೂಕ್ಷ್ಮ ವಿಚಾರಗಳೂ ಸಹ ಚರ್ಚೆಯಾಗುತ್ತವೆ ಮತ್ತು ದೊಡ್ಡ ಮಟ್ಟದ ಹೋರಾಟ ಅಥವಾ ಪ್ರತಿಭಟನೆಗೆ ವೇದಿಕೆಯಾಗುವುದೂ ಉಂಟು. ಇಂಥ ಸಮಯದಲ್ಲಿ ಹಿಂಸೆ ನಡೆಯದಂತೆ ತಡೆಯುವಲ್ಲಿ ಸೋಷಿಯಲ್ ಮೀಡಿಯಾಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಕೇಂದ್ರ ಸರ್ಕಾರ ಸೋಷಿಯಲ್ ಮೀಡಿಯಾಗಳಿಗೆ ಕಡಿವಾಣ ಹಾಕಲು ಹೊಸ ಐಟಿ ನಿಯಮಗಳನ್ನು ರೂಪಿಸಿ ಅದನ್ನು ಪಾಲಿಸುವಂತೆ ಹೇಳಿತ್ತು ಮತ್ತು ಕಾಲಾವಕಾಶವನ್ನೂ ನೀಡಿತ್ತು. ಆದರೆ ಸ್ವದೇಶಿ ಆ್ಯಪ್​ಗಳಲ್ಲಿ ಒಂದಾದ, ಟ್ವಿಟರ್​ಗೆ ಪರ್ಯಾಯವಾಗಿ ಹುಟ್ಟಿಕೊಂಡ ಕೂ ಆ್ಯಪ್ ಹೊರತಾಗಿ ಬೇರ್ಯಾವುದೇ ಸೋಷಿಯಲ್ ಮೀಡಿಯಾ ಈ ನಿಯಮಗಳನ್ನು ಗಡುವು ಮುಗಿಯುವವರೆಗೂ ಪಾಲಿಸಿಲ್ಲ.

ಅಮೆರಿಕಾದಲ್ಲೊಂದು ನೀತಿ ಭಾರತದಲ್ಲೊಂದು ನೀತಿ
ಹಾಗೆ ನೋಡಿದ್ರೆ ಅಮೆರಿಕಾದಂಥ ದೇಶದಲ್ಲಿ ಅಲ್ಲಿನ ಕಾನೂನಿಗೆ ತಲೆಬಾಗಿ ಅಲ್ಲಿನ ಸರ್ಕಾರ ಕೇಳಿದ ದತ್ತಾಂಶಗಳನ್ನು ಬಿಚ್ಚಿಡುತ್ತವೆ. ಅಲ್ಲದೇ ಸೋಷಿಯಲ್ ಮೀಡಿಯಾಗಳು ತಪ್ಪು ಹಾದಿ ಹಿಡಿದಲ್ಲಿ ಅವುಗಳನ್ನ ಕೋರ್ಟ್​ಗೆ ಎಳೆದು ಪ್ರಶ್ನಿಸುತ್ತವೆ. ತಕ್ಕ ಶಿಕ್ಷೆಯನ್ನೂ ನೀಡುತ್ತವೆ. ಹೀಗಾಗಿಯೇ ಏನೋ ಅಮೆರಿಕಾದಲ್ಲಿ ಸಾಮಾಜಿಕ ಜಾಲತಾಣಗಳು ಅಲ್ಲಿನ ನಿಯಮಗಳನ್ನು ಶಿರಸಾವಹಿಸಿ ಪಾಲಿಸುತ್ತವೆ. ಆದ್ರೆ ದೊಡ್ಡ ಮಟ್ಟದ ಬಳಕೆದಾರರನ್ನ ಹೊಂದಿರುವ ಭಾರತದಲ್ಲಿ ಈ ಸೋಷಿಯಲ್ ಮೀಡಿಯಾಗಳು ಭಾರತದ ನಿಯಮಗಳನ್ನು ಪಾಲಿಸಲು ಬಿಲ್​ಕುಲ್ ತಯಾರಿಲ್ಲ ಎಂಬಂತೆ ಆಡುತ್ತಿವೆ. ಇನ್ನು ಜನಸಂಖ್ಯೆಯಲ್ಲಿ ನಂಬರ್ ಒನ್ ಎನ್ನಿಸಿಕೊಂಡಿರೋ ಈ ಚೀನಾ ಈ ಸೋಷಿಯಲ್ ಮೀಡಿಯಾಗಳನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ತನ್ನದೇ ಆ್ಯಪ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರಿಂದಾಗುವ ಲಾಭವೂ ಸಹ ಅದೇ ದೇಶದ ಪಾಲಾಗುತ್ತದೆಯೇ ಹೊರತು ಬೇರೊಂದು ದೇಶಕ್ಕೆ ಹೋಗೋದಿಲ್ಲ.

