‘ಸೌತ್ ಸಿನಿಮಾಗಳ ವಿಚಾರದಲ್ಲಿ ಈ ತಪ್ಪು ಮಾಡಬೇಡಿ’; ಬಾಲಿವುಡ್ ಮಂದಿಗೆ ಖ್ಯಾತ ನಟನ ಕಿವಿಮಾತು | We should not remake South cinemas Says Nawazuddin Siddiqui After KGF 2 RRR and other hit


‘ಸೌತ್ ಸಿನಿಮಾಗಳ ವಿಚಾರದಲ್ಲಿ ಈ ತಪ್ಪು ಮಾಡಬೇಡಿ’; ಬಾಲಿವುಡ್ ಮಂದಿಗೆ ಖ್ಯಾತ ನಟನ ಕಿವಿಮಾತು

ಯಶ್-ಜ್ಯೂ.ಎನ್​ಟಿಆರ್​-ಅಲ್ಲು ಅರ್ಜುನ್

ಸದ್ಯ ಬಾಲಿವುಡ್​ನಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ಜೋರಾಗಿದೆ. ಈ ಸಿನಿಮಾಗಳು ಬಾಲಿವುಡ್​ ಬಾಕ್ಸ್ ಆಫೀಸ್​ನಲ್ಲಿ ಕೋಟಿಕೋಟಿ ಬಾಚಿಕೊಳ್ಳುತ್ತಿದೆ. ತೆಲುಗಿನ ‘ಆರ್​ಆರ್​ಆರ್​’ ಸಿನಿಮಾ (RRR Movie) ಬಾಲಿವುಡ್​ನಲ್ಲಿ 250 ಕೋಟಿ ರೂಪಾಯಿ ಬಾಚಿಕೊಂಡಿದೆ. ‘ಕೆಜಿಎಫ್ 2’ ಸಿನಿಮಾ (KGF Chapter 2) 300 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಬಾಲಿವುಡ್ ಮಂದಿ ಮಾಡಿದ ಹಲವು ದಾಖಲೆಗಳನ್ನು ಈ ಸಿನಿಮಾ ಮುರಿದಿದೆ. ಈ ಬೆಳವಣಿಗೆಯಿಂದ ಬಾಲಿವುಡ್ ಮುಳುಗೇ ಹೊಯಿತು ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಇದೊಂದು ಹಂತ ಮಾತ್ರ, ನಂತರ ಎಲ್ಲವೂ ಮೊದಲಿನ ಸ್ಥಿತಿಗೆ ಮರಳಲಿದೆ ಎಂಬುದು ಬಾಲಿವುಡ್ (Bollywood) ನಟ ನವಾಜುದ್ದೀನ್ ಸಿದ್ದಿಕಿ ಅವರ ನಂಬಿಕೆ.

