ಸ್ಟಾರ್​​ಗಳಿಲ್ಲದೆಯೂ ಮಿನುಗಿದ ನ್ಯೂಜಿಲೆಂಡ್​​- ಅಚಲ ವಿಶ್ವಾಸ, ಕಠಿಣ ಪರಿಶ್ರಮಕ್ಕೆ ಒಲಿದ ಜಯ

ಸ್ಟಾರ್​​ಗಳಿಲ್ಲದೆಯೂ ಮಿನುಗಿದ ನ್ಯೂಜಿಲೆಂಡ್​​- ಅಚಲ ವಿಶ್ವಾಸ, ಕಠಿಣ ಪರಿಶ್ರಮಕ್ಕೆ ಒಲಿದ ಜಯ

ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​ ಟ್ರೋಫಿಯನ್ನ ಮುಡಿಗೇರಿಸಿ ಕೊಂಡಿರುವ ನ್ಯೂಜಿಲೆಂಡ್​​ ತಂಡ ಸಧ್ಯ ಕ್ರಿಕೆಟ್​ ಲೋಕದ ಸೆನ್ಸೇಷನ್​ ಆಗಿದೆ. ಆದ್ರೆ, ಟೆಸ್ಟ್​ ಚಾಂಪಿಯನ್​ಶಿಪ್ ಟೂರ್ನಿ​ ಆರಂಭವಾದಾಗ ನ್ಯೂಜಿಲೆಂಡ್​​​ ಚಾಂಪಿಯನ್​ ಆಗುತ್ತೆ ಎಂದು ಗೆಸ್​ ಮಾಡಿದವರು ತೀರಾ ವಿರಳ. ಅದ್ಯಾಕೆ ಅನ್ನೋದನ್ನ ಕಿವಿಸ್​ ನಾಯಕ ಕನ್​ ವಿಲಿಯಮ್​ಸನ್​ರೇ ಹೇಳಿದ್ದಾರೆ. ವಿಲಿಯಮ್​ಸನ್​ ಹೇಳಿದ್ದದೇನು? ಇಲ್ಲಿದೆ ನೋಡಿ ಸ್ಪೆಷಲ್​ ರಿಪೋರ್ಟ್​​..

ವಿಶ್ವ ಟೆಸ್ಟ್​ ಕ್ರಿಕೆಟ್​​ಗೆ ನ್ಯೂಜಿಲೆಂಡ್​ ಕಿಂಗ್​​
2015 ಏಕದಿನ ವಿಶ್ವಕಪ್​ ಫೈನಲ್ ಮೊದಲ ಹಾರ್ಟ್ ಆಟ್ಯಾಕ್. 2019ರ ಏಕದಿನ ವಿಶ್ವಕಪ್​ ಪೈನಲ್​ ಮತ್ತೊಮ್ಮೆ ಹಾರ್ಟ್​ಬ್ರೇಕ್​. ಐಸಿಸಿ ಟೂರ್ನಿಗಳಲ್ಲಿ ಗೆಲುವಿನ ಲಕ್​ ನಮಗೇ ಇಲ್ಲವೇ ಇಲ್ಲ ಅನ್ನೋವಷ್ಟರ ಮಟ್ಟಿಗೆ ನ್ಯೂಜಿಲೆಂಡ್​ ತಂಡವನ್ನ ಕಾಡಿದ ಸೋಲುಗಳಿವು.
ಆದರೆ ಈಗ ಎಲ್ಲವೂ ಬದಲಾಗಿದೆ. ಗೆಲುವಿನ ಹಠಕ್ಕೆ ಕೊನೆಗೂ ಜಯ ದಕ್ಕಿದೆ. ಕಠಿಣ ಪರಿಶ್ರಮ, ಗೆದ್ದೇ ಗೇಲ್ತೀವಿ ಅನ್ನೋ ಅಚಲ ವಿಶ್ವಾಸ ದ್ವೀಪರಾಷ್ಟ್ರ ನ್ಯೂಜಿಲೆಂಡ್​ ಅನ್ನ ವಿಶ್ವ ಟೆಸ್ಟ್​ ಕ್ರಿಕೆಟ್​ನ ಕಿಂಗ್​ ಪಟ್ಟಕ್ಕೇರಿಸಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಪಂದ್ಯದ ಟೀಮ್​ ಇಂಡಿಯಾ ವಿರುದ್ಧದ ಗೆಲುವು ಕಿವೀಸ್​​ ಪಡೆಗೆ ಸಾಮಾನ್ಯ ಗೆಲುವಲ್ಲ.. ಅಸಂಖ್ಯ ಅಭಿಮಾನಿಗಳ ಹಲವು ವರ್ಷಗಳ ಕನಸನ್ನ ನನಸು ಮಾಡಿದ ಅಚ್ಚಳಿಯದ ಕ್ಷಣ ಅದು.

