ಇಂದು ಸ್ವರ ಮಾಂತ್ರಿಕ, ಕಲಾಬ್ರಹ್ಮ ಹಂಸಲೇಖ ಅವರ ಹುಟ್ಟು ಹಬ್ಬ. ಈ ಹುಟ್ಟು ಹಬ್ಬಕ್ಕೆ ಹಲವರು ಹಲವಾರು ರೀತಿಯಲ್ಲಿ ಶುಭ ಹಾರೈಸುತ್ತಿದ್ದಾರೆ. ಈ ನಡುವೆ ಚಿತ್ರ ಸಾಹಿತಿ ಕವಿರಾಜ್, ಬರಹ ನಮನ ಸಲ್ಲಿಸಿದ್ದಾರೆ. ಜೊತೆಗೆ ಹಂಸಲೇಖ ಅವರನ್ನು ಹಂಸಲೋಕ ಎಂದು ಕರೆದಿದ್ದಾರೆ. ಹಾಗಿದ್ದರೆ ಕವಿರಾಜ್ ಏನು ಹೇಳಿದ್ದಾರೆ? ಇಲ್ಲಿದೆ ನೋಡಿ..

ಹಂಸಲೇಖ ಎನ್ನುವುದಕ್ಕಿಂತ ಅವರೊಂದು ಹಾಡುಗಳ ‘ಹಂಸಲೋಕ’; ಇದು ಸಾಹಿತಿ ಕವಿರಾಜ್ ಹಂಸಲೇಖ ಅವರ ಬಗ್ಗೆ ಬರೆದಿರುವ ಲೇಖನದ ಸಾಲುಗಳಿವು.. ಕನ್ನಡ ಸ್ಟಾರ್ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಹಂಸಲೇಖ ಅವರ 70ನೇ ಬರ್ತ್​ಡೇ ದಿನದ ಪ್ರಯುಕ್ತ ವಿಶೇಷ ಲೇಖವನ್ನ ಬರೆದ್ದಾರೆ.. ಅದರ ಸ್ವಾರಸ್ಯ ಪೂಜ್ಯ ಕನ್ನಡಿಗರಿಗಾಗಿ..

ಅದೊಂದು ರಾತ್ರಿ ಹತ್ತು-ಹನ್ನೊಂದು ಗಂಟೆಯ ನಡುವಿನ ಸಮಯ. ಫೋನ್ ರಿಂಗಣಿಸಿತು. ನಿದ್ರಾಭಂಗವಾಗಿ ಪಕ್ಕದಲ್ಲಿದ್ದ ಫೋನ್ ಕೈಗೆತ್ತಿಕೊಂಡೆ. ಕರೆ ಮಾಡಿದವರ ಹೆಸರು ಕಂಡೊಡನೆ ಒಂದೇ ಕ್ಷಣಕ್ಕೆ ನಿದ್ದೆಯೆಲ್ಲಾ ಹಾರಿ ಹೋಗಿ ದಡಬಡಾಯಿಸಿ ಎದ್ದು ಕರೆ ಸ್ವೀಕರಿಸಿ ಹಲೋ ಸಾರ್ ಎಂದೆ. ಆ ಕಡೆಯ ಧ್ವನಿ ಹಾಡಲು ಶುರುವಿಟ್ಟಿತ್ತು.

ಸರ ಸರ ಸರ ಸರ ಬಾ ಸರಸಕ್ಕೆ
ಅವಸರ ಕಾರಣ ಅಪಘಾತಕ್ಕೆ

ಕನಸೋ ನನಸೋ ಎಂದು ಗೊಂದಲವಾಗಿ ಕೇಳುತ್ತಾ ಕೇಳುತ್ತೆ. “ಮರೀ.. ಎಷ್ಟ್ ಚೆನ್ನಾಗ್ ಬರಿದಿದ್ಯೋ. ಫ್ಲೋ ಬಾಳ ಚೆನ್ನಾಗ್ ಇದೆ, ಒಂದೊಂದೇ ಸಾಲಲ್ಲಿ ಸಂಭಾಷಣೆ ಬಹಳ ಮಜವಾಗಿ ಮೆಂಟೇನ್ ಮಾಡಿದ್ಯಾ.

ಅದೇನು ಇನ್ನೊಂದು ಚರಣ.. ??”
ನನ್ನ ಮೇಲೆ ಯಾಕಿಲ್ಲ ನಂಬಿಕೆ ನಿಂಗೆ
ಅನುಮಾನ ನಿಂಗಿಂತಾ ನನ್ನ್ ಮೇಲ್ ನಂಗೇ
ಜುಂ ಜುಂ ಮಾಯ ಜುಂ ಮಾಯ ಜುಂ ಮಾಯ

ವ್ಹಾ.. ಅನ್ನುತ್ತಾ ಅವರ ತುಂಟ ಸಿಗ್ನೆಚರ್ ನಗು. “ಥ್ಯಾಂಕ್ಯೂ ಸರ್ .. ಥ್ಯಾಂಕ್ಯೂ ಸರ್ ..ಎಲ್ಲಾ ನಿಮ್ಮ ಸ್ಫೂರ್ತಿ ಸರ್.. ” ಎನ್ನುತ್ತಾ ಮುಂದೇನು ಮಾತಾಡುವುದೆಂದು ಗೊತ್ತಾಗದೇ ಖುಷಿಯಿಂದ ಬಡಬಡಾಯಿಸಿದೆ. ಒಂದಷ್ಟು ಹೊತ್ತು ಪ್ರೀತಿಯಿಂದ ಮಾತಾಡಿ ಹರಸಿ ಫೋನಿಟ್ಟವರ ಹೆಸರು ‘ಹಂಸಲೇಖ’.

