ಕೊನೆಯವರೆಗೂ ಹೋರಾಟವನ್ನೇ ಉಸಿರಾಗಿಸಿಕೊಂಡ ಹಿರಿಯ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಇನ್ನು ನೆನಪು ಮಾತ್ರ. ನಾಡಿನ ಯುವಕರಿಗೆ ಸ್ಫೂರ್ತಿಯಾಗಿದ್ದ ಶತಾಯುಷಿ ಇಹಲೋಕ ತ್ಯಜಿಸಿದ್ದಾರೆ. 104 ವರ್ಷ ವಯಸ್ಸಿನ ದೊರೆಸ್ವಾಮಿಯವರ ಬಗ್ಗೆ ಹೇಳಿದಷ್ಟೂ ಕಡಿಮೆಯೇ. ಅವರ ಬಗ್ಗೆ ಒಂದು ಸಂಕ್ಷಿಪ್ತ ವರದಿ ಇಲ್ಲಿದೆ.

ಎತ್ತರದ ನಿಲುವಿನ ವ್ಯಕ್ತಿತ್ವ. ಇವರ ಆಳ್ವತನವೂ ಎತ್ತರ. ಇವರ ವ್ಯಕ್ತಿತ್ವವೂ ಎತ್ತರ. ಹೆಚ್.ಎಸ್.ದೊರೆಸ್ವಾಮಿಯವರ ಹೆಸರು ಕೇಳದವರೇ ಇಲ್ಲ. ನಾಡಿನಾದ್ಯಂತ ಚಿರಪರಿಚಿತರು. ನೂರಾನಾಲ್ಕು ವರ್ಷಗಳ ಬದುಕಿನ ಪಯಣ ಮುಗಿಸಿ ಬಾರದ ಲೋಕಕ್ಕೆ ಹೊರಟುಬಿಟ್ಟಿದ್ದಾರೆ. ಹೆಚ್.ಎಸ್.ದೊರೆಸ್ವಾಮಿ ಇನ್ನು ನೆನಪು ಮಾತ್ರ. ಆದ್ರೆ ಅವರು ಬಿತ್ತಿದ ಆದರ್ಶ,ಅವರು ನಡೆಸಿದ ಹೋರಾಟ, ಅವರು ಬದುಕಿನ ದಾರಿ ಎಲ್ಲವೂ ಸದಾ ನಮ್ಮ ನೆನಪಿನಲ್ಲಿರುತ್ತದೆ.