ನ್ಯೂಜಿಲೆಂಡ್​​ ಫೈನಲ್​ ಪ್ರವೇಶಿಸುತ್ತೆ ಅಂದವರೇ ವಿರಳ..!
ಸ್ಟಾರ್​ ಆಟಗಾರರು ಇಲ್ಲದ್ದೇ ಕಿವೀಸ್​​ಗೆ ಹಿನ್ನಡೆಯಾಗಿತ್ತು..!
2 ವರ್ಷಗಳ ಹಿಂದೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿ ಆರಂಭವಾದಾಗ ಬಹುಶಃ ನ್ಯೂಜಿಲೆಂಡ್​​ ಫೈನಲ್​ ಪ್ರವೇಶ ಮಾಡುತ್ತೇ ಅಂದವರೇ ತುಂಬಾ ವಿರಳ. ನ್ಯೂಜಿಲೆಂಡ್​ ತಂಡದಲ್ಲಿ ಸ್ಟಾರ್​ ಆಟಗಾರರು ಇಲ್ಲ ಅನ್ನೋದೇ ಇದಕ್ಕೆ ಕಾರಣವಾಗಿತ್ತು. ಇದೇ ಮಾತನ್ನ ಸ್ವತಃ ನಾಯಕ ಕೇನ್​ ವಿಲಿಯಮ್​ಸನ್​ ಪಂದ್ಯ ಗೆದ್ದ ಬಳಿಕ ಆಡಿದ್ರು.

‘ನಮಗೆ ಗೊತ್ತು ನಾವು ಯಾವಾಗಲೂ ಸ್ಟಾರ್​​ಗಳನ್ನ ಹೊಂದಿಲ್ಲ. ಪಂದ್ಯದಲ್ಲಿರಲು ಹಾಗೂ ಸ್ಪರ್ಧೆ ಮಾಡಲು ನಾವು ಚಿಕ್ಕ ಆಟಗಾರರ ಮೆಲೆ ಅವಲಂಬಿತವಾಗಿದ್ದೇವೆ. ನನ್ನ ಈ ಪಂದ್ಯದಲ್ಲೂ ಅದನ್ನ ಗಮನಿಸಿದ್ದೇವೆ. ಕಠಿಣ ಪರಿಶ್ರಮ ಹಾಗೂ ಬದ್ಧತೆ ಅನ್ನೋದು ಮುಖ್ಯವಾಗುತ್ತದೆ. ಬದ್ಧತೆಯ ವಿಚಾರದಲ್ಲಿ ನಾವು ಶಕ್ತಿಯುತವಾಗಿದ್ದೇವೆ. ಅದೇ ಅದ್ಭುತ. ಭಾರತ ಕೂಡ ಶಕ್ತಿಯುತವಾಗಿದೆ. ಎಲ್ಲಾ ಕಂಡೀಷನ್​ಗಳಲ್ಲಿ ಆಡುವ ಸಾಮರ್ಥ್ಯ ಅವರಿಗಿದೆ. ಹೀಗಾಗಿ ಇದು ಸುಲಭವಲ್ಲ. ಅದರಲ್ಲೂ ಒಂದು ಪಂದ್ಯದ ಫೈನಲ್​ನಲ್ಲಿ. ಪಂದ್ಯದಲ್ಲಿ ಏನು ಬೇಕಾದ್ರು ಆಗಬಹುದು. ನಾವು ಅದನ್ನ ಗೌರವಿಸಬೇಕು’

ಕೇನ್​ ವಿಲಿಯಮ್ಸನ್, ನ್ಯೂಜಿಲೆಂಡ್​ ನಾಯಕ

ಕೇನ್​ ವಿಲಿಯಮ್ಸನ್​ ಹೇಳಿದಂತೆ ನ್ಯೂಜಿಲೆಂಡ್​ ತಂಡಕ್ಕೆ ಸ್ಟಾರ್​ಗಳ ಆಸರೆಯಿರಲಿಲ್ಲ. ವಿಲಿಯಮ್​ಸನ್​, ರಾಸ್​ ಟೇಲರ್​​, ಟಿಮ್​ ಸೌಥಿ ಹೊರತು ಪಡಿಸಿದ್ರೆ, ಉಳಿದೆಲ್ಲಾ ಆಟಗಾರರು ಕಳೆದ ದಶಕದಿಂದ ಈಚೆಗೆ ತಂಡ ಕೂಡಿಕೊಂಡವರೇ. ಹಾಗಾಗಿಯೇ ಟೂರ್ನಿಯ ಆರಂಭದಲ್ಲಿ ಕಿವೀಸ್​​ ಚಾಂಪಿಯನ್​ ಆಗುತ್ತೇ ಅನ್ನೋದಿರಲಿ, ಫೈನಲ್​ ಪ್ರವೇಶ ಮಾಡುತ್ತೆ ಎಂದು ನಿರೀಕ್ಷೆ ಮಾಡಿದವರು ಕೂಡ ತುಂಬಾ ಕಡಿಮೆ ಪ್ರಮಾಣದ ಜನ ಮಾತ್ರ.

