ಹಂಪಿ ಸಮೀಪ ತಲೆಯೆತ್ತಲಿದೆ ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ದರ್ಜೆಯ 100 ಕೊಠಡಿಗಳ ತ್ರೀಸ್ಟಾರ್ ಹೋಟಲ್! ವಿವರ ಇಲ್ಲಿದೆ | Three star hotel at hampi to be built shortly says tourism minister Anand singh


ಹಂಪಿ ಸಮೀಪ ತಲೆಯೆತ್ತಲಿದೆ ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ದರ್ಜೆಯ 100 ಕೊಠಡಿಗಳ ತ್ರೀಸ್ಟಾರ್ ಹೋಟಲ್! ವಿವರ ಇಲ್ಲಿದೆ

ಹಂಪಿ ಸಮೀಪ ತಲೆಯೆತ್ತಲಿದೆ ಪ್ರವಾಸೋದ್ಯಮ ಇಲಾಖೆಯಿಂದ ವಿಶ್ವ ದರ್ಜೆಯ 100 ಕೊಠಡಿಗಳ ತ್ರೀಸ್ಟಾರ್ ಹೋಟಲ್! ವಿವರ ಇಲ್ಲಿದೆ

ವಿಜಯನಗರ: ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಸಮೀಪದ ಕಮಲಾಪುರದಲ್ಲಿ 28.20 ಕೋಟಿ ರೂ. ವೆಚ್ಚದಲ್ಲಿ ವಿಶ್ವ ದರ್ಜೆಯ ತ್ರಿಸ್ಟಾರ್ ಹೋಟಲ್ ಶೀಘ್ರದಲ್ಲಿಯೇ ತಲೆ ಎತ್ತಲಿದೆ. ಇನ್ಮುಂದೆ ವಿಶ್ವ ಪರಂಪರೆಯ ತಾಣ ಹಾಗೂ ಅದರ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಆಗಮಿಸುವ ಜನರಿಗೆ ತಂಗುವ ಸಮಸ್ಯೆಗೆ ಇತಿಶ್ರೀ ಬೀಳಲಿದ್ದು, ಸಕಲ ಸೌಕರ್ಯವುಳ್ಳ ತ್ರಿಸ್ಟಾರ್ ಹೋಟಲ್ ಪ್ರವಾಸಿಗರಿಗೆ ಅವಶ್ಯಕತೆಗಳನ್ನು ಪೂರೈಸಲಿದೆ.

ಈ ವಿಶ್ವ ದರ್ಜೆಯ ತ್ರಿಸ್ಟಾರ್ ಹೋಟೆಲ್‍ನಲ್ಲಿ 100 ಕೊಠಡಿಗಳಿರಲಿದ್ದು ಅವುಗಳಲ್ಲಿ 96 ಡಿಲಕ್ಸ್ ಕೊಠಡಿಗಳು, 4 ಸೂಟ್ ರೂಮ್ಸ್, ಪಾರ್ಕಿಂಗ್, ಜಿಮ್, ಓಪನ್ ರೆಸ್ಟೋರೆಂಟ್, ಸ್ಪಾ, ಈಜುಕೊಳ ಸೇರಿದಂತೆ ಇತರೆ ಸೌಲಭ್ಯಗಳು ಒಳಗೊಂಡಿರಲಿವೆ. ಕಮಲಾಪುರ ಪಟ್ಟಣದ ಅಟಲ್ ಬಿಹಾರಿ ವಾಜಪೇಯಿ ಜೂಯಲಾಜಿಕಲ್ ಪಾರ್ಕ್ ಹತ್ತಿರದ 15 ಎಕರೆ ಜಾಗದಲ್ಲಿ ಈ ವಿಶ್ವ ದರ್ಜೆಯ ತ್ರೀಸ್ಟಾರ್ ಹೋಟಲ್ ತಲೆಎತ್ತಲಿದೆ.

