‘ಸ್ಪೈಡರ್​ ಮ್ಯಾನ್​’ ಟ್ರೇಲರ್​: ಗುಟ್ಟು ಕಾಪಾಡಲು ಚಿತ್ರತಂಡ ಮಾಡಿದ ಎಡವಟ್ಟು ಪತ್ತೆ ಹಚ್ಚಿದ ಫ್ಯಾನ್ಸ್​ | Andrew Garfield and Tobey Maguire edited out of the new Spider Man No Way Home Trailer


‘ಸ್ಪೈಡರ್​ ಮ್ಯಾನ್​’ ಟ್ರೇಲರ್​: ಗುಟ್ಟು ಕಾಪಾಡಲು ಚಿತ್ರತಂಡ ಮಾಡಿದ ಎಡವಟ್ಟು ಪತ್ತೆ ಹಚ್ಚಿದ ಫ್ಯಾನ್ಸ್​

‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಸಿನಿಮಾದ ಟ್ರೇಲರ್

ಹಾಲಿವುಡ್​ ಸಿನಿಮಾಪ್ರೇಮಿಗಳೆಲ್ಲರೂ ‘ಸ್ಪೈಡರ್​ ಮ್ಯಾನ್​’ (Spider Man) ಸರಣಿಯ ಹೊಸ ಸಿನಿಮಾ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅನೇಕ ಕಾರಣಗಳಿಗಾಗಿ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈವರೆಗೆ ಮೂಡಿಬಂದ ಎಲ್ಲ ‘ಸ್ಪೈಡರ್ ಮ್ಯಾನ್​’ ಚಿತ್ರಗಳಿಗಿಂತಲೂ ಅದ್ದೂರಿಯಾಗಿ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ (Spider Man: No Way Home) ಸಿನಿಮಾವನ್ನು ಕಟ್ಟಿಕೊಡಲಾಗಿದೆ ಎಂಬುದಕ್ಕೆ ಸಾಕ್ಷಿ ಎನ್ನುವಂತೆ ಈ ಟ್ರೇಲರ್​ ಬಿಡುಗಡೆ ಆಗಿದೆ. ಟಾಮ್​ ಹಾಲೆಂಡ್​ (Tom Holland) ನಟಿಸಿರುವ ಈ ಚಿತ್ರದ ಟ್ರೇಲರ್​ ( Spider Man Trailer) ಅನ್ನು ಬುಧವಾರ (ನ.17) ರಿಲೀಸ್​ ಮಾಡಲಾಗಿದ್ದು, ಸಿನಿಪ್ರಿಯರ ಮನದಲ್ಲಿ ಕೌತುಕ ಹೆಚ್ಚಲು ಕಾರಣ ಆಗಿದೆ. ಈ ವರ್ಷ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಡಿ.17ರಂದು ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರ ಬಿಡುಗಡೆ ಆಗಲಿದೆ. ಅಚ್ಚರಿ ಎಂದರೆ ಈಗ ರಿಲೀಸ್​ ಆಗಿರುವ ಟ್ರೇಲರ್​ನಲ್ಲಿ ಅಭಿಮಾನಿಗಳು ಕೆಲವು ಲೋಪ ಕಂಡು ಹಿಡಿದಿದ್ದಾರೆ.

ಕೆಲವೇ ದಿನಗಳ ಹಿಂದೆ ಈ ಸಿನಿಮಾ ಬಗ್ಗೆ ಒಂದು ಅಚ್ಚರಿಯ ಸುದ್ದಿ ಹಬ್ಬಿತ್ತು. ಈ ಹಿಂದಿನ ಸಿನಿಮಾಗಳಲ್ಲಿ ಸ್ಪೈಡರ್​ ಮ್ಯಾನ್​ ಪಾತ್ರ ಮಾಡಿದ್ದ ಟಾಬಿ ಮಗ್ವಾಯರ್​ ಮತ್ತು ಆ್ಯಂಡ್ರೀವ್​ ಗಾರ್ಫೀಲ್ಡ್​​ ಕೂಡ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರದಲ್ಲಿ ಟಾಮ್​ ಹಾಲೆಂಡ್​ ಜೊತೆ ತೆರೆ ಹಂಚಿಕೊಂಡಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಪುರಾವೆ ಒದಗಿಸುವಂತಹ ಫೋಟೋ ಕೂಡ ಲೀಕ್​ ಆಗಿತ್ತು. ಆದರೆ ಈಗ ಬಿಡುಗಡೆ ಆಗಿರುವ ಟ್ರೇಲರ್​ನಲ್ಲಿ ಟಾಬಿ ಮಗ್ವಾಯರ್​ ಮತ್ತು ಆ್ಯಂಡ್ರೀವ್​ ಗಾರ್ಫೀಲ್ಡ್ ಕಾಣಿಸಿಕೊಂಡಿಲ್ಲ!