ಹಾರೋಹಳ್ಳಿ ಶ್ರೀನಿವಾಸಯ್ಯ ದೊರೆಸ್ವಾಮಿ ಇವರ ಪೂರ್ಣ ಹೆಸರು. ಹಾರೋಹಳ್ಳಿಯ ತುಂಬು ಕುಟುಂಬದಲ್ಲಿ ಜನಿಸಿದವರು ದೊರೆಸ್ವಾಮಿ. ಆದರೆ ತಂದೆಯ ಪ್ರೀತಿ ಸಿಗಲಿಲ್ಲ. ಕಾರಣ ದೊರೆಸ್ವಾಮಿಯವರು 5 ವರ್ಷದವರಿದ್ದಾಗಲೇ ಅಕಾಲಿಕ ಮರಣ ಹೊಂದಿದ್ದರು ತಂದೆ ಶ್ರೀನಿವಾಸಯ್ಯ. ಹೀಗಾಗಿ ತಾತನ ನೆರಳಿನಲ್ಲೇ ಬೆಳೆದರು ದೊರೆಸ್ವಾಮಿ. ದೊರೆಸ್ವಾಮಿ ಮೊದಲಿನಿಂದಲೂ ಚುರುಕಿನ ವ್ಯಕ್ತಿ. ಪ್ರಾಥಮಿಕ ಶಾಲಾ ಶಿಕ್ಷಣ ಮುಗಿಸಿದವರೇ ಬೆಂಗಳೂರಿಗೆ ಬರುವ ದೊರೆಸ್ವಾಮಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆಯುತ್ತಾರೆ. ಅದು ಸ್ವಾತಂತ್ರ್ಯ ಹೋರಾಟ ದೇಶದೆಲ್ಲೆಡೆ ಕಾವೇರುತ್ತಿದ್ದ ದಶಕ. ಎಲ್ಲಾ ಕಡೆ ಸ್ವಾತಂತ್ರ್ಯ ಸಂಗ್ರಾಮ. ದೊರೆಸ್ವಾಮಿಯವರಿಗೆ ಮೊದಲಿನಿಂದಲೂ ಸಾಮಾಜಿಕ ಕೆಲಸಗಳಲ್ಲಿ, ಸಾರ್ವಜನಿಕ ಸೇವೆಗಳಲ್ಲೇ ಹೆಚ್ಚು ತೃಪ್ತಿ. ಅವರೆಂದೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯೋಚಿಸಿದವರೇ ಅಲ್ಲ. ಅವತ್ತಿನ ಕಾಲಕ್ಕೇ ಬಿಎಸ್ಸಿ ಓದಿದ್ದರೂ ಒಂದು ನಿಶ್ಚಿತ ಉದ್ಯೋಗ ಮಾಡುತ್ತ ಕುಳಿತುಕೊಂಡೇ ಇಲ್ಲ ದೊರೆಸ್ವಾಮಿಯವರು. ಕಾರಣ ಅವರಿಗಿದ್ದ ತುಡಿತ. ಅವರೊಳಗಿದ್ದ ಹೋರಾಟಗಾರನ ಮಿಡಿತ.

ದೊರೆಸ್ವಾಮಿಯವರು ಬೆಂಗಳೂರಿಗೆ ಬಂದಾಗ ಇನ್ನು ಯುವಕರು. ರಾಷ್ಟ್ರ ನಾಯಕರು ಬೆಂಗಳೂರಿಗೆ ಬಂದು ಭಾಷಣ ಮಾಡುವಾಗಲೆಲ್ಲ ದೊರೆಸ್ವಾಮಿ ಹಾಜರ್. ಅಷ್ಟೊಂದು ಆಸಕ್ತಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊದಲಿನಿಂದಲೂ ಸಕ್ರಿಯ. ಒಂದಿಷ್ಟು ಜನರೊಂದಿಗೆ ನಿತ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದ ದೊರೆಸ್ವಾಮಿಯವರು ಭವ್ಯ ಭಾರತದ ಕನಸು ಕಂಡರೇ ವಿನಃ ತಮ್ಮ ಬದುಕಿನ ಉಜ್ವಲ ಕನಸುಗಳನ್ನಲ್ಲ. ಹೀಗಾಗಿಯೇ ದೊರೆಸ್ವಾಮಿಯವರು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯವಾಗಿದ್ದು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆಯೇ ಮದುವೆಯಾಗಿದ್ದು
ಒಂದು ಕಡೆ ಓದು, ಇನ್ನೊಂದು ಕಡೆ ಹೋರಾಟ, ಮತ್ತೊಂದು ಕಡೆ ಹೊಟ್ಟೆ ಪಾಡು. ಆದರೆ, ದೊರೆಸ್ವಾಮಿ ಹೋರಾಟವೊಂದನ್ನು ಬಿಟ್ಟು ಬೇರೆಯ ವಿಚಾರಕ್ಕೆ ತಲೆ ಕೆಡಿಸಿಕೊಂಡವರಲ್ಲ. ಅವತ್ತಿನ ಕಾಲಕ್ಕೆ ಗಾಂಧಿಸ್ಮಾರಕ ನಿಧಿಯಲ್ಲಿ ದೊರೆಸ್ವಾಮಿಯವರು ಸದಸ್ಯರು. ಇವರಿಗೆ ಸ್ವಂತದ್ದೊಂದು ದುಡಿಮೆಯೂ ಇರಲಿಲ್ಲ. ಬೆಳಗಾದರೆ ಹೋರಾಟಕ್ಕೆ ಧುಮುಕುವುದು ಬಿಟ್ಟರೆ ಬೇರೆಯ ಆಲೋಚನೆ ಮಾಡಿದವರೇ ಅಲ್ಲ. ಅಷ್ಟರ ಮಟ್ಟಿಗೆ ಹೋರಾಟದಲ್ಲಿ ಮಗ್ನರಾಗಿದ್ದರು ದೊರೆಸ್ವಾಮಿ. ಎಷ್ಟರಮಟ್ಟಿಗೆ ಅಂದ್ರೆ ಸ್ವಾತಂತ್ರ್ಯ ಹೋರಾಟ ಮುಗಿಯುವರೆಗೂ, ಜಯ ಸಿಗುವವರೆಗೂ ಮದುವೆಯೂ ಆಗಲ್ಲ ಅಂತ ನಿರ್ಧಾರ ಮಾಡಿಬಿಟ್ಟಿದ್ದರು. ಅಂತೆಯೇ ನಡೆದುಕೊಂಡರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆಯೇ ಇವರು ಮದುವೆಯಾಗಿದ್ದು. ಮನೆ ಅಂತ ಮಾಡಿದ್ದು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ 20 ರೂಪಾಯಿ ಬಾಡಿಗೆ ಮನೆಯಲ್ಲಿ ಇವರ ವಾಸ. ವಾಸ ಅನ್ನೋದಕ್ಕಿಂತ ಅಡ್ರೆಸ್ಗೆ ಒಂದು ಜಾಗ. ಕಾರಣ ಇವರು ಮನೆಯಲ್ಲಿ ಇದ್ದಿದ್ದೇ ಅಪರೂಪ. ಊರುರು ಸುತ್ತುತ್ತ ಅವತ್ತು ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದ ಇವರು ಸ್ವಾತಂತ್ರ್ಯ ಬಂದ ಮೇಲೂ ಸಮಾಜ ಸುಧಾರಣೆಗಾಗಿಯೇ ತಮ್ಮ ಬದುಕು ಮುಡಿಪಿಟ್ಟವರು.

