ಬಾಗಲಕೋಟೆ: ಕೊರೊನಾ ಸಂಕಷ್ಟ ಕಾಲದಲ್ಲಿ ಅನೇಕರು ತಮ್ಮ ಆರೋಗ್ಯದ ಬಗ್ಗೆ ರಿಸ್ಕ್ ತೆಗೆದುಕೊಂಡು ಕೆಲಸ ಮಾಡ್ತಾ ಇದಾರೆ. ಸಾವಿರಾರು ಆರೋಗ್ಯ ಸಿಬ್ಬಂದಿ ಕಳೆದ ಒಂದು ವರ್ಷದಿಂದ ನಿತ್ಯವೂ ತಮ್ಮವರನ್ನು ದೂರ ಇಟ್ಟು ಕೊರೊನಾ ವಿರುದ್ಧ ಹೋರಾಟ ಮಾಡ್ತಿದಾರೆ. ಈ ಮಧ್ಯೆ ಸೋಂಕಿತರನ್ನು ರಕ್ಷಣೆ ಮಾಡುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ನಿಸ್ವಾರ್ಥ ಸೇವಕನೊಬ್ಬನ ಬಗ್ಗೆ ಹೇಳ್ತೀವಿ.

ಎಲ್ಲರಲ್ಲೂ ಒಬ್ಬ ಯೋಧ ಇದ್ದೇ ಇರ್ತಾನೆ.. ಆ ಯೋಧನಿಗೆ ಗಂಡು ಹೆಣ್ಣು ಅನ್ನೋ ಬೇಧ-ಭಾವವಿರೋದಿಲ್ಲ.. ಆತ ಸರಿಯಾದ ಸಮಯಕ್ಕೆ ಹೊರ ಬಂದೇ ಬರ್ತಾನೆ. ತ್ಯಾಗ ಮತ್ತು ಸೇವೆಗಳ ಮೂಲಕ ನಮ್ಮ ನಿಮ್ಮ ನಡುವೆ ನಿಂತಿರುತ್ತಾನೆ.. ಯಾಕೆಂದ್ರೆ ಈ ಮಣ್ಣಲ್ಲಿ ಅಂತ ಶಕ್ತಿ ಇದೆ, ಸತ್ವವಿದೆ, ಮಾನವೀಯತೆಯ ತತ್ವವಿದೆ.. ಒಂದು ವರ್ಷದ ಹಿಂದೆ ಕೊರೊನಾ ಮೊದಲನೇ ಅಲೆ ಎಲೆಲ್ಲೂ ಅಲೆದಾಡುತ್ತಿದ್ದಾಗ ಕಿತ್ತೂರು ರಾಣಿ ಚೆನ್ನಮ್ಮನ ಬೀಡು ಬೆಳಗಾವಿಯಲ್ಲಿ ಒಂದು ಘಟನೆ ನಡೆಯುತ್ತೆ.

ಬೆಳಗಾವಿಯ ಬೀಮ್ಸ್ ಆಸ್ಪೆತ್ರೆಯಲ್ಲಿ ಸುನಂದಾ ಅನ್ನೋ ನರ್ಸ್ ಕೆಲಸ ಮಾಡ್ತಿರ್ತಾರೆ. ಕೋವಿಡ್ ಕೇಂದ್ರದಲ್ಲಿ ಕೆಲಸ ಮಾಡ್ತಿರುವ ಕಾರಣ ತನ್ನ ಮನೆಯವರನ್ನ ಹತ್ತಿರದಿಂದ ನೋಡಲಾಗದ ಪರಿಸ್ಥಿತಿ ಅದು. ತನ್ನ 3 ವರ್ಷ ಕಂದಮ್ಮ ಐಶ್ವರ್ಯ ಅಮ್ಮ ಅಮ್ಮ ಅಂತ ಕಣ್ಣೀರು ಇಡ್ತಿದ್ರು ಸುನಂದಾ ನರ್ಸ್.. ದೂರದಿಂದಲೇ ಮಗಳನ್ನ ಸನ್ಹೆಯಲ್ಲೇ ಸಮಾಧಾನ ಪಡಿಸುತ್ತಾ ‘ನಾನು ಬೇಗ ಬರ್ತಿನಿ ಮಗಳೇ’ ಎಂದು ಸಮಾಧಾನ ಪಡಿಸಿದ ಘಟನೆಯನ್ನ ಯಾರು ತಾನೆ ಮರೆಯೋಕೆ ಸಾಧ್ಯ ಹೇಳಿ.. ಈ ದೃಶ್ಯವನ್ನ ಅಂದು ಕಂಡಿದ್ದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ನರ್ಸ್ ಸುನಂದಾ ಅವರಿಗೆ ಫೋನ್ ಮಾಡಿ ಧೈರ್ಯ ತುಂಬಿದ್ರು. ಈಗ ನಾವು ಹೇಳೋಕೆ ಹೊರಟಿರುವ ಸ್ಟೋರಿಯೂ ಕೂಡ ಇಂತದ್ದೇ ಮತ್ತೊಂದು ಸ್ಟೋರಿ.