‘ಬಾಹುಬಲಿ’ ಸಿನಿಮಾ ಐದು ಭಾಷೆಯಲ್ಲಿ ರಿಲೀಸ್ ಆಯಿತು. ಈ ಚಿತ್ರದಿಂದ ಪ್ಯಾನ್​ ಇಂಡಿಯಾ ಟ್ರೆಂಡ್ ಜೋರಾಯಿತು. ಹಲವು ಚಿತ್ರಗಳು ಹಿಂದಿಗೆ ಡಬ್ ಆಗಿ ತೆರೆಕಂಡವು. ‘ಬಾಹುಬಲಿ 2’ ದೊಡ್ಡ ಯಶಸ್ಸು ಕಂಡಿತು. ‘ಕೆಜಿಎಫ್​’ ಸಿನಿಮಾ ಹಿಂದಿಯಲ್ಲಿ ಒಂದು ಹಂತಕ್ಕೆ ಸದ್ದು ಮಾಡಿತು. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಬಾಲಿವುಡ್​ನಲ್ಲಿ 100 ಕೋಟಿ ಕ್ಲಬ್ ಸೇರಿತು. ‘ಆರ್​ಆರ್​ಆರ್’ ಚಿತ್ರ 250 ಕೋಟಿ ರೂಪಾಯಿ ಬಾಚಿಕೊಂಡಿತು. ಸದ್ಯ, ‘ಕೆಜಿಎಫ್ 2’ ಹವಾ. ಬಾಲಿವುಡ್​ನಲ್ಲಿ ಈ ಸಿನಿಮಾ 329 ಕೋಟಿ ರೂಪಾಯಿ ಗಳಿಸಿದೆ. ಇದು ಸಣ್ಣ ಸಾಧನೆಯಲ್ಲ. ಹಿಂದಿ ಸಿನಿಮಾಗಳು ಮಕಾಡೆ ಮಲಗುತ್ತಿರುವ ಸಂದರ್ಭದಲ್ಲಿ ಡಬ್​ ಆಗಿ ತೆರೆ ಕಾಣುತ್ತಿರುವ ದಕ್ಷಿಣದ ಚಿತ್ರಗಳು ಇಷ್ಟು ದೊಡ್ಡ ಗೆಲುವು ಕಾಣುತ್ತಿರುವುದು ಸಹಜವಾಗಿಯೇ ಬಾಲಿವುಡ್ ಮಂದಿಗೆ ಮುಜುಗರ ತಂದಿದೆ. ಆದರೆ, ಇದನ್ನು ನವಾಜುದ್ದೀನ್ ಒಪ್ಪಿಕೊಳ್ಳುತ್ತಿಲ್ಲ.

‘ನನ್ನ ಪ್ರಕಾರ ಇದು ಕೇವಲ ಒಂದು ಹಂತ. ಈಗ ಬಾಲಿವುಡ್ ಚಿತ್ರ ಬಂದು ಸೂಪರ್-ಡೂಪರ್ ಹಿಟ್ ಆದರೆ ಈಗ ನೀವು ಹೇಳುತ್ತಿರುವ ವಿಷಯಗಳು ಬದಲಾಗುತ್ತವೆ. ಪ್ರತಿ ಸಿನಿಮಾ ತೆರೆಗೆ ಬಂದ ನಂತರ ಜನರ ಆಲೋಚನೆಗಳು ಬದಲಾಗುತ್ತವೆ. ಜನರು ಚಿತ್ರದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಹಿಂದಿ ಸಿನಿಮಾ ಬಂದು ಗೆದ್ದರೆ ಆ ನಂತರ ಈ ಗ್ರಹಿಕೆ ಮತ್ತೆ ಬದಲಾಗುತ್ತವೆ’ ಎಂದಿದ್ದಾರೆ ಅವರು.

ದಕ್ಷಿಣ ಭಾರತದ ಹಲವು ಚಿತ್ರಗಳು ಹಿಂದಿಗೆ ರಿಮೇಕ್ ಆಗುತ್ತಿವೆ. ಇದು ತಪ್ಪು ಅನ್ನೋದು ನವಾಜುದ್ದೀನ್ ಅವರ ಅಭಿಪ್ರಾಯ. ‘ನಮ್ಮಿಂದ ಒಂದು ತಪ್ಪು ನಡೆದಿದೆ. ನಾವು ಸೌತ್ ಚಿತ್ರಗಳನ್ನು ರೀಮೇಕ್ ಮಾಡುತ್ತಲೇ ಇದ್ದೇವೆ. ನಾವು ಒರಿಜಿನಲ್​ ಸ್ಟೋರಿಗಳನ್ನು ಮಾಡುತ್ತಿಲ್ಲ. ನಾವು ರಿಮೇಕ್​ ಮೇಲೆ ಆಧಾರವಾಗಿದ್ದೇವೆ. ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯಬೇಕು. ಮೂಲ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕಿದೆ’ ಎಂದು ಕಿವಿಮಾತು ಹೇಳಿದ್ದಾರೆ ನವಾಜುದ್ದೀನ್.

 

TV9 Kannada


Leave a Reply

Your email address will not be published.