ಗಾಂಧೀಜಿ ಪುಸ್ತಕದ ಪ್ರಭಾವ
ಮಹಾತ್ಮಾ ಗಾಂಧೀಜಿಯವರ ಒಂದು ಪುಸ್ತಕ ದೊರೆಸ್ವಾಮಿ ಅವರ ಮೇಲೆ ಅಷ್ಟೊಂದು ಪ್ರಭಾವ ಬೀರಿತ್ತು. ಹೋರಾಟ ಮಾಡುವವರು ಬಡತನವನ್ನು ಅಪ್ಪಿಕೊಳ್ಳಲೇಬೇಕು ಎಂಬ ಗಾಂಧೀಜಿಯವರ ಮಾತು ದೊರೆಸ್ವಾಮಿಯವರನ್ನು ಆಕರ್ಷಿಸಿತ್ತು. ಬಡತನವನ್ನು ಅಪ್ಪಿಕೊಳ್ಳಲು ದೊರೆಸ್ವಾಮಿ ಮಾನಸಿಕವಾಗಿ ಸಿದ್ಧವಾಗಿ ಬಿಟ್ಟಿದ್ದರು. ಮೈ ಅರ್ಲಿ ಲೈಫ್ ಪುಸ್ತಕವೇ ದೊರೆಸ್ವಾಮಿಯವರಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಪ್ರೇರಣೆ ಒದಗಿಸಿತ್ತು. ಕಾಲೇಜು ಶಿಕ್ಷಣ ಪಡೆಯುವಾಗಲೇ ಸ್ವಾತಂತ್ರ್ಯದ ಹೋರಾಟದ ದಾರಿಯಲ್ಲಿ ಬಹುದೂರ ಕ್ರಮಿಸಿದ್ದರು. ಬಿಎಸ್ಸಿ ಓದಿದ್ದ ದೊರೆಸ್ವಾಮಿಯವರು ಒಂದಿಷ್ಟು ದಿನ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದರು. ಆದ್ರೆ ಅವರೊಳಗಿನ ಹೋರಾಟಗಾರ ಅವರನ್ನು ಕೊಠಡಿಯೊಳಗೆ ಇರಲು ಬಿಡಲೇ ಇಲ್ಲ. ನೇರವಾಗಿ ಬಂದು ಹೋರಾಟದಲ್ಲಿ ಭಾಗವಹಿಸಿದ್ರು ದೊರೆಸ್ವಾಮಿ. ಗಾಂಧೀಜಿಯವರು ನಂದಿಬೆಟ್ಟಕ್ಕೆ ಬಂದಾಗ ಮಾಡಿದ ಭಾಷಣದ ಬಳಿಕವಂತೂ ದೊರೆಸ್ವಾಮಿ ,ಸಂಪೂರ್ಣವಾಗಿ ಗಾಂಧಿವಾದಿಯಾಗಿಬಿಟ್ಟರು.