ಹಗಲು ರಾತ್ರಿ ಎನ್ನದೇ ಕೋವಿಡ್ ಆಸ್ಪತ್ರೆಗೆ ತಮ್ಮ ಸಮಯ ಮೀಸಲಿಟ್ಟಿದ್ದಾರೆ..

ಎಲ್ಲಾ ಜಿಲ್ಲೆಗಳಂತೆ ಬಾಗಲಕೋಟೆ ಜಿಲ್ಲೆಯಲ್ಲಿಯೂ ಕೊರೊನಾ ತಾಂಡವಾಡುತ್ತಿದೆ.. ಬಾಗಲಕೋಟೆಯಲ್ಲಿ ಇದುವರೆಗೂ ಒಟ್ಟು 109 ಜನರು ಕೊರೊನಾಗೆ ಬಲಿಯಾಗಿದ್ದಾರೆ.. ಇಂತಹ ಸಂದರ್ಭದಲ್ಲಿ ಅದೆಷ್ಟೋ ಕೋವಿಡ್ ವಾರಿಯರ್ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ.. ಅದರಂತೆ ಬಾಗಲಕೋಟೆಯ ಸರ್ಕಾರಿ ಕೋವಿಡ್ ಆಸ್ಪತ್ರೆಯ ಸರಕಾರಿ ಎಲೆಕ್ಟ್ರಿಕ್ ಎಂಜಿನಿಯರ್ ಸೇವೆ.. ಮೆಚ್ಚಿ ಭೇಷ್ ಭೇಷ್ ಎನ್ನುವಂತದ್ದು.. ಮಹಮ್ಮದ್ ನವಾಜ್ ಕಂಚಿ.. ಇವರು ಓರ್ವ ಎಲೆಕ್ಟ್ರಿಕ್ ಎಂಜಿನಿಯರ್, ಸದ್ಯ ಕೋವಿಡ್ ವಾರಿಯರ್, ಪ್ರತಿ ದಿನ ಕೋವಿಡ್ ಆಸ್ಪತ್ರೆಗೆ ಬೆಳಕು ನೀಡುವ, ಕೋವಿಡ್ ಸೋಂಕಿತರಿಗೆ ಉಸಿರು ನೀಡುವ ಪರೋಕ್ಷ ಪ್ರಾಣದಾತನಾಗಿದ್ದಾರೆ. ಹಗಲು, ರಾತ್ರಿ ಎನ್ನದೇ ಆ ವ್ಯಕ್ತಿ ಕೋವಿಡ್ ಆಸ್ಪತ್ರೆಗೆ ತಮ್ಮ ಸಮಯ ಮೀಸಲಿಟ್ಟಿದ್ದಾರೆ. ಮಕ್ಕಳು, ಪತ್ನಿ, ಕುಟುಂಬದಿಂದ ದೂರವುಳಿದು ಸದಾ ಕೋವಿಡ್ ವಿರುದ್ಧ ಹೋರಾಟದಲ್ಲಿದ್ದಾರೆ..

ಕಾಯಕವೇ ಕೈಲಾಸವೆಂದು ತಿಳಿದ ಎಂಜಿನಿಯರ್..

