ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕಳೆದ ವರ್ಷ ಚಿರು ಸರ್ಜಾರನ್ನ ಕಳೆದುಕೊಂಡು ಶೋಕದಲ್ಲಿ ಮುಳುಗಿದ್ದ ಚಂದನವನ, ಇದೀಗ ಮತ್ತೊಬ್ಬ ಸಮಾಜಮುಖಿ ನಟನನ್ನ ಕಳೆದುಕೊಂಡಿದೆ. ಹೀಗೆ.. ಸ್ಯಾಂಡಲ್​ವುಡ್​​ಗೆ ಆಗಾಗ ಬರಸಿಡಿಲಿನಂತೆ ಬಂದೊಕ್ಕರಿಸುವ ದುರಂತಗಳಿಂದಾಗಿ ಕನ್ನಡ ಚಿತ್ರರಂಗ ಸೃಜನಾತ್ಮಕ, ಪ್ರಯೋಗಶೀಲ, ಉದಯೋನ್ಮುಕ ಮತ್ತು ಮನೋಜ್ಞ ಅಭಿನಯ ಚತುರರನ್ನ ಕಳೆದುಕೊಂಡಿದೆ.

ದುರಂತಕ್ಕೆ ಒಳಗಾದ ಕಲಾವಿದರ ವಯಸ್ಸು 36 , 30, 35, 37
ಎಂತಹ ದುರಂತ ಅಂದ್ರೆ 36 ವರ್ಷಕ್ಕೆ ಶಂಕರನಾಗ್​ ಪ್ರಾಣಬಿಟ್ಟರೆ, 30 ವರ್ಷಕ್ಕೆ ಸುನೀಲ್, 35 ವರ್ಷಕ್ಕೆ ಚಿರು ಹಾಗೂ 37 ವರ್ಷಕ್ಕೆ ಸಂಚಾರಿ ವಿಜಯ್ ಬದುಕಿನ ಪಯಣವನ್ನ ಮುಗಿಸಿಬಿಟ್ಟಿದ್ದಾರೆ. ನಾಲ್ವರೂ ಪ್ರತಿಭಾನ್ವಿತ ಕಲಾವಿದರೇ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸ್ಯಾಂಡಲ್​ವುಡ್​​ ಇವರನ್ನೆಲ್ಲಾ ಕಳೆದುಕೊಂಡು ಬಡವಾಗಿದೆ ಅನ್ನೋದು ಬೇಸರದ ವಿಚಾರ. ಇನ್ನು ನಾಲ್ವರಲ್ಲಿ ಮೂವರು ರಸ್ತೆ ಅಪಘಾತದಲ್ಲಿ ಅಸುನೀಗಿದ್ದರೆ, ಒಬ್ಬರು ಹಠಾತ್ ಸಂಭವಿಸಿದ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.

ದಂಥಕತೆ ಶಂಕರ​ನಾಗ್
ಶಂಕರನಾಗ್ ಸ್ಯಾಂಡಲ್​​ವುಡ್​​ನ ದಂಥಕತೆ. ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದುಹೋಗಿದ್ದಾರೆ. ಅದಕ್ಕೆ ಕಾರಣ ಅವರು ಮಾಡಿರುವ ಸಾಧನೆ. 80 ದಶಕದಲ್ಲಿ ತಮ್ಮ ಓಟವನ್ನ ಆರಂಭಿಸಿದ್ದ ಶಂಕರನಾಗ್ ತಮ್ಮ 36 ನೇ ವರ್ಷಕ್ಕೇ ಬದುಕಿನ ಓಟವನ್ನ ನಿಲ್ಲಿಸಿಬಿಟ್ಟರು.1978 ರಲ್ಲಿ ತೆರೆಕಂಡ ಮರಾಠಿ ಚಿತ್ರ`ಸರ್ವಕಾಶಿಯಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದ ಶಂಕರನಾಗ್​.. ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಜನಮೆಚ್ಚುಗೆಗೆ ಪಾತ್ರರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಮುನ್ನುಗ್ಗುತ್ತಿರುವ ಹೊತ್ತಿಗೆ ವಿಧಿ ಅವರನ್ನ ಕರೆದುಕೊಂಡು ಬಿಟ್ಟಿತ್ತು.

ಸೆಪ್ಟೆಂಬರ್ 30, 1990 ರಂದು ಬೆಳಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್‌ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆಯ ಅನಗೋಡು ಹಳ್ಳಿಯಲ್ಲಿ ಕಾರು ಅಪಘಾತ ಸಂಭವಿಸಿತು. ಈ ದುರಂತದಲ್ಲಿ ಶಂಕರನಾಗ್ ಕೊನೆಯುಸಿರೆಳೆದರು. ಈ ಮೂಲಕ ಕನ್ನಡ ಚಿತ್ರರಂಗದ ಸೂರ್ಯ ಮಧ್ಯಾಹ್ನವೇ ಭೂಮಿಯಿಂದ ನಿರ್ಗಮಿಸಿ ಶಾಕ್​ ನೀಡಿದರು.

ಕಾಡುತ್ತಿರುವ ಸುನೀಲ್ ಸಾವು
ಇವರು ಸ್ಯಾಂಡಲ್​ವುಡ್​ನ ಉದಯೋನ್ಮುಖ ನಟರಾಗಿದ್ದವರು. ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮದೇ ಅಭಿಮಾನಿಗಳನ್ನು ಸಂಪಾದಿಸಿ ಚಂದನವನದಲ್ಲಿ ಮುನ್ನುಗ್ಗುತ್ತಿದ್ದರು. ಆಗಿನ ಕಾಲದ ಬೆಡಿಕೆಯ ನಟಿ ಮಾಲಾಶ್ರೀ ಜೊತೆ ನಟಿಸಿದ್ದ ‘ಬೆಳ್ಳಿ ಕಾಲುಂಗುರ’ ಚಿತ್ರ ಭರ್ಜರಿ ಪ್ರದರ್ಶನ ಕಂಡ ಚಿತ್ರವಾಗಿತ್ತು. ಶೃತಿ, ಮನ ಮೆಚ್ಚಿದ ಸೊಸೆ, ಶಾಂಭವಿ ಸೇರಿದಂತೆ ಹಲವು ಚಿತ್ರಗಳ ಮೂಲಕ ಜನಪ್ರಿಯತೆ ಗೊಳಿಸಿದ್ದ ಸುನೀಲ್​​ ವಿರುದ್ಧ ವಿಧಿಯಾಟವೇ ಬೇರೆಯಾಗಿತ್ತು.

ಬಾಗಲಕೋಟೆಯಿಂದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್​ ಆಗುತ್ತಿದ್ದ ವೇಳೆ ಚಿತ್ರದುರ್ಗದ ಬಳಿ ಕಾರು ಅಪಘಾತಕ್ಕೆ ಒಳಗಾಯಿತು. ಕಾರು ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಸುನೀಲ್​​ಗೆ ಗಂಭೀರ ಗಾಯವಾಗಿತ್ತು, ರಸ್ತೆ ಅಪಘಾತದ ಒಂದು ಗಂಟೆ ಬಳಿಕ ಸುನೀಲ್ ತಮ್ಮ 30 ವರ್ಷಕ್ಕೇ ಪ್ರಾಣವನ್ನ ಕಳೆದುಕೊಂಡರು. ಈ ಮೂಲಕ ಸ್ಯಾಂಡಲ್​ವುಡ್​ ಜುಲೈ 24, 1994 ರಲ್ಲಿ ಸುನೀಲ್​ ಅವರನ್ನ ಕಳೆದುಕೊಂಡು ಅನಾಥವಾಯ್ತು.

ಸೌಂದರ್ಯ ಸಾವು
ಬಹುಭಾಷಾ ನಟಿ, ನಿರ್ಮಾಪಕಿ ಸೌಂದರ್ಯ ಕೂಡ ಕೇವಲ 32 ವರ್ಷದಲ್ಲೇ ತಮ್ಮ ಬದುಕಿನ ಪಯಣ ಮುಗಿಸಿ ಬಿಟ್ಟರು. ಚಿಕ್ಕ ವಯಸ್ಸಿನಲ್ಲಿಯೇ ಇವರೂ ಉತ್ತಮ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ರು. ಜೊತೆಗೆ ಚಿರಂಜೀವಿ, ವಿಷ್ಣುವರ್ಧನ್, ರಜಿನಿಕಾಂತ್, ಅಮಿತಾಭ್ ಬಚ್ಚನ್ ಮುಂತಾದ ಘಟಾನು ಘಟಿ ನಾಯಕರೊಂದಿಗೆ ನಟಿಸಿ ತಮ್ಮ ಪ್ರತಿಭೆ ಸಾರಿದ್ರು. ಇವರ ಸಾವು ಕೂಡ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನ ನೀಡಿತ್ತು.

ಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಸೌಂದರ್ಯ, ಏಪ್ರಿಲ್​ 17, 2004 ರಲ್ಲಿ ನಡೆದ ವಿಮಾನ ದುರಂತದಲ್ಲಿ ನಮ್ಮನ್ನೆಲ್ಲ ಆಗಲಿದರು. ಆಂಧ್ರಪ್ರದೇಶದ ಕರೀಂನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ಬೆಂಗಳೂರಿನ ಜಕ್ಕೂರು ನಿಲ್ದಾಣದಿಂದ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಸೌಂದರ್ಯ ಇದ್ದ ವಿಮಾನ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಪತನವಾಗಿತ್ತು. ಕನ್ನಡದಲ್ಲಿ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ನಟಿ, ತೆಲುಗು, ತಮಿಳು ಹಾಗೂ ಮಲಿಯಾಳಂ ಚಿತ್ರಗಳಲ್ಲಿಯೂ ನಟಿಸಿ ಜನಪ್ರಿಯತೆ ಗಳಿಸಿದ್ದರು.

ಆಘಾತ ಕೊಟ್ಟ ಚಿರಂಜೀವಿ ಸರ್ಜಾ ಸಾವು
ಅದೇ ರೀತಿ 2020 ಜೂನ್ 7 ರಂದು 35 ವರ್ಷದ ಚಿರು ಸರ್ಜಾರನ್ನ ಕನ್ನಡ ಚಿತ್ರರಂಗ ಕಳೆದುಕೊಂಡಿತು. ಹಠಾತ್ ಹೃದಯಾಘಾತ ಸಂಭವಿಸಿದ ಪರಿಣಾಮ ಅತೀ ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು. 2009 ರಲ್ಲಿ ತೆರೆಕಂಡ ವಾಯು ಪುತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಚಿರು ಸರ್ಜಾ, ಗಂಡದೆ, ಚಿರು, ದಂಡಂದಶಗುಣಂ, ಭರ್ಜರಿ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿ ಮುನ್ನುಗ್ಗುತ್ತಿದ್ದರು. ಆದರೆ ವಿಧಿಯಾಟಕ್ಕೆ ಚಿರು ಅವರು ನಮ್ಮನೆಲ್ಲ ಬೇಗನೆ ಬಿಟ್ಟು ಹೋಗಿದ್ದಾರೆ.

ಇದೀಗ ಸಂಚಾರಿ ವಿಜಯ್: ಚಿರು ಸರ್ಜಾ ನಿಧನದಿಂದಾಗಿರುವ ಆಘಾತದಿಂದ ಚೇತರಿಸಿಕೊಂಡು ಸ್ಯಾಂಡಲ್​ವುಡ್​ ಮುನ್ನೆಡೆಯುತ್ತಿರುವ ಹೊತ್ತಿನಲ್ಲೇ ಅಂದರೆ ಒಂದೇ ವರ್ಷದ ಅಂತರದಲ್ಲಿ ಸಂಚಾರಿ ವಿಜಯ್ ತಮ್ಮ ಪಯಣವನ್ನ ಮುಗಿಸಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿ ಹೊಸ ಬೆಳಕು, ಹೊಸ ಭರವಸೆ ಮೂಡಿಸುತ್ತಿದ್ದಾಗಲೇ ವಿಧಿ ಅವರನ್ನ ಕರೆದುಕೊಂಡು ಬಿಟ್ಟಿದೆ. ಇದರಿಂದಾಗಿ ಸ್ಯಾಂಡಲ್​ವುಡ್​ ಮತ್ತೆ ಮತ್ತೆ ಸೊರಗುವಂತೆ ಆಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಅಭಿನಯ ಲೋಕದಲ್ಲಿ ಬೆಳೆಯುತ್ತ ಚಿತ್ರರಂಗವನ್ನ ಬೆಳಗುತ್ತ ಬಹು ದೂರ ಸಾಗಿದ, ಸಾಧಕರು ನಮ್ಮನ್ನ ಇದೀಗ ಮಧ್ಯದಲ್ಲೇ ಬಿಟ್ಟು ಹೋಗಿದ್ದಾರೆ.

The post ಸ್ಯಾಂಡಲ್​ವುಡ್ ದುರಂತ ಕತೆ; ಬೆಳಗುತ್ತಲೇ ಅಪಘಾತದಿಂದ ನಂದಿದ ಪ್ರತಿಭೆಗಳು appeared first on News First Kannada.

Source: newsfirstlive.com

Source link