ಭಾರತದಲ್ಲಿ ಕೋಟಿಗಟ್ಟಲೆ ಹಣ ಗಳಿಸುವ ಸೋಷಿಯಲ್ ಮೀಡಿಯಾಗಳು ಸದ್ಯ ಕೋಟ್ಯಂತರ ಬಳಕೆದಾರರನ್ನ ಹೊಂದಿದ್ದು ವಾರ್ಷಿಕವಾಗಿ ಸಾವಿರಾರು ಕೋಟಿ ಆದಾಯ ಕಾಣುತ್ತಿವೆ. ಆದಾಯ ಗಳಿಸಲಷ್ಟೇ ಭಾರತ ಬೇಕು ಎನ್ನುವ ಸೋಷಿಯಲ್ ಮೀಡಿಯಾಗಳು ಇಲ್ಲಿನ ಕಾನೂನಿಗೆ, ನಿಯಮಗಳನ್ನು ಮಾತ್ರ ಬೇಡ ಎನ್ನುತ್ತಿವೆ. ಇನ್ನು ನಿಯಮಗಳನ್ನು ಪಾಲಿಸಲಿದಿರಲು ಇವು ನೀಡುತ್ತಿರುವ ಕಾರಣ ವಾಕ್​ಸ್ವಾತಂತ್ರ್ಯ.

ಈ ಹಿಂದೆ ಟ್ವಿಟರ್ ಲೇಹ್, ಲಡಾಖ್​ನ್ನು ಚೀನಾದ ಪ್ರಾಂತ್ಯದಲ್ಲಿರುವ ಭಾಗವೆಂದು ತೋರಿಸುವ ಮೂಲಕ ಅಚಾತುರ್ಯ ಮಾಡಿಕೊಂಡಿತ್ತು. ಇಂಥ ಸೂಕ್ಷ್ಮ ವಿಚಾರಗಳು ದೇಶದ ಪ್ರಜೆಗಳ ಮೇಲೆ ಬೀರುವ ಪರಿಣಾಮ ದೊಡ್ಡಮಟ್ಟದ್ದಾಗಿರುತ್ತದೆ. ಇನ್ನು ಹಲವು ಗಲಭೆಗಳಿಗೂ ಸಹ ಸೋಷಿಯಲ್ ಮೀಡಿಯಾ ವೇದಿಕೆಯಾಗಿರುವ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ. ಹೀಗಾಗಿ ಇಂಥ ಸೂಕ್ಷ್ಮ ವಿಚಾರಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಐಟಿ ನಿಯಮಗಳನ್ನು ರೂಪಿಸಿ ಸೋಷಿಯಲ್ ಮೀಡಿಯಾಗಳು ಇವುಗಳನ್ನ ಪಾಲಿಸಲೇ ಬೇಕು ಎಂದು ಹೇಳುತ್ತಿದೆ.

ಐಟಿ ನಿಯಮಗಳ ಪರಿಣಾಮ ಏನು..?
ಹಾಗಾದ್ರೆ ಸೋಷಿಯಲ್ ಮೀಡಿಯಾಗಳು ಈ ಐಟಿ ನಿಯಮಗಳನ್ನು ಪಾಲಿಸದಿರಲಿ ಕಾರಣವೇನು..? ಈ ನಿಯಮಗಳನ್ನು ಪಾಲಿಸೋದ್ರಿಂದ ಅವುಗಳಿಗೆ ಆಗುವ ತೊಂದರೆ ಏನು ಅನ್ನೋ ಪ್ರಶ್ನೆಯೂ ಹುಟ್ಟಿಕೊಳ್ಳೋದುಂಟು. ಒಂದು ವೇಳೆ ಈ ನಿಯಮಗಳನ್ನು ಪಾಲಿಸಲು ಸೋಷಿಯಲ್ ಮೀಡಿಯಾಗಳು ಒಪ್ಪಿಕೊಂಡಲ್ಲಿ ಸರ್ಕಾರದ ಅಧಿಕಾರಿಗಳು, ಸ್ವದೇಶಿ ಅಧಿಕಾರಿಗಳು ಈ ಸೋಷಿಯಲ್ ಮೀಡಿಯಾಗಳ ಕಂಟೆಂಟ್​​ಗಳನ್ನ ಮೇಲ್ವಿಚಾರಣೆ ಮಾಡುತ್ತಾರೆ. ಹೀಗೆ ಮಾಡುವ ಮೂಲಕ ನಾವು ಸುಳ್ಳುಸುದ್ದಿಗಳು ಹರಡುವ ಕಂಟೆಂಟ್​ಗಳನ್ನು ನಿಯಂತ್ರಿಸುತ್ತೇವೆ, ಹಿಂಸೆಗೆ ಪ್ರಚೋದನೆ ನೀಡುವ ಅಥವಾ ಕೋಮುವಾದ ಸೃಷ್ಟಿಸುವ ಕಂಟೆಂಟ್​​ಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಸರ್ಕಾರ ಹೇಳುತ್ತಿದೆ.

