ಸ್ವಾತಂತ್ರ್ಯ ಕುರಿತ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಂಗನಾ; ಈ ವಿಷಯ ಜ್ಞಾನೋದಯ ಮಾಡಿಸಿದರೆ ಪದ್ಮಶ್ರೀ ಮರಳಿಸುತ್ತಾರಂತೆ! | Kangana Ranaut defends herself on freedom statement and she says if anyone enlightens her she will give back Padma Shree award


ಸ್ವಾತಂತ್ರ್ಯ ಕುರಿತ ಹೇಳಿಕೆಯನ್ನು ಸಮರ್ಥಿಸಿಕೊಂಡ ಕಂಗನಾ; ಈ ವಿಷಯ ಜ್ಞಾನೋದಯ ಮಾಡಿಸಿದರೆ ಪದ್ಮಶ್ರೀ ಮರಳಿಸುತ್ತಾರಂತೆ!

ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಸ್ವಾತಂತ್ರ್ಯದ ಕುರಿತಾದ ವಿವಾದಿತ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ, ಅವರಿಗೆ ಯಾರಾದರೂ 1947ರಲ್ಲಿ ಏನು ನಡೆಯುತು ಎಂಬುದನ್ನು ಜ್ಞಾನೋದಯ ಮಾಡಿಸಿದರೆ ಪದ್ಮಶ್ರೀಯನ್ನು ಮರಳಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಕಂಗನಾ ಸಂದರ್ಶನವೊಂದರಲ್ಲಿ ಭಾರತಕ್ಕೆ 1947ರಲ್ಲಿ ದೊರಕಿದ್ದು ಭಿಕ್ಷೆ, ಸ್ವಾತಂತ್ರ್ಯವಲ್ಲ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸಿದ್ದು, 2014ರಲ್ಲಿ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಯ್ಕೆಯನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಕಾಂಗ್ರೆಸ್ ಇತ್ತೀಚೆಗಷ್ಟೇ ಕಂಗನಾ ಸ್ವೀಕರಿಸಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿತ್ತು. ಇದೀಗ ಕಂಗನಾ ಈ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ್ದು, ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಸಾಲು ಸಾಲು ಸ್ಟೋರಿ ಹಂಚಿಕೊಂಡಿರುವ ಅವರು, ತಮ್ಮ ವಾದ ಮಂಡಿಸಿದ್ದಾರೆ. ಎಲ್ಲವನ್ನೂ ಸ್ಪಷ್ಟಪಡಿಸುವ ಸಲುವಾಗಿ ಬರೆಯುತ್ತಿದ್ದೇನೆ ಎಂದು ಅವರು ಹೇಳಿದ್ದು, ಸಂದರ್ಶನದಲ್ಲೇ ತಮ್ಮ ವಾದಕ್ಕೆ ಪೂರಕ ಮಾತುಗಳನ್ನು ಹೇಳಿದ್ದಾಗಿ ತಿಳಿಸಿದ್ದಾರೆ. ‘‘1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ, ವೀರ ಸಾವರ್ಕರ್ ಜೀ ಮೊದಲಾದವರು ತ್ಯಾಗ ಮಾಡಿದರು. 1857ರ ಸಂಗ್ರಾಮ ನನಗೆ ತಿಳಿದಿದೆ. ಆದರೆ 1947ರಲ್ಲಿ ಯಾವ ಯುದ್ಧ ನಡೆದಿದೆ ಎಂದು ನನಗೆ ತಿಳಿದಿಲ್ಲ. ಯಾರಾದರೂ ಈ ಕುರಿತು ನನಗೆ ಜ್ಞಾನೋದಯ ಮಾಡಿಸಿದರೆ ನನ್ನ ಪದ್ಮಶ್ರೀಯನ್ನು ಮರಳಿಸಿ ಕ್ಷಮೆ ಕೇಳುತ್ತೇನೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ’’ ಎಂದು ಕಂಗನಾ ವ್ಯಂಗ್ಯವಾಗಿ ಬರೆದಿದ್ದಾರೆ.

ಮುಂದುವರೆದು ಬರೆದಿರುವ ಕಂಗನಾ, ‘ನಾನು ರಾಣಿ ಲಕ್ಷ್ಮಿ ಬಾಯಿಯ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಅದಕ್ಕಾಗಿ 1857ರ ಸಂಗ್ರಾಮದ ಕುರಿತು ಬಹಳ ಅಧ್ಯಯನವನ್ನೂ ನಡೆಸಿದ್ದೇನೆ. ಆ ಸಮಯದಲ್ಲಿ (1857) ರಾಷ್ಟ್ರೀಯತೆ ಹುಟ್ಟಿಕೊಂಡಿತು. ಅದರೊಂದಿಗೆ ಬಲಪಂಥೀಯವಾದವೂ ಹುಟ್ಟಿಕೊಂಡಿತು. ಆದರೆ ಅದೇಕೆ ತಕ್ಷಣ ಮರೆಯಾಯಿತು? ಏಕೆ ಗಾಂಧೀಜಿ ಭಗತ್​ ಸಿಂಗ್​ರನ್ನು ಗಲ್ಲಿಗೇರಿಸಲು ಬಿಟ್ಟರು? ನೇತಾಜಿ ಯಾಕೆ ಸತ್ತರು ಮತ್ತು ಏಕೆ ಗಾಂಧಿಯವರ ಬೆಂಬಲ ಅವರಿಗೆ ಸಿಗಲಿಲ್ಲ? ಏಕೆ ಬಿಳಿಯರು (ಇಂಗ್ಲೀಷರು) ಭಾರತವನ್ನು ವಿಭಜಿಸಿದರು? ಸ್ವಾತಂತ್ರ್ಯವನ್ನು ಸಂಭ್ರಮಿಸುವ ಬದಲಾಗಿ ಏಕೆ ಭಾರತೀಯರು ಒಬ್ಬರಿಗೊಬ್ಬರನ್ನು ಸಾಯಿಸಿಕೊಂಡರು? ಈ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ಹುಡುಕುತ್ತಿದ್ದೇನೆ. ಯಾರಾದರೂ ಸಹಾಯ ಮಾಡಿ’ ಎಂದು ಕಂಗನಾ ಬರೆದಿದ್ದಾರೆ.

