ಬೆಂಗಳೂರು: ಸ್ಯಾಂಡಲ್‍ವುಡ್‍ನ ಸ್ಟಾರ್ ನಟರಿಗೆ ಮೇಕಪ್ ಮಾಡಿದ್ದ ಮೇಕಪ್ ಸೀನಣ್ಣ ನಿಧನರಾಗಿದ್ದಾರೆ. ಹಲವು ದಿನಗಳಿಂದ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮೇಕಪ್ ಸೀನಣ್ಣ ಇಂದು ಬೆಳಗ್ಗೆ ಚಿಕಿತ್ಸೆ ಫಲಾಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಹಲವಾರು ವರ್ಷಗಳಿಂದ ಚಂದನವನದಲ್ಲಿ ಶ್ರೀನಿವಾಸ್‍ರವರು ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದು, ಮೇಕಪ್ ಸೀನಣ್ಣ ಎಂದೇ ಖ್ಯಾತಿ ಪಡೆದಿದ್ದರು. ಅಲ್ಲದೇ ಶ್ರೀನಿವಾಸ್ ವರ್ಣಾಲಂಕಾರ ಮತ್ತು ಕೇಶಲಂಕಾರ ಕಲಾವಿದರ ಸಂಘದ ಉಪಾಧ್ಯಕ್ಷರಾಗಿದ್ದರು.

ಮೇಕಪ್ ಶ್ರೀನಿವಾಸ್‍ರವರು ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಬಹದ್ದೂರ್, ಭರ್ಜರಿ, ಭರಾಟೆ ಇನ್ನಿತರ ಅನೇಕ ಸಿನಿಮಾಗಳಲ್ಲಿ ಮೇಕಪ್ ಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್‍ರವರ ಮುಂಬರುವ ಜೇಮ್ಸ್ ಸಿನಿಮಾಕ್ಕೆ ಕೂಡ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ದುರದೃಷ್ಟವಶತ್ ಮೇಕಪ್ ಸೀನಣ್ಣ ಇಂದು ಎಲ್ಲರನ್ನು ಅಗಲಿದ್ದಾರೆ.

ಸದ್ಯ ಮೇಕಪ್ ಮ್ಯಾನ್ ಸೀನಣ್ಣ ಸಾವಿಗೆ ನಿರ್ದೇಶಕ ಚೇತನ್ ಕುಮಾರ್ ಸಂತಾಪ ಸೂಚಿಸಿದ್ದು, ‘ನನ್ನ ಎಲ್ಲ ಸಿನಿಮಾಗಳಿಗೂ ಮೇಕಪ್ ಕಲಾವಿದರಾಗಿ ಕೆಲಸ ನಿರ್ವಹಿಸಿದ್ದ ಸೀನಣ್ಣ ಇಂದು ಬೆಳಗ್ಗೆ ದೈವಾಧೀನರಾಗಿದ್ದಾರೆ. ಒಂದು ವಾರದ ಹಿಂದೆ ನಗುನಗುತ್ತಾ ಬಂದು ಭೇಟಿಯಾಗಿದ್ದ ವ್ಯಕ್ತಿ ಇಂದು ಇಲ್ಲ ಎಂದರೆ ನಿಜವಾಗಿಯೂ ನಂಬಲಾಗುತ್ತಿಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸೀನಣ್ಣ. ವೀ ಮಿಸ್ ಯೂ’ ಎಂದು ಟ್ವೀಟ್ ಮಾಡಿದ್ದಾರೆ.

The post ಸ್ಟಾರ್ ನಟರಿಗೆ ಬಣ್ಣ ಹಚ್ಚಿದ ಮೇಕಪ್ ಮ್ಯಾನ್ ಸೀನಣ್ಣ ಇನ್ನಿಲ್ಲ appeared first on Public TV.

Source: publictv.in

Source link