ಐಟಿ ನಿಯಮಗಳು ದುಷ್ಪರಿಣಾಮಕ್ಕೂ ಕಾರಣವಾಗುತ್ತವಾ..?
ಆದ್ರೆ ಹೀಗೆ ಸರ್ಕಾರದ ಅಧಿಕಾರಿಗಳು ಸೋಷಿಯಲ್ ಮೀಡಿಯಾದಲ್ಲಿ ಕೂತಾಗ ಅದರ ದುರ್ಬಳಕೆಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ಹೇಳಿಕೇಳಿ ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಚುನಾವಣಾ ಪ್ರಚಾರಗಳು ದೊಡ್ಡಮಟ್ಟದಲ್ಲಿ ನಡೆಯುತ್ತಿವೆ. ಹೀಗಿದ್ದಾಗ ಆಡಳಿತದಲ್ಲಿರುವ ಸರ್ಕಾರದ ಅಧಿಕಾರಿಗಳೇ ಸೋಷಿಯಲ್ ಮೀಡಿಯಾದ ಕಂಟೆಂಟ್​ಗಳನ್ನ ಮೇಲ್ವಿಚಾರಣೆ ಮಾಡುತ್ತಾರೆಂದರೆ ಅವರಿಂದ ಸಾಮಾಜಿಕ ಜಾಲತಾಣದ ದುರ್ಬಳಕೆಯಾಗುವುದಿಲ್ಲ ಅನ್ನೋದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಹೀಗಾಗಿ ಅಧಿಕಾರದಲ್ಲಿರುವ ಯಾವುದೇ ಪಕ್ಷದ ಕೈಗೆ ಸೋಷಿಯಲ್ ಮೀಡಿಯಾಗಳ ಜುಟ್ಟು ನೀಡುವುದು ಅಪಾಯಕಾರಿಯನ್ನೋದು ಕೂಡ ಸತ್ಯವೇ.

ಇಲ್ಲಿ ಯಾವುದೇ ದೇಶದ ಸರ್ಕಾರಕ್ಕೆ ತನ್ನ ದೇಶದ ಭದ್ರತೆ, ಸಾರ್ವಭೌಮತ್ವವನ್ನ ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳು ಆ ನೆಲದ ಕಾನೂನಿಗೆ ತಲೆಬಾಗಲೇಬೇಕಾಗುತ್ತದೆ. ಆದ್ರೆ ಟ್ವಿಟರ್​ ವಾಟ್ಸ್​ಆ್ಯಪ್​ನಂಥ ಮೀಡಿಯಾಗಳು ಈ ನಿಯಮಗಳಿಂದ ತಪ್ಪಿಸಿಕೊಳ್ಳಲು ವಾಮಮಾರ್ಗಗಳನ್ನ ಕಂಡುಕೊಳ್ಳಲು ಮುಂದಾಗಿವೆ. ಈ ಸಮರದ ಕೊನೆಯ ಫಲಿತಾಂಶವಾಗಿ ಟ್ವಿಟರ್, ವಾಟ್ಸ್​​ಆ್ಯಪ್​ನಂಥ ಪ್ಲಾಟ್​ಫಾರ್ಮ್​ಗಳು ಮುಂದೊಂದು ದಿನ ಬ್ಯಾನ್ ಆದ್ರೂ ಅದ್ರಲ್ಲಿ ಅಚ್ಚರಿಯಿಲ್ಲ. ಇವುಗಳ ಬದಲಿಗೆ ದೇಶೀ ಆ್ಯಪ್​ಗಳು ಹುಟ್ಟಿಕೊಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ.

ವಿಶೇಷ ವರದಿ: ರಾಜಶೇಖರ್ ಬಂಡೆ, ಡಿಜಿಟಲ್ ಡೆಸ್ಕ್

The post ಸೋಷಿಯಲ್ ಮೀಡಿಯಾಗಳ ಸಂಪಾದನೆಗೆ ಭಾರತ ಬೇಕು.. ಇಲ್ಲಿನ ನಿಯಮಗಳೇಕೆ ಬೇಡ..? appeared first on News First Kannada.

Source: newsfirstlive.com

Source link