ಗಾಂಧಿವಾದಿಗಳಷ್ಟೇ ಅಲ್ಲ. ಗಾಂಧಿವಾದವನ್ನೇ ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಆ ದಾರಿಯಲ್ಲೇ ಕ್ರಮಸಿ ಹೋರಾಟ ಮಾಡಿಕೊಂಡು ಬಂದವರು ದೊರೆಸ್ವಾಮಿ. ಸ್ವಾತಂತ್ರ್ಯ ಬಂದಾಗ ನಮ್ಮ ಹೋರಾಟ ಮುಗಿಯಿತು ಅಂತ ಅವರವರ ವೈಯಕ್ತಿಕ ಬದುಕು ಕಟ್ಟಿಕೊಂಡವರೇ ಹಲವು ಮಂದಿ. ಆದ್ರೆ ದೊರೆಸ್ವಾಮಿಯವರು ಇನ್ನೂ ತಮ್ಮ ಕರ್ತವ್ಯ ಮುಗಿಯಲಿಲ್ಲ. ದೇಶಸೇವೆ ಇಷ್ಟಕ್ಕೆ ನಿಲ್ಲಲ್ಲ ಅಂತ ಗಾಂಧಿಸ್ಮಾರಕದ ಖಾಯಂ ಸದಸ್ಯರಾಗಿಬಿಟ್ಟಿದ್ದರು. ನಾಡಿನ ಯಾವುದೇ ಮೂಲೆಯಲ್ಲಿ ಅನ್ಯಾಯ ಅಂತ ಕೇಳ್ಪಟ್ಟರೆ ಅಲ್ಲಿ ದೊರೆಸ್ವಾಮಿ ಹೋಗ್ತಾ ಇದ್ರು. ಅದು ಯಾವುದೇ ಹೋರಾಟ ಇರಲಿ, ಯಾರಿಗೆ ಅನ್ಯಾಯ ಆಗಿರಲಿ ದೊರೆಸ್ವಾಮಿ ಮುಂಚೂಣಿಯಲ್ಲಿ ನಿಂತು ಸ್ಫೂರ್ತಿ ತುಂಬುತ್ತಿದ್ದರು. ಅವರು ನಡೆಸಿದ ಹೋರಾಟಕ್ಕೆ ಲೆಕ್ಕ ಇಡಲು ಸಾಧ್ಯವೇ ಇಲ್ಲ. ಮನೆಯಿಂದ ಒಮ್ಮೆ ದೊರೆಸ್ವಾಮಿ ಹೊರಟರೆಂದರೆ ಅವರು ಅವತ್ತೇ ಬರ್ತಾರೆ ಎಂಬುದೆಲ್ಲ ಇರಲಿಲ್ಲ. ಕೆಲವೊಮ್ಮೆ ತಿಂಗಳಾನುಗಟ್ಟಲೇ ಮನೆ, ಸಂಸಾರ ಬಿಟ್ಟು ಅದ್ಯಾವುದೋ ಊರಿನಲ್ಲಿ ಹೋರಾಟದಲ್ಲಿ ತೊಡಗಿಬಿಡುತ್ತಿದ್ದರು ದೊರೆಸ್ವಾಮಿ. ಅವರ ಧರ್ಮಪತ್ನಿಗೆ ತಿಂಗಳಿಗೆ 70 ರೂಪಾಯಿ ಕೊಟ್ಟುಬಿಟ್ಟರೆ ಅದರಲ್ಲೇ ಮನೆ ಮಕ್ಕಳನ್ನ ನೋಡಿಕೊಳ್ಳುವಂತೆ ಹೇಳಿ ಹೊರಟು ಬಿಡುತ್ತಿದ್ದರು.