ಒಂದಷ್ಟು ಜನ ಕೋವಿಡ್ ಕಾಟಕ್ಕೆ ಹೆದರಿ ಕೆಲಸಕ್ಕೆ ಬರೋದನ್ನೇ ಬಿಟ್ಟಿದ್ದಾರೆ.. ಆದ್ರೆ ಈ ವ್ಯಕ್ತಿ ಮಾತ್ರ ಕುಟುಂಬದ ಸಂಭ್ರಮ ತ್ಯಾಗ ಮಾಡಿ ಸೋಂಕಿತರ ಸೇವೆಗೆ ಶ್ರಮಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಮಹಮ್ಮದ್​ ನವಾಜ್ ಕಂಚಿ ಪ್ರಾಣವಾಯುವಿನ ನಿರ್ವಹಣಾಕಾರರಾಗಿ ಕೆಲಸ ಮಾಡ್ತಿದ್ದಾರೆ. ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ಸದ್ಯ ಒಟ್ಟು 330 ಸೋಂಕಿತರಿದ್ದು, 290 ಸೋಂಕಿತರು ಆಕ್ಸಿಜನ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತ ಆಕ್ಸಿಜನ್ ಆಗತ್ಯದವರೆಗೆ ಬಂದಿದ್ದಾರೆ ಅಂದ್ರೆ ನಿಜಕ್ಕೂ ಅಪಾಯದ ಘಟ್ಟ. ಈ ಕಾರಣದಿಂದಾಗಿ ಮಹಮ್ಮದ್ ನವಾಜ್ ಯಾವುದೇ ಸೋಂಕಿತರಿಗೆ ತೊಂದರೆಯಾಗಬಾರದು ಅಂತ ರಜೆ ಹಾಕದೇ ಒಂದೂವರೆ ತಿಂಗಳಿಂದ ಕೆಲಸ ಮಾಡುತ್ತಿದ್ದಾರೆ.. ಮಕ್ಕಳು ಪತ್ನಿ, ಮುಖ ನೋಡದೆ ನಿತ್ಯ ದುಡಿಯುತ್ತಿದ್ದಾರೆ. ಮುಸಲ್ಮಾನ್ ಆಗಿದ್ದರೂ ರಂಜಾನ್ ಹಬ್ಬಕ್ಕೂ ಊರಿಗೆ ಹೋಗದೆ ಇದ್ದಲೇ ಇದ್ದು ಕಾಯಕದಲ್ಲೇ ಹಬ್ಬದ ಸಂಭ್ರಮ ಕಂಡಿದ್ದಾರೆ.

ಮಹಮ್ಮದ್ ನವಾಜ್ ಕಂಚಿಯವರ ಊರು ವಿಜಯಪುರ ಆಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಮನೆಗೆ ಹೋಗಿಲ್ಲ.. ಪತ್ನಿ ಮಕ್ಕಳು ಕುಟುಂಬಸ್ಥರ ಭೇಟಿಯಾಗಿಲ್ಲ.. ಮಕ್ಕಳ ನೆನಪಾದಾಗ ವಿಡಿಯೋ ಕಾಲ್ ಮಾಡಿ ಮಾತಾಡುತ್ತಾರೆ.. ಕುಶಲೋಪರಿ ವಿಚಾರಿಸುತ್ತಾರೆ.. ಆದರೆ ನೇರವಾಗಿ ಭೇಟಿಯಾಗಿಲ್ಲ, ಇಡೀ ಕೋವಿಡ್ ಆಸ್ಪತ್ರೆಯನ್ನು ಹಗಲಿರುಳು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಕೊರೊನಾ ಪೇಶೆಂಟ್​​ಗಳಿಗೆ ಚಿಕಿತ್ಸೆ ನೀಡೋದು ಒಂಥರ ವೈದ್ಯ ಲೋಕಕ್ಕೆ ಸರ್ಪದ ವಿಶದ ಹಲ್ಲು ಕಿತ್ತಂತೆ.. ಒಂದು ಕಾಲದಲ್ಲಿ ಜನ ಸಾಮಾನ್ಯರ ಪರವಾಗಿ ದೇಶದ ಗಡಿಗಾಗಿ ಯೋಧರು ಸೈನಿಕರು ಪ್ರಾಣ ಒತ್ತೆ ಇಟ್ಟು ಹೋರಾಡ್ತಿದ್ರು. ಆದ್ರೆ ಈ ಕೊರೊನಾ ಕಾಲದಲ್ಲಿ ವೈದ್ಯಕೀಯ ಲೋಕ ತಮ್ಮ ಪ್ರಾಣ ಒತ್ತೆ ಇಷ್ಟು ದೇಶಕ್ಕಾಗಿ ದೇಶನ ಪ್ರತಿ ಜೀವಕ್ಕಾಗಿ ಹೋರಾಡುತ್ತಿದೆ.. ಒಟ್ಟಿನಲ್ಲಿ ಕೋವಿಡ್ ತುರ್ತು ಸಂದರ್ಭದಲ್ಲಿ ಅನೇಕರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ .ಅಂತಹ ಮಹನೀಯರಲ್ಲಿ ಮಹಮ್ಮದ್ ನವಾಜ್ ಕಂಚಿ ಅವರು ಕೂಡ ಒಬ್ಬರು ಎನ್ನಬಹುದು.

The post ಹಗಲಿರುಳು ಶ್ರಮ ವಹಿಸಿ ದುಡಿಮೆ.. ಸೋಂಕಿತರ ಪಾಲಿಗೆ ಜೀವರಕ್ಷಕನಾದ ಎಂಜಿನಿಯರ್ appeared first on News First Kannada.

Source: newsfirstlive.com

Source link