ಈ ನಟರಿಬ್ಬರು ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎಂಬ ಗುಟ್ಟನ್ನು ಮುಚ್ಚಿಡುವ ಸಲುವಾಗಿ ನಿರ್ದೇಶಕರು ಟ್ರೇಲರ್​ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಟಾಬಿ ಮಗ್ವಾಯರ್​ ಮತ್ತು ಆ್ಯಂಡ್ರೀವ್​ ಗಾರ್ಫೀಲ್ಡ್ ಕಾಣಬಾರದು ಎಂದು ಗ್ರಾಫಿಕ್ಸ್​ ಮೂಲಕ ಕೆಲವು ಶಾಟ್​ಗಳನ್ನು ಎಡಿಟ್​ ಮಾಡಲಾಗಿದೆ. ಅದನ್ನು ಪತ್ತೆ ಹಚ್ಚಿರುವ ಅಭಿಮಾನಿಗಳು ಸಾಕ್ಷಿ ಸಮೇತ ಟ್ವಿಟರ್​ನಲ್ಲಿ ಶೇರ್​ ಮಾಡುತ್ತಿದ್ದಾರೆ.

ಅದೇನೇ ಇರಲಿ, ಟಾಬಿ ಮಗ್ವಾಯರ್​ ಮತ್ತು ಆ್ಯಂಡ್ರೀವ್​ ಗಾರ್ಫೀಲ್ಡ್ ಈ ಸಿನಿಮಾದಲ್ಲಿ ನಟಿಸಿದ್ದಾರೋ ಇಲ್ಲವೋ ಎಂಬುದನ್ನು ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ ಅಥವಾ ಡಿ.17ರಂದು ಸಿನಿಮಾ ಬಿಡುಗಡೆ ಆದ ಬಳಿಕ ತಿಳಿಯಬೇಕಿದೆ. 2002ರಿಂದ 2007ರವರೆಗೆ ಬಂದ ಮೂರು ಸಿನಿಮಾಗಳಲ್ಲಿ ಸ್ಪೈಡರ್​ ಮ್ಯಾನ್​ ಪಾತ್ರವನ್ನು ನಟ ಟಾಬಿ ಮಗ್ವಾಯರ್ ನಿಭಾಯಿಸಿದ್ದರು. ಆ ಬಳಿಕ 2012 ಮತ್ತು 2014ರಲ್ಲಿ ಬಂದ ‘ಸ್ಪೈಡರ್​ ಮ್ಯಾನ್​’ ಸಿನಿಮಾಗಳಲ್ಲಿ ನಟ ಆ್ಯಂಡ್ರೀವ್​ ಗಾರ್ಫೀಲ್ಡ್​​ ಹೀರೋ ಆಗಿದ್ದರು. 2016ರಿಂದ ಈಚೆಗೆ ಟಾಮ್​ ಹಾಲೆಂಡ್​ ಅವರು ಸ್ಪೈಡರ್​ ಮ್ಯಾನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಪಬ್​ನಲ್ಲಿ ಪಾತ್ರೆ ತೊಳೆಯುತ್ತಿದ್ದ ಯುವಕ ‘ಸ್ಪೈಡರ್​ ಮ್ಯಾನ್​’ ಆದ; ನಟ ಟಾಮ್​ ಹಾಲೆಂಡ್​ ಲೈಫ್​ ಸ್ಟೋರಿ

‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’

TV9 Kannada


Leave a Reply

Your email address will not be published. Required fields are marked *