 ಹೋರಾಟದಲ್ಲೇ ಬದುಕು.. ರಾಜಕೀಯದ ಮೇಲೆ ಇರಲಿಲ್ಲ ಆಸಕ್ತಿ
ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರಿಗೆ ಎಲ್ಲಾ ನಾಯಕರ ಪರಿಚಯ ಇತ್ತು. ಅನೇಕರು ಸ್ವಾತಂತ್ರ್ಯೋತ್ತರ ಭಾರತದ ಆಡಳಿತದ ನೇತೃತ್ವ ವಹಿಸಿದ್ದರು. ಸರ್ಕಾರದಲ್ಲಿ ಪ್ರಜಾ ಪ್ರತಿನಿಧಿಗಳಾಗಿ ಕೆಲಸ ಮಾಡಿದ್ರು. ಇವರ ಸಹೋದರ ಎಚ್.ಎಸ್.ಸೀತಾರಾಮ್ ಅವತ್ತಿನ ಕಾಲಕ್ಕೆ ಬೆಂಗಳೂರಿನ ಮೇಯರ್ ಆಗಿದ್ದರು. ಆದರೆ ,ದೊರೆಸ್ವಾಮಿಯವರಿಗೆ ಹೋರಾಟದ ಮೇಲೆ ಒಲವಿತ್ತೇ ವಿನಃ ರಾಜಕೀಯದಲ್ಲಿ ಆಸಕ್ತಿಯೇ ಇರಲಿಲ್ಲ. ಅದೇನೋ ಗೊತ್ತಿಲ್ಲ ಅವರು ಯಾವ ರಾಜಕೀಯ ವೇದಿಕೆಯಲ್ಲೂ ಸಕ್ರಿಯರಾಗಲಿಲ್ಲ. ಕೊನೆಯವರೆಗೂ ಹೋರಾಟದಲ್ಲೇ ಬದುಕು ಸವೆಸಿದರು ದೊರೆಸ್ವಾಮಿ.

ಮೂರು ತಲೆ ಮಾರುಗಳಿಗೂ ದೊರೆಸ್ವಾಮಿ ಚಿರ ಪರಿಚಿತರಾಗಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ದೊರೆಸ್ವಾಮಿ ಯುವಕರಾಗಿದ್ರು. ಸ್ವಾತಂತ್ರ್ಯೋತ್ತರ ಭಾರತದ ಮೊದಲ ದಶಕಗಳನ್ನು ಕಣ್ಣಾರೆ ಕಂಡವರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರು. ಜೈಲು ಕಂಡವರು. ಆದರೆ, ಹೋರಾಟ ಸಾಕಪ್ಪ ಅಂತ ದೊರೆಸ್ವಾಮಿಯವರಿಗೆ ಅನಿಸಿದ್ದೇ ಇಲ್ಲ. ಒಂದೆಡೆ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುವುದು, ಇನ್ನೊಂದು ಕಡೆ ಹಿರಿಯರ ಜೊತೆ ಚಿಂತನ-ಮಂಥನ ನಡೆಸುವುದು, ಮತ್ತೊಂದು ಕಡೆ ಎಲ್ಲೇ ಅನ್ಯಾಯವಾಗ್ತಿದೆ ಅಂತ ಅನಿಸಿದರೆ ಅಲ್ಲಿಗೆ ಹೊರಡುವುದು. ದೊರೆಸ್ವಾಮಿಯವರ ಹೋರಾಟಕ್ಕೆ ಒಂದು ಸೀಮಾ ರೇಖೆ ಎಳೆದುಕೊಂಡೇ ಇರಲಿಲ್ಲ. ಅವರು ಬಡವರಿಗೆ ಅನ್ಯಾಯವಾದರೂ ಹೋರಾಟ ಮಾಡ್ತಾ ಇದ್ರು. ಭ್ರಷ್ಟಾಚಾರ ಆಗಿದೆ ಅಂತ ಗೊತ್ತಾದ್ರೂ ಹೋರಾಟಕ್ಕೆ ನಿಲ್ತಾ ಇದ್ರು. ಇತ್ತೀಚಿನವರೆಗೂ ಈ ತಲೆಮಾರಿನ ಜೊತೆಗೂ ದೊರೆಸ್ವಾಮಿ ಹೋರಾಟಕ್ಕೆ ಬಂದು ಮುಂದೆ ಕುಳಿತುಕೊಳ್ಳುತ್ತಿದ್ದರು.

ದೊರೆಸ್ವಾಮಿಯವರಿಗೆ ಯಾವತ್ತೂ ತಲೆಮಾರಿನ ನಡುವಿನ ಹೊಂದಾಣಿಕೆ ಒಂದು ಸಮಸ್ಯೆ ಆಗಲೇ ಇಲ್ಲ. ಸಣ್ಣವರ ಜೊತೆ ಸಣ್ಣವರ ಹಾಗೆ, ದೊಡ್ಡವರ ಜೊತೆ ದೊಡ್ಡವರ ಹಾಗೆ ಇದ್ದು ಬಿಡುವ ಸ್ವಭಾವ.

ದೊರೆಸ್ವಾಮಿಯವರನ್ನೂ ಟೀಕಿಸಿದವರಂಟು. ಅದು ಸಹಜ. ದೊರೆಸ್ವಾಮಿ ಇಂಥಾದನ್ನೆಲ್ಲ ಹೆಚ್ಚು ಮನಸ್ಸಿಗೆ ಹಚ್ಚಿಕೊಂಡವರಲ್ಲ. ಹೋರಾಟದ ಹಾದಿಯಲ್ಲಿ ಇದೆಲ್ಲ ಸಹಜ, ಅವರವರ ಅಭಿಪ್ರಾಯ ಅವರು ಹೇಳುತ್ತಾರೆ, ಹೇಳಲಿ ಬಿಡಿ ಅಂತಾ ಹೇಳಿಬಿಡ್ತಾ ಇದ್ರು. ತಮ್ಮ ಹೋರಾಟದ ಮೂಲಕವೇ ಉತ್ತರ ಕೊಡುತ್ತಿದ್ದರು. ತಮ್ಮ ಹೋರಾಟದ ಮೂಲಕವೇ ತಮ್ಮ ನಿಲುವನ್ನು ಅನಾವರಣಗೊಳಿಸುತ್ತಿದ್ದರು.  ಹೋರಾಟದ ಮೂಲಕವೇ ತಮ್ಮ ಪ್ರತಿಕ್ರಿಯೆಯನ್ನು ರವಾನಿಸಿ ಬಿಡುತ್ತಿದ್ದರು. ಅಷ್ಟೊಂದು ಶಕ್ತಿ ಇತ್ತು ಅವರಲ್ಲಿ. ದೊರೆಸ್ವಾಮಿ ಯಾವತ್ತು ತಮ್ಮ ಸಿದ್ಧಾಂತ ಬಿಟ್ಟು ಹೊಂದಾಣಿಕೆ ಮಾಡಿಕೊಂಡವರೇ ಅಲ್ಲ. ಹಾಗೇನಾದರೂ ಮಾಡಿದ್ದರೆ ಅವರು ಅಧಿಕಾರದ ಸ್ಥಾನಗಳನ್ನು ಎಂದೋ ನೋಡಬಹುದಿತ್ತು. ಆದರೆ ಅಂತಹ ಯಾವುದೇ ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡವರೇ ಆಗಿರಲಿಲ್ಲ.