ನನ್ನಂಥ ಹಳ್ಳಿ ಮೂಲೆಯ ಹುಡುಗನಲ್ಲೂ ಹಾಡು ಬರೆಯಬೇಕೆಂಬ ಹುಕ್ಕಿ ಹುಟ್ಟಿಸಿದ್ದೇ ಆ ಮಹಾನುಭಾವ. ನನ್ನಂಥ ಕೋಟಿ ಬರಹಗಾರರ ಮಾನಸ ಗುರು‌. ಆದರೂ ಹಿಮಾಲಯವೇ ಎದ್ದು ಸಣ್ಣ ಗುಡ್ಡ ವೊಂದನ್ನು ಕಂಡು “ಎಷ್ಟು ಎತ್ತರ ಬೆಳೆದಿದ್ಯೋ?” ಎಂದು ಹೊಗಳುವ ದೊಡ್ಡತನ, ಹೃದಯ ವೈಶಾಲ್ಯತೆ ಕಂಡು ಆನಂದಭರಿತ ಆಶ್ಚರ್ಯ ಪಟ್ಟಿದ್ದೇನೆ.

 

ಇಂಥ ಕರೆಗಳು ನನಗೆ ಒಂದಲ್ಲಾ, ಮೂರ್ನಾಲ್ಕು ಸಾರಿ ಬಂದಿದೆ ಎನ್ನುವುದೇ ಗೀತರಚನೆಕಾರನಾಗಿ ನನ್ನ ಬದುಕಿನ ಸಾರ್ಥಕತೆ. ನಾವೇನೇ ಒದ್ದಾಡಿ ಏನೋ ಹೊಸದು ಬರೆದೆವೆಂದು ಖುಷಿ ಪಡುತ್ತಿರುವಾಗ ಅಲ್ಲೆಲ್ಲೋ ಹಳೇ ಹಾಡೊಂದು ಕಿವಿಗೆ ಬಿದ್ದು, ಅದನ್ನು ಹಾಗಲ್ಲಾ ಹೀಗೆ ಬರೆಯಬೇಕು ಕಣೋ ಮಂಕೇ ಎನ್ನುವಂತೆ ಯಾವಾಗಲೋ ಅವರು ಚಂದಾಗಿ ಬರೆದು ಬಿಸಾಕಿರುತ್ತಾರೆ. ಆಗೆಲ್ಲಾ ಅವರೇ ತುಟಿ ಓರೆ ಮಾಡಿ ತನ್ನ ತುಂಟ ಸಿಗ್ನೆಚರ್ ಸ್ಟೈಲಲ್ಲಿ ನಗುತ್ತಾ “ನಾನೆಲ್ಲಾ ಬರೆದಾಗಿದೆ , ನೀವೇನ್ರೋ ಹೊಸದು ಬರೀತೀರಾ” ಎಂದಂತೆ.

ಹಂಸಲೇಖ ಎನ್ನುವುದಕ್ಕಿಂತ ಅವರೊಂದು ಹಾಡುಗಳ ‘ಹಂಸಲೋಕ’

ಅಲ್ಲಿ ಸಿಗದಿರುವುದೇ ಇಲ್ಲಾ. ಸಂಗೀತ ಸಾಹಿತ್ಯ ಎರಡರಲ್ಲೂ ಅವರು ಕಟ್ಟಿಕೊಡದ ಭಾವವಿಲ್ಲ, ಅವರಿಗೊಲಿಯದ ಶೈಲಿಯಿಲ್ಲ, ಅವರು ಮುಟ್ಟದ ಕನ್ನಡದ ಮನಸಿಲ್ಲ. ಸರಳಾತೀತ ಸರಳ ಪದಗಳಲ್ಲಿ ಬ್ರಹ್ಮಾಂಡ ಅರ್ಥ ಅಡಗಿಸಿಡುವ ಅಪ್ಪಟ ಅದ್ಭುತ ಜಾದೂಗಾರ ಅವರು‌. ಅವರು ನಿರ್ಮಿಸಿದ ಹೆದ್ದಾರಿಯಲ್ಲಿ ನಡೆದವರಲ್ಲಿ ನಾನೂ ಒಬ್ಬ ಎನ್ನುವುದೇ ಹೆಮ್ಮೆ. ನೂರು ಕಾಲ ಹಾಗೇ ನಗುತ್ತಾ ಚಂದಾಗಿರಿ ಸರ್. ಜನ್ಮದಿನದ ಶುಭಾಶಯಗಳು
ಕವಿರಾಜ್ , ಚಿತ್ರಸಾಹಿತಿ , ನಿರ್ದೇಶಕ

The post ಹಂಸಲೇಖ ಅಲ್ಲ ಅವರು ಹಾಡುಗಳ ಹಂಸಲೋಕ: ಹೀಗೆ ಹೇಳಿದ್ದು ಯಾರು ಗೊತ್ತಾ? appeared first on News First Kannada.

Source: newsfirstlive.com

Source link