ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​ | KGF Chapter 2 actor Sanjay Dutt talks about difference between South Film Industry and Bollywood


ಸೌತ್​ ಚಿತ್ರಗಳ ಎದುರು ಬಾಲಿವುಡ್​ ಎಡವಿದ್ದು ಎಲ್ಲಿ? ಉತ್ತರ ಹುಡುಕಿದ ‘ಕೆಜಿಎಫ್​ 2’ ಅಧೀರ ಸಂಜಯ್​ ದತ್​

ಸಂಜಯ್ ದತ್

ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ಕಂಡು ಬಾಲಿವುಡ್​ (Bollywood) ಅಕ್ಷರಶಃ ಬೆರಗಾಗಿದೆ. ಕನ್ನಡ, ತಮಿಳು, ತೆಲುಗು ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಿ, ನೂರಾರು ಕೋಟಿ ರೂಪಾಯಿ ಕಮಾಯಿ ಮಾಡುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ನಿರೀಕ್ಷೆಗೂ ಮೀರಿ ಕಲೆಕ್ಷನ್​ ಮಾಡುತ್ತಿದೆ. ನಟ ಯಶ್​ ಮತ್ತು ನಿರ್ದೇಶಕ ಪ್ರಶಾಂತ್​ ನೀಲ್​ ಅವರನ್ನು ಪರಭಾಷೆ ಮಂದಿ ಕೂಡ ಶ್ಲಾಘಿಸುತ್ತಿದ್ದಾರೆ. ‘ಕೆಜಿಎಫ್​ 2’, ‘ಪುಷ್ಪ’, ‘ಆರ್​ಆರ್​ಆರ್​’ ಮುಂತಾದ ಸಿನಿಮಾಗಳ ಆರ್ಭಟದ ಎದುರು ಹಿಂದಿ ಚಿತ್ರರಂಗ ಮಂಕಾಗಿದೆ. ಇದನ್ನು ಬೇರೆ ಬೇರೆ ನಟರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುತ್ತಿದ್ದಾರೆ. ಬಾಲಿವುಡ್​ ಸ್ಟಾರ್​ ಕಲಾವಿದ ಸಂಜಯ್​ ದತ್​ (Sanjay Dutt) ಅವರು ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೌತ್​ ಸಿನಿಮಾಗಳ ಎದುರು ಬಾಲಿವುಡ್​ ಎಡವಲು ಕಾರಣ ಏನು ಎಂಬುದನ್ನು ಅವರು ವಿಶ್ಲೇಷಿಸಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾದಲ್ಲಿ ಮಾಡಿರುವ ಅಧೀರ ಎಂಬ ಪಾತ್ರದಿಂದ ಸಂಜಯ್​ ದತ್​ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ಅನೇಕ ಮಾಧ್ಯಮಗಳಿಗೆ ಅವರು ಸಂದರ್ಶನ ನೀಡುತ್ತಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗ ಮತ್ತು ಬಾಲಿವುಡ್​ ಇಂಡಸ್ಟ್ರೀ ನಡುವೆ ಏನು ವ್ಯತ್ಯಾಸ ಇದೆ ಎಂಬುದನ್ನು ಸಂಜಯ್​ ದತ್​ ವಿವರಿಸಿದ್ದಾರೆ. ಹಿಂದಿ ಸಿನಿಮಾಗಳ ನಿರ್ಮಾಣದ ಪದ್ದತಿಯಲ್ಲೇ ಸಮಸ್ಯೆ ಇದೆ ಎಂದು ಅವರು ಹೇಳಿದ್ದಾರೆ. ‘ಟೈಮ್ಸ್​ ಆಫ್​ ಇಂಡಿಯಾ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

‘ನಿಜಜೀವನಕ್ಕಿಂತಲೂ ದೊಡ್ಡದಾದ ಹೀರೋಯಿಸಂ ಅನ್ನು ಬಾಲಿವುಡ್​ ಮರೆತಿದೆ ಎಂದು ನನಗೆ ಅನಿಸುತ್ತಿದೆ. ದಕ್ಷಿಣ ಭಾರತದ ಸಿನಿಮಾರಂಗ ಅದನ್ನು ಮರೆತಿಲ್ಲ. ಹಾಗಂತ ರೊಮ್ಯಾಂಟಿಕ್​ ಕಾಮಿಡಿ ಶೈಲಿಯ ಸಿನಿಮಾಗಳು ಕೆಟ್ಟದ್ದು ಅಂತ ನಾನು ಹೇಳುತ್ತಿಲ್ಲ. ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್​, ರಾಜಸ್ತಾನ​ ಮುಂತಾದ ಕಡೆ ಇರುವ ದೊಡ್ಡ ವರ್ಗದ ಪ್ರೇಕ್ಷಕರನ್ನು ನಾವು ಯಾಕೆ ಮರೆತೆವು? ಹಿಂದಿ ಚಿತ್ರರಂಗದಲ್ಲಿ ಹಳೇ ಟ್ರೆಂಡ್​ ಮರಳಲಿದೆ ಎಂಬ ಭರವಸೆ ನನಗಿದೆ. ಮೊದಲೆಲ್ಲ ಪ್ರತ್ಯೇಕ ನಿರ್ಮಾಪಕರು ಇರುತ್ತಿದ್ದರು. ನಂತರ ಸಿನಿಮಾ ನಿರ್ಮಾಣದಲ್ಲಿ ಕಾರ್ಪೊರೇಟ್​ ಪದ್ದತಿ ಬಂತು. ಹಾಗೆ ಆಗಿದ್ದು ಒಳ್ಳೆಯದೇ. ಆದರೆ ಕಾರ್ಪೊರೇಟ್​ ಪದ್ದತಿ ಎಂಬುದು ನಮ್ಮ ಸಿನಿಮಾಗಳ ಅಭಿರುಚಿಯಲ್ಲಿ ಮಧ್ಯಪ್ರವೇಶ ಮಾಡಬಾರದು’ ಎಂದು ಸಂಜಯ್​ ದತ್​ ಹೇಳಿದ್ದಾರೆ.

‘ಉದಾಹರಣೆಗೆ ಹೇಳುವುದಾದರೆ.. ತಮ್ಮ ಮೇಲೆ ನಂಬಿಕೆ ಇರುವ ನಿರ್ಮಾಪಕರು ರಾಜಮೌಳಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಮೊದಲು ನಮ್ಮಲ್ಲೂ ಕೂಡ ಅಂಥ ನಿರ್ಮಾಪಕರು ಇದ್ದರು. ಯಶ್​ ಚೋಪ್ರಾ, ಗುಲ್ಷನ್​ ರೈ, ಸುಭಾಷ್​ ಘಾಯ್​, ಯಶ್​ ಜೋಹರ್​ ಮುಂತಾದವರು ನಿರ್ಮಿಸಿದ ಸಿನಿಮಾಗಳನ್ನು ಗಮನಿಸಬಹುದು. ದಕ್ಷಿಣದವರು ಪೇಪರ್​ನಲ್ಲಿ ಸ್ಕ್ರಿಪ್ಟ್​ ನೋಡುತ್ತಾರೆ, ನಾವು ಲಾಭದ ಲೆಕ್ಕಾಚಾರ ನೋಡುತ್ತೇವೆ’ ಎಂದು ಸಂಜಯ್​ ದತ್​ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *