ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿ ಶ್ರೀಕಿ ಭಾರೀ ಚರ್ಚೆಯಲ್ಲಿದ್ದಾರೆ. ಅದರಲ್ಲೂ ಮೊನ್ನೆ ಜೈಲಿನಿಂದ ಹೊರಬಂದ ಸಂದರ್ಭಗಳ ಬಗ್ಗೆ ಬಿಸಿಬಿಸಿ ಚರ್ಚೆ ಆಗ್ತಿದೆ..
ಅದಕ್ಕೆ ಕಾರಣ.. ಹ್ಯಾಕರ್ ಶ್ರೀಕಿ ಲೈಫ್ ಸ್ಟೈಲ್ ಸಾಮಾನ್ಯ ಜನರಿಗಿಂತ ತುಂಬಾನೇ ಭಿನ್ನ. ಮೊನ್ನೆ ಜಾಮೀನು ಪಡೆದು ಶ್ರೀಕಿ ಜೈಲಿನಿಂದ ಹೊರಬಂದಿದ್ದಾನೆ. ಜೈಲಿನಿಂದ ಬರುವಾಗ ಕಾಲಿಗೆ ಚಪ್ಪಲಿ ಸಹ ಇರುವುದಿಲ್ಲ. ಐಷಾರಾಮಿ ಜೀವನ ನಡೆಸಿದ್ದ ಈತನಿಗೆ ಮನೆಗೆ ಹೋಗಲು ಕಾರು ಸಹ ಬಂದಿರುವುದಿಲ್ಲ, ಬೆಂಬಲಿಗರಾಗಲಿ, ಸಂಬಂಧಿಕರಾಗಲಿ ಯಾರೂ ಅಲ್ಲಿಗೆ ಬಂದಿರುವುದಿಲ್ಲ. ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆಯೇ ಆಟೋ ಮೂಲಕ ಮನೆಗೆ ತೆರಳಿದ್ದ. ಜಾಮೀನು ಯಾರು ಕೊಡಿಸಿದ್ದು ಎಂದು ಪ್ರಶ್ನೆ ಮಾಡಿದ್ರೆ ಯಾರೆನೋ ನಂಗೆ ಗೊತ್ತಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದ.
ಡ್ರಗ್ಸ್, ಎಣ್ಣೆ ಬೇಕೇಬೇಕು
ಆದರೆ ಶ್ರೀಕಿಯ ಅವಸ್ಥೆಗಳನ್ನ ನೋಡಿ ಅದು ಅವರ ನಿಜವಾದ ಲೈಫ್ ಅನ್ಕೊಂಡ್ರೆ ಖಂಡಿತ ಸುಳ್ಳು. ಕೋಟಿ, ಕೋಟಿ ಹಣವನ್ನ ಕ್ಷಣಾರ್ಧದಲ್ಲಿ ಲಪಟಾಯಿಸುವ ಚಾಲಕಿ ಹೊಂದಿರುವ ಶ್ರೀಕಿಗೆ, ಜಗತ್ತಿನ ಹೈ ಹ್ಯಾಂಡ್ ಹೋಟೆಲ್ ಹಾಗೂ ಪಾರ್ಟಿಗಳಲ್ಲಿಯೇ ಎಂಜಾಯ್ ಮಾಡ್ತಿದ್ದದ್ದು ಎನ್ನಲಾಗಿದೆ. ಕಳೆದ ಬಾರಿ ಜೈಲಿನಿಂದ ಹೊರ ಬಂದ ಶ್ರೀಕಿ ಇದ್ದದ್ದು ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ. ರಾಯಲ್ ಆರ್ಕಿಡ್ ಹೋಟೆಲ್ನ ಐಷಾರಾಮಿ ರೂಮಿನಲ್ಲಿದ್ದ. ಸಾಮಾನ್ಯ ವ್ಯಕ್ತಿಗೆ ನಾಲ್ಕು ದಿನ ಸ್ಟಾರ್ ಹೋಟೆಲ್ ಬಿಲ್ ಕಟ್ಟಲು ಸಾದ್ಯವಾಗಲ್ಲ. ಆದ್ರೆ ಶ್ರೀಕಿ ತಿಂಗಳುಗಳ ಕಾಲ ಸ್ಟಾರ್ ಹೋಟೆಲ್ನಲ್ಲಿಯೇ ಕಾಲ ಕಳೆಯುತ್ತಾನೆ. ಪ್ರೈವೇಟ್ ಜೆಟ್ನಲ್ಲಿ ವಿದೇಶಕ್ಕೆ ತೆರಳಿ, ಕ್ರೂಸ್ಗಳಲ್ಲಿ ಸಮುದ್ರದಲ್ಲಿದ್ದು ಪಾರ್ಟಿ ಮಾಡ್ತಿದ್ದ ಕಿಲಾಡಿ ಶ್ರೀಕಿ ಆಗಿದ್ದ ಎನ್ನಲಾಗಿದೆ. ಶ್ರೀಕಿಗೆ ಡ್ರಗ್ಸ್, ಎಣ್ಣೆ ವ್ಯವಸ್ಥೆ ಬೇಕೆ ಬೇಕಿತ್ತಂತೆ. ಲೈಫ್ ಸ್ಟೈಲ್ನ ಒಂದು ಅವಿಭಾಜ್ಯ ಅಂಗ ಎಣ್ಣೆ ಮತ್ತು ಡ್ರಗ್ಸ್ ಆಗಿತ್ತು ಎನ್ನಲಾಗಿದೆ.
ಬ್ಯಾಂಕ್ ಅಕೌಂಟೇ ಇಲ್ಲ
ತಿಂಗಳುಗಳ ಕಾಲ ಸ್ಟಾರ್ ಹೋಟೆಲ್ನಲ್ಲಿ ಲಕ್ಷಗಟ್ಟಲೇ ಬಿಲ್ ಕಟ್ಟುವ ಶ್ರೀಕಿಗೆ ಬ್ಯಾಂಕ್ ಅಕೌಂಟ್ ಇಲ್ಲ. ಶ್ರೀಕಿ ಕೈಯಲ್ಲಿ ಸ್ಮಾರ್ಟ್ಫೋನ್ ಇಲ್ಲ. ಸ್ವಂತಕ್ಕೆ ಅಂತ ಒಂದು ಬೇಸಿಕ್ ಮೊಬೈಲ್ ಸಹ ಇಟ್ಟುಕೊಂಡಿಲ್ಲಂತೆ. ಅಲ್ಲದೇ ಶ್ರೀಕಿ ಹ್ಯಾಕ್ ಮಾಡೋಕೆ ತನ್ನ ಲ್ಯಾಪ್ ಟಾಪ್ ಬಳಸಲ್ಲ. ತನ್ನ ಫೋನ್ ಬಳಕೆ ಮಾಡಿ ಮಾತಾಡಲ್ಲ. ಬೇರೆಯವರ ಲ್ಯಾಪ್ ಟಾಪ್ & ಫೋನ್ ಬಳಕೆ ಮಾಡಿ ಕೃತ್ಯ ಎಸೆಗುತ್ತಿದ್ದ. ಸದಾಕಾಲವೂ ಬೇರೆಯವರ ಮೊಬೈಲ್ ಮತ್ತು ಲ್ಯಾಪ್ಟಾಪ್ ಮೂಲಕವೇ ಕೆಲಸ ಮಾಡ್ತಿದ್ದ ಎನ್ನಲಾಗಿದೆ.
ಎಲ್ಲವೂ ತಲೆಯಲ್ಲೇ..
ಎಲ್ಲವನ್ನೂ ಡಾರ್ಕ್ವೆಬ್ ಮೂಲಕ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಶ್ರೀಕಿ, ಸಿಸ್ಟಮ್ ಅಥವಾ ಮೊಬೈಲ್ ಸೇರಿದಂತೆ ಎಲ್ಲಿಯೂ ಡೇಟಾ ಸೇವ್ ಮಾಡಲ್ಲ. ಅವಶ್ಯ ಇರುವ ಐಡಿ ಪಾಸ್ವರ್ಡ್ ಎಲ್ಲವೂ ಆತನ ತಲೆಯಲ್ಲೆ ಇರುತ್ತೆ ಎನ್ನಲಾಗಿದೆ. ಪೊಲೀಸರು ವಿಚಾರಣೆ ನಡೆಸುವಾಗಲೂ ಹುಷಾರಾಗಿ ವಿಚಾರಣೆ ನಡೆಸಬೇಕು. ದೈಹಿಕವಾಗಿ ದಂಡಿಸಿ ವಿಚಾರಣೆ ಶ್ರೀಕಿ ಹತ್ರ ಸಾಧ್ಯವಿಲ್ಲ. ಡ್ರಗ್ಸ್ ಸೇವನೆ ಮಾಡಿ ಶ್ರೀಕಿ ದೇಹ ಸಂಪೂರ್ಣ ವೀಕ್ ಆಗಿದೆ. ಹೆಚ್ಚು ಪ್ರಶ್ನೆ ಕೇಳಿದ್ರೆ ಸಾಕ್ಷಿ ಮುಂದೆ ಇಡಿ ಹಾಗೆ ಏನೇನೋ ಕೇಳಬೇಡಿ ಎಂದಿದ್ದಾನೆ ಎನ್ನಲಾಗಿದೆ.
ಅಲ್ಲದೆ ಸೈಬರ್ ಲೋಕದ ಅಪರಾಧಕ್ಕೆ ಸಾಕ್ಷಿ ಸಿಗದಂತೆ ಶ್ರೀಕಿ ಮಾಡಿದ್ದಾನೆ. ಆರೋಪಗಳು ಇವೆ, ಹೇಳಿಕೆಗಳು ಇವೆ. ಆದ್ರೆ ಸಾಕ್ಷಿಗಳು ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಹ್ಯಾಕ್ ಮಾಡಿ ಬ್ಲಾಕ್ ಮೇಲ್ ಮಾಡೊದು ಶ್ರೀಕಿಗೆ ಕಿಕ್ ಕೊಡತ್ತೆ ಎನ್ನಲಾಗಿದೆ.