ಗೆಲ್ಲಲೇಬೇಕು ಎಂಬ ಹಂಬಲಕ್ಕೆ ಒಲಿಯಿತು ಚಾಂಪಿಯನ್​ ಪಟ್ಟ..!
ಆದರೆ ಟೂರ್ನಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 70.00ರ ಪಾಯಿಂಟ್ಸ್​ ಪರ್ಸೆಂಟೇಜ್​ ಆಧಾರದಲ್ಲಿ ನ್ಯೂಜಿಲೆಂಡ್​​ ಫೈನಲ್​ ಪ್ರವೇಶ ಮಾಡಿದ್ದೇ ರೋಚಕ. ಇನ್ನೂ ಫೈನಲ್​ ಪಂದ್ಯ ಗೆದ್ದಿದ್ದು ಅದ್ಭುತ ಸಾಧನೆಯೇ ಸರಿ. ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ ಪಂದ್ಯ ಡ್ರಾ ಅಗುತ್ತೇ ಅಂದವರೇ ಹೆಚ್ಚು ಮಂದಿ. ಆದ್ರೆ, ಪಂದ್ಯದ ಫಲಿತಾಂಶವೂ ಬಂತು. ನ್ಯೂಜಿಲೆಂಡ್​​ ತಂಡ ಚಾಂಪಿಯನ್​ ಕೂಡ ಆಯ್ತು. ಇದೆಲ್ಲವೂ ಸಾಧ್ಯವಾಗಿದ್ದು, ಕಿವೀಸ್​​ ಪಡೆಯ ಫೈಟಿಂಗ್​ ಸ್ಪಿರಿಟ್​ನಿಂದ.

ಸೌತ್​ಹ್ಯಾಂಪ್ಟನ್​ನಲ್ಲಿ ನಡೆದ ಫೈನಲ್​ ಪಂದ್ಯದ ಆರಂಭಿಕ ದಿನದಿಂದಲೂ ನ್ಯೂಜಿಲೆಂಡ್​ ಮಾಡಿದ ಹೋರಾಟ ಹಾಗಿತ್ತು. ಯುವ ಆಟಗಾರರಾದ ಕೈಲ್​ ಜೆಮಿಸನ್​ ಬೌಲಿಂಗ್​, ಡಿವೋನ್​ ಕಾನ್ವೆ ದಿಟ್ಟ ಹೋರಾಟ ಮೊದಲ ಇನ್ನಿಂಗ್ಸ್​ನಲ್ಲೇ ಮುನ್ನಡೆ ನೀಡಿತು. ಇನ್ನೂ 2ನೇ ಇನ್ನಿಂಗ್ಸ್​ನಲ್ಲೂ ಮುಂದುವರೆದ ಸಂಘಟಿತ ಹೋರಾಟ ಹಾಗೂ ಅಂತಿಮ ಹಂತದಲ್ಲಿ ಬಂದ ರಾಸ್​ ಟೇಲರ್​-ಕೇನ್​ ವಿಲಿಯಮ್​ಸನ್​ರ ಜವಾಬ್ದಾರಿಯುತ ಜೊತೆಯಾಟ ತಂಡವನ್ನ ಚಾಂಪಿಯನ್​ಪಟ್ಟಕ್ಕೇರಿಸಿದ್ದು.

ಒಟ್ಟಿನಲ್ಲಿ ಸ್ಪಷ್ಟ ಗುರಿ, ಕಠಿಣ ಪರಿಶ್ರಮ, ಗುರಿ ಮುಟ್ಟುಯೇ ಮುಟ್ಟುತೇನೆಂಬ ಹಂಬಲಕ್ಕೆ ಜಯ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ನ್ಯೂಜಿಲೆಂಡ್​ ಕ್ರಿಕೆಟ್​ ತಂಡ ಸದ್ಯ ಉತ್ತಮ ಉದಾಹರಣೆ ಅಂದ್ರೆ ತಪ್ಪಾಗಲ್ಲ. ವಿಶ್ವ ಟೆಸ್ಟ್​ ಕ್ರಿಕೆಟ್​ ಲೋಕದ ಚೊಚ್ಚಲ ಚಾಂಪಿಯನ್​ ಮುಂದೆಯೂ ಅಮೋಘ ಪ್ರದರ್ಶನ ನೀಡಲಿ ಅನ್ನೋದೇ ಕ್ರಿಕೆಟ್​ ಅಭಿಮಾನಿಗಳ ಆಶಯ.

The post ಸ್ಟಾರ್​​ಗಳಿಲ್ಲದೆಯೂ ಮಿನುಗಿದ ನ್ಯೂಜಿಲೆಂಡ್​​- ಅಚಲ ವಿಶ್ವಾಸ, ಕಠಿಣ ಪರಿಶ್ರಮಕ್ಕೆ ಒಲಿದ ಜಯ appeared first on News First Kannada.

Source: newsfirstlive.com

Source link