Kangana clarification

ಕಂಗನಾ ಹಂಚಿಕೊಂಡಿರುವ ಪೋಸ್ಟ್

ಅಲ್ಲದೇ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಾನು ಸಿದ್ಧವಿರುವುದಾಗಿ ಕಂಗನಾ ತಿಳಿಸಿದ್ದಾರೆ. ‘‘ಸ್ವಾತಂತ್ರ್ಯ 2014ರಲ್ಲಿ ಸಿಕ್ಕಿದೆ ಎಂದು ನಾನು ಹೇಳಿದಾಗ, ಭಾರತಕ್ಕೆ ಬಾಹ್ಯವಾಗಿ ಸ್ವಾತಂತ್ರ್ಯ ಲಭಿಸಿರಬಹುದು. ಆದರೆ ಮಾನಸಿಕವಾಗಿ ಸ್ವಾತಂತ್ರ್ಯ ಲಭಿಸಿದ್ದು, 2014ರಲ್ಲಿ ಎಂದು ಹೇಳಿದ್ದೇನೆ.  ನಾಗರಿಕತೆಯೊಂದು ಮತ್ತೆ ಬದುಕಿ ಬಂದು, ಈಗ ಬೆಳೆದು ನಿಂತು ಘರ್ಜಿಸುತ್ತಾ ಮುಂದಕ್ಕೆ ಸಾಗುತ್ತಿದೆ. ಈಗ ಮೊದಲ ಬಾರಿಗೆ ಜನರು ಇಂಗ್ಲೀಷ್​ನಲ್ಲಿ ಮಾತನಾಡದಿದ್ದರೆ ಅಥವಾ ಸಣ್ಣ ಹಳ್ಳಿಯಿಂದ ಬಂದಿದ್ದರೆ ಅಪಮಾನ ಎದುರಿಸುವುದಿಲ್ಲ. ಹಾಗೆಯೇ ಭಾರತದಲ್ಲೇ ತಯಾರಾದ ವಸ್ತುಗಳನ್ನು ಬಳಸಲೂ ಹಿಂದೆಮುಂದೆ ಯೋಚಿಸುವುದಿಲ್ಲ. ಈ ಎಲ್ಲವನ್ನೂ ಸಂದರ್ಶನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಯಾರಿಗೆ ಈ ಕುರಿತು ಗಿಲ್ಟ್ ಇದೆಯೋ ಅವರಿಗೆ ಅದರ ಶಾಖ ತಟ್ಟಲಿ. ಅದಕ್ಕೇನೂ ಮಾಡಲಾಗುವುದಿಲ್ಲ’’ ಎಂದು ಬರೆದಿರುವ ಕಂಗನಾ, ಜೈ ಹಿಂದ್ ಎಂದು ಬರಹ ಮುಕ್ತಾಯ ಮಾಡಿದ್ದಾರೆ.

Kangana clarification

ಕಂಗನಾ ಹಂಚಿಕೊಂಡಿರುವ ಪೋಸ್ಟ್

ಕಂಗನಾ ಹೇಳಿಕೆಗೆ ದೆಹಲಿಯ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್, ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದಿದ್ದರು. ಎಎಪಿ  ಕಂಗನಾ ವಿರುದ್ಧ ದೂರನ್ನೂ ದಾಖಲಿಸಿದೆ. ಕಾಂಗ್ರೆಸ್ ಕಂಗನಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಶಿವಸೇನೆಯ ನವಾಬ್ ಮಲಿಕ್ ಕಟುವಾದ ಶಬ್ದಗಳಿಂದ ಕಂಗನಾ ಹೇಳಿಕೆಯನ್ನು ಟೀಕಿಸಿದ್ದರು. ಇದೀಗ ಕಂಗನಾ ಆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ:

1947ರಲ್ಲಿ ಭಾರತಕ್ಕೆ ಲಭಿಸಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದ ಕಂಗನಾ ವಿರುದ್ಧ ತಿರುಗಿಬಿದ್ದ ಬಿಜೆಪಿ; ಪದ್ಮ ಪ್ರಶಸ್ತಿ ಹಿಂಪಡೆಯಲು ಆಗ್ರಹಿಸಿದ ಕಾಂಗ್ರೆಸ್

Kangana Ranaut: 1947ರಲ್ಲಿ ಭಾರತಕ್ಕೆ ಸಿಕ್ಕಿದ್ದು ಭಿಕ್ಷೆ, ಸ್ವಾತಂತ್ರ್ಯ ಲಭಿಸಿದ್ದು 2014ರಲ್ಲಿ; ವಿವಾದ ಸೃಷ್ಟಿಸಿದ ಕಂಗನಾ ಹೇಳಿಕೆ

TV9 Kannada


Leave a Reply

Your email address will not be published. Required fields are marked *