ದೊರೆಸ್ವಾಮಿಯವರಿಗೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದರು. ಆದರೆ ಮತ್ತೆ ಅವರಿಗೆ ಉಸಿರಾಟದ ಸಮಸ್ಯೆ ಉಲ್ಭಣಿಸಿದ ಕಾರಣ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ದೊರೆಸ್ವಾಮಿಯವರ ನಿಧನದಿಂದ ಗಾಂಧಿಯುಗದ ಕೊಂಡಿಯೊಂದು ಕಳಚಿ ಹೋಗಿದೆ. ತನ್ನದು ಅನ್ನೋದನ್ನೆಲ್ಲ ಬಿಟ್ಟು, ಎಲ್ಲರೂ ನನ್ನವರು, ನನ್ನ ದೇಶ ಅಂತ ಬಾಯಲ್ಲಿ ಹೇಳೋರು ಎಲ್ಲಾ ಕಡೆ ಸಿಗ್ತಾರೆ. ಆದ್ರೆ ಬಡತನವನ್ನೇ ಅಪ್ಪಿಕೊಂಡು, ಬದುಕಿನುದ್ದಕ್ಕೂ ಹೋರಾಟದ ದಾರಿಯಲ್ಲೇ ಕ್ರಮಿಸಿ ನಮ್ಮಿಂದ ದೂರವಾಗಿ ಬಿಟ್ಟಿದ್ದಾರೆ ದೊರೆಸ್ವಾಮಿ. ಯುವ ತಲೆಮಾರಿಗೆ ಸ್ಫೂರ್ತಿ ತುಂಬಿದ್ದಕ್ಕೆ, ಆಡಳಿತ ನಡೆಸುವವರಿಗೆ ಆಗಾಗ ಬುದ್ಧಿ ಹೇಳಿದ್ದಕ್ಕೆ, ಅನ್ಯಾಯಕ್ಕೊಳಗಾದವರ ಜೊತೆ ಸದಾ ನಿಲ್ಲುತ್ತಿದ್ದಕ್ಕೆ, ಯಾವತ್ತೂ ಜನರೊಂದಿಗಿದ್ದು ಸಾಕ್ಷಿ ಪ್ರಜ್ಞೆಯಾಗಿದ್ದಕ್ಕೆ ದೊರೆಸ್ವಾಮಿಯವರು ಯಾವತ್ತು ನೆನಪಿನಲ್ಲಿ ಇದ್ದೇ ಇರುತ್ತಾರೆ.

ಎಚ್.ಎಸ್.ದೊರೆಸ್ವಾಮಿಯವರು ತಮ್ಮ ಸುದೀರ್ಘ ಬದುಕಿನ ಪಯಣ ಮುಗಿಸಿದ್ದಾರೆ. ಆದರೆ ಅವರ ಬದುಕಿನ ಆದರ್ಶದ ಅಧ್ಯಾಯ ನಮ್ಮ ಎದುರು ಸದಾ ತೆರೆದೇ ಇರುತ್ತೆ. ಒಂದಿಷ್ಟಾದರೂ ಅವರ ಆಶಯಗಳು ನೆರವೇರಬೇಕು ಅನ್ನೋದೇ ಎಲ್ಲರ ಆಶಯ.

The post ಸ್ವಾತಂತ್ರ್ಯ ಸಿಗೋವರೆಗೆ ಮದುವೆಯಾಗಲಿಲ್ಲ; ದೊರೆಸ್ವಾಮಿ ಬದುಕಿನ ಆದರ್ಶ ಅಧ್ಯಾಯ appeared first on News First Kannada.

Source: newsfirstlive.com

Source link