ನವದೆಹಲಿ: ಇನ್ನು ಮುಂದೆ ಯಾವುದೇ ಸ್ಥಿರ ದೂರವಾಣಿಯಿಂದ ಮೊಬೈಲ್‌ಗೆ ಕರೆ ಮಾಡುವವರು ಮೊಬೈಲ್ ಸಂಖ್ಯೆಗೂ ಮುನ್ನ ಸೊನ್ನೆ ಒತ್ತಿ ಕರೆ ಮಾಡಬೇಕು.

ಸೊನ್ನೆ ಒತ್ತುವ ನಿಯಮಾವಳಿ ಇಂದಿನಿಂದಲೇ ಜಾರಿಗೆ ಬರಲಿದೆ. ಈ ಕುರಿತು ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಅರಿವು ಮೂಡಿಸುತ್ತಿವೆ. ಈ ಅಳವಡಿಕೆಯಿಂದ ಸುಮಾರು 250 ಕೋಟಿಯಷ್ಟು ಹೊಸ ಮೊಬೈಲ್ ಸಂಖ್ಯೆಯನ್ನು ಸೃಷ್ಟಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವಾಗ ಎಲ್ಲಾ ಗ್ರಾಹಕರು ಸೊನ್ನೆ ಒತ್ತಿ ಕರೆ ಮಾಡಬೇಕು ಎಂದು ಈ ಹಿಂದೆ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿದ್ದನ್ನು ದೂರಸಂಪರ್ಕ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು.

ಈ ನಿಯಮ ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಮಾಡುವ ಕರೆಗೆ ಮಾತ್ರ ಅನ್ವಯವಾಗುತ್ತದೆ. ಮೊಬೈಲ್ ನಿಂದ ಸ್ಥಿರ ದೂರವಾಣಿಗೆ ಕರೆ ಮಾಡುವಾಗಲಾಗಲಿ, ಮೊಬೈಲ್ ನಿಂದ ಮೊಬೈಲ್ ಸಂಖ್ಯೆ ಕರೆಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ.

ಇದಲ್ಲದೆ, ಚಂದಾದಾರರು '0' ಪೂರ್ವ ಅಂಕೆಯನ್ನು ಬಳಸದೆ ಮೊಬೈಲ್ ಕರೆಗೆ ಸ್ಥಿರವಾಗಿ ಡಯಲ್ ಮಾಡಿದಾಗಲೂ ಸೂಕ್ತವಾದ ಪ್ರಕಟಣೆಯನ್ನು ಇಲಾಖೆ ನೀಡುತ್ತದೆ. ಶೂನ್ಯ ಅಂಕೆಯೊಂದಿಗೆ ಡಯಲ್ ಮಾಡುವ ಅವಶ್ಯಕತೆಯ ಬಗ್ಗೆ ಸ್ಥಿರ-ಸಾಲಿನ ಚಂದಾದಾರರಿಗೆ ತಿಳಿಸಲು ಸೂಕ್ತವಾದ ಪ್ರಕಟಣೆಯನ್ನು ನೀಡಲಾಗುವುದು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.

ಎಲ್ಲಾ ಸ್ಥಿರ ಸಾಲಿನ ಚಂದಾದಾರರಿಗೆ '0' ಡಯಲಿಂಗ್ ಸೌಲಭ್ಯವನ್ನು ನೀಡುವುದರಿಂದ ಒಟ್ಟು 2 ಸಾವಿರದ 539 ಮಿಲಿಯನ್ ಸಂಖ್ಯೆಯ ಸರಣಿಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಸಚಿವಾಲಯ ತಿಳಿಸಿದೆ. ಇದು ಭವಿಷ್ಯದ ಬಳಕೆಗಾಗಿ ಸಾಕಷ್ಟು ಸಂಖ್ಯೆಯ ಸಂಪನ್ಮೂಲಗಳನ್ನು ಮುಕ್ತಗೊಳಿಸುತ್ತದೆ. 

Source: Kannadaprabha – ವಿಜ್ಞಾನ-ತಂತ್ರಜ್ಞಾನ – https://www.kannadaprabha.com/science-technology/
Read More