ತ್ರೀಸ್ಟಾರ್ ಹೋಟೆಲ್ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಉದ್ದೇಶಿಸಿದೆ:
ಕಟ್ಟಡ ನಿರ್ಮಾಣಕ್ಕೆ ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಸಚಿವ ಆನಂದ ಸಿಂಗ್ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆನಂದ ಸಿಂಗ್ ಅವರು ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಮತ್ತು ವಿಶ್ವ ಪಾರಂಪರಿಕ ತಾಣವಾಗಿರುವ ಹಂಪಿಗೆ ಭೇಟಿ ನೀಡುವ ಪ್ರವಾಸಿಗರು, ತುಂಗಾಭದ್ರಾ ಅಣೆಕಟ್ಟು, ಆನೆಗುಂದಿ, ಅಂಜನಾದ್ರಿ ಬೆಟ್ಟ, ಪಂಪಸರೋವರ ಹಾಗೂ ಇತರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಈ ತ್ರೀಸ್ಟಾರ್ ಹೋಟೆಲ್ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ ಉದ್ದೇಶಿಸಿದೆ. 12ರಿಂದ 18 ತಿಂಗಳೊಳಗೆ ಈ ತ್ರೀಸ್ಟಾರ್ ಹೋಟಲ್ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ 04 ಸ್ಥಳಗಳಲ್ಲಿ ಒಟ್ಟಾರೆ ರೂ. 83.97 ಕೋಟಿಗಳ ಅಂದಾಜು ವೆಚ್ಚದಲ್ಲಿ ವಿಶ್ವ ದರ್ಜೆಯ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮಾಡಲು ಸರ್ಕಾರವು ಅನುಮೋದನೆ ನೀಡಿದೆ. ಅದರಂತೆ 20.71 ಕೋಟಿ ರೂ.ವೆಚ್ಚದಲ್ಲಿ ಬೇಲೂರುನಲ್ಲಿ 75 ಕೊಠಡಿಗಳ ವಿಶ್ವ ದರ್ಜೆಯ ತ್ರಿಸ್ಟಾರ್ ಹೋಟೆಲ್ ನಿರ್ಮಾಣ, 18.32 ಕೋಟಿ ರೂ.ವೆಚ್ಚದಲ್ಲಿ ಬಾದಾಮಿಯಲ್ಲಿ 75 ಕೊಠಡಿಗಳ ತ್ರಿಸ್ಟಾರ್ ಹೋಟೆಲ್ ನಿರ್ಮಾಣ, 16.74 ಕೋಟಿ ವೆಚ್ಚದಲ್ಲಿ ವಿಜಯಪುರದಲ್ಲಿ 75 ಕೊಠಡಿಗಳ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ಮತ್ತು ಹಂಪಿಯಲ್ಲಿ ರೂ. 28.20 ಕೋಟಿ ವೆಚ್ಚದಲ್ಲಿ 100 ಕೊಠಡಿಗಳ ಸುಸಜ್ಜಿತ ತ್ರಿಸ್ಟಾರ್ ಹೋಟೆಲ್ ನಿರ್ಮಾಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈಗಾಗಲೇ ಬಾದಾಮಿ, ಬೇಲೂರು ಮತ್ತು ವಿಜಯಪುರ ಪ್ರವಾಸಿ ತಾಣದಲ್ಲಿ 03 ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಟಿ. ವೆಂಕಟೇಶ್, ಅರಣ್ಯ ವಸತಿ ಮತ್ತು ವಿಹಾರಧಾಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಮನೋಜ್ ಕುಮಾರ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಜಗದೀಶ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಡಾ. ಎಸ್. ತಿಪ್ಪೇಸ್ವಾಮಿ, ಕಮಲಾಪುರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನಾಗೇಶ ಮತ್ತಿತರರು ಇದ್ದರು.
-ವೀರಪ್ಪ ದಾನಿ, ಟಿವಿ9, ಬಳ್ಳಾರಿ

TV9 Kannada


Leave a Reply

Your email address will not be published. Required fields are marked *